ತಮಿಳುನಾಡು ಪೊಲೀಸ್ ಇಲಾಖೆಯ ವಿಶೇಷ ಸೂಚನೆಯ ಮೇರೆಗೆ, ಚೆನ್ನೈ ಪೊಲೀಸರು ಗುರುವಾರ ಬೆಳಗಾವಿಗೆ ಆಗಮಿಸಿ, ಅನಿಲ್ ಕೊಲ್ಲಾಪುರ, ರೋಹನ್ ಕಾಂಬ್ಳೆ ಮತ್ತು ಸರ್ವೇಶ್ ಕಿವಿ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸೈಬರ್ ಕ್ರೈಂ ತನಿಖಾಧಿಕಾರಿಗಳ ಪ್ರಕಾರ, ಆರೋಪಿಗಳು ನಕಲಿ ಕಂಪನಿಯ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದರು. ಈ ಖಾತೆಗಳನ್ನು ಬಳಸಿ ಆನ್ಲೈನ್ ವಂಚನೆ ಎಸಗಲಾಗುತ್ತಿತ್ತು.
ಆರೋಪಿಗಳನ್ನು ಬೆಳಗಾವಿಯ ಮೂರನೇ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಚೆನ್ನೈಗೆ ಕರೆದೊಯ್ಯಲಾಗಿದೆ. ಈವರೆಗೆ ಈ ಖಾತೆಗಳಿಗೆ ಸಂಬಂಧಿಸಿದಂತೆ 27 ವಂಚನೆ ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಗಳು ಬೆಂಗಳೂರು ಮತ್ತು ತುಮಕೂರಿನಲ್ಲಿಯೂ ಇಂತಹವೇ ರೀತಿಯ ವಂಚನೆ ಎಸಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಮಾಹಿತಿ ನೀಡಿದ ಅಧಿಕಾರಿಯೊಬ್ಬರು, “ಆರೋಪಿಗಳು ನಕಲಿ ಕಂಪನಿಗಳ ಹೆಸರಿನಲ್ಲಿ ಜನರನ್ನು ಮಿಕ್ಕಿಸುತ್ತಿದ್ದರು. ಬ್ಯಾಂಕ್ ಖಾತೆಗಳ ಮೂಲಕ ಹಣ ಸಂಗ್ರಹಿಸಿ, ತಕ್ಷಣವೇ ಅದನ್ನು ಬೇರೆ ಖಾತೆಗೆ ವರ್ಗಾಯಿಸುತ್ತಿದ್ದರು. ಪೊಲೀಸರು ಕೂಡ ಕೆಲವೊಂದು ಪ್ರಕರಣಗಳಲ್ಲಿ ಮೋಸಕ್ಕೊಳಗಾಗಿರುವ ಶಂಕೆ ಇದೆ,” ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಸೈಬರ್ ಕ್ರೈಂ ವಿಭಾಗ, “ಅಪರಿಚಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡುವ ಅಥವಾ ವೈಯಕ್ತಿಕ ಮಾಹಿತಿಯನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳುವ ಮೊದಲು ಜಾಗರೂಕತೆ ಅಗತ್ಯ. ಇಂತಹ ಅಜಾಗರೂಕತೆಗಳು ದೊಡ್ಡ ಮಟ್ಟದ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು,” ಎಂದು ಸೂಚಿಸಿದೆ.