ಕಳ್ಳ ಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಹೆಸರಿನಲ್ಲಿ ಇಬ್ಬರು ಸ್ನೇಹಿತೆಯರನ್ನು ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಮಾಡಿ, ಅವರನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ್ದು, ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಯುವತಿಯರಿಗೆ ವಿಡಿಯೋ ಕರೆ ಮಾಡಿದ್ದ ಸೈಬರ್ ವಂಚಕರು, ಅವರ ಮೇಲೆ ಸುಳ್ಳು ಆರೋಪ ಹೊರಿಸಿ, ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ ಅಲ್ಲದೆ, ದೈಹಿಕ ತಪಾಸಣೆ ಹೆಸರಿನಲ್ಲಿ ಅವರನ್ನು ವಿವಸ್ತ್ರಗೊಳಿಸಿ, ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ, 58,000 ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು, ನಿರಂತರ 9 ಗಂಟೆಗಳ ಕಾಲ ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯಿಂದ ತೀವ್ರ ಕಿರುಕುಳ ಮತ್ತು ಮಾನಸಿಕ ಹಿಂಸೆ ಅನುಭವಿಸಿದಸ ಸಂತ್ರಸ್ತೆಯರು ಬೆಂಗಳೂರು ಪೂರ್ವ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಿಎನ್‌ಎಸ್ ಸೆಕ್ಷನ್ 318(4) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ಶಾಂತಿಯುತ ಪ್ರತಿಭಟನೆ ಮಾಡಿದರೂ ಜೈಲಿಗೆ ಹಾಕುವ ಕಾಯ್ದೆ ತರುತ್ತಿದೆ ಬಿಜೆಪಿ!
ಜುಲೈ 17ರಂದು ಘಟನೆ ನಡೆದಿದೆ. ಥಾಯ್ಲೆಂಡ್‌ನಲ್ಲಿ ನೆಲೆಸಿರುವ ಯುವತಿಯೊಬ್ಬರು ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ, ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿದ್ದ ಸೈಬರ್ ವಂಚಕರು, ‘ಜೆಟ್ ಏರ್‌ವೇಸ್ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿಮ್ಮನ್ನು ಆರೋಪಿಯಾಗಿ ಹೆಸರಿಸಲಾಗಿದೆ’ ಎಂದು ಆರೋಪಿಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಲು ವಿಡಿಯೋ ಕರೆಗೆ ಬರುವಂತೆ ಬೆದರಿಕೆ ಹಾಕಿದ್ದಾರೆ. ಆತಂಕಗೊಂಡ ಯುವತಿಯರು ವಿಡಿಯೋ ಕರೆ ಸ್ವೀಕರಿಸಿದ್ದಾರೆ. ದೈಹಿಕ ತಪಾಸಣೆಗಾಗಿ ವಿವಸ್ತ್ರಗೊಳ್ಳುವಂತೆ ಬೆದರಿಸಿದ ವಂಚಕರು, ಯುವತಿಯ ಖಾಸಗಿ ವಿಡಿಯೋಗಳನ್ನು ಸೆರೆಹಿಡಿದಿದ್ದು, 58,477 ರೂ.ಗಳನ್ನು ವಸೂಲಿ ಮಾಡಿದ್ದಾರೆ ಎಂದು ವರದಿಯಾಗಿದೆ.