ಹಳ್ಳಿ ಪುರಾಣ | ಹಾವಿನ ಕಾಟ ಮತ್ತು ಅಜ್ಜಿಯ ಪೀಕಲಾಟ

Date:

Advertisements

ಹೆಡೆ ಎತ್ತಿ ನಿಂತಿದ್ದ ಹಾವು ಅಜ್ಜಿಯನ್ನು ಮೂಲೆಗೆ ಸೇರಿಸಿ ಮಿಸುಗಾಡದಂತೆ ನಿಲ್ಲಿಸಿಬಿಟ್ಟಿತ್ತು. ಅಜ್ಜಿಗೆ ಇನ್ನೇನು ತನ್ನ ಕತೆ ಮುಗಿಯಲಿದೆ ಎನ್ನುವಷ್ಟು ಭಯವಾಗಿತ್ತು. ಆ ಸಮಯಕ್ಕೆ ಟೈಲರ್ ಸುಂದರ್ ಹಾವಿನ ಮೇಲೆ ಕಾಲೊರೆಸಲು ಇಟ್ಟಿದ್ದ ಗೋಣಿಯ ಚೀಲ ಎಸೆದ.‌‌‌‌‌ ಅದು ಅದರ ಹೆಡೆಯ ಮೇಲೆ ಬಿತ್ತು‌. ತಕ್ಷಣ ಕೈ ಮುಂದೆ ಚಾಚಿ ಅಜ್ಜಿಯನ್ನು ಮೂಲೆಯಿಂದ ಆಚೆಗೆ ಎಳೆದ.‌‌ ಅಜ್ಜಿ ನಡುಗುತ್ತಾ ತಲೆ ಮೇಲೆ ಕೈ ಇಟ್ಟು ಜೋರಾಗಿ ಬಿಕ್ಕಳಿಸಿ ಆಳುತ್ತಾ ಕುಳಿತು ಬಿಟ್ಟಳು.

ಎಂದಿನಂತೆ ಕಾಲೇಜಿಗೆ ಹೋಗಿ ಸಂಜೆ ಬಂದೆ. ಬರುವಷ್ಟರಲ್ಲಿ ಆಗಷ್ಟೇ ಆಶ್ರಮದ ಕಾರ್ಯಕ್ರಮಗಳ ಉಸ್ತುವಾರಿಗೆ ನೇಮಕವಾಗಿದ್ದ ರಾಜಾರಾಮ್ ಎನ್ನುವ ಅರುವತ್ತರ ಸುಮಾರಿನ ಅಜ್ಜ ಮುಂದಿನ ಗೇಟಿನ ಬಳಿ ನಮಗಾಗಿಯೇ ಕಾಯುವಂತಿತ್ತು. ಅಜ್ಜಿ ಎಲ್ಲಿಯೋ ಹೋಗಿದ್ದಳು. ರೀ ಸ್ವಾಮಿ! ಸಂಜೆ ಕೆಳಗಿನ ರೂಮುಗಳ, ಬಾತ್ ರೂಮ್ ಕಡೆ ಒಂದು ನಾಗರ ಹಾವು ಹೋಯಿತು. ಅದನ್ನು ಹುಡುಕಿದೆವು ಸಿಗಲಿಲ್ಲ, ಯಾವುದಕ್ಕೂ ಎಲ್ಲರಿಗೂ ತಿಳಿಸಿ ಅದಕ್ಕಾಗಿಯೇ ನಿಮಗೆ ಕಾಯುತ್ತಿದ್ದೆ ಎಂದು ಹೇಳಿ ಹೋದರು. ಎದೆಯಲ್ಲಿ ಡವ ಡವ ಶುರುವಾಯಿತು. ಮೊದಲೊಂದು ದಿನ ರೂಮಿನ ಮೂಲೆಯಲ್ಲಿ ಇದ್ದ ಶೂ ಒಳಗಡೆ ಸಣ್ಣದೊಂದು ಗೇಣಿನಷ್ಟಿರುವ ಕಟ್ಟಿನ ಮರಿಹಾವು ಸೇರಿತ್ತು. ಅದರ ಬಾಲ ಕಾಣಿಸುತ್ತಿದ್ದರಿಂದ ಶೂ ಆಚೆಗೆ ಎಸೆದಿದ್ದೆ, ಹಾವು ಹೊರ ಹೋದ ಮೇಲೆ, ಅದನ್ನು ಪರಿಶೀಲಿಸಿ ನಂತರ ಒಳಗೆ ಇಟ್ಟಿದ್ದೆ. ಈಗ ಇದು ನಾಗರ ಹಾವು.‌ ಮೊದಲೇ ಅದರ ಹೆಸರು ಕೇಳಿದರೇ ಭಯ. ರಾತ್ರಿ ಒಂಬತ್ತರ ಸುಮಾರಿಗೆ ಕೆಳಗಡೆ ಮಧ್ಯದ ರೂಮಿನ ಶಿವು ಬಂದ, ಆತ ರೂಮಿನ ಕೀ ತೆರೆಯುವ ಮುನ್ನವೇ, “ಲೋ ಶಿವು! ರಾಜಾರಾಮ್ ಹೇಳಿದ್ರು ಒಳಗಡೇ ಹಾವು ಬಂತಂತೆ ಹುಷಾರು” ಅಂದ್ರು. ಆಗ ಆತ “ಲೋ! ನಿನ್ನ ತರ್ಲೆ ಬುದ್ದಿ ಕಡಿಮೆ ಮಾಡು, ಇದು ಒಳ್ಳೆಯದಲ್ಲ” ಎಂದು ಹೇಳುತ್ತಲೇ ರೂಮಿನ ಕದ ತೆರೆದ ಮೂಲೆಯಲ್ಲಿ ಶೂ, ಕಸಬರಿಗೆ ಸರಿಸಿ ಸುತ್ತೆಲ್ಲಾ ಪರಿಶೀಲನೆ ಮಾಡತೊಡಗಿದ. ನಂತರ ಮಂಚದ ಕೆಳಗಿದ್ದ ಸ್ನಾನದ ಬಕೆಟ್ ಸ್ವಲ್ಪ ಜರುಗಿಸಿದ್ದಂತೆ ಶಬ್ದ ಕೇಳಿ ಚಕ್ಕನೆ ತಲೆ ಎತ್ತಿರುವ ಮುಕ್ಕಾಲು ಮಾರಿನಷ್ಟಿರುವ ನಾಗರ ಹಾವು. ಅದರ ತಲೆ ಮಂಚದ ತುದಿಗೆ ತಾಕುತ್ತಿದೆ. ಒಮ್ಮೆಲೇ ಜೋರಾಗಿ ಕಿರುಚಿ ರೂಮಿನಿಂದ ಒಂದೇ ನೆಗೆತಕ್ಕೆ ಹಾರಿ ಆಚೆ ಬಂದ. ಗಡ ಗಡ ನಡುಗುತ್ತಾ, “ಈ ರೂಮಿಗೆ ದೊಡ್ಡ ನಮಸ್ಕಾರ, ನಾನೀಗ ನೆಂಟರ ಮನೆಗೆ ಹೋಗ್ತಿದ್ದೀನಿ. ನೀನು ರೂಮಿನ ಬೀಗ ಹಾಕಿ, ಚಾವಿ ನಿನ್ನ ಹತ್ತಿರ ಇಟ್ಟುಕೋ” ಎಂದು ಹೇಳಿ ಬೈಕ್ ಹತ್ತಿ ಸ್ಟಾರ್ಟ್ ಮಾಡಿದ ಒಂದೇ ಕ್ಷಣಕ್ಕೆ ಮಾಯವಾದ.

ಅಲ್ಲೇ ಇದ್ದ ಒಂದು ಸಣ್ಣ ಕೋಲು ತೆಗೆದುಕೊಂಡು ಶಬ್ದ ಮಾಡತೊಡಗಿದೆ. ನಿಧಾನವಾಗಿ ಹಾವು ಹರಿದು ಬಂದು ರೂಮಿನ ಮುಂದೆ toilet ಚೇಂಬರಿನ ಮುಚ್ಚಳದಲ್ಲಿ ಇದ್ದ ಒಂದು ಸಂದಿಯ ಮೂಲಕ ಒಳ ಹೋಯಿತು. ಆತನ ರೂಮಿನ ಬೀಗ ಹಾಕಿ ನನ್ನ ಬಳಿ ಇಟ್ಟುಕೊಂಡೆ.

WhatsApp Image 2025 07 25 at 7.51.15 PM

ಇಷ್ಟು ರಾತ್ರಿಯಾದರೂ ಅಜ್ಜಿಯ ಸುಳಿವಿಲ್ಲ.‌ ಆಕೆ ಬಂದು ಮೆಟ್ಟಿಲು ಕೆಳಗಡೆ ಮಲಗಿದರೆ ಏನು ಗತಿ? ಮೇಲಿನ ಮಹಡಿಯ ಮೇಲೆ ಬಂದವನೇ ಬಹುಶಃ ಇಲ್ಲಿಗೆ ಹಾವು ಬರಲಾಗದು ಎಂದೂ ಮನಸ್ಸಿಗೆ ಸಮಧಾನ ಹೇಳಿಕೊಂಡರೂ ಭಯ ತುಸುವೂ ಕಡಿಮೆಯಾಗುತ್ತಿಲ್ಲ. ಪ್ರತಿದಿನ ರೂಮಿನ ಕಿಟಕಿಯನ್ನು ತೆರೆದಿಡುತ್ತಿದ್ದವನು ಅಂದು ಮುಚ್ಚಿ ಮಲಗಿದೆ. ಆ ಅಜ್ಹಿಯ ಕತೆಯೇನೋ ಅನ್ನುವ ಆತಂಕ ಬೇರೆ.‌ ನಿಧಾನಕ್ಕೆ ನಿದ್ದೆ ಆವರಿಸಿತು. ಅಂದು ಕಾಲೇಜಿನಲ್ಲಿ ಬೆಳ್ಳಿಗ್ಗೆ ಏಳಕ್ಕೆ ಪ್ರಾಯೋಗಿಕ ತರಗತಿಗಳು ಇದ್ದುದರಿಂದ ಆರಕ್ಕೆ ಎದ್ದು ನಿತ್ಯಕರ್ಮ, ಸ್ನಾನ ಮುಗಿಸಿ ರೂಮಿನ ಬಟ್ಟೆ ಹಾಕಿಕೊಳ್ತಾ ಇದ್ದೆ.‌ ಅಷ್ಟರಲ್ಲಿ ಅಜ್ಜಿ ಕೆಳಗೆ ಜೋರಾಗಿ ಕಿಟಾರನೇ ಚೀರಿದ ಶಬ್ದ.‌‌ ಕೆಳಗಡೆ ನಾನು ಮತ್ತು ಪಕ್ಕದ ರೂಮಿನ ಆಟೋ ನರಸಿಂಹ ದಡ ದಡ ಓಡಿ ಬಂದೆವು. ಆಗಷ್ಟೇ ಸ್ನಾನ ಮಾಡಲೆಂದು ಹೋಗಿದ್ದ ಅಜ್ಜಿ ಬಾತ್ ರೂಮಿನ ಹೊರಗಡೆ ಮೂಲೆಯಲ್ಲಿ ನಿಂತಿದೆ. ಆಕೆಯ ಎದುರುಗಡೆ ಹೆಡೆ ನಿಂತ ನಾಗರಹಾವು. ಈ ಮುಂಚೆ ನಾನು ಸ್ನಾನ ಮಾಡಲು ಹೋಗಿದ್ದಾಗ ಹಾವು ಬಾತ್ ರೂಮಿನ ತೊಟ್ಟಿಯಲ್ಲಿದ್ದದ್ದು ಖಚಿತವಾಯಿತು. ದೇವರಿಗೆ ನೂರೆಂಟು ನಮಸ್ಕಾರ ಸಲ್ಲಿಸಿದೆ. ಆಕೆ ಕೈ ಮುಗಿಯುತ್ತಾ ನನಗೇನು ಮಾಡಬೇಡ ನಾಗಪ್ಪ ನಿನ್ನ ದಮ್ಮಯ್ಯ ಎಂದೂ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾಳೆ. ಕೆಳಗಡೆ ಬಾತ್ ರೂಮ್ ಪಕ್ಕದ ಮೂಲೆಯ ರೂಮಿನಲ್ಲಿದ್ದ ಟೈಲರ್ ಸುಂದರ್ ಉಪಾಯ ಮಾಡಿ ಕಾಲು ಒರೆಸಲು ಇಟ್ಟಿದ್ದ ಗೋಣಿ ಚೀಲ ತಂದು ಹಾವಿನ ಮೇಲೆ ಎಸೆದ. ಅಜ್ಜಿ ಈಗ ದೇವರ ಮೇಲೆ ಭಾರ ಹಾಕಿ, ಹರಕೆ ಹೊತ್ತು ಜೀವದ ಉಳಿವಿಗಾಗಿ ಪ್ರಾರ್ಥಿಸುತ್ತಾ ಕಣ್ಣು ಮುಚ್ಚಿ ಗಡ ಗಡ ನಡುಗುತ್ತಾ ಆ ಮೂಲೆಯಲ್ಲಿಯೇ ನಿಂತಿತ್ತು.

ಹೆಡೆ ಎತ್ತಿ ನಿಂತಿದ್ದ ಹಾವು ಅಜ್ಜಿಯನ್ನು ಮೂಲೆಗೆ ಸೇರಿಸಿ ಮಿಸುಗಾಡದಂತೆ ನಿಲ್ಲಿಸಿಬಿಟ್ಟಿತ್ತು. ಅಜ್ಜಿಗೆ ಇನ್ನೇನು ತನ್ನ ಕತೆ ಮುಗಿಯಲಿದೆ ಎನ್ನುವಷ್ಟು ಭಯವಾಗಿತ್ತು. ಆ ಸಮಯಕ್ಕೆ ಟೈಲರ್ ಸುಂದರ್ ಹಾವಿನ ಮೇಲೆ ಕಾಲೊರೆಸಲು ಇಟ್ಟಿದ್ದ ಗೋಣಿಯ ಚೀಲ ಎಸೆದ.‌‌‌‌‌ ಅದು ಅದರ ಹೆಡೆಯ ಮೇಲೆ ಬಿತ್ತು‌. ತಕ್ಷಣ ಕೈ ಮುಂದೆ ಚಾಚಿ ಅಜ್ಜಿಯನ್ನು ಮೂಲೆಯಿಂದ ಆಚೆಗೆ ಎಳೆದ.‌‌ ಅಜ್ಜಿ ನಡುಗುತ್ತಾ ತಲೆ ಮೇಲೆ ಕೈ ಇಟ್ಟು ಜೋರಾಗಿ ಬಿಕ್ಕಳಿಸಿ ಆಳುತ್ತಾ ಕುಳಿತು ಬಿಟ್ಟಳು.”ದೇವ್ರೆ! ನಾಗಪ್ಪ ನಾನ್ ಜೀವಮಾನದಲ್ಲಿ ಯಾರಿಗೂ ಮೋಸ ಮಾಡಿಲ್ಲ, ಈ ತರಹ ಕಚ್ಚಲಿಕ್ಕೆ ಬಂದಿದೆಯಲ್ಲಾ ಸರೀನಾ?”.

ಇತ್ತ ನಿಧಾನಕ್ಕೆ ಹಾವು ಚೀಲದ ಕೆಳಗಿಂದ ಹರಿದು ಬಂದು ಬಾತ್‌ರೂಮ್ ಪಕ್ಕದಲ್ಲಿದ್ದ Indian toilet commode ಸೇರಿತು. ಎಲ್ಲಾ ಆರು ರೂಮುಗಳಿಗೆ ಇದ್ದಿದ್ದು ಒಂದೇ Toilet ಮತ್ತು ಒಂದೇ ಸ್ನಾನದ ಮನೆ. ಟೈಲರ್ ಸುಂದರ್ ಮತ್ತು ಆಟೋ ನರಸಿಂಹ ಒಮ್ಮೆಲೆ ಇವತ್ತು ನಮ್ಮ ಕತೆ ಮುಗೀತು ಅಂದುಕೊಂಡರು, ಅವರಿಬ್ಬರು ಇನ್ನೂ ನಿತ್ಯ ಕರ್ಮ ಮುಗಿಸಿರಲಿಲ್ಲ. ನಾನು ಕಾಲೇಜಿಗೆ ಹೊರಟು ಹೋದೆ.‌‌‌ ಸಂಜೆ ಬಂದಾಗ ಅಜ್ಜಿ ಇರಲಿಲ್ಲ, toilet ಮುಂದೆ ಮರಳಿನಲ್ಲಿ ಗೆರೆ ಹಾಕಲಾಗಿತ್ತು.‌ ಹಾವು ಹೊರಬಂದದ್ದನ್ನೂ ಗುರುತಿಸಲು ಆ ಗೆರೆ ಹಾಕಲಾಗಿತ್ತು.‌‌ ನಮ್ಮೆಲ್ಲರ ಕರ್ಮಕ್ಕೆ ಹಾವು ಹೊರ ಬಂದಿರಲಿಲ್ಲ. ಸಂಜೆಗೆ ಸ್ನೇಹಿತ ಕುಮಾರ್ ರೂಮಿಗೆ ಬಂದಿದ್ದರು. ಹಾವು, ಅಜ್ಜಿಕತೆ ಕೇಳಿ ಆ ಪುಣ್ಯಾತ್ಮನಿಗೆ ನಗುವೋ ನಗು. ನಮಗೆಲ್ಲಾ ಪ್ರಾಣ ಸಂಕಟ. ಕುಮಾರ್ ಆಗ ಮಹಾರಾಜ ಕಾಲೇಜಿನಲ್ಲಿ ಅಪರಾಧ ಮತ್ತು ಮನಃಶಾಸ್ತ್ರ ಕೊನೆಯ ವರ್ಷದಲ್ಲಿ ಓದುತ್ತಿದ್ದರು. ನನಗೂ ಅಪರಾಧ ಶಾಸ್ತ್ರದ ಮತ್ತು ಮನಃಶಾಸ್ತ್ರದ ಬಗ್ಗೆ ಅಷ್ಟಿಷ್ಟು ತಿಳಿಯಲು ಇವರೇ ಕಾರಣ. ಅವರ ಮನೆ ನಮ್ಮ ರೂಮಿಗೆ ಹತ್ತಿರದಲ್ಲಿತ್ತು. “ರೀ ಕುಮಾರ್! ನಾಳೆ ನಿಮ್ಮ ಮನೆಗೆ ಬೆಳಿಗ್ಗೆ ನಿತ್ಯ ಕರ್ಮ ಮತ್ತು ಸ್ನಾನಕ್ಕೆ ಬರುತ್ತೇನೆ” ಅಂದೆ‌. “ಹೋ ಬನ್ನಿ! ಅದು ನಿಮ್ಮ ಮನೇನೇ ಅಲ್ವಾ” ಅಂದ್ರು. ಅವರ ಮನೆಯವರಿಗೆಲ್ಲ ನಾನು ಚಿರಪರಿಚಿತ.‌ ಮರುದಿನ ನನ್ನ ನಿತ್ಯಕರ್ಮ, ಸ್ನಾನ ಜೊತೆಗೆ ಅಂದಿನ ಉಪಹಾರವೂ ಅಲ್ಲಿಯೇ ಮುಗಿಸಿ ಕಾಲೇಜಿಗೆ ಹೋದೆ.‌‌‌‌ ಹಾವು ಮಾತ್ರ ಹೊರಗೆ ಹೋದ ಗುರುತುಗಳು ಕಾಣುತ್ತಿಲ್ಲ.‌ ಆಟೋ ನರಸಿಂಹ ಸು ಸು ಮಾಡಲು toiletಗೆ ಹೋಗಿ, ಸ್ವಲ್ಪವಷ್ಟೇ ನೀರು ಖಾಲಿ ಮಾಡುತ್ತಿದ್ದಾಗ ಚಂಗನೇ toilet ಕಮೋಡ್ ನಿಂದ ಹಾವು ಹೆಡೆಯೆತ್ತಿ ನಿಂತಿದೆ! ಆತ ಹೌಹಾರಿ ಕಾಲಿಗೆಲ್ಲಾ ಸು ಸು ಮಾಡಿಕೊಂಡು ಓಟ ಕಿತ್ತಿದ್ದಾನೆ. ನಮಗೆಲ್ಲ ಒಮ್ಮೆಗೆ ನಗು ಮತ್ತು ಸಂಕಟ.

snake

ಎರಡು ದಿನಗಳಾಯ್ತು. ಹಾವು ಆಚೆ ಹೋಗಲು ಮನಸ್ಸು ಮಾಡುತ್ತಿಲ್ಲ, ರಾತ್ರಿಗೆ ಸುಂದರ್ ಮತ್ತು ನರಸಿಂಹ ರೂಮಿನಲ್ಲಿದ್ದ ಹಳೆ ಗೋಣಿಚೀಲವನ್ನೂ toilet ಮೊದಲನೆಯ ಚೇಂಬರಿಗೆ ತುಂಬಿ ಪ್ಯಾಕ್ ಮಾಡಿದರು. ಆಮೇಲೆ toilet ಕಮೋಡ್‌ಗೆ ತುಂಬಿ ಪ್ಯಾಕ್ ಮಾಡಿದರು.‌ ಬೆಳ್ಳಿಗ್ಗೆ ನರಸಿಂಹ ತನ್ನ ಆಟೋದಲ್ಲಿ ಹಾವು ಹಿಡಿಯುವವರನ್ನು ಕರೆ ತಂದರು.‌ ಆತ ಕಬ್ಬಿಣದ ಹಿಡಿಕೆಯೊಂದಿಗೆ ಬಂದರು.‌ ಸುಂದರ್ ನಿಧಾನಕ್ಕೆ ಚೇಂಬರ್‌ಗೆ ಹಾಕಿದ್ದ ಗೋಣಿ ಚೀಲವನ್ನು ಕಡ್ಡಿಯ ಸಹಾಯದಿಂದ ತೆಗೆಯುತ್ತಿದ್ದಂತೆ ಒಳಗೆ ಉಸಿರು ಕಟ್ಟಿ ಸುಸ್ತಾಗಿದ್ದ ಹಾವು ಥಟ್ ಅಂತ ಮೇಲೆ ಬರುತ್ತಿದ್ದಂತೆ ಹಾವು ಹಿಡಿಯುವವನು ಅದರ ತಲೆಯನ್ನು ಹಿಡಿದ. ಆಮೇಲೆ ಹೊರತಂದು ಅದರ ಬಾಯಗಲಿಸಿ ಅದರ ಹಲ್ಲು ಕಿತ್ತು ಚೀಲದಲ್ಲಿ ಹಾಕಿಕೊಂಡು ಚಾಮುಂಡಿ ಬೆಟ್ಟದ ತಪ್ಪಲಿಗೆ ಬಿಡುವುದಾಗಿ ಹೇಳಿದ. ಆತನಿಗೆ ತಲಾ ಐವತ್ತು ರೂಪಾಯಿ ಕೊಟ್ಟೆವು. ನನಗೆ ಆಗ ನನ್ನ ಅಮ್ಮ ಕೊಡುತ್ತಿದ್ದದ್ದು ತಿಂಗಳಿಗೆ ಮುನ್ನೂರು ಮಾತ್ರ‌. ಈ ಹಾವಿನ ಕಾಟದಿಂದ ನನ್ನ ಜೇಬಿಗೆ ಕತ್ತರಿ ಬಿತ್ತು.

ಈರಮ್ಮಜ್ಜಿಯ ಕೇಸಿನ ಕತೆ

ಈ ನಡುವೆ ಅಜ್ಜಿ ಈರಮ್ಮ ಎಲ್ಲಿಯೋ ಕಾಣೆಯಾಗಿದ್ದಳು. ಹಾವು ಹಿಡಿದ ಮೇಲೆ ಅವಳು ಮತ್ತೆ ಪ್ರತ್ಯಕ್ಷವಾದಳು. ಅಂದು ಭಾನುವಾರ. ಸತ್ಸಂಗ ನಡೆಯುತ್ತಿದ್ದ ದಿನ.‌ ಕೊನೆಯಲ್ಲಿ ಆಶ್ರಮದ ಲೆಕ್ಕ ಪತ್ರದ ವರದಿ.‌ ಇಬ್ಬರು ಟ್ರಸ್ಟಿಗಳ ನಡುವೆ ಜೋರಾಗಿ ಜಗಳ.‌‌‌ ನಾನೇನು ದುಡ್ಡು ತಿಂದಿಲ್ಲ ಎಲ್ಲಾ ನೀನೆ ತಿಂದು ಹಾಕಿದ್ದು.‌ ಹೌದು ನಾನೇ ಕಾಗದ ಪತ್ರ ಬಿದ್ದು ಹೋಯ್ತು ಅಂತಾ ಸುಳ್ಳು ಹೇಳಿದ್ದು.‌ ಜಗಳ ಬಹಳ ಹೊತ್ತು ನಡೆಯಿತು. ಕೊನೆಗೆ ಜಗಳದ ಮೂಲ ಕೆಣಕುತ್ತಾ ಹೋದಂತೆ ಈರಮ್ಮಜ್ಜಿಯ ಪಾತ್ರ ಕಾಣಿಸತೊಡಗಿತು. ಆಕೆ ಇಬ್ಬರಿಗೂ ಒಳ್ಳೆಯವಳಂತೆ ನಟಿಸುತ್ತಿದ್ದಾಗ ಅವರಿಬ್ಬರು ಇವಳ ಬಳಿ ಪರಸ್ಪರ ಆರೋಪ ಮಾಡಿದ್ದರು.‌ ಅದನ್ನು ಅಜ್ಜಿ ಇಬ್ಬರಿಗೂ ಹೇಳಿ ರಾದ್ದಾಂತವಾಗಿ ಈಗ ಅದು ಬಯಲಾಗಿತ್ತು. ಈ ನಡುವೆ ಈರಮ್ಮಜ್ಜಿ ಸದಾ ಶಪಿಸುತ್ತಿದ್ದ ಪುಟ್ಟೀರಮ್ಮನವರ ಬಗ್ಗೆ ಸ್ವಲ್ಪ ಸ್ವಲ್ಪವೇ ಮಾಹಿತಿ ಸಿಗತೊಡಗಿತು.‌ ಅಂದು ಭಾನುವಾರ, ತಿಂಡಿ ತಿಂದು ಮೆಟ್ಟಿಲುಗಳ ಮೇಲೆ ಕುಳಿತು ದಾರಿಯಲ್ಲಿ ಹೋಗುವವರ ಮೇಲೆ ಕಣ್ಣಾಯ್ಸಿ ನೋಡುತ್ತಿದ್ದ ನಮ್ಮ ಬಳಿ ಬಂದ ಅಜ್ಜಿ ಏನ್ರಲಾ! ಹುಡುಗಿಯರ ನೋಡ್ತಾ ಕುಳಿತಿದ್ದೀರಾ, ಹಾಳಾಗಿ ಹೋಗ್ತೀರಿ ಎಂದು ಗದರಿಸುತ್ತಾ ಕೈಗೊಂದು ಲಕೋಟೆ ಕೊಟ್ಟು ಓದುವಂತೆ ಹೇಳಿತು. ಅದರ ಮೇಲೆ Commissioner of police, Mysore ಎನ್ನುವ ಸೀಲ್ ಇತ್ತು.

ಅಜ್ಜಿಯ ಪಿತೂರಿಯು ಎಲ್ಲರಿಗೂ ನಿಧಾನಕ್ಕೆ ತಿಳಿಯುತ್ತಿದ್ದಂತೆ ಆಕೆಯ ಸುಪ್ತ ಮನ ಮತ್ತಷ್ಟು ವ್ಯಗ್ರವಾಗಿ ಹೊಸ ಹೊಸ ತಂತ್ರಗಳನ್ನೂ ಹೆಣೆಯತೊಡಗಿತು. ಕೊನೆಗೆ ಕುಮಾರ್ ಆಕೆಯ ವರ್ತನೆಯನ್ನು ಗಮನಿಸಲು ಆರಂಭಿಸಿದರು. ಆಕೆ Paranoid Schizophrenia ಎನ್ನುವ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳು. ಜನರ ಬಗ್ಗೆ ಸಂಶಯ, ತನ್ನ ಬಗ್ಗೆ ಪಿತೂರಿ ಮಾಡುತ್ತಿದ್ದಾರೆ ಎನ್ನುವ ಅನುಮಾನ, ತಾನು ಎಲ್ಲರಿಗಿಂತಲೂ ಬುದ್ದಿವಂತೆ ಎಂದೂ ತೋರಿಸಿಕೊಳ್ಳುವ ವರ್ತನೆ ಆಕೆಯಲ್ಲಿದ್ದವು. ಆಕೆಯೊಂದಿಗೆ ನಮ್ಮ ಒಡನಾಟ ಬಹಳ ಕಡಿಮೆಯಾಗಿತ್ತು. ಒಂದು ದಿನ ಬೆಳಿಗ್ಗೆ ನಾನೊಬ್ಬನೇ ರೂಮಿನಲ್ಲಿದ್ದಾಗ ಅಳುತ್ತಾ ಬಂದು “ನನ್ನನ್ನೂ ನೀನು ನಂಬಲ್ವಾ ಕಂದ” ಎಂದು ಬಿಕ್ಕಳಿಸತೊಡಗಿದಳು. “ಸರಿ ಈಗ ಏನೇಳು” ಅಂದೆ. ಒಂದು ಉಪಕಾರ ಮಾಡಿಕೊಡು. ನಾನೆಂದಿಗೂ ಆ ಉಪಕಾರವನ್ನು ಮರೆಯುವುದಿಲ್ಲ ಎಂದಳು. “ಯಾರಿಗೂ ಹೇಳಬೇಡ, ಆ ಜಟ್ಟಪ್ಪ ನನಗೆ ರೂಮು ಕಟ್ಟಿಸಿ ಕೊಡುತ್ತೇನೆಂದು ನನ್ನ ಬಳಿಯಿದ್ದ ನಲವತ್ತು ಸಾವಿರ ರೂಪಾಯಿ ತಿಂದು ಹಾಕಿದ್ದಾನೆ. ಅದಕ್ಕೆ ಒಂದು ಪೋಲಿಸ್ ಕಂಪ್ಲೇಟ್ ಬರೆದು ಕೊಡು ನಾನು ಯಾರಿಗೂ ಹೇಳುವುದಿಲ್ಲ” ಎಂದಳು. ಒಮ್ಮೆಲೇ ಭಾರೀ ಕೋಪ ಬಂದು, “ಹೋಗಾಚೆ ನಿನ್ನದು ಅತಿಯಾಯಿತು” ಎಂದೆ. ಆಕೆಯ ಮುಖಚರ್ಯೆ ಥಟ್ ಅಂತಾ ಬದಲಾಯಿತು. ಮುಖ ಸಿಂಡರಿಸಿ, “ನೀನು ಬರೆದು ಕೊಡದಿದ್ದರೆ ಕತ್ತೆ ಬಾಲ, ಬೇರೆಯವರ ಹತ್ತಿರ ಬರೆಸಿಕೊಳ್ಳುತ್ತೇನೆ” ಎಂದು ಹೊರಟು ಹೋದಳು.

ಯಾಕೋ ಏನೋ ಗ್ರಹಚಾರ ಕಾದಿರುವುದಾಗಿ ದಿಗಲು ಶುರುವಾಯಿತು. ಸಂಜೆ ಕಾಲೇಜಿನಿಂದ ಬಂದಾಗ ಅದು ನಿಜವಾಯಿತು. ಆಕೆಯ ಟ್ರಂಕಿನಲ್ಲಿದ್ದ ಎರಡು ಸಾವಿರ ರೂಪಾಯಿಗಳನ್ನು ನಾನು ಕದ್ದಿರುವುದಾಗಿ ನಮ್ಮ ಪಕ್ಕದ ರೂಮಿನ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ ಮಹೇಶ್ ಗೆ ಹೇಳಿದ್ದಳು. “ಏನ್ ಸಾರ್… ಅಜ್ಜಿ ನಿಮ್ಮ ಮೇಲೆ ವರಸೆ ಶುರು ಮಾಡಿದ್ದಾಳೆ” ಎಂದರು. ಈ ನಡುವೆ ನಮ್ಮ ರೂಮಿನ ಸಮೀಪದಲ್ಲಿದ್ಧ ಕನಕಗಿರಿಯ ಬಡಾವಣೆಯ ಪುಡಿ ರೌಡಿಯೊಬ್ಬನ ಬಳಿ ಹೋಗಿ ಆಕೆಯನ್ನು ಹೊರ ಹಾಕಲು ಯತ್ನಿಸುತ್ತಿರುವುದಾಗಿ ಹೇಳಿ ಬಂದಿದ್ದಳು. ಆತ ಬಂದವನೇ “ಏನ್ರೋ ಈ ಆಶ್ರಮದ ಜಾಗ ನಿಮ್ಮ ಅಪ್ಪಂದಿರಿಗೆ ಸೇರಿದ್ದಾ?” ಎಂದು ಬೈದು ಆಕೆಯ ತಂಟೆಗೆ ಯಾರೂ ಹೋಗಬಾರದು ಎಂದು ಹೆದರಿಸಿದ್ದ. ದಿನ ದಿನಕ್ಕೂ ನಮ್ಮ ಪರಿಸ್ಥಿತಿ ಕೈ ಮೀರುತ್ತಿತ್ತು. ಕೊನೆಗೆ ಜಟ್ಟಪ್ಪನವರ ಬಳಿ ಈ ವಿಷಯ ತಿಳಿಸಿದೆವು. ಅವರೂ ಆಕೆಯನ್ನು ಹೊರ ಹೋಗುವಂತೆ ಹೇಳಿದರು. ಆಕೆ ಅವರಿಗೆ ಕೈ ಮುಗಿದು “ಆಯ್ತು ಸ್ವಾಮಿ ಎರಡು ದಿನ ಹೊರಟು ಹೋಗುತ್ತೇನೆ” ಎಂದು ದೊಡ್ಡ ಕಾರ್ಯತಂತ್ರವನ್ನೇ ರೂಪಿಸಿದಳು.

ಅಂದು ಭಾನುವಾರ, ಎಲ್ಲರೂ ರೂಮಿನಲ್ಲಿದ್ದೆವು. ನಮ್ಮ ಆಶ್ರಮದ ರಸ್ತೆಯಲ್ಲಿ ಪ್ರತಿ ದಿನ ಹತ್ತು ಗಂಟೆ ಸುಮಾರಿಗೆ ವಿದ್ಯಾರಣ್ಯ ಪುರಂ ಸಬ್ ಇನ್ಸ್‌ಪೆಕ್ಟರ್ ಬುಲೆಟ್ ಬೈಕಿನಲ್ಲಿ ಹಾದು ಹೋಗುತ್ತಿದ್ದರು. ಆ ದಿನ ಅನ್ನ ಸಾಂಬಾರ್ ಮಾಡಿ, ಮೆಲ್ಲನೆ ಒಂದು ಹಿಡಿ ಮಣ್ಣು ತಂದು ಅನ್ನದ ಪಾತ್ರೆಗೆ ಹಾಕಿ, ರಸ್ತೆಯಲ್ಲಿ ಸಬ್ ಇನ್‌ಸ್ಟೆಕ್ಟರ್‌ಗಾಗಿ ಕಾಯುತ್ತಾ ನಿಂತಳು. ಅವರ ಬುಲೆಟ್ ಶಬ್ದ ಕೇಳುತ್ತಿದ್ದಂತೆ ನಡು ರಸ್ತೆಯಲ್ಲಿ ನಿಂತು, ಅವರು ಹತ್ತಿರವಾಗುತ್ತಿದ್ದಂತೆ ರಸ್ತೆ ಮೇಲೆ ಮಲಗಿ ಜೋರಾಗಿ ಬಾಯಿ ಬಡಿದುಕೊಳ್ಳಲು ಆರಂಭಿಸಿದಳು‌. ರಸ್ತೆ ಪಕ್ಕಕ್ಕೆ ಬುಲೆಟ್ ನಿಲ್ಲಿಸಿದ ಅವರು, ಅಜ್ಜಿಯ ಕೈ ಹಿಡಿದು ಪಕ್ಕದಲ್ಲಿ ಕೂರಿಸಿ “ಏನಾಯಿತು ವಿಷಯ ಹೇಳು” ಎಂದರು. “ನೋಡಿ ಸ್ವಾಮಿ ನಾನು ಅನಾಥೆ. ಸ್ವಲ್ಪ ದಿನದ ಮಟ್ಟಿಗೆ ಎಲ್ಲರಿಗೂ ಸೇರಿರುವ ಈ ಆಶ್ರಮದ ಮೆಟ್ಟಿಲ ಕೆಳಗಿನ ಜಾಗದಲ್ಲಿದ್ದೆ. ನೆನ್ನೆ ರಾತ್ರಿ ಎಲ್ಲರೂ ಸೇರಿ ನನ್ನನ್ನ ಹೊರ ಹೋಗುವಂತೆ ಹೇಳಿದರು. ಎರಡು, ಮೂರು ದಿನ ಕಾಲಾವಕಾಶ ಕೊಡಿ, ಅಷ್ಟರಲ್ಲಿ ಹೊಸ ಜಾಗ ಹುಡುಕಿ ಹೊರಟು ಹೋಗುತ್ತೇನೆ ಎಂದೆ. ಈಗ ನೋಡಿದರೆ ನಾನು ಹೋಗಿಲ್ಲ ಎನ್ನುವ ಕೋಪಕ್ಕೆ ನಾನು ತಿನ್ನುವ ಅನ್ನಕ್ಕೆ ಮಣ್ಣು ಹಾಕಿ ಬಿಟ್ಟಿದಾರೆ” ಎನ್ನುತ್ತಿದ್ದಂತೆ ಇನ್ಸ್‌ಪೆಕ್ಟರ್‌ಗೆ ಮೈಯೆಲ್ಲಾ ಬೆಂಕಿಯಾಯಿತು. ಥಟ್ಟನೆ ನಮ್ಮ ರೂಮುಗಳತ್ತ ಅವರ ಹೆಜ್ಜೆಯ ಸಪ್ಪಳ ಕೇಳಿಸತೊಡಗಿತು.

ಇದನ್ನೂ ಓದಿ ಹಳ್ಳಿ ಪುರಾಣ | ಅಜ್ಜಿಯರೆಂಬ ವಿಸ್ಮಯ ಜೀವಿಗಳು

“ಸೂ ಮಕ್ಕಳಾ… ಒಬ್ಬೊಬ್ಬನಿಗೂ ಬೂಟಿನಲ್ಲಿ ಹೊಡೆಯುತ್ತೇನೆ” ಎಂದು ಹೇಳುತ್ತಾ ಒಂದೊಂದು ರೂಮಿನ ಬಾಗಿಲು ಬಡಿಯತೊಡಗಿದರು. ಎಲ್ಲರೂ ರೂಮಿನ ಬಾಗಿಲು ಹಾಕಿ ಒಳಗೆ ನಡುಗುತ್ತಾ ಕುಳಿತೆವು‌. ಅವರೂ ಹೊರಟು ಹೋದದ್ದನ್ನು ಖಾತರಿ ಪಡಿಸಿಕೊಂಡು ಆಚೆಗೆ ಬಂದೆವು. ಈ ನಡುವೆ ಆಕೆ ನಮ್ಮ ರಸ್ತೆಯಲಿದ್ದ ಒಬ್ಬ ವಕೀಲರ ಬಳಿಗೆ ಹೋಗಿ ಆಶ್ರಮದ ಟ್ರಸ್ಟಿಗಳ ದೂರು ಬರೆಸಿ ಮೈಸೂರು ಪೋಲಿಸ್ ಕಮೀಷನರ್‌ಗೆ ಪೋಸ್ಟ್ ಮಾಡಿಸಿದ್ದಳು. ವಿಳಾಸ ಪತ್ತೆ ಮಾಡಿದ ಪೋಲಿಸರು ಸಂಜೆ ಬರುವುದಾಗಿ, ಅಷ್ಟರಲ್ಲಿ ಆಕೆ ಜನ ಮೋಸ ಮಾಡಿದ ಬಗ್ಗೆ ಏನಾದರೂ ದಾಖಲೆ ಇದ್ದರೆ ಸಿದ್ದವಾಗಿಟ್ಟುಕೊಳ್ಳಬೇಕೆಂದು ತಿಳಿಸಿ ಹೋದರು. ಆಕೆಯ ಬಳಿ ಯಾವುದೇ ದಾಖಲೆ ಇರಲಿಲ್ಲ. ತನ್ನ ಪಿತೂರಿ ಎಲ್ಲರಿಗೂ ಈಗ ತಿಳಿಯಬಹುದು ಎಂದು ಅರಿತು ಮಧ್ಯಾಹ್ನದ ಸಮಯದಲ್ಲಿ ಟ್ರಂಕಿನೊಂದಿಗೆ ಎತ್ತಲೋ ಮಾಯವಾದಳು. ಎರಡು ತಿಂಗಳ ನಂತರ ಕನಕಗಿರಿಯಲ್ಲಿದ್ದ ಶನಿ ಮಹಾತ್ಮನ ಗುಡಿಯ ಬಳಿ ನಿಂತಿದ್ದಳು. ನನ್ನನ್ನೂ ದಿಟ್ಟಿಸಿ ನೋಡಿ, “ಎಲ್ಲಾ ಸೇರಿ ಈ ಹಣ್ಣು ಮುದುಕಿಯನ್ನು ಆಚೆಗೆ ಹಾಕಿದಿರಿ. ಲೋ ಸ್ವಾಮಿ ಒಂದು ಇಪ್ಪತ್ತು ರೂಪಾಯಿ ಇದ್ದರೇ ಕೊಡೋ” ಎಂದಳು. ಜೇಬಿನಿಂದ ಇಪ್ಪತ್ತು ರೂಪಾಯಿ ತೆಗೆದು ಅವಳ ಕೈ ‌ಗಿಟ್ಟೆ. ಹಣವನ್ನು ಕಣ್ಣಿಗೆ ಒತ್ತಿಕೊಂಡು “ದೇವರು ನಿನಗೆ ಒಳ್ಳೆಯದು ಮಾಡಲಿ” ಎಂದು ನಡೆದಳು ಈರಮ್ಮಜ್ಜಿ.

WhatsApp Image 2025 05 24 at 10.45.33 AM
ಗಂಗಾಧರ ಸ್ವಾಮಿ
+ posts

ಕೃಷಿ ಅಭಿವೃದ್ಧಿ ಸಲಹೆಗಾರ, ದಾವಣಗೆರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗಂಗಾಧರ ಸ್ವಾಮಿ
ಗಂಗಾಧರ ಸ್ವಾಮಿ
ಕೃಷಿ ಅಭಿವೃದ್ಧಿ ಸಲಹೆಗಾರ, ದಾವಣಗೆರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ಪ್ಯಾರಿಸ್‌ ಒಪ್ಪಂದದ ಗುರಿ ಸಾಧನೆ: ಒತ್ತಾಸೆಯಾಗಬೇಕಿದೆ ಪ್ರಜಾಪ್ರಭುತ್ವದ ಸ್ತಂಭಗಳು

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಬಲಪಡಿಸುವುದು ಎಂದರೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನಿರ್ಣಯವನರಿಯದ ಮನ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಸುತ್ತಾಟ | ಆಸ್ಟ್ರೇಲಿಯಾದ ಕೋಸಿಯಸ್ಕೋ ಪರ್ವತ ಚಾರಣ

ಆಸ್ಟ್ರೇಲಿಯಾದಲ್ಲಿ ಎತ್ತರದ ಪರ್ವತಗಳಿಲ್ಲ ಎಂಬ ಭಾವನೆ ಅನೇಕ ಮಂದಿಯ ಮನಸ್ಸಿನಲ್ಲಿ ನೆಲೆಗೊಂಡಿರಬಹುದು,...

Download Eedina App Android / iOS

X