ವಿದುರಾಶ್ವತ್ಥ | ನಕಲಿ ಮರುಮತಾಂತರ ನಡೆಸಿ ಪೇಚಿಗೆ ಸಿಲುಕಿದರೆ ಬಿಜೆಪಿ ಮುಖಂಡ ರವಿನಾರಾಯಣ ರೆಡ್ಡಿ?

Date:

Advertisements
'ಇಂದು ಮತಾಂತರವನ್ನು ವಿರೋಧಿಸುತ್ತಿರುವ ರವಿನಾರಾಯಣ ರೆಡ್ಡಿಯವರು 2005ನೇ ಇಸವಿಯ ಫೆಬ್ರವರಿಯಲ್ಲಿ ನಾಗಸಂದ್ರದ ದಲಿತ ಕೇರಿಯ ಚರ್ಚ್‌ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು'

“ಕಳೆದ ವರ್ಷವೂ ಕರೆದುಕೊಂಡು ಹೋಗಿ ಹಾರ ಹಾಕಿಸಿದರು. ದೇವರಿಗೆ ಕೈ ಮುಗಿಸಿದರು. ಒಂದು ಸೀರೆ, ಒಂದಿಷ್ಟು ಹಣ ಕೊಟ್ಟರು. ಮೊನ್ನೆಯೂ ಕರೆದುಕೊಂಡು ಹೋಗಿದ್ದರು. ದೇವಸ್ಥಾನದ ಪ್ರಸಾದವನ್ನು ಮಧ್ಯಾಹ್ನದ ಊಟವಾಗಿ ಕೊಡಿಸಿದರು. ಒಂದು ಸೀರೆ ನೀಡಿದರು. ಆ ಬಟ್ಟೆಯೇನು ಅಷ್ಟಾಗಿ ಚೆನ್ನಾಗಿಲ್ಲ. ದುಡ್ಡು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಇನ್ನೂ ಹಣ ಕೈಸೇರಿಲ್ಲ. ಕಾರ್ಯಕ್ರಮ ಮುಗಿದ ಮೇಲೆ ಅವರು (ಎನ್‌.ಎಂ. ರವಿ ನಾರಾಯಣ ರೆಡ್ಡಿ) ಕಾರು ಹತ್ತಿಕೊಂಡು ಹೋದರಷ್ಟೇ…”

-ಹೀಗೆ ಹೇಳುತ್ತಾ ಮರುಮತಾಂತರದ ಅಸಲಿ ಕಥೆಯನ್ನು ಬಿಚ್ಚಿಡುತ್ತಾರೆ ದಲಿತ ಮಹಿಳೆಯರು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಗ್ರಾಮ ವಿದುರಾಶ್ವತ್ಥ. ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದೇ ಜನಜನಿತವಾಗಿರುವ ಈ ಊರಿನಲ್ಲಿರುವ ಅಶ್ವತ್ಥನಾರಾಯಣ ದೇವಾಲಯವೂ ಸುಪ್ರಸಿದ್ಧ. ಭಾನುವಾರ (ಜುಲೈ 20) ಇಲ್ಲೊಂದು ಮರುಮತಾಂತರ ಕಾರ್ಯಕ್ರಮ ನಡೆದಿರುವ ಸಂಬಂಧ ವರದಿಯಾಯಿತು. ವಿದುರಾಶ್ವತ್ಥ ಸುತ್ತಲಿನ ಎಚ್.ನಾಗಸಂದ್ರ, ಗಾಂಧಿನಗರ, ಕದಿರೇನಹಳ್ಳಿ ಮತ್ತು ನೆರೆಯ ಮಧುಗಿರಿ ತಾಲ್ಲೂಕಿಗೆ ಸೇರಿದ ಕೊಡಿಗೇನಹಳ್ಳಿ ಗ್ರಾಮದಲ್ಲಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರವಾದವರ ಪೈಕಿ ಹದಿನೈದು ದಲಿತ ಕುಟುಂಬಗಳನ್ನು ಘರ್ ವಾಪ್ಸಿ ಮಾಡಲಾಗಿದೆ ಎಂಬ ಚಿಕ್ಕದೊಂದು ಸುದ್ದಿ ‘ಪ್ರಜಾವಾಣಿ’ ಪತ್ರಿಕೆ ಸೇರಿದಂತೆ ಕೆಲವು ಕನ್ನಡ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿತ್ತು. (ಇಂದು ‘ಇಂಡಿಯಾ ಟುಡೇ’ ಮಾಧ್ಯಮವು Karnataka BJP leader holds ‘Ghar Wapsi’ event as 15 families reconvert to Hinduism ಶೀರ್ಷಿಕೆಯಲ್ಲಿ ವರದಿಯನ್ನು ಪ್ರಕಟಿಸಿದೆ.)

8 10
ಪ್ರಜಾವಾಣಿ ವರದಿ

ಮತಾಂತರದ ವೇಳೆ ಮಾತನಾಡಿದ್ದ ಸ್ಥಳೀಯ ಬಿಜೆಪಿ ಮುಖಂಡ ರವಿನಾರಾಯಣ ರೆಡ್ಡಿ, “ವಿಶ್ವದ ಎಲ್ಲೆಡೆ ಜನರು ಸ್ವಯಂ ಪ್ರೇರಿತರಾಗಿ ಹಿಂದೂ ಧರ್ಮ ಸ್ವೀಕರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲ ಕ್ರೈಸ್ತ ಮಿಷನರಿಗಳು ತೋರುವ ಆಮಿಷಕ್ಕೆ ಬಲಿಯಾಗಿ ಮತಾಂತರಗೊಳ್ಳುತ್ತಿದ್ದಾರೆ. ನಂತರ ಅವರು ನಡೆಸುವ ತಾರತಮ್ಯ ಕಂಡು ಪಶ್ಚಾತ್ತಾಪ ಪಡುತ್ತಿರುತ್ತಾರೆ. ಈಗಾಗಲೇ ಇಂಥವರನ್ನು ಗುರುತಿಸಿ ಅವರ ಮನವೊಲಿಸಿ ಮತ್ತೆ ಮಾತೃ ಧರ್ಮಕ್ಕೆ ಕರೆ ತರುವ ಕೆಲಸ ನಿರಂತರವಾಗಿ ನಡೆದಿದೆ” ಎಂದು ಹೇಳಿಕೆ ನೀಡಿದ್ದರು. ಹೋಮ ಹವನ ಮಾಡುತ್ತಿರುವ ಫೋಟೋ ಸಹಿತ ವರದಿ ಪ್ರಕಟವಾಗಿತ್ತು. ‘ನಿಜಕ್ಕೂ ಇಂತಹದೊಂದು ಮರುಮತಾಂತರ ನಡೆದಿದೆಯೇ?’ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಸುದ್ದಿಯ ಬೆನ್ನು ಹತ್ತಿದಾಗ ಸ್ವಾರಸ್ಯಕರ ಸಂಗತಿಗಳು ಹೊರಬಿದ್ದಿವೆ.

Advertisements
9 10
‘ಪ್ರಜಾವಾಣಿ’ ವೆಬ್‌ ವರದಿ

‘ಗ್ರೌಂಡ್ ರಿಪೋರ್ಟ್’ಗೆ ತೆರಳಿದ್ದ ಸಂದರ್ಭದಲ್ಲಿ ‘ಈದಿನ ಡಾಟ್ ಕಾಮ್‌’ ಜೊತೆ ಮಾತನಾಡಿರುವ ನಾಗಸಂದ್ರದ ಅನೇಕ ದಲಿತ ಮಹಿಳೆಯರು ಮರುಮತಾಂತರದ ಮತ್ತೊಂದು ಮಗ್ಗಲನ್ನು ಪರಿಚಯಿಸಿದರು. “ರವಿನಾರಾಯಣ ರೆಡ್ಡಿಯವರೇ ಈ ಕಾರ್ಯಕ್ರಮದ ರೂವಾರಿ. ಕಳೆದ ವರ್ಷವೂ ಇಂತಹದ್ದೊಂದು ಕಾರ್ಯಕ್ರಮವನ್ನು ಮಾಡಿ, ಕೈಗೊಂದಿಷ್ಟು ದುಡ್ಡು ಕೊಟ್ಟು ಕಳುಹಿಸಿದ್ದರು. ಕಳೆದ ವರ್ಷ ಮರುಮತಾಂತರ ಆದವರೇ ಈ ವರ್ಷವೂ ಹೋಗಿದ್ದರು. ಆದರೆ ಈ ಸಲ ರವಿನಾರಾಯಣ ರೆಡ್ಡಿಯವರು ಕೊಟ್ಟ ಭರವಸೆ ಈಡೇರಿಸಿಲ್ಲ. ರೆಡ್ಡಿಯವರ ಆಣತಿಯಲ್ಲಿ ಕೆಲಸ ಮಾಡುವ ದಲಿತ ಸಮುದಾಯದ ಮಹಿಳೆ ಸಿದ್ದಮ್ಮ ಎಂಬವರು ನಮ್ಮನ್ನೆಲ್ಲ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದರು. ಪೇಪರ್‌ನಲ್ಲಿ ಸುದ್ದಿ ಬಂದ ಮೇಲೆ ದುಡ್ಡು ಕೊಡುವ ಭರವಸೆ ನೀಡಿದ್ದರು. ಆದರೆ ಏನೂ ಕೊಟ್ಟಿಲ್ಲ” ಎಂದರು ಹೆಸರು ಹೇಳಲಿಚ್ಛಿಸದ ಮಹಿಳೆಯರು.

ಇದನ್ನೂ ಓದಿರಿ: ಏಕಕಾಲಕ್ಕೆ ಮಳೆಗೂ ಬರಕ್ಕೂ ಸಿಲುಕಿದ ನಾಡು: ಜಲಾಶಯ ತುಂಬಿದರೂ ಬೆಳೆ ನಾಶದ ಭೀತಿಯಲ್ಲಿ ರೈತರು

ದಲಿತರೇ ಬಹುಸಂಖ್ಯಾತರಾಗಿರುವ ನಾಗಸಂದ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಎಂಬತ್ತರ ದಶಕದಲ್ಲಿ ಭೂಮಾಲೀಕರ ವಿರುದ್ಧ ಸಿಡೆದೆದ್ದ ಇಲ್ಲಿನ ಜನರು, ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ‘ನಾಗಸಂದ್ರ ಭೂ ಹೋರಾಟ’ ನಡೆಸಿದ್ದು ಚಾರಿತ್ರಿಕವಾಗಿ ದಾಖಲಾದ ಘಟನೆ. ಊರಿನ ರೆಡ್ಡಿ ಸಮುದಾಯದ ಎರಡು ಬಲಿಷ್ಠ ಕುಟುಂಬಗಳ ಅಡಿಯಾಳಾಗಿದ್ದ 120 ಜನ ಜೀತಗಾರರಿಗೆ ಬಿಡುಗಡೆ ದೊರಕಿಸಿತ್ತು ಅಂದಿನ ಹೋರಾಟ.

1 40
ನಾಗಸಂದ್ರ ಗ್ರಾಮ

ಅಷ್ಟೇ ಅಲ್ಲ ಗೌರಿಬಿದನೂರು ವಿಧಾನಸಭಾ ಕ್ಷೇತ್ರವನ್ನು ನಾಗಸಂದ್ರ ಗ್ರಾಮದವರೇ ಹೆಚ್ಚು ಸಲ ಪ್ರತಿನಿಧಿಸಿದ್ದಾರೆಂಬುದು ಗಮನಾರ್ಹ ಸಂಗತಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎನ್ನಲಾದ ಎಂ.ಸಿ.ನಾಗಯ್ಯ ರೆಡ್ಡಿ, ಜೆಡಿಎಸ್‌ನಿಂದ ಶಾಸಕಿಯಾಗಿದ್ದ ಜ್ಯೋತಿ ರೆಡ್ಡಿ ಮತ್ತು ಸತತ ಐದು ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವ ಶಿವಶಂಕರ ರೆಡ್ಡಿ ಇದೇ ನಾಗಸಂದ್ರದವರು. ಈಗ ಮರುಮತಾಂತರದ ಕೇಂದ್ರಬಿಂದುವಾಗಿರುವ ರವಿನಾರಾಯಣ ರೆಡ್ಡಿಯವರು ಜ್ಯೋತಿ ರೆಡ್ಡಿಯವರ ಬಾಮೈದ. ಆದರೆ ಅತ್ತಿಗೆಯ ವಿರುದ್ಧ ಸಿಡಿದೆದ್ದು ಬಿಜೆಪಿ ಸೇರಿಕೊಂಡ ಬಳಿಕ ಅವರ ರಾಜಕಾರಣವೇನೂ ಮೇಲೆ ಏಳಲಿಲ್ಲ. ಗೌರಿಬಿದನೂರು ಕಾಂಗ್ರೆಸ್ ಮತ್ತು ಜನತಾದಳದ ಭದ್ರನೆಲೆ. ಇಲ್ಲಿ ಬಿಜೆಪಿಗೆ ಬೆಲೆ ಇಲ್ಲ. ಹೀಗಾಗಿ ರವಿನಾರಾಯಣ ರೆಡ್ಡಿ ಚುನಾವಣೆಗಳಲ್ಲಿ ಸೋತರು. ಕಳೆದ ಸಲ ಟಿಕೆಟ್ ಆಕಾಂಕ್ಷಿಯೂ ಆಗದೆ ದೂರ ಉಳಿದರು. ಆದರೆ ಬಿಜೆಪಿ ನಾಯಕರ ಸಖ್ಯದಲ್ಲಿ ರವಿಯವರು ಇರುವುದಂತೂ ಖಾತ್ರಿ. ಜನತಾದಳದ ಹಿನ್ನೆಲೆಯಿಂದ ಬಂದ ಅವರು, ಮೂಲತಃ ಆರ್‌ಎಸ್‌ಎಸ್‌ನವರಲ್ಲ. ಹೀಗಿರುವಾಗ ಯಾರನ್ನು ಮೆಚ್ಚಿಸಲು ಮರುಮತಾಂತರದ ಪ್ರಹಸನ ನಡೆಸುತ್ತಿದ್ದಾರೆ, ಇದರಿಂದ ಏನನ್ನು ಸಾಧಿಸಲು ಹೊರಟಿದ್ದಾರೆ, ರವಿನಾರಾಯಣ ರೆಡ್ಡಿಯವರಿಗೆ ಇದರಿಂದ ಆಗುವ ಅನುಕೂಲವಾದರೂ ಏನು ಎಂಬ ಚರ್ಚೆಗಳು ಸ್ಥಳೀಯರ ನಡುವೆ ನಡೆಯುತ್ತಿವೆ.

‘ಈದಿನ ಡಾಟ್ ಕಾಮ್‌’ ಜೊತೆ ಮಾತನಾಡಿರುವ ನಾಗಸಂದ್ರದ ಕ್ರೈಸ್ತ ಪಾಸ್ಟರ್ ಒಬ್ಬರು, “ಈ ಹಿಂದೆಯೂ ರವಿನಾರಾಯಣ ರೆಡ್ಡಿ ಮರುಮತಾಂತರ ಮಾಡಿಸುವ ನಾಟಕ ಆಡಿದ್ದರು. ಅದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಮತ್ತೊಂದು ಪ್ರಹಸನ ನಡೆದಿದೆ. ಕಳೆದ ಸಲ ಮರುಮತಾಂತರ ಕಾರ್ಯಕ್ರಮಕ್ಕೆ ಹೋದವರಿಗೆ ಐದು ಸಾವಿರ ದುಡ್ಡು, ಸೀರೆ ಅಥವಾ ಶರ್ಟ್, ಪಂಚೆ ವಿತರಿಸಿದ್ದರು. ಈ ಬಾರಿ ಏನೇನು ಕೊಟ್ಟಿದ್ದಾರೆಂದು ಗೊತ್ತಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರವಾಗದೆ ಇರುವವರನ್ನು ಕರೆದುಕೊಂಡು ಹೋಗಿ ಮರುಮತಾಂತರ ಮಾಡಿಸಿದ್ದಾರೆ. ನಮ್ಮ ಧಾರ್ಮಿಕ ಸಭೆಗಳಿಗೆ ಬರುವ ಯಾರೊಬ್ಬರೂ  ಮರುಮತಾಂತರ ಕಾರ್ಯಕ್ರಮಕ್ಕೆ ಹೋದವರಲ್ಲ. ಹೇಳಬೇಕೆಂದರೆ 2005ರ ಫೆಬ್ರವರಿಯಲ್ಲಿ ನಾಗಸಂದ್ರದ ದಲಿತ ಕಾಲೋನಿಯಲ್ಲಿ ಚರ್ಚ್‌ ಉದ್ಘಾಟನೆಯಾದಾಗ ಇದೇ ರವಿನಾರಾಯಣ ರೆಡ್ಡಿ ಟೇಪ್ ಕಟ್ ಮಾಡಿದ್ದರು” ಎಂದು ತಿಳಿಸಿದರು.

4 24
ನಾಗಸಂದ್ರದ ದಲಿತ ಕೇರಿಯಲ್ಲಿರುವ ಚರ್ಚ್

ಮರುಮತಾಂತರ: ಪೇಚಿಗೆ ಸಿಲುಕಿದರೆ ರವಿನಾರಾಯಣರೆಡ್ಡಿ?

ಇದೊಂದು ಮರು ಮತಾಂತರ ಪ್ರಹಸನ ಎಂಬ ಸುದ್ದಿ ಹೊರಬಿದ್ದ ಬಳಿಕ ಎನ್.ಎಂ. ರವಿನಾರಾಯಣ ರೆಡ್ಡಿಯವರು ಪೇಚಿಗೆ ಸಿಲುಕಿದಂತೆ ಭಾಸವಾಗುತ್ತಿದೆ. ‘ಈದಿನ’ದೊಂದಿಗೆ ಮಾತನಾಡಿದ ಅವರು ದ್ವಂದ್ವಮಯ ಹೇಳಿಕೆಗಳನ್ನು ನೀಡಿದರು. ಮಾತಿನ ಆರಂಭದಲ್ಲಿ ಮರುಮತಾಂತರದ ಮುಂದಾಳತ್ವ ವಹಿಸಿರುವುದಾಗಿ ಒಪ್ಪಿಕೊಂಡರೂ, ನಂತರದಲ್ಲಿ ಜಾರಿಗೊಂಡರು.

ಈ ದಿನ: ವಿದುರಾಶ್ವತ್ಥದಲ್ಲಿ ಮರುಮತಾಂತರ ಮಾಡಿಸಿರುವ ಸುದ್ದಿಯಾಗಿದೆ. ಎಷ್ಟು ಜನರನ್ನು ಹಿಂದೂಧರ್ಮಕ್ಕೆ ಕರೆತರಲಾಯಿತು?

ರವಿನಾರಾಯಣ ರೆಡ್ಡಿ: ಒಟ್ಟು ಹದಿನೆಂಟು ಕುಟುಂಬಗಳು ಹಿಂದೂಧರ್ಮಕ್ಕೆ ಮರಳಿವೆ. ಹದಿನೈದು ಫ್ಯಾಮಿಲಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು. 3 ಕುಟುಂಬಗಳು ಕೊಡಿಗೇನಹಳ್ಳಿಯಿಂದ ಬರಬೇಕಿತ್ತು. ಆದರೆ ಬಸ್ ಮಿಸ್ಸಾಗಿ ಅವರು ಬರಲಾಗಲಿಲ್ಲ. ಸುಮಾರು ದಿನಗಳಿಂದ ಈ ಕಾರ್ಯಕ್ರಮಗಳನ್ನು ನಿರಂತರ ಮಾಡುತ್ತಿದ್ದೇನೆ.

ravi narayarana reddy
ರವಿನಾರಾಯಣ ರೆಡ್ಡಿ

ಈ ದಿನ: ಇದು ಕಾನೂನಾತ್ಮಕವಾಗಿ ನಡೆಸಿರುವ ಮರುಮತಾಂತರವೇ? ಏನಾದರೂ ದಾಖಲೆ ಇದೆಯೇ?

ರವಿನಾರಾಯಣ: ಈಗ ಮರುಮತಾಂತರ ಆದವರ್ಯಾರೂ ತಮ್ಮ ಮೂಲ ಜಾತಿ ದೃಢೀಕರಣ ಪತ್ರವನ್ನು ಬದಲಿಸಿದವರಲ್ಲ. ಹಿಂದೂ ಧರ್ಮದ ಆಚಾರಗಳನ್ನು ಬಿಟ್ಟು ಕ್ರಿಶ್ಚಿಯನ್ ಆಚರಣೆಗಳನ್ನು ಮಾಡುತ್ತಿದ್ದರು, ಚರ್ಚ್‌ಗಳಿಗೆ ಹೋಗುತ್ತಿದ್ದರು. ದಾಖಲೆಯಲ್ಲಿ ದಲಿತರೆಂದೇ ನಮೂದಾಗಿದ್ದಾರೆ. ಇದು ಕಾನೂನಾತ್ಮಕವಾದ ಮತಾಂತರವಲ್ಲ.

ಈ ದಿನ: ಇದು ‘ಮರುಮತಾಂತರದ ಡ್ರಾಮಾ’ ಎಂಬ ಆರೋಪ ಬಂದಿದೆ. ಏನಂತೀರಿ?

ರವಿ: ಮತಾಂತರವೂ ಒಂದು ರೀತಿಯಲ್ಲಿ ಡ್ರಾಮಾವೇ ಆಗಿದೆ. ಕ್ರಿಶ್ಚಿಯನ್‌ಗೆ ಹೋದವರೆಲ್ಲ ದಾಖಲೆ ಸಹಿತ ಕ್ರಿಶ್ಚಿಯನ್ನರಾಗಿರುವುದಿಲ್ಲ.

ಈ ದಿನ: ನೀವು ದುಡ್ಡುಕೊಟ್ಟು ಕರೆದುಕೊಂಡು ಹೋಗಿ ಮರುಮತಾಂತರ ಡ್ರಾಮಾ ಮಾಡಿಸಿದ್ದಾರೆಂಬ ಮಾಹಿತಿ ಬಂದಿದೆ. ಕಳೆದ ವರ್ಷವೂ ಹೀಗೆಯೇ ನಾಟಕ ನಡೆದಿತ್ತಂತೆ?

ರವಿ: ನಾನು ಯಾರಿಗೂ ಒಂದು ರೂಪಾಯಿ ಕೊಟ್ಟಿಲ್ಲ. ದಾನಿಗಳು ಹತ್ತು ಪಂಚೆಗಳನ್ನು ವಿತರಿಸಿದ್ದಾರಷ್ಟೇ.

ಈ ದಿನ: 2005ನೇ ಇಸವಿಯಲ್ಲಿ ನಾಗಸಂದ್ರ ಚರ್ಚ್‌ ಉದ್ಘಾಟನೆಯಾದಾಗ ನೀವು ಟೇಪ್ ಕಟ್ ಮಾಡಿಸಿದ್ದು ನಿಜವೇ?

ರವಿ: ಇದೊಂದು ಪ್ರಮಾದವನ್ನು ನಾನು ಮಾಡಿಬಿಟ್ಟೆ. ಆ ಸಂದರ್ಭದಲ್ಲಿ ಪ್ರಕರಣಗಳನ್ನು ಎದುರಿಸಿ, ಜೈಲಿನಿಂದ ಬಿಡುಗಡೆಯಾಗಿ ಆಗಷ್ಟೇ ಊರಿಗೆ ಬಂದಿದ್ದೆ. ಕೆಲವು ಜನರು ಚರ್ಚ್ ಕಟ್ಟದಂತೆ ಗಲಾಟೆ ಮಾಡುತ್ತಿದ್ದರು. ನಾನು ಎಲ್ಲರನ್ನೂ ಸುಮ್ಮನಿರಿಸಿದೆ. ಮುಂದಾಗುವ ಪರಿಣಾಮಗಳು ನನಗೆ ಅಂದು ತಿಳಿದಿರಲಿಲ್ಲ. ಏನೋ ಜೀವನ ಮಾಡಲು ಬಂದಿದ್ದಾರೆಂದು ಚರ್ಚ್ ಕಟ್ಟಲು ಅವಕಾಶ ಮಾಡಿಕೊಟ್ಟಿದ್ದೇ ನಾನು. ಇದೊಂದು ತಪ್ಪು ಮಾಡಿಬಿಟ್ಟೆ.

ಈ ದಿನ: ದಲಿತರನ್ನು ಮರುಮತಾಂತರ ಮಾಡಿ, ಯಾವ ಜಾತಿಗೆ ಸೇರಿಸಿದಿರಿ?

ರವಿ: ಯಾವ ಜಾತಿಯಿಂದ ಕ್ರಿಶ್ಚಿಯನ್‌ಗೆ ಹೋಗಿದ್ದರೋ ಅದೇ ಜಾತಿಗೆ ಅವರನ್ನು ವಾಪಸ್ ಕರೆದುಕೊಂಡು ಬಂದಿದ್ದೇವೆ. ಇದು ಬಹಳ ಸಿಂಪಲ್.

ಈ ದಿನ: ಅಸ್ಪೃಶ್ಯತೆ ನೋವಿನಿಂದ ಬೇಸತ್ತು ಬೇರೆ ಧರ್ಮಕ್ಕೆ ಹೋಗಿರುತ್ತಾರೆ. ನೀವು ಮತ್ತೆ ಅದೇ ಅಸ್ಪೃಶ್ಯತೆಗೆ ವಾಪಸ್‌ ಕರೆದುಕೊಂಡು ಬರುತ್ತೀರಾ?

ರವಿ: ಅಸ್ಪೃಶ್ಯತೆ ನೋವು ಎಂಬುದು ಬರೀ ಸುಳ್ಳು. ತಂತಾನೇ ಅಸ್ಪೃಶ್ಯತೆ ಕಡಿಮೆಯಾಗಿದೆ.

ಈ ದಿನ: ಅಸ್ಪೃಶ್ಯತೆ ನಿವಾರಣೆಗಾಗಿ ಯಾವ ಪ್ರಯತ್ನ ಮಾಡಿದ್ದೀರಿ? ನಾಗಸಂದ್ರದಲ್ಲಿ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ?

ರವಿ: ನಾನು ಅಂತಹ ಯಾವುದೇ ಪ್ರಯತ್ನ ಮಾಡಿಲ್ಲ. ಹಳ್ಳಿಗಳಲ್ಲಿ ತಂತಾನೇ ಅಸ್ಪೃಶ್ಯತೆ ಕಡಿಮೆಯಾಗಬೇಕು. ಒತ್ತಾಯದಿಂದ ಅಸ್ಪೃಶ್ಯತೆ ನಿವಾರಣೆ ಮಾಡಲು ಸಾಧ್ಯವಿಲ್ಲ. ಕ್ರಿಶ್ಚಿಯನ್‌ಗೆ ಹೋದರೂ, ಇಸ್ಲಾಂಗೆ ಹೋದರೂ ದಲಿತರು ದಲಿತರಾಗಿಯೇ ಉಳಿದಿರುತ್ತಾರೆ.

ಈ ದಿನ: ಸೆಕ್ಯುಲರ್ ಆಗಿದ್ದವರು ಈಗ ಕಮ್ಯುನಲ್ ಆಗಿದ್ದೀರೆಂಬ ಟೀಕೆಗಳು ಬರುತ್ತಿವೆ.

ರವಿ: ಜನತಾ ಪಾರ್ಟಿಯಲ್ಲಿದ್ದಾಗಲೂ ಈಗಲೂ ನಾನು ಒಂದೇ ರೀತಿ ಇದ್ದೀನಿ. ನನ್ನ ಹಿಸ್ಟರಿ ನಿಮಗೆ ಗೊತ್ತಿಲ್ಲ. ನಾನು ಮುಸ್ಲಿಂ ವಿರೋಧಿಯಲ್ಲ. ಮುಸ್ಲಿಮರಲ್ಲಿ ಅನೇಕರು ನನ್ನ ಬೆಂಬಲಕ್ಕೆ ಇದ್ದಾರೆ. ಬಿಜೆಪಿಗೆ ಮತ ಹಾಕದಿದ್ದರೂ ನನ್ನನ್ನು ಗೌರವಿಸುತ್ತಾರೆ. ನನ್ನ ಮಗನ ಕಾರ್ ಡ್ರೈವರ್‌ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಆಗಿದ್ದಾನೆ. ಅವನನ್ನೇ ನಾನು ಮರುಮತಾಂತರ ಮಾಡಿಲ್ಲ. ಆಮೇಲೆ ಬಿಜೆಪಿಗೂ ನನ್ನ ಗುಣಕ್ಕೂ ಸಂಬಂಧವೇ ಇಲ್ಲ.

ಈ ದಿನ: ಮರುಮತಾಂತರ ನಾಟಕ ಆಡಿಸಿದ್ದು ನೀವೇ ಎಂದು ಹೇಳಲು ಜನ ಹೆದರುತ್ತಿದ್ದಾರೆ…

ರವಿ: ಯಾರಾದರೂ ಒಬ್ಬರು ಬಂದು, ಮರುಮತಾಂತರಕ್ಕೆ ನಾನೇ ಕರೆದುಕೊಂಡು ಹೋದೆ ಎಂದು ಹೇಳಿದರೆ ನೀವು ಹೇಳಿದ ಶಿಕ್ಷೆ ಅನುಭವಿಸುತ್ತೇನೆ. ಅವರಾಗಿಯೇ ಮಾತನಾಡಿಕೊಂಡು ಬಂದು ಮತಾಂತರ ಆಗಿದ್ದಾರೆ. ಅಂದು ಆ ಮಾರ್ಗದಲ್ಲಿ ಹೋಗುತ್ತಿದ್ದೆ. ನನ್ನನ್ನು ನೋಡಿ ಕರೆದರು. ಕಾರ್ಯಕ್ರಮದಲ್ಲಿ ಭಾಗಿಯಾದೆ.

ಈ ದಿನ: ಪ್ರಜಾವಾಣಿಯಲ್ಲಿ ನಿಮ್ಮ ಹೇಳಿಕೆ ಬಂದಿದೆ. ನೀವಾಗಿಯೇ ಈ ಕಾರ್ಯಕ್ರಮ ನಡೆಸಿಲ್ಲವಾದರೆ, ಹೇಳಿಕೆ ಹೇಗೆ ಬಂತು?

ರವಿ: ನಾನು ಯಾವ ಪತ್ರಿಕೆಯವರ ಜೊತೆಯೂ ಮಾತನಾಡಿಲ್ಲ. ಈ ವಿಚಾರವಾಗಿ ಮೊದಲ ಸಲ ಮಾತನಾಡುತ್ತಿರುವುದು ನಿಮ್ಮೊಂದಿಗೆ ಮಾತ್ರ. ನಾನು ವಾಟ್ಸಾಪ್‌, ಫೇಸ್‌ಬುಕ್ ಬಳಸುವುದಿಲ್ಲ. ನನ್ನ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವಿಚಾರಗಳನ್ನು ಹಾಕಿ, ನನಗೆ ತೋರಿಸುತ್ತಾರೆ. ಯಾರೋ ಹಂಚಿಕೊಂಡಿದ್ದನ್ನು ಪತ್ರಿಕೆಯವರು ಹಾಕಿರಬಹುದು. ನಾನು ಹೇಳದೆ ಇರುವ ವಿಚಾರಗಳು ವರದಿಯಲ್ಲಿ ಬಂದಿವೆ. ಶೇಕಡಾ 100ರಷ್ಟು ಖಚಿತವಾಗಿ ಹೇಳುವೆ. ನಾವು ಯಾವ ಪ್ರೆಸ್‌ನವರ ಜೊತೆಯೂ ಮಾತನಾಡಿಲ್ಲ.

ಈ ದಿನ: ಮರುಮತಾಂತರದ ಕಾರ್ಯಕ್ರಮ ಸಂಘಟಿಸಿದ್ದವರು ಯಾರು?

ರವಿ: ಅದೆಲ್ಲ ಏಕೆ ಬಿಡಿ.. (ಸ್ವಲ್ವ ಸಮಯದ ನಂತರ..) ಎಸ್‌ಸಿಗಳೇ ಈ ಕಾರ್ಯಕ್ರಮ ಆಯೋಜಿಸಿದ್ದರು. ಅವರ ಉದ್ದೇಶ ಏನಿತ್ತೋ ಗೊತ್ತಿಲ್ಲ. ಬೇರೆ ಕಾರ್ಯಕ್ರಮದ ನಿಮಿತ್ತ ಅತ್ತಕಡೆ ಹೋಗುತ್ತಿದ್ದೆ. ಅವರು ಕರೆದರು. ಹೋದೆನಷ್ಟೇ.

ಈ ದಿನ: ಈ ಹಿಂದೆಯೂ ಮರುಮತಾಂತರ ಕಾರ್ಯಕ್ರಮ ಮಾಡಿರುವುದಾಗಿ ನೀವೇ ಆರಂಭದಲ್ಲಿ ಹೇಳಿದಿರಿ.

ರವಿ: ನಾನು ಈ ಹಿಂದೆ ಎರಡು ಕಾರ್ಯಕ್ರಮ ಮಾಡಿದ್ದುಂಟು. ಮದುವೆ ಮಾಡಿಕೊಂಡು ತಮ್ಮ ಧರ್ಮಕ್ಕೆ ಮತಾಂತರ ಆಗಬೇಕೆಂದು ಒತ್ತಾಯಿಸುತ್ತಿದ್ದನ್ನು ತಡೆಗಟ್ಟಿದ್ದೇನೆ.

ಇದನ್ನೂ ಓದಿರಿ: ಪಂಚಾಚಾರ್ಯರೇ, ವೀರಶೈವ-ಲಿಂಗಾಯತ ಎರಡೂ ಒಂದೇ ಹೇಗೆ?

-ಹೀಗಿತ್ತು ರವಿನಾರಾಯಣ ರೆಡ್ಡಿಯವರೊಂದಿಗಿನ ಸಂಭಾಷಣೆ. ಭಾನುವಾರ ನಡೆದ ಮರುಮತಾಂತರ ಕಾರ್ಯಕ್ರಮಕ್ಕೂ ನನಗೂ ಸಂಬಂಧವಿಲ್ಲ ಎನ್ನುವುದು ಅವರ ವಾದ. ಆದರೆ 15 ಕುಟುಂಬಗಳು ಮರುಮತಾಂತರ ಆಗಿವೆ, ಇನ್ನೂ ಮೂರು ಫ್ಯಾಮಿಲಿಗಳು ಬರಬೇಕಿತ್ತು ಎನ್ನುವುದು ಕೂಡ ಅವರದ್ದೇ ಮಾತು.

ತಮ್ಮ ಗ್ರಾಮದಲ್ಲಿ ಸುತ್ತ ನಡೆದಿರುವ ಈ ವಿದ್ಯಮಾನಕ್ಕೆ ಸಂಬಂಧಿಸಿದಂತೆ ‘ಈದಿನ’ದೊಂದಿಗೆ ಮಾಜಿ ಸಚಿವ ಎನ್‌.ಎಚ್. ಶಿವಶಂಕರ್ ರೆಡ್ಡಿಯವರು ಮಾತನಾಡಿ, ರವಿನಾರಾಯಣರ ನಡೆಯನ್ನು ಕಟುವಾಗಿ ಟೀಕಿಸಿದರು.

10 10
ಎನ್‌.ಎಚ್. ಶಿವಶಂಕರ ರೆಡ್ಡಿ

“ಮರುಮತಾಂತರ ಎಂಬುದು ಬಿಜೆಪಿಯವರ ಅಸಲಿ ಸಿದ್ಧಾಂತ. ಅದರ ಭಾಗವಾಗಿ ನಾಟಕ ನಡೆದಿರುವಂತೆ ಕಾಣುತ್ತಿದೆ. ದಲಿತರೇಕೆ ಮತಾಂತರ ಆಗಿದ್ದಾರೆಂದು ರವಿನಾರಾಯಣ ರೆಡ್ಡಿಯವರು ತಿಳಿದುಕೊಳ್ಳಬೇಕು. ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ನಮ್ಮಲ್ಲಿರುವ ಶ್ರೇಣಿಕೃತ ಜಾತಿ ವ್ಯವಸ್ಥೆಯಿಂದ ಬೇಸತ್ತು ಸ್ವ-ಇಚ್ಛೆಯಿಂದ ಮತಾಂತರ ಆಗಿರಬಹುದು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾವುದೇ ಧರ್ಮವನ್ನು ಅನುಸರಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಹಿಂದೂ ನಾವೆಲ್ಲ ಒಂದು ಎನ್ನುವವರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲಿ. ಬಿಜೆಪಿ, ಆರ್‌ಎಸ್‌ಎಸ್‌ನವರು ಆ ಬಗ್ಗೆ ಕೆಲಸ ಮಾಡಲಿ. ನಾವೆಲ್ಲ ಹಿಂದೂ ಎನ್ನುತ್ತಾರೆ, ಜಾತಿ ತಾರತಮ್ಯ ಮಾಡುತ್ತಾರೆ. ಇದರಿಂದ ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿರಿ: ಮುಂಗಾರು ಅಧಿವೇಶನದ ವೇಳೆಯೇ ಮೋದಿ ವಿದೇಶ ಪ್ರವಾಸ: ವಿಪಕ್ಷಗಳ ಎದುರಿಸಲಾಗದೆ ಪಲಾಯನವೇ?

“ನಮ್ಮೂರಲ್ಲಿ ಎಲ್ಲ ಜಾತಿ ಜನರೂ ಇದ್ದಾರೆ. ರವಿನಾರಾಯಣ ರೆಡ್ಡಿಯವರು ಎಲ್ಲ ಜಾತಿಯವರನ್ನು ಒಂದುಗೂಡಿಸಲಿ. ಗಾಯಕ್ಕೆ ಸರಿಯಾದ ಮದ್ದು ಕಂಡುಹಿಡಿಯಲಿ. ಬೂಟಾಟಿಕೆ ಬಿಡಲಿ” ಎಂದರು.

ಒಟ್ಟಾರೆಯಾಗಿ ಹೇಳುವುದಾದರೆ ವಿದುರಾಶ್ವತ್ಥದಲ್ಲಿ ಭಾನುವಾರ ನಡೆದಿರುವುದು ನಕಲಿ ಮರುಮತಾಂತರ ಎಂಬುದು ಮೇಲು ನೋಟಕ್ಕೆ ಸ್ಪಷ್ಟವಾಗುತ್ತಿದೆ. ಯಾರಾದರೂ ತಾವಾಗಿಯೇ ಮರುಮತಾಂತರ ಆಗಿದ್ದಾರೆಯೇ ಎಂದು ಪರಿಶೀಲಿಸಿದಾಗ, ಅಂತಹ ಯಾವುದೇ ಸುಳಿವು ಸಿಗುವುದಿಲ್ಲ. ಇಂತಹದೊಂದು ಕಾರ್ಯಕ್ರಮ ನಡೆಸಿದ್ದೇವೆಂದು ಸ್ಥಳೀಯ ಬಿಜೆಪಿ ಮುಖಂಡರ್ಯಾರಾದರೂ ಹೇಳುತ್ತಿದ್ದರೆ, ಆರ್‌ಎಸ್‌ಎಸ್‌ನವರಿಗೆ ಇವರು ಚೆನ್ನಾಗಿ ಚಳ್ಳೇಹಣ್ಣು ತಿನ್ನಿಸುತ್ತಿದ್ದಾರೆಂದೇ ತಿಳಿಯಬೇಕಷ್ಟೇ ಎಂಬುದು ಸ್ಥಳೀಯರ ಅಭಿಪ್ರಾಯ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X