ಸಮರ್ಪಕ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ನಿರ್ಮಾಣ ಮಾಡದೇ ಇರುವ ಕಾರಣಕ್ಕೆ ಅಪಾರ ಪ್ರಮಾಣದಲ್ಲಿ ಮಳೆ ನೀರು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಗ್ರಾಮಸ್ಥರಲ್ಲಿ ಸಾಂಕ್ರಮಿಕ ರೋಗದ ಭೀತಿ ಆವರಿಸುತ್ತಿದೆ ಎಂದು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮಸ್ಥರು ಗೋಳು ತೋಡಿಕೊಂಡಿದ್ದಾರೆ.
ಕಳೆದ ಎರಡ್ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿದೆ. ಗ್ರಾಮದಲ್ಲಿ ಎರಡು ವರ್ಷ ಕಳೆಯುತ್ತ ಬಂದರೂ ಜಲ ಜೀವನ್ ಮಿಷನ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಜೆಜೆಎಂ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳು ಹಾಗೇ ಉಳಿದಿವೆ. ಇದರಿಂದ ಸ್ವಲ್ಪ ಮಳೆಯಾದರೂ ಸಾಕು ರಸ್ತೆಗಳು ಕೆಸರು ಗದ್ದೆಯಂತಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜೆಜೆಎಂ ಕಾಮಗಾರಿಗಾಗಿ ರಸ್ತೆ ಅಗೆದು ವರ್ಷ ಕಳೆದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಇನ್ನು ಗ್ರಾಮದ ಹಲವು ಕಡೆ ಸೂಕ್ತ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ. ಇದರಿಂದಾಗಿ ಮಳೆ, ಚರಂಡಿಯ ಹೊಲಸು ನೀರು ಶುದ್ಧ ಕುಡಿಯುವ ನೀರಿನ ವಾಲ್‌ನಲ್ಲಿ ಸೇರುತ್ತಿದೆ.

ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ʼಶೆಂಬೆಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚಟ್ನಾಳ ಗ್ರಾಮದಲ್ಲಿ ಇಲ್ಲಿಯವರೆಗೆ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿತು. ಕೆಲ ದಿನಗಳ ಹಿಂದೆ ಕೊಳವೆ ಬಾವಿಯೊಂದರ ನೀರು ಕಲುಷಿತಗೊಂಡಿರುವ ಬಗ್ಗೆ ಪಂಚಾಯಿತಿ ಅಧಿಕಾರಿಗಳೇ ಖುದ್ದು ವರದಿ ನೀಡಿದ್ದಾರೆ. ಆದರೂ ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆದರೂ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ನಡೆದಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ವಿಚಾರಿಸಿದಾಗ ʼಜೆಜೆಎಂ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದಿರುವೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಇದೆ. ಗ್ರಾಮದಲ್ಲಿ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಲಾಗುವುದುʼ ಎಂದು ಹೇಳಿದರು.

ಇದೀಗ ಮಳೆಗಾಲ ಆರಂಭವಾದ ಕಾರಣ ರಸ್ತೆ, ಚರಂಡಿ ಮೇಲೆ ಸಂಗ್ರಹವಾದ ಹೊಲಸು ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಶೀಘ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಆಗಬೇಕಾಗುತ್ತದೆʼ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ಮನೆ ಮಹಡಿ ಮೇಲೆ ‘ಡ್ರ್ಯಾಗನ್ ಫ್ರೂಟ್’ ಬೆಳೆದ ಉಪನ್ಯಾಸಕ!
- ನಿಮ್ಮ ಊರು, ನಗರ, ಪಟ್ಟಣದ ಕುಂದು ಕೊರತೆಗಳ ಪೋಟೋ, ವಿಡಿಯೋ ಮಾಹಿತಿಯನ್ನು
ಈದಿನ.ಕಾಮ್ ನ್ಯೂಸ್ ಬೀದರ್ ಸಹಾಯವಾಣಿ 9035053805 ವಾಟ್ಸಪ್ ನಂಬರ್‌ಗೆ ಕಳುಹಿಸಿ.