ಕೆಲವು ಪ್ರಾಥಮಿಕ ಶಾಲಾ ಮಕ್ಕಳಿಗೆ ಕನ್ನಡ ಭಾಷೆಯ ಅಕ್ಷರಗಳನ್ನು ಗುರುತಿಸುವ ಪರಿಸ್ಥಿತಿಯಲ್ಲಿ ಇಲ್ಲ. ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಕಾರ್ಯ ಆಗಬೇಕು. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಹೆಚ್ಚಿನ ಭಾಗ ಉತ್ತೀರ್ಣರಾಗಿರುತ್ತಾರೆ. ಆದರೆ ಕೆಲವೇ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆ ಕನ್ನಡ ವಾಗಿದ್ದರೂ ಸಹ ಅನುತ್ತೀರ್ಣವಾಗಿರುತ್ತಾರೆ. ಇದಕ್ಕೆ ಕಾರಣವನ್ನು ಕಂಡುಕೊಳ್ಳಬೇಕಿದೆ ಎಂದರು. ಅಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿಗಳು ಅದಷ್ಟು ಕನ್ನಡದಲ್ಲಿಯೇ ಇರುವ ಹಾಗೆ ಕ್ರಮವಹಿಸಬೇಕು. ಕಡ್ಡಾಯವಾಗಿ ರೋಗಿಗಳ ಹೆಸರನ್ನು ಕನ್ನಡದಲ್ಲಿಯೇ ನಮೂದು ಮಾಡಬೇಕು. ವೈದ್ಯರುಗಳು ಸಹ ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳುಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಅವರು ಇಂದು ಉಡುಪಿ ಜಿಲ್ಲಾ ಪಂಚಾಯತ್ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಕಾರ್ಯಪಾಲಕ ಅಭಿಯಂತರರ ಕಚೇರಿಯಿಂದ ಅಬಿವೃದ್ಧಿ ಕಾಮಗಾರಿಗಳ ಟೆಂಡರ್, ನೋಟಿಫಿಕೇಶನ್ ಗಳನ್ನು ಕನ್ನಡದಲ್ಲಿಯೆ ಕರೆಯುವುದರೊಂದಿಗೆ ಕಾರ್ಯಾದೇಶವನ್ನು ಕನ್ನಡ ಭಾಷೆಯಲ್ಲಿಯೇ ನೀಡಬೇಕು. ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಟೆಂಡರ್ ಕಾರ್ಯಾದೇಶವನ್ನು ನೀಡಿದ್ದಲ್ಲಿ ಅವರು ಸ್ಥಳೀಯ ಕನ್ನಡಿಗರಿಗೆ ಉದ್ಯೊಗ ಅವಕಾಶಗಳು ಹೆಚ್ಚು ಇರುತ್ತದೆ. ಇದಕ್ಕೆ ಒತ್ತು ನೀಡಬೇಕು ಎಂದರು. ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಸ್ಥಳೀಯ ಭಾಷೆಯನ್ನು ಮಾತನಾಡುವವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದು ಒಳಿತು. ಇದರಿಂದ ಸ್ಥಳೀಯ ಜನರು ದೈನಂದಿನ ಬ್ಯಾಂಕಿಂಗ್ ವ್ಯವಹಾರಗಳನ್ನು ಸರಳವಾಗಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಈ ಬಗ್ಗೆ ಜಿಲ್ಲೆಯ ಅಗ್ರಗಣ್ಯ ಬ್ಯಾಂಕ್ ಸಭೆಯನ್ನು ನಡೆಸಿ, ಬ್ಯಾಂಕುಗಳಿಗೆ ಸೂಚನೆಯನ್ನು ನೀಡಬೇಕು ಎಂದರು.
ಈ ಹಿಂದೆ ಶಾಲೆಗಳ ನಿರ್ಮಾಣಕ್ಕಾಗಿ ಅನೇಕ ದಾನಿಗಳು 5-10 ಎಕರೆವರೆಗೆ ಜಮೀನುಗಳನ್ನು ದಾನವಾಗಿ ನೀಡಿದ್ದು, ಅವುಗಳಲ್ಲಿ ಶಾಲಾ ಕಟ್ಟಡಗಳ ನಿರ್ಮಾಣವಾಗಿ ಕಳೆದ 35-40 ವರ್ಷಗಳಿಂದ ಬಳಕೆ ಮಾಡಿಕೊಳ್ಳಲಾಗಿದೆ. ಆದರೆ, ಕೆಲವು ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದಾಗಿ ನಿಂತು ಹೋಗಿವೆ. ಶಾಲೆಗೆ ಸಂಬಂದಿಸಿದ ಜಾಗಗಳನ್ನು ಜನಸಾಮಾನ್ಯರು ಒತ್ತುವರಿ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದ್ದರಿಂದ ದಾನದಿಂದ ಪಡೆದ ಭೂಮಿಯ ದಾಖಲಾತಿಗಳನ್ನು ಸರ್ಕಾರದ ಹೆಸರಿಗೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ 8 ಶಾಲೆಗಳ ದಾಖಲೆಗಳು ಸಮರ್ಪಕವಾಗಿ ಆಗದೇ ಇರುವುದು ಕಂಡುಬಂದಿದೆ. ಸೂಕ್ತ ಅಧಿಕೃತ ದಾಖಲಾತಿಗಳನ್ನು ಜಿಲ್ಲಾ ಅಡಳಿತದಿಂದ
ಮಾಡಿಕೊಳ್ಳಲು ಕ್ರಮವಹಿಸಬೇಕು ಎಂದರು.
ಉಡುಪಿ ಜಿಲ್ಲೆಯ ವಾಣಿಜ್ಯ ಕೇಂದ್ರಗಳು ಹಾಗೂ ಕೈಗಾರಿಕಾ ಕೇಂದ್ರಗಳ ಮುಂಭಾಗದ ನಾಮಫಲಕದಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯಲ್ಲಿ ಹಾಗೂ ಶೇ. 40 ರಷ್ಟು ಇತರೆ ಭಾಷೆಯಲ್ಲಿ ಅಳವಡಿಸಲು ಕ್ರಮವಹಿಸಬೇಕು. ಪರವಾನಿಗೆ ನೀಡುವ ಸಂದರ್ಭದಲ್ಲಿಯೇ ಅವರುಗಳಿಂದ ಛಾಯಾಚಿತ್ರಗಳನ್ನು ಪಡೆದುಕೊಂಡು ವೀಕ್ಷಿಸಿ, ನಂತರ ಅನುಮತಿ ನೀಡಬೇಕು. ಇವುಗಳ ಜೊತೆಯಲ್ಲಿ ಆಗಿಂದಾಗ್ಗೆ ಪರಿಶೀಲನೆ ಮಾಡಲು ಕ್ರಮವಹಿಸಬೇಕು ಎಂದರು.
ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನ್‌ಗಲ್, ಸದಸ್ಯರಾದ ಯಾಕೂಬ್ ಖಾದರ್ ಗುಲ್ವಾಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಅಪ್ತ ಕಾರ್ಯದರ್ಶಿ ಫಣಿಕುಮಾರ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.