ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯ ಸಮರ್ಪಕ ಅನುಷ್ಠಾನಗೊಳಿಸಲು ಕಾಯಕ ಬಂಧುಗಳ ಪಾತ್ರ ಪ್ರಮುಖವಾಗಿದೆ ಎಂದು ಭಾಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ್ ಬಿರಾದರ್ ಹೇಳಿದರು.
ಭಾಲ್ಕಿ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದೋಗ ಖಾತ್ರಿ ಕಾಯ್ದೆ ಅಡಿಯಲ್ಲಿ ತರಬೇತಿ ಪಡೆದ ಕಾಯಕ ಬಂಧುಗಳಿಗೆ ಒಂದು ದಿನದ ಪುನಶ್ಚೇತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʼಗ್ರಾಮಗಳಲ್ಲಿ ಮನರೇಗಾ ಯೋಜನೆಯಲ್ಲಿ ಕೆಲಸ ಸಿಗದೇ ಇರುವವರನ್ನು ಗುರುತಿಸಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮನೆ-ಮನೆಗೆ ತೆರಳಿ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಗ್ರಾಮೀಣಾಭಿವೃದ್ಧಿಗೆ ಮನರೇಗಾ ಕಾಮಗಾರಿಗಳು ಪೂರಕವಾಗಿವೆʼ ಎಂದರು.

ಮನರೇಗಾ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ ಮಾತನಾಡಿ, ʼಗ್ರಾಮೀಣ ಮಟ್ಟದಲ್ಲಿ ಕೂಲಿ ಕಾರ್ಮಿಕರಿಗೆ, ಅದರಲ್ಲೂ ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲರಾಗುವಂತೆ ಸರ್ಕಾರ ಮನರೇಗಾ ಯೋಜನೆ ರೂಪಿಸಿದೆ. ಕೂಲಿ ಕಾರ್ಮಿಕರ ಬಂಧುಗಳಾಗಿ ಕಾಮಗಾರಿ ನಿರ್ವಹಿಸಿದರೆ ಯೋಜನೆ ಅನುಷ್ಠಾನದಲ್ಲಿ ಹೆಚ್ಚಿನ ಸಾಧನೆ ಮಾಡಬಹುದು. ಗ್ರಾಮೀಣ ಜನರಿಗೆ ನರೇಗಾ ಯೋಜನೆಯ ಲಾಭ ಪಡೆಯುವಂತೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆʼ ಎಂದು ಹೇಳಿದರು.
ಸಹಯೋಗ ಸಂಸ್ಥೆ ಮುಖ್ಯಸ್ಥ ಶಫಿಯೋದ್ದಿನ್ ಅವರು ಕಾಯಕ ಬಂಧುಗಳ ಕರ್ತವ್ಯ, ಮನರೇಗಾ ಯೋಜನೆಯ ರೂಪುರೇಷಗಳು, ಸಮರ್ಪಕ ಅನುಷ್ಠಾನ ಕುರಿತು ಕಾಯಕ ಬಂಧುಗಳಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ : ಬೀದರ್ | ಮನೆ ಮಹಡಿ ಮೇಲೆ ‘ಡ್ರ್ಯಾಗನ್ ಫ್ರೂಟ್’ ಬೆಳೆದ ಉಪನ್ಯಾಸಕ!
ಕಾರ್ಯಕ್ರಮದಲ್ಲಿ ಮನರೇಗಾ ರಾಜ್ಯ ತರಬೇತಿದಾರ ನೀಲಕಂಠ, ಗಣಪತಿ ಹಾರಕೂಡೆ ಸೇರಿದಂತೆ ತಾಲೂಕು ಪಂಚಾಯಿತಿ ಸಿಬ್ಬಂದಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಕಾಯಕ ಬಂಧುಗಳು ಪಾಲ್ಗೊಂಡಿದ್ದರು.