ಅಂತಾರಾಷ್ಟ್ರೀಯ ಪ್ಯಾರಾ-ಈಜು ಸ್ಪರ್ಧೆಯಲ್ಲಿ ವಿಶ್ವಾಸ್ ಕೆ.ಎಸ್ ಅವರು ಕೈಗಳಿಲ್ಲದಿದ್ದರೂ, ಈಜಿ ಗೆಲುವು ಸಾಧಿಸಿದ್ದಾರೆ. ಆದರೆ, ಅವರಿಗೆ ರಾಜ್ಯ ಸರ್ಕಾರವು ಯಾವುದೇ ಬಹುಮಾನ ನೀಡಿಲ್ಲ, ಗೌರವಿಸಿಲ್ಲ. ವಿಶ್ವಾಸ್ ಅವರನ್ನು ಸರ್ಕಾರ ಗೌರವಿಸಬೇಕಿತ್ತು ಎಂದಿರುವ ಕರ್ನಾಟಕ ಹೈಕೋರ್ಟ್, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಗೆ 2 ಲಕ್ಷ ರೂ. ದಂಡ ವಿಧಿಸಿದೆ.
2017 ಮತ್ತು 2023ರಲ್ಲಿ ಚಾಂಪಿಯನ್ ಆಗಿರುವ ವಿಶ್ವಾಸ್ ಅವರು ಪ್ರಾತಿನಿಧ್ಯಗಳನ್ನು ಸಲ್ಲಿಸಿದ್ದರು. ಆದರೂ, ಅವರಿಗೆ ಸರ್ಕಾರದಿಂದ ಯಾವುದೇ ಗೌರವ ದೊರೆತಿಲ್ಲ. ಪರಿಹಾರ ನೀಡಲಾಗಿಲ್ಲ. ಸರ್ಕಾರದ ಧೋರಣೆಯನ್ನು ಪ್ರಶ್ನಿಸಿ ವಿಶ್ವಾಸ್ ಅವರು 2023ರಲ್ಲಿ ಹೈಕೋರ್ಟ್ ಮೂಲಕ ನೋಟಿಸ್ ನೀಡಿದ ಬಳಿಕ, 4.74 ಲಕ್ಷ ರೂ.ಗಳನ್ನು ಸರ್ಕಾರ ಪಾವತಿಸಿತ್ತು.
ಆದಾಗ್ಯೂ, ಪದಕಗಳನ್ನು ಗೆದ್ದಿದ್ದಕ್ಕಾಗಿ ಗೌರವಾರ್ಥವಾಗಿ ನೀಡಬೇಕಿದ್ದ 6 ಲಕ್ಷ ರೂಪಾಯಿಗಳಲ್ಲಿ 1.26 ಲಕ್ಷ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ವಿಶ್ವಾಸ್ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅವರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, “ಚಾಂಪಿಯನ್ ವಿಶ್ವಾಸ್ ಅವರು ಕೈಗಳಿಲ್ಲದೆ ಇದ್ದರೂ, ಈಜುಕೊಳಗಳಿಗೆ ಧುಮುಕಿ ವಿಜಯಶಾಲಿಯಾಗಿದ್ದಾರೆ. ಮಾತ್ರವಲ್ಲದೆ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಅವರನ್ನು ರಾಜ್ಯ ಸರ್ಕಾರವು ಗೌರವಿಸಬೇಕು. ಆದರೆ, ಅವರ ಹಕ್ಕನ್ನು ಹತ್ತಿಕ್ಕಿದೆ. ಇದು ಉತ್ತಮ ನಡೆಯಲ್ಲ” ಎಂದು ಹೇಳಿದೆ.
“ವಿಶ್ವಾಸ್ ಅವರಿಗೆ ಸರ್ಕಾರ ಬಿಡುಗಡೆ ಮಾಡಬೇಕಿದ್ದ 1.26 ಲಕ್ಷ ರೂ. ಮತ್ತು ಅವರ ಮೊಕದ್ದಮೆ ವೆಚ್ಚ 74 ಲಕ್ಷ ರೂ. ಎರಡೂ ಸೇರಿ 2 ಲಕ್ಷ ರೂ. ಪಾವತಿ ಮಾಡಬೇಕು. ಸರ್ಕಾರವು ಎರಡು ವಾರಗಳಲ್ಲಿ ಹಣವನ್ನು ಪಾವತಿಸದಿದ್ದರೆ, ವಿಳಂಬದ ದಿನಗಳಲ್ಲಿ ಎಷ್ಟು ದಿನ ತಡವಾಗುತ್ತದೆಯೋ, ಅಷ್ಟೂ ದಿನಕ್ಕೆ 1,000 ರೂ. ಭತ್ಯೆ ಪಾವತಿಸಬೇಕು” ಎಂದು ಸೂಚನೆ ನೀಡಿದೆ.