ವರ್ಗಾವಣೆ ಪತ್ರ ಹಾಗೂ ಅಂಕಪಟ್ಟಿ ಸೇರಿದಂತೆ ಇನ್ನಿತರ ಮೂಲ ದಾಖಲೆಗಳನ್ನು ನೀಡದೆ ವಿದ್ಯಾರ್ಥಿಗಳ ಪಾಲಕರನ್ನು ಸತಾಯಿಸುತ್ತಿರುವ ಕೊಪ್ಪಳದ ವಾಸವಿ ಖಾಸಗಿ ಶಾಲಾ ಆಡಳಿತ ಮಂಡಳಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ಫಕ್ಕೀರಪ್ಪ ಎಮ್ಮಿನವರ ವಿರುದ್ಧ ವಿದ್ಯಾರ್ಥಿಗಳ ಪಾಲಕರು ಅಳಲು ತೋಡಿಕೊಂಡಿದ್ದಾರೆ.
ಕೊಪ್ಪಳದ ವಾಸವಿ ಖಾಸಗಿ ಶಾಲೆಯಲ್ಲಿ ದುರಗಪ್ಪ ಆಡಕಾಯರ ಅವರ ಮಗಳು ಜ್ಯೋತಿ 6ನೇ ತರಗತಿ ತೇರ್ಗಡೆಯಾಗಿದ್ದು, ಅದೇ ಶಾಲೆಯಲ್ಲಿ ಮಗ ಹನುಮೇಶ ಕೂಡ 8ನೇ ತರಗತಿ ಪಾಸಾಗಿದ್ದಾನೆ. ಆದರೆ, ಖಾಸಗಿ ಶಾಲೆಯ ದುಬಾರಿ ಶುಲ್ಕ ಭರಿಸಲಾಗದೇ ಮಕ್ಕಳನ್ನು ವಾಸವಿ ಶಾಲೆಯಿಂದ ಸರ್ಕಾರಿ ಶಾಲೆಯಲ್ಲಿ ನೋಂದಾಯಿಸಿದ್ದಾರೆ. ವಾಸವಿ ಖಾಸಗಿ ಶಾಲೆಯ ಆಡಳಿತ ಅಧಿಕಾರಿ ಹಾಗೂ ಮುಖ್ಯೋಪಾಧ್ಯಾಯ ಫಕ್ಕೀರಪ್ಪ ಎಮ್ಮಿನವರ ಮಕ್ಕಳ ವರ್ಗಾವಣೆ ಪತ್ರಗಳನ್ನು ಕಳುಹಿಸದೆ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುತ್ತಿದ್ದಾರೆ” ಎಂದು ಆರೋಪಿಸಿದ ಪಾಲಕರು ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
“ದುರಗಪ್ಪ ಆಡಕಾಯೋರ ಆರ್ಥಿಕವಾಗಿ ಅಷ್ಟೊಂದು ಸ್ಥಿತಿವಂತರಲ್ಲ. ಆದರೆ, ಮಕ್ಕಳನ್ನು ಓದಿಸಲೇಬೇಕೆಂದು ಅವರ ಪತ್ನಿ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಡುಗೆ ಮಾಡುವ ಕೆಲಸಕ್ಕೆ ಹೋಗುತ್ತಾರೆ. ದುರಗಪ್ಪ ಗಾರೆ ಕೆಲಸಕ್ಕೆ ಹೋಗಿ ದುಬಾರಿ ಶುಲ್ಕ ಭರಿಸಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ದುರಗಪ್ಪನಿಗೆ ಅಪಘಾತವಾಗಿದ್ದು, ಕೈ ಊನವಾಗಿದೆ. ಒಂದು ಕಣ್ಣು ಸಂಪೂರ್ಣ ದೃಷ್ಟಿ ಕಳೆದುಕೊಂಡಿದೆ. ಬೆಂಗಳೂರು ಬಿಟ್ಟು ಬಂದು ಕೊಪ್ಪಳದಲ್ಲೇ ವಾಸವಾಗಿದ್ದರೆ. ಒಬ್ಬ ಮಗನನ್ನು ಕುರಿ ಕಾಯಲು ಜೀತಕ್ಕೆ ಇಟ್ಟಿದ್ದಾರೆ. ಈಗ ಹೆಣ್ಣು ಮಗಳಿಗೆ ಹಾಗೂ ಕಿರಿಯ ಮಗನಿಗೆ ವಾಸವಿ ಅಂತ ಖಾಸಗಿ ಶಾಲೆಯಲ್ಲಿ ದುಬಾರಿ ವೆಚ್ಚ ಹಾಗೂ ಶುಲ್ಕ ಕಟ್ಟಿ ಓದಿಸಲು ಆಗುದಿಲ್ಲವೆಂದು ದುರಗಪ್ಪ ವಾಸವಿ ಖಾಸಗಿ ಶಾಲೆಯಿಂದ ವರ್ಗಾವಣೆ ಕೇಳಿದ್ದಾರೆ. ಆದರೆ, ಶಾಲೆಯ ಆಡಳಿತಾಧಿಕಾರಿ ಮತ್ತು ಮುಖ್ಯೋಪಾಧ್ಯಾಯರಾದ ಫಕ್ಕೀರಪ್ಪ ಎಮ್ಮಿನವರ ‘ನಮ್ಮ ಶಾಲೆ ಬಾಕಿ ಶುಲ್ಕ ಕಟ್ಟಿ ನಿಮ್ಮ ಮಕ್ಕಳ ವರ್ಗಾವಣೆ ಕೊಂಡೊಯ್ಯಿರಿ’ ಎಂದು ತಾಕೀತು ಮಾಡಿದ್ದಾರೆ.

“ಕಂತು ಪ್ರಕಾರ ನಾವು ಹಣ ಕಟ್ಟುತ್ತೇವೆ, ಒಮ್ಮೆಲೇ ಕಟ್ಟಲು ಅಷ್ಟು ಹಣ ನಮ್ಮ ಬಳಿ ಇಲ್ಲ. ಇದಕ್ಕೆ ನಿಮಗೆ ಆಧಾರ ಕೊಡು ಅಂದ್ರೂ ಕೊಡ್ತೀವೆಂದು ಕೈ ಮುಗಿದು ಬೇಡಿಕೊಂಡರೂ ಮುಖ್ಯೋಪಾಧ್ಯಾಯ ಅದಕ್ಕೆ ಕನಿಕರ ತೋರಿಸಿಲ್ಲ. ವರ್ಗಾವಣೆಗೊಂಡ ಮಕ್ಕಳ ಶಾಲಾ ದಾಖಲೆಗಳನ್ನು ಆ ಶಾಲೆಯ ಎಚ್‌ಎಂ ತರಿಸಿಕೊಳ್ಳಬೇಕು. ಅದರೆ, ‘ಸರ್ಕಾರಿ ಶಾಲೆಯ ವಾಸವಿ ಶಾಲೆಯ ಎಚ್‌ಎಂ ಸ್ವಲ್ಪ ಕಿರಿಕ್ ಇದ್ದಾರೆ, ನೀವೆ ತೆಗೆದುಕೊಂಡು ಬನ್ನಿ’ ಎನ್ನುತ್ತಾರೆ. ಆ ಪ್ರಕಾರ ಕೇಳಿದರೂ ಕೊಟ್ಟಿಲ್ಲ” ಎಂದು ಹನುಮೇಶ್‌ನ ಪಾಲಕರು ಅವಲತ್ತುಕೊಂಡಿದ್ದಾರೆ.
ದುರಗಪ್ಪ ಆಡಕಾಯರ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ನಾವು ಬಡವರು ಇದ್ದೀವಿ. ಮಕ್ಕಳು ಶಾಲಿ ಕಲ್ತು ಮುಂದುವರೆಯಲಿ ಅಂತ ಹಚ್ಚಿದವರೀ. ಆದರೆ, ಈಗ ಅದ್ರ ಫೀಸ್ ಕಟ್ಟಾಕ ನಮ್ಕಡಿಂದ ಆಗವಲ್ದುರಿ. ನನ್ಗ ಆ್ಯಕ್ಸಿಡೆಂಟ್ ಅದ್ಮ್ಯಾಗ ಒಂದು ಕೆಲಸ ಮಾಡಕ ಬರಲ್ರಿ, ಅಲ್ಲದ ಒಂದು ಕಣ್ಣ ಕಾಣ್ಸಲ್ರಿ. ಹಂಗಾಗಿ ದುಡಿಯಾಕ ಹೋಗದ ಬಿಟ್ಟೆನ್ರಿ. ನನ್ನ ಹೆಂಡ್ತಿ ಬೆಂಗ್ಳೂರಾಗ ಖಾಸಗಿ ಸಾಲಿಗೆ ಅಡಿಗಿ ಮಾಡಕ ಹೊಕ್ಕಾಳ್ರಿ. ಈಗ ನಮ್ಗ ಪ್ರೈವೇಟ್ ಸಾಲ್ಯಾಗ ಮಕ್ಕಳನ್ನ ಕಳಸಾಕ ಆಗಲ್ರಿ. ಅದ್ಕ ನಮ್ಮ ಹುಡುಗ್ರ ದಾಖಲಿ ಕೇಳಕ ಹೊದ್ರ ಬಾಕಿ ಫೀಸ್ ಕಟ್ಟಿ ತೊಗಂಡ ಹೋಗ್ರಿ, ನೀವು ಯಾರಿಗ್ ಹೇಳ್ಕೊಂತರಿ ಹೇಳ್ಕೋ ಹೋಗ್ರಿ ಅಂತ ಬೆದರಿ ಕಳ್ಸಿದ್ರು” ಎಂದು ಮಕ್ಕಳ ವರ್ಗಾವಣೆ ದಾಖಲಾತಿ ಕೊಡದೆ ಇರುವುದನ್ನು ನೆನೆಸಿ ದುರಗಪ್ಪ ಮತ್ತು ಆತನ ಹೆಂಡತಿ ಸಾವಿತ್ರಮ್ಮ ಕಣ್ಣೀರು ಹಾಕಿದರು.
ಇದನ್ನೂ ಓದಿದ್ದೀರಾ? ಕೊಪ್ಪಳ | 102 ಕೆಜಿ ತೂಕದ ಜೋಳದ ಮೂಟೆ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ 61 ವರ್ಷದ ವ್ಯಕ್ತಿ
ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಬಸವರಾಜ್ ಶೀಲವಂತರ ಮಾತನಾಡಿ, “ದುರಗಪ್ಪ ಹಾಗೂ ಆತನ ಹೆಂಡತಿ ವಾಸವಿ ಖಾಸಗಿ ಶಾಲೆಯ ಮುಖ್ಯೋಪಾಧ್ಯರು ತಮ್ಮ ಮಕ್ಕಳ ವರ್ಗಾವಣೆ ದಾಖಲೆ ಪತ್ರ ಕೊಡದೆ ಆ ಪಾಲಕರಿಗೆ ಅವಾಚ್ಯ ಶಬ್ದದಿಂದ ಬೈದು ಕಳಿಸಿದ್ದಾರೆಂದು ಮಕ್ಕಳ ತಂದೆ-ತಾಯಿ ಅಳುತ್ತಿದ್ದಾರೆ. ಸ್ವಲ್ಪ ಬಾಕಿ ಶುಲ್ಕ ಕಟ್ಟುವುದು ಬಾಕಿ ಇದೆ. ಅದನ್ನು ಕಟ್ಟುತಾರೆ. ಈ ವಿಷಯದಲ್ಲಿ ಮಕ್ಕಳ ಭವಿಷ್ಯ ಹಾಳಾಗುವುದು ಬೇಡವೆಂದು ಹೇಳಿದರೂ ವಾಸವಿ ಶಾಲೆಯ ಮುಖ್ಯೋಪಾಧ್ಯಾಯರು ಆ ಮಕ್ಕಳ ವರ್ಗಾವಣೆ ಪತ್ರ ಕೊಡದೆ ಬೈದು ಕಳಿಸಿದ್ದಾರೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಾಸವಿ ಖಾಸಗಿ ಶಾಲೆಯ ಮೇಲೆ ಮಕ್ಕಳ ಭವಿಷ್ಯದ ಮೇಲೆ ಆಟ ಆಡುವ ಮುಖ್ಯೋಪಾಧ್ಯಾಯರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು” ಎಂದು ಹೇಳಿದರು.
ಕೊಪ್ಪಳದಲ್ಲಿ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುವ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಕುರುಡರಂತೆ ಕುಳಿತಿದ್ದಾರೆಂಬ ಗುಸುಗುಸು ಮಾತು ನಗರದಲ್ಲಿ ಕೇಳಿಬರುತ್ತಿದೆ. ಅಷ್ಟಾದರೂ ಖಾಸಗಿ ಶಾಲೆಗೆ ಹೆಚ್ಚು ಮೊರೆ ಹೋಗುತ್ತಿರುವುದ್ಯಾಕೆ? ಎಂಬುದು ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಇಲಾಖಾ ಅಧಿಕಾರಿಗಳ ಕಳವಳವಾಗಿದೆ.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್