ಒಂದು ಗ್ರಾಮದ ಭವಿಷ್ಯ ರೂಪುಗೊಳ್ಳುವುದು ಅಲ್ಲಿ ಹುಟ್ಟಿದವರ ಕನಸುಗಳಿಂದ ಮಾತ್ರವಲ್ಲ, ಅಲ್ಲಿ ಬಂದು ನೆಲೆಯೂರಿದವರ ಬದ್ಧತೆಯಿಂದಲೂ ಆಗಬಹುದು ಎಂಬುದು ಹಿರೇಜೇನಿಯ ಸತ್ಯಾ ಅವರ ಕಥೆಯ ಸಾರ. ಅಂಗನವಾಡಿಯ ರೂಪದಲ್ಲಿ ಅವರು ಕಟ್ಟಿಕೊಂಡ ಕನಸು ಮಕ್ಕಳ ಪಾಠಶಾಲೆಯಿಂದ ಹಿಡಿದು ಸಮಾಜ ನಿರ್ಮಾಣದ ಶಕ್ತಿ ಕೇಂದ್ರವೂ ಆಗಿದೆ. ಸತ್ಯಾ ಅವರ ಹೋರಾಟ, ಶ್ರಮ ಹಾಗೂ ದೃಢಸಂಕಲ್ಪ ಇಂದಿನ ಗ್ರಾಮೀಣ ಭಾರತಕ್ಕೆ ದಿಕ್ಕು ತೋರಿಸಬಲ್ಲ ಮಾದರಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿರೇಜೇನಿಯ ಪಕ್ಕದ ಕಾರೆಮಟ್ಟಿ ಗ್ರಾಮದಲ್ಲಿ ನಿರ್ಮಿಸಲ್ಪಟ್ಟಿರುವ ಮಾದರಿ ಅಂಗನವಾಡಿ ಕೇಂದ್ರದ ಹಿಂದಿರುವ ಯಶೋಗಾಥೆ ಇಂಥದ್ದೊಂದು ದಿಟ್ಟ ಬದಲಾವಣೆಯ ಜೀವಂತ ಸಾಕ್ಷಿ ಎನಿಸಿದೆ. 1999ರಲ್ಲಿ ಈ ಗ್ರಾಮಕ್ಕೆ ಸೊಸೆಯಾಗಿ ಬಂದ ಸತ್ಯಾ ಇಂದು ನೂರಾರು ಮಕ್ಕಳ ಶಿಕ್ಷಣದ ಭವಿಷ್ಯಕ್ಕೆ ಅಡಿಗಲ್ಲು ಹಾಕಿಕೊಟ್ಟಿದ್ದಾರೆ.

ವಿದ್ಯುತ್ ಸಂಪರ್ಕ, ಕಚ್ಚಾ ಮನೆಗೆ ಬಾಗಿಲು ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದ, ದಟ್ಟ ಅರಣ್ಯದ ನಡುವಿನ ಈ ಗ್ರಾಮಕ್ಕೆ ಸೊಸೆಯಾಗಿ ಬಂದ ಸತ್ಯ ಮೊದಲು ಕಂಡದ್ದು ಗುಡಿಸಲಿನಂತಿದ್ದ ಶಾಲೆ, ಅದರಲ್ಲಿದ್ದ ಕೇವಲ ಮೂರು ಮಕ್ಕಳು. ಶಾಲೆಯ ಅವ್ಯವಸ್ಥಿತ ಪರಿಸ್ಥಿತಿಯನ್ನು ಕಂಡು, ‘ಈ ಗ್ರಾಮಕ್ಕೆ ಶಿಕ್ಷಣದ ಬೆಳಕು ಅಗತ್ಯ’ ಎಂದು ಮನದಲ್ಲಿ ನಿಶ್ಚಯ ಮಾಡಿಕೊಂಡರು. ಅಂದಿನ ಆ ಪರಿಸ್ಥಿತಿ ಮುಂದೆ ಅವರು ಅಂಗನವಾಡಿ ಕೇಂದ್ರಕ್ಕಾಗಿ ಹೋರಾಟ ಮಾಡಲು ಸ್ಫೂರ್ತಿಯಾಯಿತು.
ಅಂಗನವಾಡಿಗಾಗಿ ಮನೆಮನೆಗೆ ತೆರಳಿ ಜಾಗೃತಿ
2003ರಲ್ಲಿ ಅಕ್ಷರ ದಾಸೋಹ ಯೋಜನೆಯ ಅಡುಗೆ ಸಹಾಯಕಿಯಾಗಿ ಶಾಲೆಯಲ್ಲಿ ಕೆಲಸ ಆರಂಭಿಸಿದ ಸತ್ಯಾ, ಮಕ್ಕಳಿಗೆ ಶಿಕ್ಷಣ ನೀಡುವ ನಿಖರ ವ್ಯವಸ್ಥೆ ಬೇಕೆಂದು ಮನೆ ಮನೆಗೆ ತೆರಳಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು. ಹಲವು ವಿರೋಧದ ನಡುವೆಯೂ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಅವರ ನಿರಂತರ ಹೋರಾಟದ ಫಲವಾಗಿ 2004ರ ಸೆಪ್ಟೆಂಬರ್ 2ರಂದು ಅಂಗನವಾಡಿ ಉದ್ಘಾಟನೆಯಾಯಿತು.
ಮರದಡಿಯಲ್ಲಿ ಪಾಠ, ಛತ್ರಿಯಡಿಯಲ್ಲಿ ಅಡುಗೆ
ಆರಂಭದಲ್ಲಿ ಅಂಗನವಾಡಿಗೆ ಕಟ್ಟಡವಿರಲಿಲ್ಲ. ಮಳೆ ಬರುವಾಗ ಮಕ್ಕಳಿಗೆ ಮರದಡಿಯಲ್ಲಿ ಪಾಠ, ಛತ್ರಿಯಡಿಯಲ್ಲಿ ಅಡುಗೆ ಮಾಡಬೇಕಾದ ಪರಿಸ್ಥಿತಿ. ಕೆಲವೊಮ್ಮೆ ತಮ್ಮ ಮನೆಯಲ್ಲೇ ತಿಂಡಿ ತಯಾರಿಸಿ ಐದು ಕಿಮೀ ದೂರ ಸಾಗಿ ಮಕ್ಕಳಿಗೆ ಊಟ ಪೂರೈಸುತ್ತಿದ್ದರು. ಇಲ್ಲಿ ಅವರ ಬದ್ಧತೆ ಖಂಡಿತ ಮೆಚ್ಚುವಂಥದ್ದು.

ಅಂಗನವಾಡಿ ಮಕ್ಕಳ ಸಂಖ್ಯೆ ಹೆಚ್ಚಳ, ಸ್ಥಳೀಯ ವಿರೋಧವೂ ಹೆಚ್ಚಳ
ಅಂಗನವಾಡಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಕ್ರಮೇಣ 25ಕ್ಕೇರಿದಾಗ, ಕೆಲವು ಗ್ರಾಮಸ್ಥರಿಂದ ರಾಜಕೀಯ ವಿರೋಧವೂ ಎದುರಾಯಿತು. ಮರಗಳನ್ನು ಕಡಿಯುವುದು, ಅಂಗನವಾಡಿಗೆ ತೊಂದರೆ ನೀಡುವುದು ಸೇರಿದಂತೆ ವಿವಿಧ ಅಡ್ಡಿಗಳು ಎದುರಾದರೂ, ಸತ್ಯಾ ತಮ್ಮ ಸೇವಾ ಚಟುವಟಿಕೆಯನ್ನು ನಿಲ್ಲಿಸಲಿಲ್ಲ.
ಸ್ವಂತ ಕಟ್ಟಡದ ಕನಸು ಸಾಕಾರ
2013-14ರಲ್ಲಿ ಸತ್ಯಾ ಅವರನ್ನು ಅಧಿಕೃತವಾಗಿ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕ ಮಾಡಲಾಯಿತು. ಒಳ ರಾಜಕೀಯ ಸಮಸ್ಯೆಗಳಿಂದ ತಡವಾದರೂ, 2022ರಲ್ಲಿ ಕೊನೆಗೂ ಅಂಗನವಾಡಿಗೆ ಸ್ವಂತ ಕಟ್ಟಡ ನಿರ್ಮಿಸಲಾಯಿತು. 2023ರಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉದ್ಘಾಟನೆ ನೆರವೇರಿಸಿದರು. ಸರ್ಕಾರಿ ಯೋಜನೆಯಡಿ ‘ಬಾಲಸ್ನೇಹಿ ಅಂಗನವಾಡಿ’ಯಾಗಿ ಆಯ್ಕೆಯಾದುದು ಮತ್ತೊಂದು ಹೆಗ್ಗುರುತಾಯಿತು.
ಅನೇಕ ಯೋಜನೆಗಳಲ್ಲಿ ತೊಡಗಿಸಿಕೊಂಡ ಸತ್ಯಾ
ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಬೂತ್ ಲೆವೆಲ್ ಅಧಿಕಾರಿ (BLO)ಯಾಗಿ, AITUC ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ಸಹಾಯವಾಣಿ ಕಾರ್ಯಕರ್ತೆಯಾಗಿಯೂ ಸೇವೆ ಸಲ್ಲಿಸುತ್ತಿರುವ ಅವರು, “ಮಕ್ಕಳಿಗೆ ಆಟಿಕೆ, ಸುರಕ್ಷಿತ ಪರಿಕರ, ಕುಡಿಯುವ ನೀರು, ಕೈತೊಳೆಯುವ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳು ಬೇಕು” ಎನ್ನುವ ನಿಟ್ಟಿನಲ್ಲಿ ಇನ್ನೂ ಹೋರಾಟದ ಹಾದಿಯಲ್ಲಿದ್ದಾರೆ.

ಸ್ವತಃ ಅವರೇ ಹೇಳಿಕೊಳ್ಳುವಂತೆ ಆ ಊರಿಗೆ ಬಂದಾಗಿನಿಂದಲೂ ಹಲವು ತೊಡಕುಗಳ ನಡುವೆಯೂ ಮಕ್ಕಳಿಗೆ ಶಿಕ್ಷಣ, ಸ್ವಂತ ಅಂಗನವಾಡಿ ಕೇಂದ್ರ, ಗ್ರಾಮದ ಗರ್ಭಿಣಿ-ಬಾಣಂತಿಯರ ಆರೈಕೆ, ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮ ಸೇರಿದಂತೆ ತಮ್ಮ ಸಾಮಾಜಿಕ ಜವಾಬ್ದಾರಿಯ ಕನಸು ಸಾಕಾರಗೊಂಡಿದೆ. ಆಗಬೇಕಿರುವುದು ಇನ್ನೂ ಇದೆ. ಅದಕ್ಕಾಗಿ ನಿರಂತರ ಹೋರಾಟ ನಡೆಸುತ್ತೇನೆ. ಯಾವೊಂದು ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು. ಯಾರೊಬ್ಬರೂ ಅಪೌಷ್ಠಿಕತೆಯಿಂದ ಬಳಲಬಾರದು. ಹಲವು ವರ್ಷಗಳ ಕನಸು ತಡವಾದರೂ ಸಾಕಾರಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ಶಿವಮೊಗ್ಗ | ಭಾರತ ದೇಶ ಇಸಂನಲ್ಲಿ ಮುಳುಗಿದೆ : ಕೆ.ದಯಾನಂದ್

“ಒಬ್ಬ ಹೆಣ್ಣು ಮನಸ್ಸು ಮಾಡಿದರೆ ಅಸಾಧ್ಯ ಎಂಬುದೇ ಇಲ್ಲ” ಎಂಬ ಗಾದೆಯನ್ನು ಸತ್ಯಾ ತಮ್ಮ ಜೀವಿತದಲ್ಲಿ ಸಾಕಾರಗೊಳಿಸಿದ್ದಾರೆ. ಹಿರೇಜೇನಿಯ ಪುಟ್ಟ ಹಳ್ಳಿಯಲ್ಲಿ ಈ ಸಾಧನೆಯು ಇಡೀ ಸಮಾಜಕ್ಕೆ ಶ್ರದ್ಧೆ, ಶ್ರಮ ಮತ್ತು ಸೇವೆಯ ಮೂಲಕ ಬೆಳಕು ಚೆಲ್ಲುತ್ತಿದೆ. ಸಮಾಜದಲ್ಲಿ ಶಿಕ್ಷಣದ ಬೆಳಕು ಹರಡಲು ಒಬ್ಬ ಮಹಿಳೆಯ ನಿರಂತರ ಶ್ರಮ, ಧೈರ್ಯ ಮತ್ತು ಸಂಕಷ್ಟಗಳ ವಿರುದ್ಧದ ಹೋರಾಟ ಬಹು ಮುಖ್ಯ. ಅಂತಹ ಮಹಿಳೆಯರು ಗ್ರಾಮೀಣ ಭಾರತದಲ್ಲಿ ನಿಜಕ್ಕೂ ಬದಲಾವಣೆಯ ಹರಿಕಾರರು. ಸತ್ಯಾ ಅವರ ಜೀವನಗಾಥೆ ಒಂದು ಅಂಗನವಾಡಿ ಕೇಂದ್ರದ ಸ್ಥಾಪನೆಯ ಕಥೆಯ ಹೊರತಾಗಿ, ಅದು ಆಕೆಯ ಧೈರ್ಯ, ಅಡಚಣೆಗಳನ್ನು ಮೀರಿ ಮುನ್ನಡೆಯುವ ಮನೋಬಲ, ಮತ್ತು ಗ್ರಾಮೀಣ ಮಕ್ಕಳ ಭವಿಷ್ಯದ ಕನಸುಗಳ ಸಂಕೇತವಾಗಿದೆ. ಬೆಲೆಕೊಡದ ಸಮಾಜದ ವಿರೋಧ, ಆರ್ಥಿಕ-ಸಾಮಾಜಿಕ ಅಡಚಣೆಗಳು ಹಾಗೂ ವೈಯಕ್ತಿಕ ಬಾಧೆಗಳ ನಡುವೆಯೂ ಹೋರಾಟದ ಮೂಲಕ ಇಡೀ ಹಳ್ಳಿಗೆ ಬೆಳಕು ತಂದ ಅವರು, ನಿಜಕ್ಕೂ ಮಾದರಿಯಾದ ಮಹಿಳೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.