ಕೋಲಾರ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದ ವರ್ಗಾ ಅಟ್ಯಾಚ್ಮೆಂಟ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಒತ್ತಾಯಿಸಿ ಕಾರ್ಖಾನೆಯ ಕಾರ್ಮಿಕರು, ಸಿಐಟಿಯು ಮುಖಂಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮಾಲೂರು ಕೈಗಾರಿಕಾ ಪ್ರದೇಶದ ವರ್ಗಾ ಅಟ್ಯಾಚ್ಮೆಂಟ್ ಕಾರ್ಖಾನೆಯಿಂದ ಬೈಕ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ಮಿಕರು ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ದ ಘೋಷಣೆ ಕೂಗಿ ಮಾಲೀಕರ ಧೋರಣೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಹೆಚ್ ಎನ್ ಗೋಪಾಲಗೌಡ ಮಾತನಾಡಿ, “ಏಕಾಏಕಿ ಮಾಲೀಕ ವರ್ಗವು ಕೈಗಾರಿಕೆ ಮುಚ್ಚುವುದಾಗಿ ನೋಟೀಸ್ ನೀಡಿದ್ದು, ಸುಮಾರು 20 ವರ್ಷದಿಂದ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಸುಮಾರು 81 ಖಾಯಂ ಕಾರ್ಮಿಕರನ್ನು ಕೆಲಸದಿಂದ ಹೊರಹಾಕಲು ಮುಂದಾಗಿದೆ. ಇದು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಕೂಡಲೇ ಕಾರ್ಖಾನೆಯನ್ನು ಮುಚ್ಚುವ ಆದೇಶವನ್ನು ವಾಪಸು ಪಡೆದು ಕಾರ್ಮಿಕರ ಹಿತ ಕಾಪಾಡಬೇಕು” ಎಂದು ಒತ್ತಾಯಿಸಿದರು.
“ಈ ಕೈಗಾರಿಕೆಯಲ್ಲಿ ಬುಲ್ಡೋಜರ್‌ಗೆ ಬೇಕಾಗುವ ಬಿಡಿ ಭಾಗಗಳನ್ನು ತಯಾರಿಸಿ ವಿದೇಶಕ್ಕೆ ಕಳಸಲಾಗುತ್ತದೆ. ಇದರಿಂದಾಗಿ ಲಾಭದಾಯಕವಾಗಿ ಕಂಪನಿ ನಡೆಯುತ್ತಿದ್ದರೂ ಕಾರ್ಮಿಕರಿಗೆ ಯಾವುದೇ ರೀತಿ ಸೌಲಭ್ಯ ನೀಡಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಮಾಲೀಕರು ಮಾತ್ರ ಕಾರ್ಮಿಕರ ಹಿತಕಾಪಾಡಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಸಭೆಗಳಾಗಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಏಕಾಏಕಿ ಕಾರ್ಖಾನೆಯನ್ನು ಮುಚ್ಚಲು ನಿರ್ಧರಿಸಿದ್ದಾರೆ” ಎಂದು ಆರೋಪಿಸಿದರು.
ಇದನ್ನೂ ಓದಿ: ಕೋಲಾರ | ಮನೆಯಲ್ಲೇ ಕೆಮಿಕಲ್ ಮಿಶ್ರಿತ ಹಾಲು ತಯಾರಿ; ದೂರು ದಾಖಲು
ಅದೇ ರೀತಿ ʼವರ್ಗ ಕಂಪನಿʼಯಿಂದ ʼವೀರ್ಯಾ ಕಂಪನಿʼಗೆ ಹೆಸರು ಬದಲಾವಣೆ ಮಾಡಲು ಹೊರಟಿದ್ದರು. ಇದರಿಂದಾಗಿ ಕಂಪನಿಯ ಹೆಸರಿನಿ ಗೊಂದಲದಿಂದಾಗಿ ಕಾರ್ಮಿಕರಿಗೆ ತೊಂದರೆಯಾಗಿದೆ. ಕೂಡಲೇ ಜಿಲ್ಲಾಧಿಕಾರಿ ಮಾಲೀಕ ವರ್ಗವನ್ನು ಕರೆಸಿ ವರ್ಗ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಖಾಯಂ ಕಾರ್ಮಿಕರಿಗೆ ಕೈಗಾರಿಕೆಯಲ್ಲಿ ಕೆಲಸ ಮುಂದುವರೆಸುವಂತೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಪದಾಧಿಕಾರಿಗಳಾದ ಪ್ರಭಾಕರ್, ಶ್ರೀಧರ, ಅಂಜನಪ್ಪ, ಅಶ್ವಥ್, ಸುರೇಶ್ ಕುಮಾರ್, ಹರೀಶ್, ಸಿಐಟಿಯು ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಪಿ.ಆರ್ ಸೂರ್ಯನಾರಾಯಣ, ವಿಜಯಕೃಷ್ಣ, ಹೆಚ್.ಬಿ ಕೃಷ್ಣಪ್ಪ, ಅಶೋಕ್, ಭೀಮರಾಜ್, ಚಲಪತಿ, ವೀರಭದ್ರ, ಶಿವಾನಂದ್, ವೆಂಕಟಪ್ಪ ಮುಂತಾದವರು ಇದ್ದರು.