ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕವಿ ನಗರದಲ್ಲಿ ಅಸ್ತಿತ್ವದಲ್ಲೇ ಇಲ್ಲದ ದೇಶಗಳ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದ ಆರೋಪದಡಿ ಹರ್ಷವರ್ಧನ್ ಜೈನ್ ಎಂಬಾತನನ್ನು ಉತ್ತರ ಪ್ರದೇಶ ಪೊಲೀಸ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದೆ. ಜೈನ್, ವೆಸ್ಟ್ ಆರ್ಕ್ಟಿಕಾ, ಸಬೋರ್ಗಾ, ಪೊಲಿವಿಯಾ, ಮತ್ತು ಲೊಡೊನಿಯಾ ಎಂಬ ಅಸ್ತಿತ್ವದಲ್ಲಿ ಇಲ್ಲದ ದೇಶಗಳ ರಾಜತಾಂತ್ರಿಕ ಅಧಿಕಾರಿಯಾಗಿ ತನ್ನನ್ನು ಹೇಳಿಕೊಂಡು, ಬಾಡಿಗೆ ಮನೆಯಿಂದ ಈ ಅಕ್ರಮವನ್ನು ನಡೆಸುತ್ತಿದ್ದ.
ಪ್ರಾಥಮಿಕ ತನಿಖೆಯಲ್ಲಿ, ಜೈನ್ ವಿದೇಶದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಹಲವರನ್ನು ವಂಚಿಸಿರುವುದು ತಿಳಿದುಬಂದಿದೆ. ಅಲ್ಲದೆ, ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆಯಲ್ಲಿ ಭಾಗಿಯಾಗಿರುವ ಶಂಕೆಯಿದೆ. ಜನರನ್ನು ಮೋಸಗೊಳಿಸಲು ಆತ, ಪ್ರಧಾನಮಂತ್ರಿ, ರಾಷ್ಟ್ರಪತಿ ಸೇರಿದಂತೆ ಗಣ್ಯರೊಂದಿಗಿನ ಮಾರ್ಫ್ ಮಾಡಿದ ಫೋಟೊಗಳನ್ನು ಬಳಸಿಕೊಂಡಿದ್ದಾನೆ. ಇದರ ಜೊತೆಗೆ, ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ತನ್ನ ಐಷಾರಾಮಿ ವಾಹನಗಳಿಗೆ ಬಳಸುತ್ತಿದ್ದ.
ತನಿಖೆಯ ವೇಳೆ, ಜೈನ್‌ನಿಗೆ ವಿವಾದಿತ ದೇವಮಾನವ ಚಂದ್ರಸ್ವಾಮಿ ಮತ್ತು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿಯೊಂದಿಗೆ ಸಂಪರ್ಕವಿತ್ತು ಎಂಬುದು ಬಹಿರಂಗಗೊಂಡಿದೆ. ಇದಕ್ಕೂ ಮುನ್ನ 2011ರಲ್ಲಿ, ಆತನ ಮೇಲೆ ಅಕ್ರಮವಾಗಿ ಸ್ಯಾಟಲೈಟ್ ಫೋನ್ ಇಟ್ಟುಕೊಂಡಿದ್ದ ಆರೋಪದಡಿ ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿವೇಶನ ಎಂದಾಕ್ಷಣ ಹೆದರಿ ಓಡುವ ಪ್ರಧಾನಿ ಮೋದಿ
ನಕಲಿ ನಂಬರ್ ಪ್ಲೇಟ್ ಅಂಟಿಸಿದ್ದ ವಾಹನಗಳು, 12 ಮೈಕ್ರೋನೇಷನ್ಸ್ ಎಂದು ಕರೆಯಲ್ಪಡುವ ನಕಲಿ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು, ವಿದೇಶಾಂಗ ಸಚಿವಾಲಯದ ಸ್ಟ್ಯಾಂಪ್ ಇರುವ ನಕಲಿ ದಾಖಲೆಗಳು, ಎರಡು ನಕಲಿ ಪ್ಯಾನ್ ಕಾರ್ಡ್‌ಗಳು, ವಿವಿಧ ದೇಶಗಳು ಮತ್ತು ಕಂಪನಿಗಳ 34 ರಬ್ಬರ್ ಸ್ಟ್ಯಾಂಪ್‌ಗಳು ಮತ್ತು ಎರಡು ನಕಲಿ ಪ್ರೆಸ್ ಕಾರ್ಡ್‌ಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.
ಇದರ ಜತೆಗೆ 44.7 ಲಕ್ಷ ರೂ. ನಗದು, ವಿದೇಶಿ ಕರೆನ್ಸಿ, ಹಲವು ಕಂಪನಿಗಳ ದಾಖಲೆಗಳು ಮತ್ತು 18 ನಕಲಿ ನಂಬರ್ ಪ್ಲೇಟ್‌ಗಳನ್ನು ಎಸ್‌ಟಿಎಫ್ ವಶಪಡಿಸಿಕೊಂಡಿದೆ. ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
