79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿವರ್ಷದಂತೆ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲು ತಾಲ್ಲೂಕು ಆಡಳಿತ ಗುರುವಾರ ಪೂರ್ವಭಾವಿ ಸಭೆ ಆಯೋಜಿಸಿ ಸಾರ್ವಜನಿಕರ ಸಲಹೆ ಸೂಚನೆ ಪಡೆದರು.
ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಲಾಕಾಲೇಜು ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಕಚೇರಿಯಲ್ಲಿ ಆಚರಣೆ ಮುಗಿಸಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕಡ್ಡಾಯ ಹಾಜರಾಗಲು ತಹಶೀಲ್ದಾರ್ ಆರತಿ.ಬಿ ಸೂಚಿಸಿದರು.
ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸಲಿದ್ದು, ಈ ಬಾರಿ ವಿದ್ಯಾರ್ಥಿಗಳಿಗೆ ಸ್ವಾಂತಂತ್ರ್ಯ ಹೋರಾಟಗಾರರ ಬಗ್ಗೆ ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಆಯೋಜಿಸಿ ವಿಜೇತ ನಾಲ್ಕು ವಿದ್ಯಾರ್ಥಿಗಳಿಗೆ ಆಕರ್ಷಕ ನಗದು ಬಹುಮಾನವನ್ನು ದಿವಂಗತ ಆರ್.ರಂಗನಾಥಗೌಡ ಅವರ ಸ್ಮರಣಾರ್ಥ ಪತ್ರಕರ್ತ ರಮೇಶ್ ಗೌಡ ನೀಡುವುದಾಗಿ ತಿಳಿಸಿರುವುದು ವಿಶೇಷ ಎನಿಸಿದೆ. ಈ ಜೊತೆಗೆ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸನ್ಮಾನಿಸಿ ಗೌರವಿಸುವ ಬಗ್ಗೆ ಚರ್ಚಿಸಲಾಗಿ ಈ ಬಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೂ ಸನ್ಮಾನಿಸುವ ವಿಷಯ ಪ್ರಸ್ತಾಪವಾಯಿತು.
ಪೊಲೀಸ್, ಗೃಹರಕ್ಷಕ ದಳ, ಎನ್ ಸಿಸಿ, ಸ್ಕೌಟ್ ಅಂಡ್ ಗೈಡ್ಸ್ ವತಿಯಿಂದ ಆಕರ್ಷಕ ಕವಾಯತು ಪಥ ಸಂಚಲನ ನಡೆಸುವುದು ಎಂದಿನಂತೆ ನಡೆಯಲಿದೆ. ಶಿಷ್ಟಾಚಾರದಲ್ಲಿ ಆಹ್ವಾನ ಪತ್ರಿಕೆ ಸಿದ್ಧಪಡಿಸಿ ಎಲ್ಲಾ ಗಣ್ಯರನ್ನು ಆಹ್ವಾನಿಸಿ ಕಾರ್ಯಕ್ರಮ ಜವಾಬ್ದಾರಿಯಿಂದ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ರಾಷ್ಟ್ರೀಯ ಹಬ್ಬಕ್ಕೆ ಎಲ್ಲಾ ನಾಗರೀಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ತಹಶೀಲ್ದಾರ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಉಪಹಾರ ಹಾಗೂ ಸಿಹಿ ಹಂಚಿಕೆಯನ್ನು ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿದ್ದು, ಕುಡಿಯುವ ನೀರು ಹಾಗೂ ಕವಾಯತು ಅಭ್ಯಾಸ ನಡೆಸುವ ಮಕ್ಕಳಿಗೆ ಕಾರ್ಯಕ್ರಮಕ್ಕೆ ಮುನ್ನ ನಾಲ್ಕು ದಿನಗಳ ಕಾಲ ನೀರು ಸರಬರಾಜು ಹಾಗೂ ಶಾಮಿಯಾನ ವ್ಯವಸ್ಥೆ ಮಾಡಲು ಪಟ್ಟಣ ಪಂಚಾಯಿತಿಗೆ ಸೂಚಿಸಲಾಯಿತು. ಬೆಸ್ಕಾಂ ಇಲಾಖೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಸೂಚಿಸಿ ವಿವಿಧ ಇಲಾಖೆಗೆ ಕೆಲ ಜವಾಬ್ದಾರಿಗಳು ವಹಿಸಲಾಯಿತು.
ಸಭೆಯಲ್ಲಿ ಪಪಂ ಅಧ್ಯಕ್ಷೆ ಆಯಿಷಾ ತಾಸೀನ್, ಸದಸ್ಯರಾದ ಮಹಮ್ಮದ್ ಸಾದಿಕ್, ಜಿ.ಆರ್.ಶಿವಕುಮಾರ್, ಶೌಕತ್ ಆಲಿ, ಸಿದ್ದರಾಮಣ್ಣ, ತಾಪಂ ಇಓ ಶಿವಪ್ರಕಾಶ್, ಬಿಇಓ ನಟರಾಜ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ, ಗುಬ್ಬಿ ಪಿಎಸ್ಐ ಸುನೀಲ್ ಕುಮಾರ್, ಮುಖಂಡರಾದ ಸಿ.ಆರ್.ಶಂಕರ್ ಕುಮಾರ್, ಸಲೀಂ ಪಾಷ, ಜಿ.ಆರ್.ರಮೇಶ್ ಇತರರು ಇದ್ದರು.