ರಾಜ್ಯದಲ್ಲಿ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ಬಂದಿರುವ ವಿಚಾರ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಬಗ್ಗೆ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆಹಾರ, ಸಾರ್ವಜನಿಕ ವಿತರಣೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, “ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಜಿಎಸ್‌ಟಿ ನೋಟಿಸ್ ಬಂದಿದೆಯೇ ಹೊರತು ಕೇಂದ್ರ ಸರ್ಕಾರ ನೀಡಿಲ್ಲ” ಎಂದು ಹೇಳಿದ್ದಾರೆ.
ತೆರಿಗೆ ಭರಿಸಲು ಸೂಚಿಸಿ ನೋಟಿಸ್‌ಗಳನ್ನು ನೀಡುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೋಶಿ, “ಡಿಸಿಎಂ ನೀಡಿರುವ ಹೇಳಿಕೆ ಹಾಸ್ಯಾಸ್ಪದ. ಕರ್ನಾಟಕದ ವಾಣಿಜ್ಯ ತೆರಿಗೆ ಅಧಿಕಾರಿಗಳು ಜಿಎಸ್‌ಟಿ ಬಾಕಿ ಕಟ್ಟುವಂತೆ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದಾರೆ. ಆದರೆ ಜನರ ದಾರಿ ತಪ್ಪಿಸಲು ಇದರ ಹಿಂದೆ ರಾಜ್ಯ ಸರ್ಕಾರದ ಪಾತ್ರವಿಲ್ಲ ಎಂದು ಡಿಸಿಎಂ ಹೇಳುತ್ತಿದ್ದಾರೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಯುಪಿಐ ತೊರೆದು ನಗದು ವ್ಯವಹಾರ ಆರಂಭಿಸಿದ ವರ್ತಕರಿಗೆ ಎಚ್ಚರಿಕೆ ನೀಡಿದ ವಾಣಿಜ್ಯ ತೆರಿಗೆ ಇಲಾಖೆ
“ಜಿಎಸ್‌ಟಿಯಲ್ಲಿ ಎರಡು ಪ್ರಕಾರಗಳಿವೆ. ಕೇಂದ್ರ ಸರ್ಕಾರದಡಿ ಸಿಜಿಎಸ್‌ಟಿ ಮತ್ತು ರಾಜ್ಯ ಸರ್ಕಾರದಡಿ ಎಸ್‌ಜಿಎಸ್‌ಟಿ ಬರುತ್ತದೆ. ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿದೆ. ಹಾಗಾಗಿ ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ” ಎಂದು ಜೋಶಿ ಹೇಳಿದರು.
“ಈ ನೋಟಿಸ್ ಅನ್ನು ಕೇಂದ್ರ ಸರ್ಕಾರವೇ ನೀಡಿದ್ದರೆ ದೇಶದ ಎಲ್ಲ ರಾಜ್ಯಗಳಲ್ಲಿ ಈ ಸಮಸ್ಯೆ ಇರುತ್ತಿತ್ತು. ಆದರೆ ಕರ್ನಾಟಕದಲ್ಲಿ ಮಾತ್ರ ಈ ಸಮಸ್ಯೆ ಇರುವುದು. ಸಿದ್ದರಾಮಯ್ಯ ಸರ್ಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಯತ್ನ ಮಾಡುತ್ತಿದೆ” ಟೀಕಿಸಿದರು.
ಇನ್ನು ಯುಪಿಐ ವ್ಯವಸ್ಥೆಯನ್ನು ಹಾಳು ಮಾಡುವ ಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದೂ ಕೇಂದ್ರ ಸಚಿವರು ಆರೋಪಿಸಿದರು. “ಯುಪಿಐ ವಹಿವಾಟು ಆಧಾರದಲ್ಲಿ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ಗಳನ್ನು ನೀಡುವ ಮೂಲಕ ರಾಜ್ಯ ಸರ್ಕಾರ ಡಿಜಿಟಲ್ ಮತ್ತು ಯುಪಿಐ ವಹಿವಾಟುಗಳಿಗೆ ಹಾನಿ ಮಾಡುವ ಯತ್ನ ಮಾಡುತ್ತಿದೆ. ದೇಶದಲ್ಲಿ ಯುಪಿಐ ವಹಿವಾಟು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಆದರೆ ಕರ್ನಾಟಕ ಸರ್ಕಾರ ಈ ಅತ್ಯುತ್ತಮ ವ್ಯವಸ್ಥೆಯನ್ನು ಹಾಳು ಮಾಡುವ ಯತ್ನ ನಡೆಸುತ್ತಿದೆ” ಎಂದು ದೂರಿದರು.
20 ಲಕ್ಷ ರೂಪಾಯಿಗಿಂತ ಅಧಿಕ ಸೇವಾ ಪೂರೈಕೆ ಮಾಡಿದವರಿಗೆ ಮತ್ತು ಸರಕು ವ್ಯಾಪಾರಿಗಳು 40 ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟು ಮಾಡಿದ್ದರೆ ಅವರು ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ರಾಜ್ಯದಲ್ಲಿ ಯುಪಿಐ ವಹಿವಾಟು ಆಧಾರದಲ್ಲಿ ತೆರಿಗೆರಹಿತ ಕೃಷಿ ಉತ್ಪನ್ನಗಳಾದ ತರಕಾರಿ, ಹಾಲು, ಸೊಪ್ಪು ವ್ಯಾಪಾರಿಗಳಿಗೂ ಜಿಎಸ್‌ಟಿ ನೋಟಿಸ್ ಬಂದಿದೆ. ಇದರಿಂದಾಗಿ ವ್ಯಾಪಾರಿಗಳು ಯುಪಿಐ ಬಿಟ್ಟು ನಗದು ವಹಿವಾಟಿಗೆ ಜಾರುತ್ತಿದ್ದಾರೆ.
