ಡಿಸಿಸಿ (ಜಿಲ್ಲಾ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ) ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಗಂಭೀರ ಚರ್ಚೆ ನಡೆಸುತ್ತಿದ್ದು, ರೈತಪರವಾಗಿ ನಿರ್ಣಯ ಕೈಗೊಳ್ಳಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ನೇರ ಉತ್ತರ ನೀಡದೇ, “ರಾಜ್ಯದಲ್ಲಿ ಅಪೆಕ್ಸ್ ಬ್ಯಾಂಕ್ ಬಿಟ್ಟರೆ, ಡಿಸಿಸಿ ಬ್ಯಾಂಕ್ ದೊಡ್ಡದು. ಈ ಕುರಿತು ಸಚಿವ ಸತೀಶ ಜಾರಕಿಹೊಳಿ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮತ್ತಿತರ ನಾಯಕರೊಂದಿಗೆ ಚರ್ಚಿಸಿ, ಮುಂದಿನ ಹೆಜ್ಜೆ ಇಡಲಾಗುವುದು. ನಮ್ಮ ನಿಲುವು ಸಂಪೂರ್ಣವಾಗಿ ರೈತಪರವಾಗಿರಲಿದೆ,” ಎಂದು ಹೇಳಿದರು.
ಸುರ್ಜೇವಾಲಾ ಸಭೆ ಕುರಿತು ಸ್ಪಷ್ಟನೆ
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅವರು ಯಾವುದೇ ಇಲಾಖೆ ಅಧಿಕಾರಿಗಳ ಸಭೆ ನಡೆಸಿಲ್ಲ. ಎಲ್ಲ ಶಾಸಕ ಮತ್ತು ಮಂತ್ರಿಗಳನ್ನು ಕರೆದು ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಚರ್ಚಿಸಿದರು. ಅನುದಾನದ ಬಳಕೆ, ಕಾಮಗಾರಿಗಳ ಉಸ್ತುವಾರಿ ಕುರಿತು ಪ್ರಶ್ನಿಸಿದರು. ಇದು ಮೂರು ತಿಂಗಳಿಗೆ ಒಂದು ಬಾರಿ ನಡೆಯುವ ರೂಟೀನ್ ಕಾರ್ಯವಷ್ಟೇ,” ಎಂದರು.
‘ಕ್ರಾಂತಿ’ ಹೇಳಿಕೆಗೆ ಪ್ರತಿಕ್ರಿಯೆ
ಸಚಿವ ರಾಜಣ್ಣ ನೀಡಿದ್ದ “ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿ” ಸಂಭವಿಸುತ್ತದೆ ಎಂಬ ಹೇಳಿಕೆಯನ್ನು ಪ್ರಸ್ತಾಪಿಸಿದಾಗ, ಸಚಿವೆ ಹೇಳಿದರು, “ನಮ್ಮ ಪಕ್ಷವು ಹೈಕಮಾಂಡ್ ಹೇಳಿದಂತೆ ನಡೆಯುತ್ತದೆ. ಈ ಕುರಿತು ಮುಖ್ಯಮಂತ್ರಿ ಸಿಧ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.”
ಮಹದಾಯಿ ಕುರಿತು ಬಿಜೆಪಿ ಮೇಲೆ ವಾಗ್ದಾಳಿ
ಮಹದಾಯಿ ನದೀ ಜಲ ಯೋಜನೆ ಕುರಿತು ಮಾತನಾಡಿದ ಅವರು, “ಈ ಯೋಜನೆಗಾಗಿ ಹಲವು ವರ್ಷಗಳಿಂದ ಹೋರಾಟ ನಡೆದಿದೆ. ನಾವು ಕುಡಿಯುವ ನೀರಿಗಾಗಿ ಕೇಳುತ್ತಿದ್ದೇವೆ, ನೀರಾವರಿಗಾಗಿ ಅಲ್ಲ. ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಬಿಜೆಪಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಸಿಹಿ ಹಂಚಿತು. ಈಗ ಈ ಬಗ್ಗೆ ಮಾತನಾಡುತ್ತಿಲ್ಲ,” ಎಂದು ಬಿಜೆಪಿಯ ಆಚರಣೆ ಮೇಲೆ ಟೀಕೆ ಮಾಡಿದ ಸಚಿವೆ, “ಈ ಯೋಜನೆಯನ್ನು ಚುನಾವಣೆ ಅಸ್ತ್ರವಾಗಿ ಉಪಯೋಗಿಸಿದರು, ಆದರೆ ಅನುಷ್ಠಾನ ಬಗೆಗೆ ಕತ್ತಲೆಯೇ ಇದೆ” ಎಂದರು.
ಉತ್ತರ ಕರ್ನಾಟಕದ ಚಿತ್ರರಂಗಕ್ಕೆ ಹೊಸ ಆಶಾಕಿರಣ
ಸಿನಿಮಾ ಕ್ಷೇತ್ರದಲ್ಲಿ ಹೊಸ ಪ್ರಯತ್ನವನ್ನೂ ಪ್ರಸ್ತಾಪಿಸಿದ ಅವರು, “ಐರಾ ಪ್ರೊಡಕ್ಷನ್ ವರ್ಕ್ಸ್ ಅಡಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಡಾಲಿ ಧನಂಜಯ್ ನಾಯಕತ್ವದಲ್ಲಿ ಎರಡು ಚಿತ್ರಗಳನ್ನು ನಿರ್ಮಿಸುತ್ತಿದ್ದೇವೆ. ಈ ಸಿನಿಮಾಗಳಿಂದ ಉತ್ತರ ಕರ್ನಾಟಕವಷ್ಟೇ ಅಲ್ಲದೆ, ಇಡೀ ರಾಜ್ಯದ ಕಲಾವಿದರಿಗೆ ಅವಕಾಶ ಲಭ್ಯವಾಗಲಿದೆ,” ಎಂದು ಹೇಳಿದರು.