“ಧರ್ಮಸ್ಥಳದ ವ್ಯಾಪ್ತಿ ಪ್ರದೇಶದಲ್ಲಿ ಸೌಜನ್ಯ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯ ದುರ್ಘಟನೆಯ ನಂತರ, ಪೂರ್ವದಲ್ಲಿ ಹಲವಾರು ಅಮಾಯಕ ಮಹಿಳೆಯರ ಅತ್ಯಾಚಾರ, ಕೊಲೆ ಹಾಗೂ ಪುರುಷರ ಕೊಲೆ ಪ್ರಕರಣಗಳು ನಡೆದಿವೆ’ ಎಂಬ ಆರೋಪವು ಕೇಳಿ ಬಂದಿದ್ದು, ಎಸ್ಐಟಿ ತನಿಖೆಗೆ ಸಂಪೂರ್ಣ ಅಧಿಕಾರ ಮತ್ತು ಸಹಕಾರ ನೀಡಬೇಕು” ಎಂದು ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಹೇಳಿದರು.
ಬಾಗಲಕೋಟೆ ಪಟ್ಟಣದ ಜಿಲ್ಲಾಡಳಿತ ಭವನದ ಎದುರಿಗೆ (ಹೆಚ್ ಶಿವರಾಮೇಗೌಡ) ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೌಜನ್ಯ ಪ್ರಕರಣ ದ ಕುರಿತು ಎಸ್ಐಟಿ ತನಿಖೆಗೆ ಸಂಪೂರ್ಣ ಅಧಿಕಾರ ನೀಡುವಂತೆ ಒತ್ತಾಯಿಸಿ ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಕರ್ನಾಟಕದ ಧರ್ಮಸ್ಥಳ ಕ್ಷೇತ್ರವು ಅಸಂಖ್ಯಾತ ಭಕ್ತರು ಆರಾಧಿಸುವ, ಪೂಜಿಸುವ ಧಾರ್ಮಿಕ ಸುಕ್ಷೇತ್ರ ಹಾಗೂ ಪ್ರವಾಸಿಗರನ್ನು ಸೆಳೆಯುವ ಅತ್ಯಂತ ಸುಂದರವಾದ ನಿಸರ್ಗ ಪ್ರದೇಶವಾಗಿದೆ. ಇಂತಹ ಪ್ರದೇಶದಲ್ಲಿ ‘ಸೌಜನ್ಯ ಎಂಬ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯ ದುರ್ಘಟನೆಯ ನಂತರ ಅದಕ್ಕೂ ಪೂರ್ವದಲ್ಲಿ ಹಲವಾರು ಅಮಾಯಕ ಮಹಿಳೆಯರ ಅತ್ಯಾಚಾರ ಮತ್ತು ಕೊಲೆ ಹಾಗೂ ಪುರುಷರ ಕೊಲೆ ಪ್ರಕರಣಗಳು ನಡೆದಿವೆ’ ಎಂಬ ಆರೋಪವು ಕೇಳಿ ಬಂದಿದೆ” ಎಂದರು.
“1994 ರಿಂದ 2014 ರವರೆಗೆ ಸದರಿ ಪುಣ್ಯಕ್ಷೇತ್ರದ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿದ್ದೆ’ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯು ‘ತಾನು ಕಾರ್ಯನಿರ್ವಹಿಸಿದ ಅವಧಿಯಲ್ಲಿ ನೂರಾರು ಶವಗಳನ್ನು ಗ್ರಾಮ ವ್ಯಾಪ್ತಿಯಲ್ಲಿ ಹೂತು ಹಾಕಿದ್ದೇನೆ. ಸರಕಾರ ಮತ್ತು ನ್ಯಾಯಾಂಗ ನನಗೆ ರಕ್ಷಣೆ ನೀಡಿದರೆ ಸಂಬಂಧಪಟ್ಟ ಇಲಾಖೆಯ ಸಮಕ್ಷಮ ಶವಗಳನ್ನು ಹೂತಿಟ್ಟ ಜಾಗಗಳನ್ನು ತೋರಿಸುತ್ತೇನೆ’ ಎಂದು ಗೌರವಾನ್ವಿತ ನ್ಯಾಯಾಧೀಶರ ಸಮ್ಮುಖದಲ್ಲಿ ಕಲಂ 164 ರ ಅಡಿ ಸಾಕ್ಷಿ ದೂರುದಾರನಾಗಿ ಹೇಳಿಕೆ ನೀಡಿದ್ದಾರೆ” ಎಂದು ಹೇಳಿದರು.
“ದೇಶದ ಜನತೆಯ ಮನಸ್ಸಿನಲ್ಲಿ ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಂತಿದೆ. ಆ ವ್ಯಕ್ತಿ ಹಲವಾರು ವರ್ಷಗಳ ಕಾಲ ಸ್ವಚ್ಛತಾ ಕಾರ್ಮಿಕನಾಗಿ ಕಾರ್ಯ ನಿರ್ವಹಿಸಿದ್ದಾನೆ. ಸದರಿ ಸಾಕ್ಷಿ ದೂರುದಾರ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ, ಕಲಂ 164 ರ ಅಡಿ ಗೌರವಾನ್ವಿತ ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆ ನೀಡಿ, ಬಹುತೇಕ ಒಂದು ತಿಂಗಳಾದರೂ ಇವತ್ತಿನವರೆಗೆ ಸಾಕ್ಷಿ ದೂರುದಾರನನ್ನು ಕರೆದುಕೊಂಡು ಶವಗಳನ್ನು ಹೂತಿಟ್ಟ ಜಾಗಗಳನ್ನು ಪರಿಶೀಲನೆ ಅಥವಾ ಪಂಚನಾಮೆ ಮಾಡುತ್ತಿಲ್ಲ. ಈ ನಡೆ ನೋಡಿದರೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ದಟ್ಟ ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಿದೆ. ಈ ಎಲ್ಲ ಆಘಾತಕಾರಿ ಬೆಳವಣಿಗೆ ಗಳನ್ನು ಕಂಡು ರಾಜ್ಯದ ಜನತೆಯ ಆಕ್ರೋಶ ಇಮ್ಮಡಿಯಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಎಲ್ಲವನ್ನು ಮನಗಂಡ ರಾಜ್ಯ ಸರಕಾರ ಅತ್ತ ಕಡೆ ಪ್ರಭಾವಿಗಳಿಗೂ ನೋವಾಗದಂತೆ ಇತ್ತ ಜನತೆಯ ಆಕ್ರೋಶಕ್ಕೂ ತಾತ್ಕಾಲಿಕ ಮುಲಾಮು ಸವರಿದಂತೆ ರಾಜಕೀಯ ಜಾಣ್ಮೆ ಪ್ರದರ್ಶಿಸುತ್ತಿದೆ. ಸಂಪೂರ್ಣ ಸ್ವಾತಂತ್ರ್ಯವಿಲ್ಲದಂತಹ, ಮಾನ್ಯ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ, ಅಧಿಕಾರವಿಲ್ಲದಂತಹ ವಿಶೇಷ ತನಿಖಾ ತಂಡ(ಎಸ್.ಐ.ಟಿ.) ರಚಿಸುವ ಮೂಲಕ ತೋರಿಸಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣಗಳ ತನಿಖೆಗೆ ಎಸ್.ಐ.ಟಿ. ರಚನೆ: ಡಿವೈಎಫ್ಐ ಸ್ವಾಗತ
“ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡ(ಎಸ್.ಐ.ಟಿ.) ಯು ಯಾವುದೇ ಪ್ರಭಾವಕ್ಕೂ ಒಳಗಾಗದೆ ಪಾರದರ್ಶಕ ತನಿಖೆ ನಡೆಸಿ ನಿಜವಾದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಬಸವರಾಜ ಧರ್ಮಂತಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಸಂಜೀವ ಡಿಗ್ಗಿ, ಪರಶುರಾಮ ಬುಳ್ಳಾಪೂರ, ಸಂತೋಷ ಚಿನಿವಾಲ, ಗಣೇಶ ನಾಯಕ, ತಿಮ್ಮಣ್ಣ ಕುರುಬರ, ಸಂತೋಷ ಚಿನಿವಾಲ, ರವಿ ಅಂಬಿಗೇರ, ಸ್ಪಂದನ ಮಾಚಾ, ಶರಣು ಗಾಣಿಗೇರ, ಮಲ್ಲು ಅಂಗಡಿ, ಮಂಜುಳಾ ಅಂಗಡಿ, ಶಾಂತಾ ಬಾವಿಕಟ್ಟಿ, ಕಸ್ತೂರಿಬಾಯಿ ಮೆಹರವಾಡೆ, ಶಬಾನಾ ಲಿಂಗಸೂರ, ಈಶ್ವರ ದೊಡಮನಿ, ಆನಂದ ಹಳ್ಳದಮನಿ, ಸಾದಿಕ್ ತಾಳಿಕೋಟಿ, ಅಬ್ದುಲ್ ಗಬ್ಬೂರ, ಪರಶುರಾಮ ಭಜಂತ್ರಿ, ಪರಶುರಾಮ ಕಲಾದಗಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.