ವೀರಶೈವ ಲಿಂಗಾಯತ ಸಂಘಟಿತರಾಗಿ ಮುಂದೆ ಸಾಗಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದಿಂದ ಇದೇ ತಿಂಗಳ 25 ರಂದು ಮಹಾಸಭಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ, ಸೇವಾ ದೀಕ್ಷಾ ಸಮಾರಂಭ ಹಾಗೂ ಬೆಟ್ಟದಹಳ್ಳಿ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಪೀಠಾರೋಹಣ ಸುವರ್ಣ ಮಹೋತ್ಸವ ಮತ್ತು ಒಂದು ಲಕ್ಷ ರೂಗಳ ಸದಸ್ಯತ್ವ ಪಡೆದವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎಸ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನ ಆರು ಮಠಾಧೀಶರು ಈ ಕಾರ್ಯಕ್ರಮಕ್ಕೆ ಸಾನಿಧ್ಯ ವಹಿಸಲಿದ್ದು, ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಮಹದೇವ ಬಿದರಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಸ್.ಕೆ.ರಾಜಶೇಖರ್, ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಜಿಲ್ಲಾಧ್ಯಕ್ಷ ಡಾ.ಪರಮೇಶ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಮುಖಂಡರು, ಮಹಾಸಭಾ ವಿವಿಧ ಘಟಕದ ಪದಾಧಿಕಾರಿಗಳು ಆಗಮಿಸಲಿದ್ದು ತಾಲ್ಲೂಕಿನ ಎಲ್ಲಾ ಶರಣ ಶರಣೆಯರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಶಿಭೂಷಣ್ ಮಾತನಾಡಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಬರುವ ಶರಣ ಶರಣೆಯರು ತಮ್ಮ ಆಧಾರ್ ಕಾರ್ಡ್ ಮತ್ತು ಪೋಟೋ ಜೊತೆಗೆ ಸೇವಾಶುಲ್ಕ ನೀಡಿ ಸದಸ್ಯತ್ವ ಪಡೆಯಬಹುದಾಗಿದೆ. ತಾಲ್ಲೂಕು ಘಟಕ ಸದಸ್ಯತ್ವಕ್ಕೆ 250 ರೂಗಳು, ಜಿಲ್ಲಾ ಘಟಕಕ್ಕೆ 1 ಸಾವಿರ ರೂ, ರಾಜ್ಯ ಘಟಕಕ್ಕೆ 2500 ರೂ ಹಾಗೂ ರಾಷ್ಟ್ರೀಯ ಘಟಕಕ್ಕೆ 5 ಸಾವಿರ ನೀಡಿ ಸದಸ್ಯತ್ವ ಪಡೆಯಬಹುದಾಗಿದೆ. ಈ ಜೊತೆಯಲ್ಲಿ ಆಜೀವ ಸದಸ್ಯತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ. ತಾಲ್ಲೂಕು ಘಟಕಕ್ಕೆ 25 ಸಾವಿರ, ಜಿಲ್ಲಾ ಘಟಕಕ್ಕೆ 50 ಸಾವಿರ, ರಾಜ್ಯ ಘಟಕಕ್ಕೆ 1 ಲಕ್ಷ ನೀಡಿ ಆಜೀವ ಸದಸ್ಯರಾಗಬಹುದು ಎಂದು ವಿವರಿಸಿದರು.
ಮಹಾಸಭಾ ಕೃಷಿ ಘಟಕದ ಅಧ್ಯಕ್ಷ ಬಿ.ಜಿ.ದಿವ್ಯಪ್ರಕಾಶ ಮಾತನಾಡಿ ಸಾವಿರಾರು ಮಂದಿ ಶರಣ ಶರಣೆಯರು ಸೇರುವ ಈ ಸಮಾರಂಭದಲ್ಲಿ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸದಸ್ಯತ್ವ ಅಭಿಯಾನ, ಸನ್ಮಾನ ಕಾರ್ಯಕ್ರಮ, ಸೇವಾ ದೀಕ್ಷಾ ಸ್ವೀಕಾರ ಹಾಗೆಯೇ ಬೆಟ್ಟದಹಳ್ಳಿ ಶ್ರೀಗಳ ಸುವರ್ಣ ಮಹೋತ್ಸವ ಪೀಠಾರೋಹಣ ಹಿನ್ನಲೆ ಭಕ್ತಿ ಸಮರ್ಪಣೆ ನಡೆಯಲಿದೆ. ಈ ಜೊತೆಗೆ 12 ನೇ ಶತಮಾನ ವಚನಗಳ ಸುಶ್ರಾವ್ಯ ವಾಚನ ಸ್ಪರ್ಧೆ ನಡೆಸಿದ್ದು ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಈ ವೇದಿಕೆಯಲ್ಲಿ ನೀಡಲಾಗುವುದು ಎಂದರು.
ಮಹಾಸಭಾ ಯುವ ಘಟಕದ ಅಧ್ಯಕ್ಷ ಕೆ.ಆರ್.ಯತೀಶ್ ಮಾತನಾಡಿ ಗುಬ್ಬಿ ತಾಲ್ಲೂಕಿನಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಸಂಘಟನೆಯ ಶಕ್ತಿ ಸದಸ್ಯತ್ವ ಅಭಿಯಾನ ಮೂಲಕ ತೋರಿಸಬೇಕಿದೆ. ಹತ್ತು ಸಾವಿರಕ್ಕೂ ಅಧಿಕ ಸದಸ್ಯ ನೋಂದಣಿ ಮಾಡಿಸಿ ಅಭಿಯಾನ ಯಶಸ್ವಿ ಮಾಡಲು ಯುವ ಘಟಕ ಸಜ್ಜಾಗಿದೆ. ನಮ್ಮ ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸಿ ಎಂದು ಕರೆ ನೀಡಿದ ಅವರು ಮಹಾಸಭಾ ಸಂಘಟನೆಗೆ ಯುವ ವಿಭಾಗ, ಕೃಷಿ ವಿಭಾಗ, ಕಾನೂನು ವಿಭಾಗ, ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗ ಹಾಗೂ ಮಾಧ್ಯಮ ವಿಭಾಗ ರಚಿಸಿ ಕಾರ್ಯ ಹಂಚಿಕೊಂಡು ಕಾರ್ಯಕ್ರಮ ಯಶಸ್ವಿ ಜೊತೆಗೆ ಸದಸ್ಯತ್ವ ಅಭಿಯಾನ ಚುರುಕಿನಿಂದ ನಡೆಸುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಉಪಾಧ್ಯಕ್ಷ ವಿಶ್ವಾರಾಧ್ಯ, ನಿಕಟ ಪೂರ್ವ ಅಧ್ಯಕ್ಷ ಹೇರೂರು ರಮೇಶ್, ಪದಾಧಿಕಾರಿಗಳಾದ ಹೇಮಣ್ಣ, ಸಾಗರನಹಳ್ಳಿ ಗಂಗಾಧರ್, ಓಂಕಾರಮೂರ್ತಿ, ಬೆಣಚಿಗೆರೆ ಸ್ವರೂಪ್, ವಿಧೀಶ್ ಇತರರು ಇದ್ದರು.