ಕಾರವಾರದಿಂದ ದೇವಳಮಕ್ಕಿ, ಶಿರ್ವೆಗೆ ಸಂಚರಿಸುವ ಸರ್ಕಾರಿ ಬಸ್ ಗುರುವಾರ ಏಕಾಏಕಿ ಹಳ್ಳಕ್ಕೆ ಇಳಿದು ನಿಂತಿದೆ. ಆದರೆ ಬಸ್‌ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪಾರಾಗಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಹಳೆಯ ಬಸ್ಸುಗಳ ದುರಸ್ತಿ ಮತ್ತು ನಿರ್ವಹಣೆಗೆ ಆಗ್ರಹಿಸಿದ್ದಾರೆ.
ದೇವರಮಕ್ಕಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಗೌಡ ಅವರು ಸುಸ್ಥಿತಿಯಲ್ಲಿರುವ ಬಸ್ ಒದಗಿಸುವಂತೆ ಸಾರಿಗೆ ಇಲಾಖೆಗೆ ಮನವಿ ಮಾಡಿದ್ದಾರೆ. ದೇವಳಮಕ್ಕಿ ಭಾಗದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಸಂಚಾರಕ್ಕೆ ಈ ಬಸ್ ಅನುಕೂಲಕರವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಬಸ್ ಆಗಾಗ್ಗೆ ಕೆಟ್ಟು ನಿಲ್ಲುತ್ತಿತ್ತು ಮತ್ತು ತಾಂತ್ರಿಕ ದೋಷಗಳು ಸಾಮಾನ್ಯವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಗುರುವಾರವೂ ತಾಂತ್ರಿಕ ದೋಷದಿಂದ ಬಸ್ ಹಳ್ಳಕ್ಕೆ ಇಳಿದು ನಿಂತಿತು. ಘಟನೆಯ ನಂತರ ಹಳ್ಳಕ್ಕೆ ಇಳಿದ ಬಸ್‌ನಿಂದ ವಿದ್ಯಾರ್ಥಿಗಳನ್ನು ಬೇರೆ ಬಸ್‌ಗೆ ಸ್ಥಳಾಂತರಿಸಲಾಯಿತು. ಆದರೆ, ವಿದ್ಯಾರ್ಥಿಗಳು ಆ ಬಸ್‌ನಲ್ಲಿ ಕರೆದೊಯ್ಯಲು ನಿರಾಕರಿಸಿದ ಕಾರಣ, ನಂತರ ದೇವಳಮಕ್ಕಿಗೆ ರೂಪಾಲಿ ಎಸ್. ನಾಯ್ಕ್ ಅವರು ನೀಡಿದ ಆಂಬುಲೆನ್ಸ್‌ನಲ್ಲಿ ವಿದ್ಯಾರ್ಥಿಗಳು ತೆರಳಬೇಕಾಯಿತು.
ಇದನ್ನೂ ಓದಿ: ಉತ್ತರ ಕನ್ನಡ | ಕನ್ನಡ ತರ್ಜುಮೆ ತಂತ್ರಾಂಶ ʼಕನ್ನಡ ಕಸ್ತೂರಿʼ ಶೀಘ್ರದಲ್ಲೇ ಬಿಡುಗಡೆ
ಸುಸ್ಥಿತಿಯಲ್ಲಿರುವ ಬಸ್ ಒದಗಿಸುವಂತೆ ಸಾರಿಗೆ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಸ್ಥಿತಿಯಲ್ಲಿರುವ ಬಸ್ ಅನ್ನು ನಿಗದಿತ ಸಮಯಕ್ಕೆ ಸರಿಯಾಗಿ ಓಡಿಸುವಂತೆ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.