ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಗುರುವಾರ(ಆಗಸ್ಟ್ 03) ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರನ್ನು ಬೆದರಿಸಿದ ಪ್ರಸಂಗ ನಡೆಯಿತು.
ದೆಹಲಿ ಸೇವಾ ಮಸೂದೆ ಅಂಗೀಕರಿಸುವ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸುತ್ತಿರುವಾಗ ವಿಪಕ್ಷದ ಒಬ್ಬ ಸಂಸದರು ಮಸೂದೆಯ ವಿರುದ್ಧ ಸದನದಲ್ಲಿ ಪ್ರತಿಭಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಕೇಂದ್ರ ಸಂಸ್ಕೃತಿ ಖಾತೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಒಂದು ನಿಮಿಷ ಸುಮ್ಮನಿರಿ, ಇಲ್ಲದಿದ್ದರೆ ನಿಮ್ಮ ಮನೆಗೆ ಇಡಿ ಬರಬಹುದು ಎಂದು ಎಚ್ಚರಿಸಿದರು.
ಮಸೂದೆ ವಿರುದ್ಧ ಬಹುತೇಕರು ಪ್ರತಿಭಟನೆಯಲ್ಲಿ ನಿರತರಾಗಿದ್ದ ಕಾರಣ ಸಚಿವರ ಬೆದರಿಕೆಯ ಹೇಳಿಕೆ ಸದನದಲ್ಲಿದ್ದ ಹಲವರಿಗೆ ಕೇಳಿಸಲಿಲ್ಲ.
ಮೀನಾಕ್ಷಿ ಲೇಖಿಯವರ ಹೇಳಿಕೆ ಈಗ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಸಭೆಯಲ್ಲಿ ದೆಹಲಿ ಸೇವಾ ಮಸೂದೆ ಅಂಗೀಕಾರ; ವಿಪಕ್ಷಗಳ ಸಭಾತ್ಯಾಗ
ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ, ಮೀನಾಕ್ಷಿ ಲೇಖಿ ಅವರ ಹೇಳಿಕೆಯು ಕೇಂದ್ರೀಯ ಸಂಸ್ಥೆಗಳನ್ನು ಸರ್ಕಾರ “ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂಬ ವಿರೋಧ ಪಕ್ಷದ ಆರೋಪಗಳನ್ನು “ಸಾಬೀತುಪಡಿಸಿದೆ” ಎಂದು ಹೇಳಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು ಲೋಕಸಭೆಯಲ್ಲಿ ಲೇಖಿ ಅವರ ಹೇಳಿಕೆಗಳು “ಎಚ್ಚರಿಕೆಯೋ ಅಥವಾ ಬೆದರಿಕೆಯೋ” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ ಜೀನ್ಸ್ ಘಟಕಗಳಿಗೆ ಸೌಲಭ್ಯ ಕಲ್ಪಿಸಿ: ರಾಜ್ಯ ಸರ್ಕಾರಕ್ಕೆ ರಾಹುಲ್ ಪತ್ರ
ಟಿಎಂಸಿ ವಕ್ತಾರ ಸಾಕೇತ್ ಗೋಖಲೆ, “ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಸಂಸತ್ತಿನಲ್ಲಿ ಪ್ರತಿಪಕ್ಷಗಳಿಗೆ ಬೆದರಿಕೆ ಹಾಕಿರುವುದು ಆಘಾತಕಾರಿ ಘಟನೆಯಾಗಿದೆ. ಬಿಜೆಪಿ ಮಂತ್ರಿಗಳು ಈಗ ಬಹಿರಂಗವಾಗಿಯೇ ಪ್ರತಿಪಕ್ಷಗಳ ವಿರುದ್ಧ ಬೆದರಿಸ ತೊಡಗಿದ್ದಾರೆ. ಪ್ರತಿಕಾರವು ಇನ್ನು ಮುಂದೆ ಮರೆಯಾಗಿರದೆ ನೇರವಾಗಿರುತ್ತದೆ” ಎಂದು ಹೇಳಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ನಾಯಕ ಭರತ್ ರೆಡ್ಡಿ ಕೇಂದ್ರ ಸಚಿವರ ಹೇಳಿಕೆಯ ವಿರುದ್ಧ ಕಿಡಿಕಾರಿದ್ದಾರೆ.
“ಕೇಂದ್ರ ಸಚಿವೆ ಲೇಖಿ ಅವರು ಸಂಸತ್ತಿನಲ್ಲಿ ವಿರೋಧ ಪಕ್ಷದ ಸಂಸದರಿಗೆ ಬೆದರಿಕೆ ಹಾಕಿದ್ದಾರೆ. ಬಿಜೆಪಿ ಸಚಿವರು ಈಗ ಸಂಸತ್ತಿನಲ್ಲಿ ಮಾತನಾಡಿದ್ದಕ್ಕಾಗಿ ಪ್ರತಿಪಕ್ಷಗಳ ವಿರುದ್ಧ ಇಡಿ ಬಳಸುವುದಾಗಿ ಬಹಿರಂಗವಾಗಿ ಎಚ್ಚರಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ”ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.