ಅಂಗನವಾಡಿಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಮಹಿಳೆಯರಿಗೆ ತಲುಪಿಸಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ ತಿಳಿಸಿದರು.
ತುಮಕೂರು ತಾಲೂಕಿನ ರಾಯಪುರ ಗ್ರಾಮದಲ್ಲಿ ಸೋಮವಾರ ಸ್ಫೂರ್ತಿಧಾಮ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸೌಲಭ್ಯವನ್ನು ಪಡೆದುಕೊಳ್ಳಲು ತಿಳಿಸಿದರು.
ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳ ನೆರವಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ 1098, 112 ಮತ್ತು 181ರ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು. ಇಂತಹ ಸಂದರ್ಭದಲ್ಲಿ ಮಹಿಳಾ ಸಾಂತ್ವಾನ ಕೇಂದ್ರಗಳ ನೆರವು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಂತರ ಸಿರಿವರ ಮತ್ತು ನಾಗವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಿಬ್ಬಂದಿ ಕೊರತೆ ಮಾಹಿತಿ ಪಡೆದುಕೊಂಡು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ನಂತರ ಸೀನಪ್ಪನಹಳ್ಳಿ ಜನತಾ ಕಾಲೋನಿಯಲ್ಲಿ ಮಹಿಳೆಯರು ವಾಸಿಸುತ್ತಿರುವ ಗುಡಿಸಲುಗಳಿಗೆ ಭೇಟಿ ನೀಡಿ ಇಂದಿಗೂ ಮಹಿಳೆಯರು ಹೊರಗೆ ಬಟ್ಟೆ ಕಟ್ಟಿಕೊಂಡು ಮರೆಯಲ್ಲಿ ಸ್ನಾನ ಮಾಡುತ್ತಿರುವುದು ಶೋಚನೀಯ ಎಂದು ಅಸಮಾಧಾನಿಸಿದ ಅವರು ಕೂಡಲೇ ಸದರಿ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿ ಆಶ್ರಯ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಂದಾಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಮತ್ತಿತರರು ಹಾಜರಿದ್ದರು.
ಬಳಿಕ ತುಮಕೂರು ಗ್ರಾಮಾಂತರ ನಾಗವಲ್ಲಿ-ಲಕ್ಕೇನಹಳ್ಳಿಯ ‘ಸ್ಫೂರ್ತಿಧಾಮ ಸೇವಾ ಟ್ರಸ್ಟ್(ರಿ)’ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯ ಸಹಕಾರದೊಂದಿಗೆ ನಡೆಸಲಾದ ‘ಉಚಿತ ವೈದ್ಯಕೀಯ ತಪಾಸಣಾ ಶಿಬಿರ’ವನ್ನು ಉದ್ಘಾಟಿಸಿದರು.