ಲೈಂಗಿಕ ಕಿರುಕುಳದ ಆರೋಪಗಳಲ್ಲಿ ಉಡುಪಿ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್‌ರವರನ್ನು ತಪ್ಪಿತಸ್ಥರಾಗಿ ಸರ್ಕಾರದ ಆದೇಶ ಸಂಖ್ಯೆ: ಆಕುಕ117/MSA/2022 ದಿನಾಂಕ 03.02.2024ರಂದು ಐದು ಇನ್‌ಕ್ರಿಮೆಂಟ್ ಕಡಿತಗೊಳಿಸುವ ಶಿಕ್ಷೆಗೆ ಒಳಪಡಿಸಿ, ಜಿಲ್ಲಾ ಶಸ್ತ್ರ ಚಿಕಿತ್ಸಕರ ಹುದ್ದೆಯಿಂದ ಹಿಂತೆಗೆದು ಬೆಂಗಳೂರಿನ ಕಮಿಷನರ್ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು.
ಸರ್ಜನ್‌ರವರ ವರ್ಗಾವಣೆಯನ್ನು ರದ್ದತಿಗಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿದರೂ ನ್ಯಾಯಮಂಡಳಿ ಪ್ರಕರಣ ಸಂಖ್ಯೆ: 619/2025ರಂತೆ ಇದೇ ತಿಂಗಳಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಿದೆ. ಯಾವುದೇ ಪದೋನ್ನತಿಗೆ ಅರ್ಹರಲ್ಲದ ಇವರು ವರ್ಗಾವಣೆಗೊಂಡಿದ್ದರೂ, ಅದೇ ಹುದ್ದೆಯಲ್ಲಿ ಮುಂದುವರಿಯುತ್ತಿರುವುದನ್ನು ಕರ್ನಾಟಕ ದಲಿತ ಸಂಘಟನಾ ಸಮಿತಿ ಅಂಬೇಡ್ಕರವಾದ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ತರ್ ತೀವ್ರವಾಗಿ ಖಂಡಿಸಿದ್ದಾರೆ.
ಸರ್ಜನ್ ಡಾ| ಅಶೋಕ್‌ರವರು ಉಡುಪಿಯ ಆಸ್ಪತ್ರೆಯಲ್ಲೂ ಈ ರೀತಿ ಮಹಿಳಾ ಪೀಡಿತರಾಗಿದ್ದು, ಈ ಬಗ್ಗೆ ಅವರ ಮೇಲೆ ಸಂಬಂಧಪಟ್ಟ ಇಲಾಖೆ, ಸಂಘಟನೆಗಳಿಗೂ ದೂರು ಬಂದಿರುತ್ತದೆ. ಜಿಲ್ಲಾ ಶಸ್ತ್ರಚಿಕಿತ್ಸಕ ಹುದ್ದೆಗೆ ಯಾವುದೇ ಅರ್ಹತೆ ಹೊಂದಿರದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ತಪ್ಪಿತಸ್ಥರೆಂದು ಸಾಬೀತಾಗಿ ವರ್ಗಾವಣೆಗೊಂಡಿರುವ ಹಾಗೂ ಕೆ.ಎ.ಟಿಯಲ್ಲಿ ಅವರ ಪ್ರಕರಣ ತಿರಸ್ಕೃತಗೊಂಡಿರುವುದರಿಂದ ಅವರನ್ನು ತಕ್ಷಣದಿಂದ ಜಿಲ್ಲಾ ಸರ್ಜನ್ ಹುದ್ದೆಯಿಂದ ತಕ್ಷಣ ವರ್ಗಾವಣೆಗೊಳಿಸಬೇಕು. ಈ ಬಗ್ಗೆ ಸರ್ಕಾರ ವಿಳಂಬ ತೋರಿದಲ್ಲಿ ಜಿಲ್ಲಾಸ್ಪತ್ರೆಯ ಎದುರು ಬೃಹತ್ ಪ್ರತಿಭಟನೆಯ ಮೂಲಕ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ತರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.