ದಿಢೀರ್ ರಾಜೀನಾಮೆ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿಯ ಅಲೆ ಸೃಷ್ಟಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್, ಮುಂಚಿತವಾಗಿಯೇ ಸಮಯ ನಿಗದಿ ಮಾಡಿಕೊಳ್ಳದೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನಕ್ಕೆ ಧಾವಿಸುವ ಮೂಲಕ ರಾಷ್ಟ್ರಪತಿ ಭವನದ ಅಧಿಕಾರಿಗಳು ತಬ್ಬಿಬ್ಬಾಗಲು ಕಾರಣರಾದ ಅಂಶ ಇದೀಗ ಬೆಳಕಿಗೆ ಬಂದಿದೆ.
ಶಿಷ್ಟಾಚಾರಕ್ಕೆ ಅನುಸಾರವಾಗಿ ಕಾರ್ಯ ನಿರ್ವಹಿಸುವ ರಾಷ್ಟ್ರಪತಿ ಕಾರ್ಯಾಲಯ, ಧೀರ್ಘಕಾಲದಿಂದ ಇಂಥ ಅನಿರೀಕ್ಷಿತ ಬೆಳವಣಿಗೆಯನ್ನು ಎದುರಿಸಿರಲಿಲ್ಲ. ಮೊದಲೇ ಸಮಯ ನಿಗದಿಪಡಿಸಿಕೊಳ್ಳದೇ ಸಂವಿಧಾನಾತ್ಮಕ ಹುದ್ದೆ ಹೊಂದಿದ ಧನಕರ್ ರಾತ್ರಿ 9 ಗಂಟೆಗೆ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದು, ಸಂಚಲನಕ್ಕೆ ಕಾರಣವಾಯಿತು. ಎಡಿಸಿ ತಕ್ಷಣ ಮಿಲಿಟರಿ ಕಾರ್ಯದರ್ಶಿಯವರ ಬಳಿಗೆ ತೆರಳಿ ಆವರಣಕ್ಕೆ ಧನಕರ್ ಆಗಮಿಸಿದ ಸುದ್ದಿ ಮುಟ್ಟಿಸಿದರು.
ರಾಷ್ಟ್ರಪತಿ ಜತೆಗೆ ತರಾತುರಿಯ ಭೇಟಿ ನಿಗದಿಪಡಿಸಿದ ಬಳಿಕ ಧನಕರ್ ಸಂವಿಧಾನಾತ್ಮಕ ಅಗತ್ಯತೆಯಂತೆ ರಾಜೀನಾಮೆ ಪತ್ರ ಸಲ್ಲಿಸಿದರು. ಎಕ್ಸ್ ಖಾತೆ ಮೂಲಕ ರಾತ್ರಿ 9.25ಕ್ಕೆ ಧನಕರ್ ಈ ಬೆಳವಣಿಗೆಯನ್ನು ಪ್ರಕಟಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿವೇಶನ ಎಂದಾಕ್ಷಣ ಹೆದರಿ ಓಡುವ ಪ್ರಧಾನಿ ಮೋದಿ
ಈ ತಡರಾತ್ರಿಯ ಪ್ರಸಹನದ ಬಗ್ಗೆ ಯಾವುದೇ ಸುಳಿವು ಕೂಡಾ ಹೊಂದಿರದೇ ಇದ್ದುದನ್ನು ನೋಡಿದರೆ ಅವರ ರಾಜೀನಾಮೆಗೆ ದಿಢೀರ್ ಬೆಳವಣಿಗೆಯೊಂದು ಕಾರಣವಾಗಿತ್ತು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಧನಕರ್ ರಾಜೀನಾಮೆ ಬಗ್ಗೆ ಗೃಹ ಸಚಿವಾಲಯ ಅಧಿಕೃತ ಹೇಳಿಕೆಯನ್ನು ಮಂಗಳವಾರ ಅಧಿಸೂಚನೆ ಮೂಲಕ ಪ್ರಕಟಿಸಿದ್ದು, ಗಜೆಟ್ ಅಧಿಸೂಚನೆಗೆ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಸಹಿ ಮಾಡಿದ್ದಾರೆ.
ಮತ್ತೊಂದು ಬೆಳವಣಿಗೆಯಲ್ಲಿ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ ಅವರು ರಾಷ್ಟ್ರಪತಿ ಭವನಕ್ಕೆ ಮಂಗಳವಾರ ಭೇಟಿ ನೀಡಿದ್ದರು. ರಾಜ್ಯಸಭೆಯ ಬೆಳಿಗ್ಗೆಯ ಕಲಾಪದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.