ಪಂಚಮಸಾಲಿ ಪೀಠವೇ ರಾಜಕೀಯ ಆಡುಂಬೊಲ: ಇದು ಸ್ವಾಮೀಜಿಯ ಸ್ವಯಂಕೃತ ಅಪರಾಧ

Date:

Advertisements
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಮೃತ್ಯುಂಜಯ ಸ್ವಾಮೀಜಿಯೇ ಬೇಡ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಈ ವಿವಾದ ಇನ್ನಷ್ಟು ದೊಡ್ಡದಾಗಲು ಕಾರಣವೇನು? 2ಎ ಮೀಸಲಾತಿ ಹೋರಾಟದಲ್ಲಿ ಜತೆಯಾಗಿ ಹೆಜ್ಜೆ ಹಾಕಿದ ಸ್ವಾಮೀಜಿ-ಕಾಶಪ್ಪನವರ ನಡುವೆ ಬಿರುಕು ಮೂಡಿದ್ದು ಹೇಗೆ? 

ಭಾಗ-1
ಧಾರ್ಮಿಕ ಭಾವನೆಯನ್ನು ಮತ್ತು ಭಕ್ತರ ಹಿತವನ್ನು ಕಡೆಗಣಿಸಿ, ಮಠದ ಪೀಠವನ್ನು ರಾಜಕೀಯದ ಆಡುಂಬೊಲವನ್ನಾಗಿ ಬಳಸಿಕೊಂಡಾಗ ಕೊನೆಗೆ ಯಾವ ಪರಿಸ್ಥಿತಿ ಎದುರಾಗುತ್ತದೆ ಎಂಬುದಕ್ಕೆ ಕೂಡಲಸಂಗಮದ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿಯ ಪ್ರಕರಣ ಪ್ರತ್ಯಕ್ಷ ನಿದರ್ಶನ.

ಪಕ್ಷ ಆಧಾರಿತ ರಾಜಕೀಯವನ್ನು ಮಠದಿಂದ ಹೊರಗಿಟ್ಟು, ಸಮುದಾಯದ ಹಿತವನ್ನು ಜಪ ಮಾಡಿದ್ದರೆ ಮೃತ್ಯುಂಜಯ ಸ್ವಾಮೀಜಿಗೆ ಇಂದು ಪಂಚಮಸಾಲಿ ಸಮುದಾಯದೊಳಗೆ ಮತ್ತು ಭಕ್ತ ಮಾನಸದೊಳಗೆ ಘನತೆಯುಳ್ಳ ಗೌರವದ ಸ್ಥಾನ ಲಭಿಸುತ್ತಿತ್ತು. ಆದರೆ ಸ್ವಾಮೀಜಿ ಆ ಅವಕಾಶವನ್ನು ತಮ್ಮ ಕೈಯಾರೇ ಚೆಲ್ಲಿ, ರಾಜಕೀಯ ನಾಯಕರ ಮುಖವಾಣಿಯಾಗಿ ಬದಲಾಗಿದ್ದರಿಂದ ತಮ್ಮ ಪೀಠಕ್ಕೂ ಸಂಚಕಾರ ತಂದೊಡ್ಡಿಕೊಂಡಿದ್ದಾರೆ. ಇದು ಸ್ವಾಮೀಜಿಯಿಂದಾದ ಸ್ವಯಂಕೃತ ಅಪರಾಧ. ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡು, ಒಳಗೊಳಗೆ ಪರಿತಪಿಸುತ್ತಿದ್ದಾರೆ.

ಈ ಮಾತುಗಳನ್ನು ನಾವು ಹೇಳುತ್ತಿಲ್ಲ. ಮೃತ್ಯುಂಜಯ ಸ್ವಾಮೀಜಿಯ ಹಿತವನ್ನು ಬಯಸುವ ಅವರ ಆಪ್ತ ಒಡನಾಡಿಯೊಬ್ಬರನ್ನು ‘ಈ ದಿನ.ಕಾಂ‘ ಸಂಪರ್ಕಿಸಿ ಮಾತನಾಡಿಸಿದಾಗ ಬೇಸರದಂದಲೇ ಅವರು ಈ ವಿವಾದಾತ್ಮಕ ಬೆಳವಣಿಗೆ ಬಗ್ಗೆ ಹೇಳಿದರು.

Advertisements

ಪಂಚಮಸಾಲಿ ಸಮುದಾಯಕ್ಕೆ ‘2ಎ ಮೀಸಲಾತಿ‘ ಕಲ್ಪಿಸಬೇಕು ಎಂದು ದೀರ್ಘಕಾಲದಿಂದಲೂ ಜೊತೆಯಾಗಿ ಹೋರಾಟ ಮಾಡುತ್ತ ಬಂದಿರುವ ಮೃತ್ಯುಂಜಯ ಸ್ವಾಮೀಜಿ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ಮತ್ತು ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ ನಡುವೆ ಬೃಹತ್‌ ಬಿರುಕು ಮೂಡಿರುವುದೇ ವಿವಾದದ ಕೇಂದ್ರ. ಅದು ಎಲ್ಲಿಗೆ ಬಂದು ತಲುಪಿದೆ ಎಂದರೆ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಮೃತ್ಯುಂಜಯ ಸ್ವಾಮೀಜಿಯೇ ಬೇಡ ಎನ್ನುವ ಹಂತಕ್ಕೆ ಬಂದಿದೆ. ಈ ವಿವಾದ ಇನ್ನಷ್ಟು ದೊಡ್ಡದಾಗಲು ಸ್ವಾಮೀಜಿ ಮತ್ತು ಕಾಶಪ್ಪನವರ ನಡುವೆ ವೈಯಕ್ತಿಕ ಪ್ರತಿಷ್ಠೆಯೂ ಕಾರಣ ಎನ್ನಲಾಗುತ್ತಿದೆ.

2ಎ ಮೀಸಲಾತಿ 4

ಸದ್ಯದ ವಿವಾದಾತ್ಮಕ ಬೆಳವಣಿಗೆಗೂ ಕೂಡಲಸಂಗಮ ಪೀಠಕ್ಕೂ ಬಿಡಿಸಲಾರದ ಹಳೆಯ ನಂಟಿದೆ. ಪಂಚಮಸಾಲಿ ಸಮುದಾಯದ ಬೆಟ್ಟಪ್ಪ ಬಾವಿ, ಬಸವರಾಜ ದಿಂಡೂರ ಹಾಗೂ ಉಮಾಪತಿ ಮುಂತಾದ ಮುಖಂಡರು ಸೇರಿ ಪಂಚಪೀಠಾಧೀಶ್ವರ ಮಾರ್ಗದರ್ಶನದಲ್ಲಿ ‘ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ’ ಸ್ಥಾಪಿಸಲು ಮುಂದಾಗಿದ್ದರು. ಆದರೆ, ‘ವೀರಶೈವ ಲಿಂಗಾಯತ’ ಎಂಬುದನ್ನು ಒಪ್ಪದ ಧಾರವಾಡ-ಹುಬ್ಬಳ್ಳಿ, ಹಾವೇರಿ, ಗದಗ ಬೆಳಗಾವಿ ಹಾಗೂ ಬಾಗಲಕೋಟೆ ಭಾಗದ ಪ್ರಮುಖರು, ಬಸವಣ್ಣನ ತತ್ವ ಆಧಾರಿತ ಲಿಂಗಾಯತ ಪಂಚಮಸಾಲಿ ಪೀಠ ಸ್ಥಾಪನೆಗೆ ಮುಂದಾಗುತ್ತಾರೆ. ಅದರ ಫಲವೇ ಕೂಡಲಸಂಗಮ ಪೀಠ ರಚನೆಯಾಗಿದ್ದು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿಯ ಮೂಲ ಟ್ರಸ್ಟ್‌ವೊಂದು ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಸ್ಥಾಪಿತವಾಗುತ್ತದೆ. ಇದರ ಮೊದಲ ಅಧ್ಯಕ್ಷರಾಗಿ ಪ್ರಭಣ್ಣ ಹುಣಸಿಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ನೀಲಕಂಠ ಅಸೂಟಿ ಆಯ್ಕೆಯಾಗುತ್ತಾರೆ. ಪಂಚಮಸಾಲಿ ಪೀಠ ಎಲ್ಲಿ ಸ್ಥಾಪಿಸಬೇಕು ಎನ್ನುವ ವಿಚಾರ ಬಂದಾಗ ವಿಶ್ವಗುರು ಬಸವಣ್ಣ ಐಕ್ಯವಾದ ಸ್ಥಳವಾದ ಕೂಡಲಸಂಗಮದಲ್ಲೇ ಪೀಠ ಸ್ಥಾಪಿಸುವ ನಿರ್ಧಾರಕ್ಕೆ ಟ್ರಸ್ಟ್‌ ಬರುತ್ತದೆ. ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ಈ ವಿಷಯ ಚರ್ಚಿತವಾಗಿ ತಮ್ಮಲ್ಲಿಯೇ ಇದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪೀಠಾಧ್ಯಕ್ಷ ಸ್ಥಾನಕ್ಕೆ ಮುರುಘಾ ಶರಣರು ಸೂಚಿಸುತ್ತಾರೆ.

ಬಳಿಕ 2008ರಲ್ಲಿ ಕೂಡಲಸಂಗಮದಲ್ಲಿ ಪಂಚಮಸಾಲಿಯ ಮೊದಲ ಪೀಠ ಸ್ಥಾಪನೆಯಾಗಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೀಠಾಧ್ಯಕ್ಷರಾಗಿದ್ದಾರೆ. ಪಂಚಮಸಾಲಿ ಸಮುದಾಯ ಮೂಲತಃ ಕೃಷಿಕ ಹಿನ್ನೆಲೆಯವರು ಎನ್ನುವುದರ ಪ್ರಾತಿನಿಧಿಕವಾಗಿ ಸ್ವಾಮೀಜಿಯವರು ನೇಗಿಲನ್ನೇ ಕೈದಂಡವಾಗಿ ಮಾಡಿಕೊಳ್ಳುತ್ತಾರೆ. ಸ್ವಂತ ಜಾಗದಲ್ಲಿ ಪೀಠದ ಕಟ್ಟಡ ಸ್ಥಾಪನೆಗೆ ಭೂಮಿ ಕೊಳ್ಳಲು ಮಾಜಿ ಸಚಿವ ಮುರುಗೇಶ ನಿರಾಣಿ ಆರ್ಥಿಕ ಸಹಾಯ ಮಾಡುತ್ತಾರೆ. ಬಿ.ಎಸ್‌ ಯಡಿಯೂರಪ್ಪ ಮತ್ತು ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಪೀಠದ ಸ್ವಂತ ಕಟ್ಟಡವೂ ನಿರ್ಮಾಣವಾಗುತ್ತದೆ.

ಕೂಡಲಸಂಗಮ

ಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮದ ಪೀಠಾಧ್ಯಕ್ಷರಾಗುತ್ತಿದ್ದಂತೆ ಸಮಾಜದ ಗಮನ ಸೆಳೆಯುವ ಕೆಲಸಕ್ಕೆ ಕೈಹಾಕಿದ್ದು ಕಾಣಬಹುದು. 2012ರಲ್ಲಿ ‘ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ’ಯನ್ನು ಸ್ಥಾಪಿಸಿ, ಈವರೆಗೂ ಹೋರಾಟಗಾರ ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಮಾಣಿಕ್ ಸರ್ಕಾರ್, ಎಂ.ಎಸ್.ಸ್ವಾಮಿನಾಥನ್, ರಾಜೇಂದ್ರ ಸಿಂಗ್‌, ಪ್ರಕಾಶರಾವ್‌ ವೀರಮಲ್ಲ, ಶರದ್‌ ಪವಾರ್‌, ಆನಂದ್‌ ತೇಲ್ತುಂಬ್ಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಜನಮನ್ನಣೆ ಗಳಿಸಿದ್ದಾರೆ.

ನಾಗರ ಪಂಚಮಿ ಹಬ್ಬವನ್ನು ‘ಬಸವ ಪಂಚಮಿ’ ಎಂದು ಆಚರಿಸುವ ಮೂಲಕ ಕಲ್ಲು ನಾಗರಕ್ಕೆ ಹಾಲೆರೆಯದೇ, ಮಕ್ಕಳಿಗೆ ಹಾಲು ಕುಡಿಸಿ ಎಂಬ ಅಭಿಯಾನ ಕರೆ ನೀಡುವ ಮೂಲಕ ಭಿನ್ನ ವ್ಯಕ್ತಿತ್ವದ ಸ್ವಾಮೀಜಿಯಾಗಿ ಗುರುತಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮುನ್ನೆಲೆಗೆ ಬಂದ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಹೋರಾಟದಲ್ಲಿ ಗುರುತಿಸಿಕೊಂಡು ಹೆಚ್ಚು ಜನಪ್ರಿಯರಾಗುತ್ತಾರೆ. ಅಷ್ಟೊತ್ತಿಗಾಗಲೇ ಮಠಕ್ಕೆ ಸಚಿವರು, ಶಾಸಕರು, ಸಂಸದರ ಒಡನಾಟ ಹೆಚ್ಚುತ್ತ ರಾಜಕೀಯ ಬೆರೆತುಕೊಳ್ಳಲು ಆರಂಭಿಸುತ್ತದೆ. ಮುಂದೆ ಹುಟ್ಟಿಕೊಂಡಿದ್ದೆ ‘2ಎ ಮೀಸಲಾತಿ’ ಹೋರಾಟ.

‘2ಎ ಮೀಸಲಾತಿ’ ಹೋರಾಟದಲ್ಲಿ ಜೊತೆಯಾಗಿ ಹೆಜ್ಜೆಹಾಕಿದ ವಿಜಯಾನಂದ ಕಾಶಪ್ಪನವರ ಈಗ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಮೃತ್ಯುಂಜಯ ಸ್ವಾಮೀಜಿಯೇ ಬೇಡ ಎನ್ನುವ ಸ್ಪಷ್ಟ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಅವರು, “ಸ್ವಾಮೀಜಿ ಅವರು ತಾವಾಗಿಯೇ ಪೀಠ ತೊರೆದರೆ ಉತ್ತಮ” ಎನ್ನುವ ಎಚ್ಚರಿಕೆಯ ಮಾತುಗಳನ್ನು ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ಆಡಿದ್ದಾರೆ.

ಹೀಗೆ ಕೂಡಲಸಂಗಮ ಪಂಚಮಸಾಲಿ ಪೀಠ ವಿವಾದ ತಾರಕಕ್ಕೇರುತ್ತಿದ್ದಂತೆಯೇ ಸ್ವಾಮೀಜಿ ತೀವ್ರ ಬಳಲಿಕೆ ಮತ್ತು ಎದೆನೋವು ಕಾಣಿಸಿಕೊಂಡು ಎರಡು ದಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮಠಕ್ಕೆ ಮರಳಿದ್ದಾರೆ. ಇತ್ತ ಸ್ವಾಮೀಜಿ ಆರೋಗ್ಯ ವಿಚಾರಿಸಲು ಈಗ ಕೊಪ್ಪಳ, ಬೆಳಗಾವಿ, ವಿಜಯಪುರ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ. ಸಮಾಜದ ಮುಖಂಡರು ಸ್ವಾಮೀಜಿ ಮತ್ತು ಕಾಶಪ್ಪನವರ ನಡುವೆ ಸಂಧಾನಕ್ಕೆ ತೆರೆ ಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ.

Vijayanand Kashappanavar

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅವರನ್ನು ಈ ಬೆಳವಣಿಗೆ ಸುತ್ತ ‘ಈ ದಿನ.ಕಾಂ‘ ಮಾತಿಗೆಳೆದಾಗ, “ಈ ವಿಷಯವನ್ನು ನಿರ್ಣಾಯಕ ಸ್ಥಿತಿಗೆ ಒಯ್ಯುವವರೆಗೂ ನಾನು ಸುಮ್ಮನಿರಲ್ಲ. ಬಿಜೆಪಿಯ ನಾಯಕರು ಸ್ವಾಮೀಜಿಗೆ ನಾನೇ ಊಟದಲ್ಲಿ ವಿಷ ಹಾಕಿದ್ದು ಎಂದು ಆರೋಪಿಸಿದ್ದಾರೆ. ಅವರು ತನಿಖೆಗೆ ಆಗ್ರಹಿಸಬೇಕು. ಇದರಿಂದ ನಾನು ಕಳಂಕ ರಹಿತವಾಗಿ ಹೊರಬರಬೇಕು. ಸ್ವಾಮೀಜಿಯೊಂದಿಗೆ ನನಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಹೊರತು ಅವರನ್ನು ಕೊಲ್ಲುವ ಬಗ್ಗೆ ಕನಸಿನಲ್ಲಿಯೂ ಯೋಚಿಸಿಲ್ಲ. ನನ್ನ ಮೇಲೆ ಬಿಜೆಪಿಯವರು ಎಷ್ಟು ಆರೋಪ ಮಾಡುತ್ತಾರೋ ಅಷ್ಟೂ ಈ ವಿಷಯವನ್ನು ನಾನು ದೊಡ್ಡದು ಮಾಡುವೆ. ಇನ್ನೂ ಹುಳುಕುಗಳನ್ನು ಬಿಚ್ಚಿಡುವೆ” ಎಂದು ಹೇಳಿದರು.

”ಮಠದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಒಡನಾಟ ಹೆಚ್ಚಾದಾಗ 2019ರಲ್ಲಿ ಟ್ರಸ್ಟ್‌ನವರು ಸ್ವಾಮೀಜಿಗೆ ನೋಟಿಸ್‌ ನೀಡಿದ್ದಾರೆ. ಅದಕ್ಕೆ ಸ್ವಾಮೀಜಿ ಹಿಂಬರಹದಲ್ಲಿ ಉತ್ತರಿಸಿ ಮಠದ ನಿಯಮಾವಳಿಗೆ ಬದ್ಧರಾಗಿ ಇರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಅವರು ‘2ಎ ಮೀಸಲಾತಿ’ದಲ್ಲಿ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ. ರಾಜಕೀಯ ಇಷ್ಟವಿದ್ದರೆ ಖಾವಿ ತ್ಯಜಿಸಿ ರಾಜಕೀಯಕ್ಕೆ ಬರಲಿ. ನಮ್ಮ ಅಭ್ಯಂತರವಿಲ್ಲ. ಅದನ್ನು ಬಿಟ್ಟು ಪೀಠದಲ್ಲಿ ಕುಳಿತು ರಾಜಕೀಯ ಮಾಡುವುದು ಬೇಡ” ಎಂದರು.

“ಬಿಜೆಪಿ ಅವಧಿಯಲ್ಲಿ ನಾವು 2ಎ ಮೀಸಲಾತಿ ಆಗ್ರಹಿಸಿ ಹೋರಾಟ ಮಾಡಿದ್ದೆವು. ಆದ್ರೆ ಬೊಮ್ಮಾಯಿ ಸರ್ಕಾರ 2ಡಿ ಅಡಿ ಮೀಸಲಾತಿ ಕೊಡುವ ನಿರ್ಧಾರ ಮಾಡಿತು. ಇದು ಸಾಧ್ಯವಿಲ್ಲ ಎಂದು ನಾನು ಆಗ ವಿರೋಧಿಸಿ ಹೋರಾಟದಿಂದ ಎದ್ದು ಬಂದಿದ್ದೆ. ಆದರೆ ಸ್ವಾಮೀಜಿ ಅದನ್ನು ಒಪ್ಪಿಕೊಂಡು ಬಂದರು. ಈಗ ಮತ್ತೆ 2ಎ ಮೀಸಲಾತಿ ಹೋರಾಟ ಮಾಡಲು ಮುಂದಾಗಿದ್ದಾರೆ. ಇವರ ನಿಲುವೇನು? ಹೋರಾಟವನ್ನು ಬರೀ ದಾರಿ ತಪ್ಪಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಮಠಕ್ಕೆ ಬೀಗ ಹಾಕಿಸಿದ್ದು ಎನ್ನುವ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಮುಖ್ಯಮಂತ್ರಿಗಳಿಗೆ ಇಂತಹ ಕ್ಷುಲ್ಲಕ ವಿಚಾರಗಳಿಗೆ ತಲೆಕಡಿಸಿಕೊಳ್ಳಲು ಸಮಯವೇ ಇಲ್ಲ” ಎಂದು ವಿವರಿಸಿದರು.

“ನಾವಂತು ಸ್ವಾಮೀಜಿಯೊಂದಿಗೆ ಹೊಂದಿಕೊಂಡು ಹೋಗಬೇಕು ಎನ್ನುವ ಯೋಚನೆಯಲ್ಲಿ ಇಲ್ಲ. ಬಿಜೆಪಿಯವರು ಮತ್ತೊಂದು ಪೀಠ ಸ್ಥಾಪಿಸುತ್ತಾರಂತೆ. ಅಲ್ಲಿಗೆ ಹೋಗಿ ಪೀಠಾಧ್ಯಕ್ಷರಾಗಿ ರಾಜಕೀಯ ಮಾಡಿಕೊಂಡಿರಲಿ. ನಮಗೆ ಪಂಚಮಸಾಲಿ ಸಮುದಾಯ ಮುಖ್ಯ. ಜೊತೆಗೆ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಆಗ್ರಹ. ಈಗಲೂ ನಾವು ಸಿದ್ದರಾಮಯ್ಯ ಅವರ ಜೊತೆ ಇದೇ ವಿಚಾರವಾಗಿ ಸಾಕಷ್ಟು ಸಲ ಚರ್ಚೆ ಮಾಡಿದ್ದೇವೆ. ಒಂದಿಷ್ಟು ಕಾನೂನು ತೊಡಕುಗಳಿವೆ. ಅದು ಬಗೆಹರಿಯುವ ವರೆಗೂ ಸಂಯಮದಿಂದ ಇರುವುದು ಬಿಟ್ಟು ಸ್ವಾಮೀಜಿ ಬಿಜೆಪಿಯವರ ಹಿಂದೆ ಬಿದ್ದಿದ್ದಾರೆ” ಎಂದು ತಮ್ಮ ಸಂಘರ್ಷವನ್ನು ಬಿಚ್ಚಿಟ್ಟರು.

ಕೂಡಲಸಂಗಮ 1

ಮೃತ್ಯುಂಜಯ ಸ್ವಾಮೀಜಿ ಅವರನ್ನು ಮಾತನಾಡಿಸಿದಾಗ, “ಮೀಸಲಾತಿ ಹೋರಾಟದಲ್ಲಿ ನಮಗೂ ಮತ್ತು ಕಾಶಪ್ಪನವರ ಅವರಿಗೂ ಭಿನ್ನಾಭಿಪ್ರಾಯ ಬಂದಿದೆ. ಅದು ಸರಿಹೋಗುತ್ತದೆ” ಎಂದು ಹೇಳಿದರು. ವಿಷಪ್ರಾಸನ ಬಗ್ಗೆ ಪ್ರಶ್ನಿಸಿದಾಗ, “ಈ ಬಗ್ಗೆ ನಾನು ಏನೂ ಹೇಳಲಾರೆ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಸದ್ಯಕ್ಕೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ” ಎಂದಷ್ಟೇ ಹೇಳಿದರು.

ಸ್ವಾಮೀಜಿ ಊಟ ಮಾಡುವ ವೇಳೆ ಸ್ಥಳದಲ್ಲಿ ಹಾಜರಿದ್ದ ಮಠದ ಪ್ರತ್ಯಕ್ಷದರ್ಶಿಯೊಬ್ಬರು ಹೆಸರು ಹೇಳಲು ಇಚ್ಛಿಸದೆ, “ಕೂಡಲಸಂಗಮ ಮಠಕ್ಕೆ ಮುಸ್ಲಿಂ ಸಮುದಾಯದವರು ಸಹ ಭಕ್ತರಾಗಿ ನಡೆದುಕೊಳ್ಳುತ್ತಾರೆ. ಸ್ವಾಮೀಜಿ ಜೊತೆಗೆ ಇನ್ನೂ ಅನೇಕ ಜನರು ಊಟ ಮಾಡಿದ್ದಾರೆ. ಆ ಊಟ ಬೆಳಗಾವಿಯಿಂದ ಬಂದಿದೆ. ಯಾರಿಗೂ ಏನೂ ಆಗಿಲ್ಲ. ವಿಷದ ಊಟ ಎಂಬುದೇ ರಾಜಕೀಯ ಆಟ. ಅಲ್ಲಿ ಮುಸ್ಲಿಮರು ಇದ್ದರು ಎನ್ನುವ ಕಾರಣಕ್ಕೆ ಬಿಜೆಪಿಯವರು ಮುಸ್ಲಿಂ ವಿಚಾರವನ್ನು ತಳುಕುಹಾಕಿದ್ದಾರೆ. ಮಠದ ಬೆಳವಣಿಗೆಯಿಂದ ಸ್ವಾಮೀಜಿ ಮನಸ್ಸಿಗೆ ಘಾಸಿಯಾಗಿ ಆರೋಗ್ಯದಲ್ಲಿ ಏರುಪೇರಾಗಿದೆ ಅಷ್ಟೇ” ಎಂದು ಹೇಳಿದರು.

ಬಲ್ಲ ಮೂಲಗಳ ಪ್ರಕಾರ ಮೃತ್ಯುಂಜಯ ಸ್ವಾಮೀಜಿ ಅವರು ಬಿಜೆಪಿ ನಾಯಕರ ಆಣತಿಯಂತೆ ವಿಜಯಾನಂದ ಕಾಶಪ್ಪನವರ ಅವರನ್ನು ನಿರ್ಲಕ್ಷಿಸಿ ಮತ್ತೆ ‘2ಎ ಮೀಸಲಾತಿ’ ಹೋರಾಟಕ್ಕೆ ಮುನ್ನುಡಿ ಬರೆದಿದ್ದೆ ಸಂಘರ್ಷಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಒಂದು ವರ್ಷ ಸಮಯ ಕೇಳಿದ್ದರೂ ಸ್ವಾಮೀಜಿ ಅವರು ತಮ್ಮ ಮಾತನ್ನು ಧಿಕ್ಕರಿಸಿ ಯತ್ನಾಳ್‌ ಜೊತೆ ಸೇರಿ ಹೋರಾಟಕ್ಕೆ ಮುಂದಾಗಿರುವುದು ಕಾಶಪ್ಪನವರ ಕೋಪಕ್ಕೆ ಕಾರಣ ಎನ್ನಲಾಗುತ್ತಿದೆ. ಇದು ಮುಂದೆ ಯಾವ ಸ್ವರೂಪ ಪಡೆಯುತ್ತದೆ ಕಾದು ನೋಡಬೇಕು.

(ಮುಂದುವರೆಯುವುದು…)

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X