ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲಿ ಗಂಭೀರ ಚುನಾವಣಾ ಅಕ್ರಮ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ‘ಮತ ಕಳ್ಳತನ’ದ ಕಾರ್ಯವಿಧಾನವನ್ನು ಶೀಘ್ರದಲ್ಲೇ ಚುನಾವಣಾ ಆಯೋಗ ಮತ್ತು ಜನರ ಮುಂದೆ ಯಥಾವತ್ತಾಗಿ ಬಹಿರಂಗಪಡಿಸುವುದಾಗಿ ಅವರು ಹೇಳಿದ್ದಾರೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಆಯ್ದುಕೊಂಡು ಆಳವಾದ ಅಧ್ಯಯನ ನಡೆಸಿದ್ದೇವೆ. ನಮಗೆ ಕಾಗದದ ಮೇಲಿನ ಪಟ್ಟಿಯನ್ನು ನೀಡಲಾಗಿತ್ತು. ಆದರೆ ಕಾಗದದ ಪಟ್ಟಿಯೊಂದಿಗೆ ವಿಶ್ಲೇಷಣೆ ಸಾಧ್ಯವಿಲ್ಲ. ಆದ್ದರಿಂದ, ಅದನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ, ಆರು ತಿಂಗಳ ಕಾಲ ವಿಶ್ಲೇಷಣೆ ನಡೆಸಿದೆವು,” ಎಂದು ಅವರು ವಿವರಿಸಿದರು.
ಈ ವಿಶ್ಲೇಷಣೆಯಿಂದ ಮತದಾರರ ಪಟ್ಟಿಯಲ್ಲಿ ಅಕ್ರಮಗಳು, ಹೊಸ ಮತದಾರರ ಸೇರ್ಪಡೆ, ಮತ್ತು ಅವರನ್ನು ಎಲ್ಲಿಂದ ಕರೆತರಲಾಗುತ್ತದೆ ಎಂಬ ಸಂಪೂರ್ಣ ಕಾರ್ಯವಿಧಾನವನ್ನು ಕಂಡುಹಿಡಿದಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಕುರಿತು ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಯಾವ ಲೋಕಸಭಾ ಕ್ಷೇತ್ರದಲ್ಲಿ ಈ ಅಧ್ಯಯನ ನಡೆಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.
ರಾಹುಲ್ ಗಾಂಧಿ ಅವರು, “ಕಾಂಗ್ರೆಸ್ ಪಕ್ಷವು ಈ ‘ಅಕ್ರಮದ ಆಟ’ವನ್ನು ತಿಳಿದುಕೊಂಡಿದೆ. ಇದು ಚುನಾವಣಾ ಆಯೋಗಕ್ಕೂ ಗೊತ್ತಾಗಿದೆ. ಆದ್ದರಿಂದಲೇ ಬಿಹಾರದಲ್ಲಿ ಎಸ್‌ಐಆರ್ ಮೂಲಕ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಭಾರತದಲ್ಲಿ ಇಡೀ ಚುನಾವಣೆಯನ್ನೇ ಕದಿಯಲಾಗುತ್ತಿದೆ. ಇದು ಭಾರತದ ವಾಸ್ತವ,” ಎಂದು ಆರೋಪಿಸಿದರು. ಎಸ್‌ಐಆರ್ ವಿರುದ್ಧ ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವುದಾಗಿಯೂ ಅವರು ತಿಳಿಸಿದರು.
ಚುನಾವಣಾ ಆಯೋಗದಿಂದ ಉತ್ತರವಿಲ್ಲ
ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಮತ್ತು ಮತದಾನದ ದಿನದ ವಿಡಿಯೊ ಚಿತ್ರೀಕರಣದ ದಾಖಲೆಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಆದರೆ, ಆಯೋಗವು ಈ ಮನವಿಗೆ ಸ್ಪಂದಿಸದೆ, ಮಾಹಿತಿ ನೀಡಲು ನಿರಾಕರಿಸಿತು ಮತ್ತು ಸಂಬಂಧಿತ ನಿಯಮಗಳನ್ನೇ ಬದಲಾಯಿಸಿತು ಎಂದು ರಾಹುಲ್ ಗಾಂಧಿ ದೂರಿದರು.
ಮಹಾರಾಷ್ಟ್ರದಲ್ಲಿ ಸುಮಾರು ಒಂದು ಕೋಟಿ ಹೊಸ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಬಿಹಾರದಲ್ಲಿ ಮನೆ ಭೇಟಿಯ ಸಂದರ್ಭದಲ್ಲಿ 52 ಲಕ್ಷ ಮತದಾರರು ವಿಳಾಸದಲ್ಲಿ ಲಭ್ಯವಿಲ್ಲದಿರುವುದು ಮತ್ತು 18 ಲಕ್ಷ ಮತದಾರರು ಮೃತಪಟ್ಟಿರುವುದು ಪರಿಷ್ಕರಣೆ ವೇಳೆ ಗೊತ್ತಾಗಿದೆ. “ಈ ಸಮಸ್ಯೆ ಬಿಹಾರಕ್ಕೆ ಮಾತ್ರ ಸೀಮಿತವಲ್ಲ. ಮಹಾರಾಷ್ಟ್ರದಲ್ಲೂ ಇದೇ ರೀತಿಯ ಅಕ್ರಮಗಳು ನಡೆದಿವೆ. ಇದು ದೇಶದಲ್ಲಿ ‘ಮತ ಕಳ್ಳತನ’ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ,” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
हिंदुस्तान में इलेक्शन चोरी किए जा रहे हैं, ये सच्चाई है!
— Rahul Gandhi (@RahulGandhi) July 23, 2025
महाराष्ट्र में कैसे मैच फिक्सिंग हुई, हमने सबको दिखाया।
कर्नाटक की एक लोकसभा सीट की जांच की – वहां बड़े पैमाने पर वोट चोरी मिली, जल्द जनता के सामने लाएंगे।
बिहार में SIR के नाम पर SC, ST, OBC और अल्पसंख्यक भाइयों-बहनों… pic.twitter.com/AxJRfUJqjT