ಪ್ರಸಕ್ತ ಸಂಸತ್ ಅಧಿವೇಶನದಲ್ಲಿ ನೈಸರ್ಗಿಕ ಉಂಡೆ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡುವುದು ಸೇರಿದಂತೆ ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಘಟಕದ ಕಾರ್ಯಕರ್ತರು ತುಮಕೂರು ಲೋಕಸಭಾ ಸದಸ್ಯ ಜಿ ಎಸ್ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.
ಕೊಬ್ಬರಿಯ ಬೆಲೆ ತೀವ್ರವಾಗಿ ಕುಸಿದಿದ್ದು, ತೆಂಗು ಬೆಳೆಗಾರರು ಸಂಕಷ್ಟದಲ್ಲಿರುವುದರಿಂದ ಸಮಸ್ಯೆಯನ್ನು ಬಗೆಹರಿಸುವಂತೆ ಹಕ್ಕೊತ್ತಾಯಗಳನ್ನು ಕೇಂದ್ರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
“ವಿಶ್ವಾದ್ಯಂತ ಪ್ರಸಿದ್ಧವಾಗಿರುವ ಉಂಡೆ ಕೊಬ್ಬರಿಯ ಬೆಲೆ ₹7,000ಕ್ಕೆ ಕುಸಿದಿದೆ. ಕರ್ನಾಟಕದಲ್ಲಿ 2:18 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ಕೊಬ್ಬರಿಯನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಬೆಲೆ ಕುಸಿತ ಬೆಳೆಗಾರರಿಗೆ ತೀವ್ರ ಸಂಕಷ್ಟ ಉಂಟು ಮಾಡಿದೆ. 2.18 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿಯಲ್ಲಿ 1.75 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಇನ್ನೂ ರೈತರ ಬಳಿಯೇ ಇದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಖರೀದಿ ಕೇಂದ್ರದಲ್ಲಿ ಖರೀದಿಯನ್ನು ಆಗಸ್ಟ್ 25 ರವರೆಗೆ ವಿಸ್ತರಿಸುವುದು ಸ್ವಾಗತಾರ್ಹ. ಆದರೆ ಅಷ್ಟರಲ್ಲಿ ಕೊಬ್ಬರಿ ತರಲು ರೈತರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಕನಿಷ್ಟ ಇನ್ನೂ ಮೂರು ತಿಂಗಳು ವಿಸ್ತರಿಸಬೇಕು. ಜೊತೆಗೆ ನೋಂದಣಿ ಮಾಡಲು ಸಾಧ್ಯವಾಗದ ರೈತರು ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ನೋಂದಣಿಯನ್ನು ಮತ್ತೆ ಆರಂಭಿಸಬೇಕು. ರಾಜ್ಯ ಸರ್ಕಾರ ಚಳವಳಿಯ ಒತ್ತಡದಿಂದ ₹1,250 ಪ್ರೋತ್ಸಾಹ ಧನ ನೀಡುತ್ತಿರುವುದು ಸಂತೋಷದ ಸಂಗತಿ. ಆದರೆ ಅದು ಪೂರ್ವಾನ್ವಯವಾಗುವುದಿಲ್ಲ. ಹಾಗಾಗಿ ಕೊಬ್ಬರಿ ಖರೀದಿಯನ್ನು ಮುಂದುವರೆಸದಿದ್ದರೆ ರೈತರಿಗೆ ಯಾವ ಅನುಕೂಲವೂ ಆಗುವುದಿಲ್ಲ” ಎಂದರು.
“ಡಾ.ಸ್ವಾಮಿನಾಥನ್ ವರದಿಯಂತೆ ಉತ್ಪಾದನಾ ವೆಚ್ಚಕ್ಕೆ ಶೇ.50 ರಷ್ಟು ಸೇರಿಸಿ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆ ₹16,730 ನಿಗದಿಪಡಿಸಬೇಕೆಂದು ಶಿಫಾರಸು ಮಾಡಿರುವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಕೇವಲ ₹11,750ಕ್ಕೆ ಸೀಮಿತವಾಗಿದೆ. ಜೊತೆಗೆ ರೈತರು ಬೆಳೆದ ಎಲ್ಲ ಬೆಳೆಯನ್ನು ತೆಗೆದುಕೊಳ್ಳದೆ ಕೇವಲ ಶೇ.25 ರಷ್ಟು ಮಾತ್ರ ಖರೀದಿ ಮಾಡುವುದರಿಂದ ರೈತರು ದಲ್ಲಾಳಿಗಳ ಬಲೆಗೆ ಬೀಳುವಂತಾಗಿದೆ” ಎಂದು ಹೇಳಿದರು.
“ಕೇಂದ್ರ ಸರ್ಕಾರ ಖರೀದಿಸುವಷ್ಟು ಪ್ರಮಾಣದ ಕೊಬ್ಬರಿಯನ್ನು ರೈತರಿಂದ ಕೊಳ್ಳಲು ಅಗತ್ಯವಿರುವಷ್ಟು ಖರೀದಿ ಕೇಂದ್ರಗಳಿಲ್ಲ. ಕೊಬ್ಬರಿ ದಾಸ್ತಾನು ಮಾಡಲು ವ್ಯವಸ್ಥೆಗಳಿಲ್ಲ. ಇದರಿಂದಾಗಿಯೂ ರೈತರು ಖರೀದಿ ಕೇಂದ್ರದಲ್ಲಿ ಮಾರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸೂಕ್ತ ನಫೆಡ್ ಮಾರ್ಗಸೂಚಿಗಳಿಲ್ಲ. ತೆಂಗಿನ ಉತ್ಪನ್ನಗಳನ್ನು ಆಹಾರ ಪದಾರ್ಥಗಳನ್ನು ಮತ್ತು ಸೋಪು, ಡಿಟರ್ಜೆಂಟ್, ಶಾಂಪೂ, ಸಿಂಥೆಟಿಕ್ ರಬ್ಬರ್, ಗ್ಲಿಸರೀನ್ ತಯಾರಿಸಲು ಉಪಯೋಗಿಸುತ್ತಾರೆ. ಅಲ್ಲದೆ ಅಲಂಕಾರಿಕ ವಸ್ತುಗಳು, ವೈದ್ಯಕೀಯ ಹಾಗೂ ಇನ್ನಿತರ ಉದ್ದೇಶಗಳಿಗೆ ಉಪಯೋಗಿಸುತ್ತಾರೆ. ಆದರೆ ಸರ್ಕಾರ ಪರ್ಯಾಯವಾಗಿ ಬಳಸಬಹುದಾದ ಅಗ್ಗದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ತೆಂಗಿನ ಉತ್ಪನ್ನಗಳಿಗೆ ಬೇಡಿಕೆ ಇಳಿಮುಖವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ₹20,000 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು. ಎಳನೀರು ಮತ್ತು ತೆಂಗಿನಕಾಯಿಗೂ ಕನಿಷ್ಠ ಬೆಂಬಲ ಬೆಲೆ ನಿಗಿಪಡಿಸಬೇಕು. ಪ್ರಮಾಣ ಮಿತಿ ಹೇರದೇ ತೆಂಗಿನ ಉತ್ಪನ್ನವನ್ನು ಸಂಪೂರ್ಣವಾಗಿ ಖರೀದಿಸಬೇಕು ಮತ್ತು ಅದಕ್ಕೆ ಅವಶ್ಯಕತೆಯಿರುವಷ್ಟು ಹಣ ಬಿಡುಗಡೆ ಮಾಡಬೇಕು. ಮುಕ್ತ ಮಾರುಕಟ್ಟೆಯಡಿಯಲ್ಲಿ ತೆಂಗಿನ ಉತ್ಪನ್ನ ಮತ್ತು ಖಾದ್ಯತೈಲ ಆಮದನ್ನು ಕೂಡಲೇ ನಿಲ್ಲಿಸಬೇಕು. ಕೇಂದ್ರ ಸರ್ಕಾರದ ಎಣ್ಣೆ ಉಪಯೋಗಿಸುವ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ತೆಂಗಿನೆಣ್ಣೆಯನ್ನು ಉಪಯೋಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮುಂಗಾರು ಹಂಗಾಮಿನ ಕೃಷಿ ಪ್ರಶಸ್ತಿ ಆಯ್ಕೆಗೆ ಅರ್ಜಿ ಆಹ್ವಾನ
“ಪೂರ್ಣ ಪ್ರಮಾಣದ ಖರೀದಿಯನ್ನು ದಾಸ್ತಾನು ಮಾಡಲು ಬೃಹತ್ ಗೋಡೋನ್‌ಗಳನ್ನು ಮತ್ತು ಬಹಳ ಕಾಲ ಕಾಪಾಡಲು ಶೀತಲೀಕರಣ ವ್ಯವಸ್ಥೆಯನ್ನು ಮಾಡಬೇಕು. ಖರೀದಿ ಕೇಂದ್ರವನ್ನು ವರ್ಷವಿಡೀ ತೆರೆದು, ನಿರಂತರವಾಗಿ ಕೊಬ್ಬರಿ ಖರೀದಿಸಬೇಕು ಮತ್ತು ಅದಕ್ಕೆ ತಕ್ಕಂತೆ ನಫೆಡ್ ಮಾರ್ಗಸೂಚಿಗಳನ್ನು ರೂಪಿಸಬೇಕು. ಜೀವ ಪರಿಸರಾತ್ಮಕ, ವಾಯುಗುಣ ವೈಪರೀತ್ಯ ತಾಳಿಕೆ ಕೃಷಿ ಪದ್ಧತಿಯನ್ನು ರೂಪಿಸಿ ಜಾರಿಗೊಳಿಸಬೇಕು. ರೈತರ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಮೌಲ್ಯವರ್ಧಿತ ತೆಂಗಿನ ಉತ್ಪನ್ನಗಳಾದ ನಾರು, ಚಿಪ್ಪು, ನೀರಾ, ಇದ್ದಿಲು, ಎಳನೀರು, ತಿರುಳು, ಮರ, ಗರಿಗಳನ್ನು ತಯಾರಿಸುವ ಕಾರ್ಖಾನೆಗಳಿಗೆ ಪ್ರೋತ್ಸಾಹ ಕೊಡಬೇಕು ಮತ್ತು ಅದನ್ನು ಮಾರುಕಟ್ಟೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿಯ ಕಾರ್ಯಕರ್ತರು, ಬಹುತೇಕ ರೈತರು ಇದ್ದರು.