- ‘ದೂರದ ಗುಜರಾತ್‌ನಿಂದ ಆದೇಶ ಬಂದಾಗ ಕೇವಲ 24 ಗಂಟೆಯಲ್ಲಿ ಎಲ್ಲವೂ ಮುಗಿದಿತ್ತು’ ಎಂದ ಎಐಸಿಸಿ ಅಧ್ಯಕ್ಷ
- ನನ್ನ ಕೆಲಸ ಏನು ಎಂಬುದರ ಬಗ್ಗೆ ನನ್ನಲ್ಲಿ ಸ್ಪಷ್ಟತೆ ಇದೆ : ರಾಹುಲ್ ಗಾಂಧಿ
‘ಗುಜರಾತ್ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದ್ದ ಕೇವಲ 24 ಗಂಟೆಯೊಳಗೆ ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ಅನರ್ಹತೆಗೊಳಿಸಲಾಗಿತ್ತು. ಈಗ ಸುಪ್ರೀಂ ಆದೇಶದ ಬಳಿಕ ಎಷ್ಟು ಗಂಟೆಯೊಳಗಡೆ ಅನರ್ಹತೆ ಹಿಂಪಡೆಯಲಿದ್ದಾರೆ’ ಎಂದು ಕಾದು ನೋಡಬೇಕಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾರ್ಮಿಕವಾಗಿ ಹೇಳಿದರು.
ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಗಾಂಧಿಯವರಿಗೆ ಗುಜರಾತ್ ಹೈಕೋರ್ಟ್ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದಲ್ಲಿ ತಡೆ ನೀಡಿದ ಬಳಿಕ ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿ ಸಹಿತ ಕಾಂಗ್ರೆಸ್ ಮುಖಂಡರೊಂದಿಗೆ ಸುದ್ದಿಗೋಷ್ಠಿ ವೇಳೆ ಅವರು ಮಾತನಾಡಿದರು.
‘ಗುಜರಾತ್ ದೆಹಲಿಯಿಂದ ಸುಮಾರು 500-600 ಕಿಮೀ ದೂರದಲ್ಲಿದೆ. ಅಲ್ಲಿಯ ಆದೇಶ ಬಂದ ಬಳಿಕ, ಕೇವಲ 24 ಗಂಟೆಯೊಳಗೆ ಅನರ್ಹತೆ, ಲೋಕಸಭೆಯಿಂದ ಹೊರಹಾಕುವುದು ಎಲ್ಲವೂ ನಡೆಯಿತು. ಈಗ ಸುಪ್ರೀಂ ಕೋರ್ಟು ಮತ್ತು ನಮ್ಮ ಲೋಕಸಭೆಗೆ ಕೆಲವೇ ಕಿ ಮೀ ಅಂತರವಿದೆ. ಹಾಗಾಗಿ, ಎಷ್ಟು ಗಂಟೆಯೊಳಗಡೆ ಅನರ್ಹತೆ ಹಿಂಪಡೆಯಲಿದ್ದಾರೆ ಎಂದು ಕಾದು ನೋಡಬೇಕಿದೆ. ಇಷ್ಟರವರೆಗೆ ಕಾದು ನೋಡಿದ ನಮಗೆ, ಇದು ಕೂಡ ಏನೂ ದೊಡ್ಡದಲ್ಲ. ಇವತ್ತು ರಾತ್ರಿಯೇ ಅನರ್ಹತೆ ಹಿಂಪಡೆಯಲಿ ಎಂಬುದು ನಮ್ಮ ಬಯಕೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
‘ಇಂದು ಬಹಳ ಸಂತೋಷದ ದಿನ. ಪ್ರಜಾಪ್ರಭುತ್ವ ಗೆದ್ದಿದೆ, ಸಂವಿಧಾನ ಗೆದ್ದಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 4 ಸಾವಿರ ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದರು. ಈ ಜಯ ಎಲ್ಲ ಜನರ ಪ್ರಾರ್ಥನೆಯ ಫಲ. ಆದರೆ ಈ ಆದೇಶ ಬಂದ ಬಳಿಕ ಬಿಜೆಪಿಯವರಿಗೆ ನಿರಾಶೆಯಾಗಿರಬಹುದು’ ಎಂದು ಖರ್ಗೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿದ್ದ ರಾಹುಲ್ ಗಾಂಧಿ ಹೆಚ್ಚು ಮಾತನಾಡದೆ, ‘ಇಂದಲ್ಲ ನಾಳೆ, ಅಥವಾ ನಾಡಿದ್ದು ಜಯ ಸಿಕ್ಕೇ ಸಿಗುತ್ತದೆ. ನನ್ನ ದಾರಿ ಯಾವುದು, ನನ್ನ ಕೆಲಸ ಏನು ಎಂಬುದರ ಬಗ್ಗೆ ನನ್ನಲ್ಲಿ ಸ್ಪಷ್ಟತೆ ಇದೆ. ತುಂಬಾ ಮಂದಿ ಸಹಾಯ ಮಾಡಿದ್ದಾರೆ. ಜನರು ಪ್ರೀತಿ, ಸಹಕಾರ ತೋರಿದ್ದಾರೆ. ಅವರ ಪ್ರೀತಿಗೆ ಧನ್ಯವಾದ ಸಲ್ಲಿಸುತ್ತೇನೆ. ‘ ಎಂದಷ್ಟೇ ಹೇಳಿದರು.