ಶಿವಮೊಗ್ಗ, ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ಕುವೆಂಪು ಎಕ್ಸ್‌ಪ್ರೆಸ್ ರೈಲಿನ ಚಕ್ರದ ಭಾಗದಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ರೈಲು ನಿಲ್ಲಿಸಿ ಪರಿಶೀಲನೆ ನಡೆಸಲಾಗಿದೆ.
ಚಲಿಸುವ ಚಕ್ರಗಳ ವಿವಿಧ ಕಾರಣಕ್ಕೆ ಅತಿಯಾದ ಬಿಸಿ ಉಂಟಾಗಿ ಈ ರೀತಿ ಬೆಂಕಿಕಾಣಿಸಿಕೊಳ್ಳುವುದು ಸಹಜ ಎನ್ನಲಾಗಿದ್ದು, ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೆ ಸಿಬ್ಬಂದಿ ಟ್ರೈನ್ ನಿಲ್ಲಿಸಿ ಪರಿಶೀಲನೆ ನಡೆಸಿ ಬೆಂಕಿ ನಂದಿಸಿದ್ದಾರೆ. ಈ ಕಾರಣಕ್ಕೆ ಕೆಲಹೊತ್ತು ನಿಂತಿದ್ದ ಟ್ರೈನ್, ಪರಿಶೀಲನೆ ಪೂರ್ಣಗೊಂಡ ಬಳಿಕ ಮುಂದಕ್ಕೆ ಸಾಗಿದೆ.
ತರೀಕೆರೆ ರೈಲ್ವೆ ನಿಲ್ದಾಣದ ಸಮೀಪ ರೈಲಿನ ಭೋಗಿಯೊಂದರ ಕೆಳಭಾಗದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ರೈಲು ಸಿಬ್ಬಂದಿ ತಕ್ಷಣವೇ ರೈಲನ್ನು ನಿಲ್ಲಿಸಿ ಪರಿಶೀಲಿಸಿದ್ದಾರೆ. ಭೋಗಿಯ ಚಕ್ರಗಳ ಬಳಿ ಬೆಂಕಿ ಹೊತ್ತಿಕೊಂಡಿದ್ದನ್ನ ಗಮನಿಸಿದ ಸಿಬ್ಬಂದಿ ಅದನ್ನು ನಂದಿಸಿದ್ದಾರೆ.
ಈ ಬಗ್ಗೆ ರೈಲ್ವೆ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.
ರೈಲಿನ ಚಕ್ರಗಳು ಬೆಂಕಿ ಹೊತ್ತಿಕೊಳ್ಳಲು ಕಾರಣಗಳೇನು?
ಅತಿಯಾದ ಘರ್ಷಣೆಯಿಂದ ಉಂಟಾಗುವ ತಾಪಮಾನದಿಂದ ಟ್ರೈನ್ನ ಚಕ್ರಗಳಲ್ಲಿ ಬೆಂಕಿ ಅಥವಾ ಹೊಗೆ ಕಾಣಿಸಿಕೊಳ್ಳುತ್ತದೆ. ರೈಲಿನ ಬ್ರೇಕ್‌ಗಳು ಸರಿಯಾಗಿ ಬಿಡುಗಡೆಯಾಗದೆ ಚಕ್ರಗಳಿಗೆ ಅಂಟಿಕೊಂಡಾಗ, ಘರ್ಷಣೆ ಹೆಚ್ಚಾಗಿ ಭಾರಿ ಶಾಖ ಉತ್ಪತ್ತಿಯಾಗುತ್ತದೆ. ಇದು ಚಕ್ರಗಳ ಸಮೀಪವಿರುವ ಉರಿಯುವ ಗ್ರೀಸ್ನಂತ ವಸ್ತುಗಳಲ್ಲಿ ಬೆಂಕಿ ಮೂಡಿಸುತ್ತದೆ.
ಇದಲ್ಲದೆ ರೈಲು ಚಲಿಸುವಾಗ, ಚಕ್ರಗಳು ಹಳಿಗಳ ಮೇಲೆ ಜಾರಿದಾಗಲೂ (ಸ್ಲಿಪ್ ಆದಾಗಲೂ) ಅತಿಯಾದ ಘರ್ಷಣೆ ಮತ್ತು ಶಾಖ ಉತ್ಪತ್ತಿಯಾಗುತ್ತದೆ. ಇದು ಕೂಡ ಬೆಂಕಿಗೆ ಕಾರಣವಾಗಬಹುದು. ಯಾಂತ್ರಿಕ ದೋಷಗಳು ಸಹ ಕೆಲವೊಮ್ಮೆ ಇದಕ್ಕೆ ಕಾರಣವಾಗಬಹುದು.
ರೈಲ್ವೆ ಇಲಾಖೆಯ ಪ್ರಕಾರ, ಇದು ಸಾಮಾನ್ಯವಾಗಿ ಆಗಾಗ ಸಂಭವಿಸುವ ಘಟನೆಯಾಗಿದ್ದು, ನಿರ್ದಿಷ್ಟ ರೈಲ್ವೆ ಸ್ಟೇಷನಗಳಲ್ಲಿ ಈ ಸಂಬಂಧ ಪರಿಶೀಲನೆ ನಡೆಸಲಾಗುತ್ತದೆ ಎನ್ನಲಾಗಿದೆ.