ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿನ ಅಕ್ಕಮಹಾದೇವಿಯವರ ಅರಬೆತ್ತಲೆ ಮೂರ್ತಿ ತೆರವುಗೊಳಿಸಿ, ಶುಭ್ರ ವಸ್ತ್ರದ ಸೀರೆಯುಟ್ಟ ಅಕ್ಕನ ಮೂರ್ತಿ ಸ್ಥಾಪಿಸಿ ಎಂದು ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಶಶಿಕಾಂತ ಆರ್ ಪಟ್ಟಣ ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಮಾತನಾಡಿದ ಅವರು, “ವಿರಾಗಿಣಿ ಅಕ್ಕಮಹಾದೇವಿ ಎಂದೂ ಅರೆಬೆತ್ತಲೆ ಆಗಿರಲಿಲ್ಲ. ಶರಣ ಸಂಕುಲದ ಶ್ರೇಷ್ಠ ಅನುಭವಿಯಾಗಿದ್ದ ಅವರು ಅರೆಬತ್ತಲೆಯಾಗಿ ಬಂದಿಲ್ಲ ಎನ್ನುವುದಕ್ಕೆ ಹಲವು ಉಲ್ಲೇಖ ಮತ್ತು ಪುರಾವೆಗಳಿವೆ. ಅರೆಬೆತ್ತಲೆ ಮೂರ್ತಿಯು ಶರಣರಿಗೆ ಹಾಗೂ ವಿರಾಗಿಣಿ ಅಕ್ಕಮಹಾದೇವಿಗೆ ಮಾಡಿದ ದ್ರೋಹ ಮತ್ತು ಅಪಮಾನವಾಗಿದೆ” ಎಂದರು.
“ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಬಸವ ಅಧ್ಯಯನ ಪೀಠ ಆರಂಭಿಸಬೇಕು ಮತ್ತು ಸರ್ಕಾರ ಅನುದಾನ ಒದಗಿಸಬೇಕು. ಬಸವೇಶ್ವರರ ಜನ್ಮಸ್ಥಳವಾದ ವಿಜಯಪುರ ಜಿಲ್ಲೆಯ ಹೆಸರನ್ನು ಬಸವೇಶ್ವರ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕು. ವಚನಗಳ ಸಂರಕ್ಷಣೆಗೆ ಶ್ರಮಿಸಿದ ಫ.ಗು. ಹಳಕಟ್ಟಿ ಅವರ ಹೆಸರಿನಲ್ಲಿ ‘ಪಂಪ ಪ್ರಶಸ್ತಿ’ ನೀಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ವಿಜಯಪುರ | ದಲಿತರ ಭೂಮಿ, ವಸತಿ ಹಕ್ಕಿಗಾಗಿ ನಾಳೆ ಧರಣಿ
“ಪಂಚಾಚಾರ್ಯರಿಗೂ ಬಸವತತ್ವಕ್ಕೂ ಯಾವುದೇ ಸಂಬಂಧವಿಲ್ಲ. ಎರಡರ ನಡುವೆ ಸಾಕಷ್ಟು ಭಿನ್ನತೆ ಇದೆ. ಬಸವಣ್ಣ ಎಲ್ಲಿಯೂ ವೀರಶೈವ ಪದ ಬಳಸಿಲ್ಲ. ವೀರಶೈವ ಪದ ಬಳಕೆ 1386ರಲ್ಲಿ ಬಂದಿದೆ. ಅದಕ್ಕೂ ಮೊದಲು ಇರಲಿಲ್ಲ. ಬಸವಣ್ಣ ಹಿಂದೂ ಅಥವಾ ವೀರಶೈವ ವಿರೋಧಿಯಲ್ಲ. ಹಾಗೆಯೇ ಬಸವಣ್ಣ ವೀರಶೈವನು ಅಲ್ಲ. ಹಿಂದೂ ಅಲ್ಲ” ಎಂದು ಹೇಳಿದರು.
ಈ ವೇಳೆ ಬಸವನುಯಾಯಿಗಳು ಹಾಗೂ ಮುಖಂಡರು ನಿಯೋಗದಲ್ಲಿ ಇದ್ದರು.