ರೈತರ ಬೆಳೆಗಳ ಬೆಳವಣಿಗೆಗೆ ಸಮಯವಾಗಿರುವ ಕಾರಣ ರೈತರಿಗೆ ಯೂರಿಯಾ ರಸಗೊಬ್ಬರ ಅಭಾವ ಉಂಟಾಗಿದೆ. ಅಗತ್ಯವಾದ ರಸಗೊಬ್ಬರ ಸಮರ್ಪಕ ಪೂರೈಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ(ವಾಸುದೇವ ಮೇಟಿ)ಬಣದಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ತಾಲೂಕು ಕಛೇರಿ ಮುಂಬಾಗ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಕಾರರು ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಛೇರಿ ಮುಂಬಾಗ ಜಮಾಯಿಸಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಕುಮಾರ್ ಭರಮಸಮುದ್ರ ಮಾತನಾಡಿ, “ಅತ್ಯಂತ ಹಿಂದುಳಿದ ತಾಲೂಕು ಜಗಳೂರಿನಲ್ಲಿ ರೈತರು ಹೇರಳವಾಗಿ ಮೆಕ್ಕೆಜೋಳ ಬೆಳೆಯನ್ನೇ ಅವಲಂಬಿಸಿದ್ದಾರೆ. ಕಳೆದ ವಾರದಿಂದ ಮಳೆ ಸುರಿಯುತ್ತಿದ್ದು ಪೈರುಗಳು
ಶೀತಮಯದಿಂದ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಆದರೆ ಪೋಷಕಾಂಶಭರಿತ ಹಾಗೂ ಶೀತ ನಿಯಂತ್ರಣಕ್ಕಾಗಿ ಅಗತ್ಯವಿರುವ ಯೂರಿಯಾ ರಸಗೊಬ್ಬರ ತಾಲೂಕಿನಾದ್ಯಂತ ಕೊರತೆ ಉಂಟಾಗಿದೆ. ಪ್ರತಿನಿತ್ಯ ರೈತರು ಖಾಸಗಿ ಫರ್ಟಿಲೈಸರ್ ಅಂಗಡಿ, ಕಂಪನಿಗಳ ಮುಂದೆ ಮುಗಿಬಿದ್ದು ರಸಗೊಬ್ಬರಕ್ಕಾಗಿ ಹರಸಾಹಸ ಪಡಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಅಲ್ಲದೆ ಖಾಸಗಿ ಆಗ್ರೋ ಫರ್ಟಿಲೈಸರ್, ಗೊಬ್ಬರದಂಗಡಿ ಮಾಲೀಕರು ರೈತರಿಂದ ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡಿ ರೈತರನ್ನು ಶೋಷಿಸುತ್ತಿದ್ದಾರೆ. ಕೃಷಿ ಅಧಿಕಾರಿಗಳು ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ. ಕೂಡಲೇ ಕೃಷಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಸರ್ಕಾರ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿರುವುದು ಸರಿಯಲ್ಲ. ಕೂಡಲೇ ಅಗತ್ಯ ಯೂರಿಯಾ ಗೊಬ್ಬರ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಧರ್ಮಸ್ಥಳ ದೌರ್ಜನ್ಯ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ, ಆರೋಪಿಗಳ ಶಿಕ್ಷೆಗೆ ಕರ್ನಾಟಕ ಜನಶಕ್ತಿ ಆಗ್ರಹ
ಇದೇ ವೇಳೆ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಕೃಷಿ ಇಲಾಖೆ ಸಹಾಯಕಿ ನಿರ್ದೇಶಕಿ ಶ್ವೇತಾ ಇದ್ದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಲೋಕೇಶ್ ದೊಣೆಹಳ್ಳಿ, ಉಪಾಧ್ಯಕ್ಷ ಬಸವರಾಜ್, ಗೌರವಾಧ್ಯಕ್ಷ ಪಾಲನಾಯಕ, ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ಕಿರಣ್ ಕುಮಾರ್, ಚೌಡಮ್ಮ, ಬೊಮ್ಮಕ್ಕ, ಶಿವರಾಜ್,ಚನ್ನಪ್ಪ,
ಏಕಾಂತಪ್ಪ, ಸೂರಜ್ಜ ,ಭೀಮಣ್ಣ, ಸಕ್ರೇಶ್, ಶಿವರಾಜ್, ಡಿಎಸ್ ಎಸ್ ನ ಸತೀಶ್ ಮಲೆಮಾಚಿಕೆರೆ, ವಕೀಲ ಆರ್ ಓಬಳೇಶ್ ಇತರರು ಭಾಗವಹಿಸಿದ್ದರು.