ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ರಾಜೀನಾಮೆ ನೀಡಿದ ಬಳಿಕ ಬಿಹಾರ ಮುಖ್ಯಮಂತ್ರಿ, ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರನ್ನು ಎನ್‌ಡಿಎ ಒಕ್ಕೂಟದಲ್ಲಿ ಮುಂದುವರೆಸಬೇಕೇ ಎಂಬ ಬಗ್ಗೆ ಬಿಜೆಪಿ ಪುನರ್ವಿಮರ್ಶೆ ನಡೆಸುವಂತೆ ಮಾಡಿದೆ” ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಂಗಳವಾರ ಹೇಳಿದ್ದಾರೆ.
“ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಕುಮಾರ್ ಅವರಿಗೆ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ(ಮಾಜಿ ಮುಖ್ಯಮಂತ್ರಿ) ಅವರಿಗಾದ ಸ್ಥಿತಿ ಬರಲಿದೆ. ಶಿಂದೆ ಅವರು ಬಿಜೆಪಿಯ ದೇವೇಂದ್ರ ಫಡ್ನವೀಸ್‌ಗೆ(ಮಹಾರಾಷ್ಟ್ರ ಸಿಎಂ) ದಾರಿ ಮಾಡಿಕೊಡಬೇಕಾಯಿತು. ಇದೇ ಗತಿ ನಿತೀಶ್ ಅವರಿಗೆ ಬರಬಹುದು” ಎಂದು ಭವಿಷ್ಯ ನುಡಿದರು.
ಇದನ್ನು ಓದಿದ್ದೀರಾ? ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ರಾಜೀನಾಮೆ
“ಧನಕರ್ ಅವರ ರಾಜೀನಾಮೆಯು ನಿತೀಶ್ ಕುಮಾರ್ ಅವರನ್ನು ಬಿಜೆಪಿ ಬೆಂಬಲಿಸುತ್ತಲೇ ಇರಲು ಯಾವ ಒತ್ತಡವಿದೆ ಎಂಬ ಪ್ರಶ್ನೆ ಹುಟ್ಟಿಸಿದೆ” ಎಂದೂ ಹೇಳಿದರು.
74 ವರ್ಷದ ಧನಕರ್ ಅವರು ಆರೋಗ್ಯ ಕಾರಣಗಳನ್ನು ನೀಡಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದರು. ಈ ವಯಸ್ಸಿನ ವಿಚಾರವನ್ನೂ ಆರ್‌ಜೆಡಿ ನಾಯಕರು ಪ್ರಸ್ತಾಪಿಸಿದ್ದಾರೆ. ಈ ಹಿಂದೆ ಈ ಬಗ್ಗೆ ಹೇಳಿಕೆ ನೀಡಿದ ಆರ್‌ಜೆಡಿ ನಾಯಕ ಅಖ್ತರುಲ್ ಇಸ್ಲಾಂ ಶಾಹಿನ್, “ನಿತೀಶ್ ಕುಮಾರ್ ಅವರನ್ನು ರಾಜಕೀಯವಾಗಿ ಅಪ್ರಸ್ತುತ ಹುದ್ದೆಗೆ ನೇಮಿಸುವ ಮೂಲಲ ಬಿಜೆಪಿ ನಿತೀಶ್ ಕುಮಾರ್ ಅವರನ್ನು ರಾಜಕೀಯವಾಗಿ ದೂರವಿಡಲು ಪಿತೂರಿ ನಡೆಸುತ್ತಿದೆ” ಎಂದು ಆರೋಪಿಸಿದ್ದರು.
ಇನ್ನು ಕೆಲವು ವರ್ಷಗಳ ಹಿಂದೆ ನಿತೀಶ್ ಕುಮಾರ್ ಅವರು ರಾಷ್ಟ್ರಪತಿ ಹುದ್ದೆಗೆ ಕಣ್ಣಿಟ್ಟಿದ್ದರು ಎಂದು ದಿವಂಗತ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದರು. ನಿತೀಶ್ ಪ್ರಸ್ತಾಪವನ್ನು ಬಿಜೆಪಿ ನಿರಾಕರಿಸಿದ್ದಕ್ಕೆ ಅವರು ಎನ್‌ಡಿಎ ಕೂಟದಿಂದ ಹೊರನಡೆದಿದ್ದರು, ಇದರಿಂದಾಗಿ ಸರ್ಕಾರವೇ ಪತನಗೊಂಡಿದೆ ಎಂದೂ ಹೇಳಿದ್ದರು.
ಆದರೆ ಆರ್‌ಜೆಡಿ ನಾಯಕ ಇಸ್ಲಾಂ ಶಾಹಿನ್‌ಗಿಂತ ಕೊಂಚ ಭಿನ್ನ ಹೇಳಿಕೆಯನ್ನು ಯಾದವ್ ನೀಡಿದ್ದಾರೆ. “ಒಂದು ಹಂತದಲ್ಲಿ ಕುಮಾರ್ ಅವರನ್ನು ಕೈಬಿಡಬೇಕು ಎಂಬುದು ಬಿಜೆಪಿಯ ಮನಸ್ಸಿನಲ್ಲಿದೆ. ಅದಕ್ಕಾಗಿಯೇ ಅಮಿತ್ ಶಾ ಇತ್ತೀಚೆಗೆ ನಿತೀಶ್ ಕುಮಾರ್ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ. ಆದರೆ ಎನ್‌ಡಿಎ ಅಧಿಕಾರವನ್ನು ಉಳಿಸಿಕೊಂಡರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂದು ಕಾಲಕ್ರಮೇಣ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ” ಎಂದರು.
