ಹಿಮಾಚಲ ಪ್ರದೇಶದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮೂಡಿಸಿದೆ. ಆದರೆ ಪರಿಶೀಲನೆಯ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
ಕಳೆದ ವಾರ, ದೆಹಲಿ ಮತ್ತು ಬೆಂಗಳೂರಿನ ಹಲವಾರು ಶಾಲೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದಿವೆ. ಉತ್ತರ ಪ್ರದೇಶದ ಆಗ್ರಾದ ಎರಡು ಖಾಸಗಿ ಶಾಲೆಗಳಿಗೂ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ. ಪರಿಶೀಲನೆ ವೇಳೆ ಹುಸಿ ಬೆದರಿಕೆ ಎಂದು ತಿಳಿದುಬಂದಿತ್ತು.
ಇದನ್ನು ಓದಿದ್ದೀರಾ? ತಿರುಪತಿ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ
ಇನ್ನು ಹಿಮಾಚಲ ಪ್ರದೇಶದಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬರುತ್ತಿದ್ದಂತೆ ಪೊಲೀಸರು ಮತ್ತು ಸಿಐಡಿ ತಂಡ, ಬಾಂಬ್ ನಿಷ್ಕ್ರಿಯ ದಳಗಳೊಂದಿಗೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳಗಳು ಶಾಲೆಗಳ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಆದರೆ ಯಾವುದೇ ಸ್ಫೋಟಕಗಳು ಅಥವಾ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ತಿವಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಶಾಂತವಾಗಿರಲು ಮತ್ತು ಭಯಭೀತರಾಗದಂತೆ ಅಥವಾ ವದಂತಿಗಳನ್ನು ಹರಡದಂತೆಯೂ ಡಿಜಿಪಿ ಅಶೋಕ್ ತಿವಾರಿ ಮನವಿ ಮಾಡಿದ್ದಾರೆ. ಅಂತಹ ಬೆದರಿಕೆಗಳನ್ನು ಎದುರಿಸಲು ರಾಜ್ಯ ಪೊಲೀಸರು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಮತ್ತು ಸಮರ್ಥರಾಗಿದ್ದಾರೆ ಹೇಳಿದ್ದಾರೆ.
ಈ ಹಿಂದೆ ಬೆಂಗಳೂರು, ದೆಹಲಿಯ ಶಾಲೆಗಳಿಗೂ ಇದೇ ರೀತಿ ಬಾಂಬ್ ಬೆದರಿಕೆಗಳು ಬಂದಿದೆ. ಹಾಗಾಗಿ ಕರ್ನಾಟಕ, ದೆಹಲಿ ಇತರ ರಾಜ್ಯಗಳಲ್ಲಿನ ಪೊಲೀಸರೊಂದಿಗೂ ಸಮನ್ವಯ ನಡೆಸುವುದಾಗಿ ಹಿಮಾಚಲ ಪೊಲೀಸರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
