ಕರ್ನಾಟಕದ ತಲಾ ಆದಾಯವು ನಿಜಕ್ಕೂ ಜನರ ಆದಾಯವಾಗಬೇಕಾದರೆ ಅಥವಾ ಸ್ಥಳೀಯ ಆದಾಯವಾಗಬೇಕಾದರೆ, ಉದ್ಯಮ, ಕೈಗಾರಿಕೆಗಳು ಒಂದು ನಗರವನ್ನು ಆಶ್ರಯಿಸದೆ, ರಾಜ್ಯದ ಎಲ್ಲ ಜಿಲ್ಲೆಗಳು, ತಾಲೂಕುಗಳಿಗೂ ವಿಸ್ತರಿಸಬೇಕು.
2024-25ನೇ ಸಾಲಿನಲ್ಲಿ ಕರ್ನಾಟಕವು ಭಾರತದಲ್ಲೇ ಅತ್ಯಧಿಕ ತಲಾ ಆದಾಯ (Per Capita Net State Domestic Product – NSDP) ಹೊಂದಿರುವ ರಾಜ್ಯಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ರಾಜ್ಯದ ತಲಾ ಆದಾಯ 2,04,605 ರೂ.ಗೆ ಏರಿಕೆಯಾಗಿದ್ದು, ಕಳೆದ 10 ವರ್ಷಗಳಲ್ಲಿ ರಾಜ್ಯದ ತಲಾ ಆದಾಯವು ದುಪ್ಪಟ್ಟು (93.6%) ಬೆಳವಣಿಗೆ ಸಾಧಿಸಿದೆ. 2014-15ರಲ್ಲಿ ರಾಜ್ಯದ 1,05,697 ರೂ. ಇದ್ದದ್ದು, ಈಗ 2 ಲಕ್ಷ ರೂ.ಗಳಿಗೆ ದಾಟಿದೆ.
ಕಳೆದ 10 ವರ್ಷಗಳಲ್ಲಿ ನಾಲ್ಕು ಸರ್ಕಾರಗಳ ಆಡಳಿತಕ್ಕೆ ಒಳಗಾಗಿದ್ದ ಕರ್ನಾಟಕವು ಅಭಿವೃದ್ಧಿ ಕಾರ್ಯಗಳ ಜೊತೆಗೆ, ಬಿಜೆಪಿ ಆಡಳಿತದ ಸಮಯದಲ್ಲಿ ಭಾರೀ ಭ್ರಷ್ಟಾಚಾರ, ಕಮಿಷನ್‌ಗಳ ಆರೋಪಗಳನ್ನೂ ಎದುರಿಸಿದೆ. ಇದೆಲ್ಲದರ ನಡುವೆ, ಆರ್ಥಿಕತೆಯ ಪ್ರಗತಿಯಲ್ಲಿ ದೇಶದಲ್ಲಿಯೇ ವೇಗವಾಗಿ ಮುನ್ನುಗ್ಗುತ್ತಿರುವ ರಾಜ್ಯವಾಗಿಯೂ ಗುರುತಿಸಿಕೊಂಡಿದೆ.
ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಐಟಿ, ಬಿಟಿ, ಸ್ಟಾರ್ಟ್‌ಅಪ್, ಕಲ್ಯಾಣ ಯೋಜನೆಗಳು, ವೈವಿಧ್ಯಮಯ ಕೈಗಾರಿಕೆಗಳು ಹಾಗೂ ವಿದೇಶಿ ಹೂಡಿಕೆಗೆ ಹೆಚ್ಚಿನ ಅವಕಾಶಗಳು ಕೊಡುಗೆ ನೀಡುತ್ತಿವೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ಐಟಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದೆ. ಕರ್ನಾಟಕವು ಭಾರತದ ಸಾಫ್ಟ್‌ವೇರ್ ರಫ್ತಿನಲ್ಲಿ 40%ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದ್ದು, ಗೂಗಲ್, ಮೈಕ್ರೋಸಾಫ್ಟ್, ಇನ್ಫೋಸಿಸ್, ವಿಪ್ರೋ ಹಾಗೂ ಟಿಸಿಎಸ್‌ನಂತಹ ಜಾಗತಿಕ ಐಟಿ ಕೇಂದ್ರವಾಗಿ ಬೆಳೆಯುತ್ತಿದೆ.
ಸ್ಟಾರ್ಟ್‌ಅಪ್‌ಗಳಿಗೂ ಕರ್ನಾಟಕದಲ್ಲಿ ಮುಕ್ತ ಅವಕಾಶಗಳು ದೊರೆಯುತ್ತಿದ್ದು, 2023-24ರಲ್ಲಿ ರಾಜ್ಯದಲ್ಲಿ 8,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಆರಂಭಗೊಂಡಿವೆ. ಬೆಂಗಳೂರಿನಲ್ಲಿ ಒಲಾ, ಸ್ವಿಗ್ಗಿ, ಫ್ಲಿಪ್‌ಕಾರ್ಟ್‌ನಂತಹ ಯುನಿಕಾರ್ನ್‌ಗಳು ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿವೆ. ಜೊತೆಗೆ, ಉತ್ಪಾದನೆ, ಜವಳಿ, ಆಟೋಮೊಬೈಲ್, ಏರೋಸ್ಪೇಸ್ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕವು ಪ್ರಗತಿ ಸಾಧಿಸುತ್ತಿದೆ. ಬಾಷ್ ಮತ್ತು ಏರ್‌ಬಸ್ ರೀತಿಯ ಕಂಪನಿಗಳು ಕರ್ನಾಟಕದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಿವೆ. ಜವಳಿ ಕೇಂದ್ರಗಳಾದ ಇಚಲಕರಂಜಿ ಮತ್ತು ಬೆಳಗಾವಿ ಪ್ರದೇಶಗಳು ಆರ್ಥಿಕತೆ ಪ್ರಗತಿಗೆ ಕೊಡುಗೆ ನೀಡುತ್ತಿವೆ.
ಭಾರತದಲ್ಲಿಯೇ ಕರ್ನಾಟಕವು ವಿದೇಶಿ ನೇರ ಬಂಡವಾಳ (FDI) ಆಕರ್ಷಣೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಬಂಡವಾಳಿಗರಿಗೆ ಭೂಮಿ, ವಿದ್ಯುತ್ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಮೂಲಕ ಉದ್ಯಮಿಗಳನ್ನು ಸರ್ಕಾರಗಳು ಸೆಳೆಯುತ್ತಿವೆ.
ಉದ್ಯಮ ಮತ್ತು ಕೈಗಾರಿಕಾ ಕ್ಷೇತ್ರವಲ್ಲದೆ, ಸೇವಾ ವಲಯವೂ ಆರ್ಥಿಕತೆಗೆ ತನ್ನದೇ ಕೊಡುಗೆ ನೀಡಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಮೂಲಸೌಕರ್ಯ ಮತ್ತು ನಗರಾಭಿವೃದ್ಧಿ ಸರ್ಕಾರಗಳು ಹೆಚ್ಚಿನ ಒತ್ತು ನೀಡಿವೆ. ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಂತಹ ನಗರಗಳಲ್ಲಿ ಮೂಲಸೌಕರ್ಯಗಳ ಮೇಲೆ ಗಣನೀಯ ಹೂಡಿಕೆ ಮಾಡಲಾಗಿದೆ. ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ವಿಸ್ತರಣೆ ಹಾಗೂ ರಸ್ತೆ ಸಂಪರ್ಕದ ಸುಧಾರಣೆಯು ಆರ್ಥಿಕ ಚಟುವಟಿಕೆಯನ್ನು ವೇಗವಾಗಿ ಬೆಳೆಸಿದೆ.
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ, ಹೊಸ ನೀರಾವರಿ ಯೋಜನೆಗಳ ಕಾರಣದಿಂದಾಗಿ ಗ್ರಾಮೀಣ ಭಾಗದ ರೈತರು, ಮಹಿಳೆಯರು ಕೂಡ ಆರ್ಥಿಕತೆಯಲ್ಲಿ ತಮ್ಮ ಪಾಲನ್ನು ಸೇರಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಕೊಡುಗೆ
ತಲಾ ಆದಾಯದ ಏರಿಕೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಪಾಲೂ ಇದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರ ಬಂದಾಗ, ಹಂತ-ಹಂತವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತು. ಈ ಯೋಜನೆಗಳು ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿ, ಸಾಮಾಜಿಕ ನ್ಯಾಯವನ್ನು ಒದಗಿಸುತ್ತವೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು.
ಆದಾಗ್ಯೂ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕತೆಗೆ ಹೊರೆಯಾಗುತ್ತವೆ. ರಾಜ್ಯವನ್ನು ದಿವಾಳಿ ಮಾಡುತ್ತವೆ. ಸಾಲದ ಸುಳಿಗೆ ಸಿಲುಕಿಸುತ್ತವೆ ಎಂದು ಆರೋಪಿಸಿದ್ದರು. ‘ಗ್ಯಾರಂಟಿಗಳಿಂದ ಕರ್ನಾಟಕದಲ್ಲಿ ಲೂಟಿ ನಡೆಯುತ್ತಿದೆ’ ಎಂಬ ಗಂಭೀರ ಆರೋಪವನ್ನೂ ಬಿಜೆಪಿಗರು ಮಾಡಿದ್ದರು. ಬಿಜೆಪಿಯ ಮುಮ್ಮೇಳಕ್ಕೆ ಹಿಮ್ಮೇಳ ಬಾರಿಸಿದ್ದ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ‘ಗ್ಯಾರಂಟಿ ಯೋಜನೆಗಳು ರಾಜ್ಯಕ್ಕೆ ಹೊರೆಯಾಗಿವೆ’ ಎಂದು ಪ್ರತಿಪಾದಿಸಿದ್ದರು.
ಆದರೆ, ಗ್ಯಾರಂಟಿ ಯೋಜನೆಗಳು ಸಮಗ್ರವಾಗಿ ಮತ್ತು ಸಮರ್ಪಕವಾಗಿ ಜಾರಿಯಾಗುತ್ತಿರುವ ಸಂದರ್ಭದಲ್ಲೇ ಕರ್ನಾಟಕವು ತಲಾ ಆದಾಯದಲ್ಲಿ ಉಳಿದೆಲ್ಲ ರಾಜ್ಯಗಳಿಗಿಂತ ಹೆಚ್ಚು ವರಮಾನವನ್ನು ಹೊಂದಿದ ರಾಜ್ಯವಾಗಿ ಹೊರಹೊಮ್ಮಿದೆ. GST ಸಂಗ್ರಹಣೆಯ ಏರಿಕೆ ಮತ್ತು GSDP ಬೆಳವಣಿಗೆಯಲ್ಲಿ ಗ್ಯಾರಂಟಿಗಳು ಹೆಚ್ಚಿನ ಕೊಡುಗೆ ನೀಡಿವೆ. ಬಡವರಿಗೆ ಮತ್ತು ಮಧ್ಯಮ ವರ್ಗಕ್ಕೆ ಆರ್ಥಿಕ ಸ್ಥಿರತೆಯನ್ನು ಒದಗಿಸಿವೆ.
ಈ ಲೇಖನ ಓದಿದ್ದೀರಾ?: ಶಾಸಕರಿಗೆ ₹50 ಕೋಟಿ | ವಿಶೇಷ ಅನುದಾನದ ಸುತ್ತ ಏಸೊಂದು ಅನುಮಾನಗಳ ಹುತ್ತ!
ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಭಾಗದ ಮಹಿಳೆಯರ (ಗೃಹಿಣಿಯರು) ಕೈಗೆ ಹಣ ದೊರೆಯುತ್ತಿದೆ. ಉಚಿತ ಪ್ರಯಾಣದಿಂದ ಮಹಿಳೆಯರು ದುಡಿಮೆ ಮತ್ತು ಖರ್ಚಿನಲ್ಲಿ ತೊಡುವ ಮೂಲಕ ಆರ್ಥಿಕ ವಹಿವಾಟುಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮಹಿಳೆಯರ ಕೈಗೆ ಹಣ ಸಿಗುತ್ತಿರುವುದರಿಂದ ಪುರುಷರ ಮೇಲಿನ ಆರ್ಥಿಕ ಅವಲಂಬನೆ ಮತ್ತು ಹೊರೆ ಕಡಿಮೆಯಾಗಿದೆ. ಹಣವನ್ನು ತಮ್ಮ ನಿಯಮಿತ ಖರ್ಚಿನ ಹೊರತಾಗಿ ವಿಭಿನ್ನ ಕ್ಷೇತ್ರಗಳಲ್ಲಿ ವ್ಯಯಿಸಲು ಸಾಧ್ಯವಾಗುತ್ತಿದೆ. ಇದೆಲ್ಲವೂ ರಾಜ್ಯದ ತಲಾ ಆದಾಯದ ಏರಿಕೆಗೆ ಅಡಿಪಾಯಗಳಾಗಿವೆ.
ಆರ್ಥಿಕ ಅಸಮಾನತೆ ಮತ್ತು ಸವಾಲುಗಳು
ತಲಾ ಆದಾಯದಲ್ಲಿ ಕರ್ನಾಟಕವು ಭಾರತದಲ್ಲೇ ನಂ.1 ಆಗಿದ್ದರೂ ಕೂಡ, ರಾಜ್ಯದಲ್ಲಿ ಆರ್ಥಿಕ ಅಸಮಾನತೆಯು ಪ್ರಮುಖ ಸವಾಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ನಗರವು 6,21,131 ರೂ. ತಲಾ ಆದಾಯವನ್ನು ಹೊಂದಿದೆ. ಅಂದರೆ, ರಾಜ್ಯದ ಸರಾಸರಿ ತಲಾ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚು. ಇದು, ಇತರ ಜಿಲ್ಲೆಗಳಲ್ಲಿ ಆರ್ಥಿಕ ಹಿಂದುಳಿಯುವಿಕೆಯನ್ನು ಪ್ರತಿಬಿಂಬಿಸುತ್ತದೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಇನ್ನೂ ಆರ್ಥಿಕವಾಗಿ ಹಿಂದುಳಿದಿವೆ. ಡಾ. ನಂಜುಂಡಪ್ಪ ವರದಿಯಂತೆ ಈ ಭಾಗದ 39 ತಾಲೂಕುಗಳು ತೀರಾ ಹಿಂದುಳಿದಿದ್ದು, ವಿಶೇಷ ಆರ್ಥಿಕ ಉತ್ತೇಜನಕ್ಕಾಗಿ ಎದುರು ನೋಡುತ್ತಿವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದ್ದರೂ, ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಗಳು ಕಾಣಿಸುತ್ತಿಲ್ಲ.
ಇಡೀ ಆರ್ಥಿಕತೆಯು ಬೆಂಗಳೂರು ಕೇಂದ್ರಿತವಾಗಿದೆ. ಎಲ್ಲ ಉದ್ಯಮ ಮತ್ತು ಕೈಗಾರಿಕೆಗಳನ್ನು ಬೆಂಗಳೂರಿಗೆ ಮಾತ್ರವೇ ತಂದು ಸುರಿಯಲಾಗುತ್ತಿದೆ. ಬೆಂಗಳೂರು ಕೇಂದ್ರಿತ ಆರ್ಥಿಕತೆಯ ಕಾರಣದಿಂದಾಗಿ, ಭೂಸ್ವಾಧೀನದ ವಿರುದ್ಧ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರು ಬರೋಬ್ಬರಿ 3.5 ವರ್ಷಗಳ ಕಾಲ ಹೋರಾಟ ನಡೆಸಬೇಕಾಯಿತು.
ನಗರ ಕೇಂದ್ರಿತ ಆರ್ಥಿಕತೆಯು ರಾಜ್ಯದಲ್ಲಿಯೇ ಆಂತರಿಕವಾಗಿ ಪ್ರಾದೇಶಿಕ ಅಸಮಾನತೆಯನ್ನು ಹುಟ್ಟುಹಾಕಿದೆ. ಜೊತೆಗೆ, ಹಣದುಬ್ಬರದಿಂದಾಗಿ ರಾಜ್ಯದಲ್ಲಿ ಜೀವನ ವೆಚ್ಚವೂ ಹೆಚ್ಚಾಗಿದೆ. ಇದರಿಂದ ನೈಜ ಆದಾಯದ (Real Income) ಲಾಭವು ಕೆಲವೇ ಕೆಲವು ಉಳ್ಳವರ ಪಾಲಾಗುತ್ತಿದೆ. ಈ ಅಸಮಾಧಾನ ಆರ್ಥಿಕ ಬೆಳವಣಿಗೆಗೆ ನಿರುದ್ಯೋಗದ ಪಾತ್ರವೂ ಪ್ರಧಾನವಾಗಿದೆ.
ಕರ್ನಾಟಕದ ತಲಾ ಆದಾಯವು ನಿಜಕ್ಕೂ ಜನರ ಆದಾಯವಾಗಬೇಕಾದರೆ ಅಥವಾ ಸ್ಥಳೀಯ ಆದಾಯವಾಗಬೇಕಾದರೆ, ಉದ್ಯಮ, ಕೈಗಾರಿಕೆಗಳು ಒಂದು ನಗರವನ್ನು ಆಶ್ರಯಿಸದೆ, ರಾಜ್ಯದ ಎಲ್ಲ ಜಿಲ್ಲೆಗಳು, ತಾಲೂಕುಗಳಿಗೂ ವಿಸ್ತರಿಸಬೇಕು. ಕೈಗಾರಿಕೋದ್ಯಮವು ವಿಕೇಂದ್ರೀಕರಣ ಆದಷ್ಟೂ ಜನರಿಗೆ ಹೆಚ್ಚು ಅವಕಾಶಗಳು ದೊರೆಯುತ್ತವೆ. ವಲಸೆ ನಿಲ್ಲುತ್ತದೆ. ಸ್ಥಳೀಯವಾಗಿ ಉದ್ಯೋಗಗಳು ದೊರೆಯುತ್ತವೆ. ವೆಚ್ಚ ಕಡಿಮೆಯಾಗಿ, ಆದಾಯ ಹೆಚ್ಚುತ್ತದೆ. ಇದು ಪ್ರತಿಯೊಬ್ಬರ ಆದಾಯವನ್ನು ಹೆಚ್ಚಿಸುತ್ತದೆ. ಇದಕ್ಕಾಗಿ, ಸರ್ಕಾರಗಳು ಕ್ರಮ ಕೈಗೊಳ್ಳುವ ಅಗತ್ಯವಿದೆ.