ಗಾಝಾದಲ್ಲಿ ನಡೆಯುತ್ತಿರುವ ನರಹತ್ಯಾಕಾಂಡದ ವಿರುದ್ಧ ಪ್ರತಿಭಟನೆಗೆ ಅವಕಾಶ ಕೊಡಲು ಮುಂಬೈ ಪೊಲೀಸ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಮುಂಬೈ ಹೈಕೋರ್ಟ್ನಲ್ಲಿ ಹಾಕಿದ್ದ ಅರ್ಜಿಯನ್ನು ತಿರಸ್ಕರಿಸುತ್ತ ಪೀಠವು ಮಾಡಿರುವ ಸಂವಿಧಾನ-ವಿರೋಧಿ ಟಿಪ್ಪಣಿಗಳನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ.
ಅರ್ಜಿಯನ್ನು ತಿರಸ್ಕರಿಸಿದ ಪೀಠ ಬಾಂಬೆ ಹೈಕೋರ್ಟ್, “ನಮ್ಮ ದೇಶದಲ್ಲೇ ಸಾಕಷ್ಟು ಸಮಸ್ಯೆಗಳಿವೆ. ನೀವು ‘ದೂರದೃಷ್ಟಿ ಇಲ್ಲದವರು’ ಎಂದು ಹೇಳಲು ವಿಷಾದಿಸುತ್ತೇವೆ. ನಿಮ್ಮ ದೇಶವನ್ನೇ ಒಮ್ಮೆ ನೋಡಿ. ದೇಶಪ್ರೇಮಿಗಳಾಗಿ. ಇದು ದೇಶಪ್ರೇಮವಲ್ಲ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಪ್ಯಾಲೆಸ್ತೀನ್ ಪರ ಪ್ರತಿಭಟನೆ; ಪ್ರತಿಭಟನಾಕಾರರ ಬಂಧನ
ಇದನ್ನು ಖಂಡಿಸಿರುವ ಸಿಪಿಐಎಂ, “ಸಿಪಿಐಎಂ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸುತ್ತ ನ್ಯಾಯಾಲಯ ನಮ್ಮ ದೇಶಪ್ರೇಮವನ್ನು ಪ್ರಶ್ನಿಸುವ ಮಟ್ಟದವರೆಗೆ ಹೋಗಿದೆ. ವ್ಯಂಗ್ಯವೆಂದರೆ, ಈ ಪೀಠಕ್ಕೆ ಒಂದು ರಾಜಕೀಯ ಪಕ್ಷದ ಹಕ್ಕುಗಳನ್ನು ಪ್ರತಿಷ್ಠಾಪಿಸಿರುವ ಸಂವಿಧಾನದ ನಿಬಂಧನೆಗಳ ಬಗೆಗಾಗಲೀ, ಅಥವಾ ನಮ್ಮ ದೇಶದ ಚರಿತ್ರೆಯ ಬಗೆಗಾಗಲೀ ಮತ್ತು ಪ್ಯಾಲೆಸ್ತೇನಿಯನ್ನರೊಂದಿಗೆ ಮತ್ತು ಅವರ ನ್ಯಾಯಬದ್ಧ ತಾಯ್ನಾಡಿನ ಹಕ್ಕಿನೊಂದಿಗೆ ನಮ್ಮ ಜನತೆಯ ಸೌಹಾರ್ದದ ಬಗೆಗಾಗಲೀ ಅರಿವೇ ಇಲ್ಲದಿರುವಂತೆ ಕಾಣುತ್ತದೆ. ಪೀಠದ ಟಿಪ್ಪಣಿಗಳಲ್ಲಿ ಕೇಂದ್ರ ಸರ್ಕಾರದ ನಿಲುವಿನಲ್ಲಿನ ವಿಭಿನ್ನ ರಾಜಕೀಯ ಪಕ್ಷಪಾತದ ವಾಸನೆ ಸೂಸುತ್ತಿವೆ” ಎಂದು ಖೇದ ವ್ಯಕ್ತಪಡಿಸಿದೆ.
#CPIM Polit Bureau condemns Bombay High Court's anti-constitutional observations pic.twitter.com/5QouGk9QX9
— CPI (M) (@cpimspeak) July 25, 2025
“ಇದು ಎಂತಹ ಧೂಳು ಎಬ್ಬಿಸಬಹುದು ಎಂದು ನಿಮಗೆ ತಿಳಿದಿಲ್ಲ- ಪ್ಯಾಲೆಸ್ತೀನ್ ಅಥವಾ ಇಸ್ರೇಲ್ ಪಕ್ಷ ವಹಿಸುವುದು. ನೀವು ಯಾಕೆ ಹೀಗೆ ಮಾಡಬಯಸುತ್ತೀರಿ? ನೀವು ಪ್ರತಿನಿಧಿಸುವ ಪಕ್ಷವನ್ನು ನೋಡಿದರೆ, ಇದು ನಮ್ಮ ದೇಶದ ವಿದೇಶಾಂಗ ವ್ಯವಹಾರಗಳಿಗೆ ಏನು ಮಾಡಬಹುದು ಎಂದು ನಿಮಗೆ ತಿಳಿದಿಲ್ಲ ಎಂದು ಕಾಣುತ್ತದೆ” ಎಂದು ಪೀಠ ಹೇಳಿತು.
ಮುಂದುವರೆದು “ನೀವು ಭಾರತದಲ್ಲಿ ನೋಂದಣಿಯಾದ ಒಂದು ಸಂಘಟನೆ. ನೀವು ಕಸ ರಾಶಿ ಹಾಕುವುದು, ಪರಿಸರ ಮಾಲಿನ್ಯ, ಚರಂಡಿ ವ್ಯವಸ್ಥೆ, ನೆರೆ ಮುಂತಾದ ವಿಷಯಗಳನ್ನು ಎತ್ತಿಕೊಳ್ಳಬಹುದಿತ್ತು. ನಾವು ಉದಾಹರಣೆಗಳನ್ನು ಕೊಡುತ್ತಿದ್ದೇವಷ್ಟೇ. ನೀವು ಅವುಗಳ ಬಗ್ಗೆ ಪ್ರತಿಭಟಿಸುತ್ತಿಲ್ಲ, ಬದಲಿಗೆ ನಮ್ಮ ದೇಶದ ಹೊರಗೆ ಸಾವಿರಾರು ಮೈಲಿಗಳಾಚೆ ಏನೋ ನಡೆಯುತ್ತಿದ್ದರೆ ಅದನ್ನು ಪ್ರತಿಭಟಿಸುತ್ತಿದ್ದೀರಿ” ಎಂದು ಟಿಪ್ಪಣಿ ಮಾಡಿತು.
ಇದನ್ನು ಓದಿದ್ದೀರಾ? ಮಂಗಳೂರು | ಪ್ಯಾಲೆಸ್ತೀನ್ ಪರ ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು!
“ಈ ಟಿಪ್ಪಣಿಗಳು ಕಳೆದ ಶತಮಾನದ 40ರ ದಶಕದಲ್ಲಿ ಮಹಾತ್ಮ ಗಾಂಧಿ, ರಾಷ್ಟ್ರೀಯ ಆಂದೋಲನ ಮತ್ತು ನಂತರ ಸ್ವತಂತ್ರ ಭಾರತದ ವಿದೇಶಾಂಗ ಧೋರಣೆ ಪ್ಯಾಲೆಸ್ತೀನ್ ಜನತೆಯ ಸ್ವಾತಂತ್ರ್ಯ ಮತ್ತು ತಾಯ್ನಾಡಿನ ಹಕ್ಕನ್ನು ಬೆಂಬಲಿಸುವಲ್ಲಿ ಎಂದೂ ಹಿಂಜರಿದಿಲ್ಲ ಎಂಬ ಸಂಗತಿಯನ್ನು ನಿರ್ಲಕ್ಷಿಸುತ್ತವೆ” ಎಂದು ಸಿಪಿಐಎಂ ಪೊಲಿಟ್ಬ್ಯುರೊ ಹೇಳಿದೆ.
“ಅಲ್ಲದೆ, ಈ ಪೀಠ ಇಸ್ರೇಲಿ ಆಕ್ರಮಣಕ್ಕೆ ಜಾಗತಿಕವಾಗಿ ವ್ಯಕ್ತಗೊಂಡಿರುವ ನಿಸ್ಸಂದಿಗ್ಧ ಖಂಡನೆಯನ್ನು ಮತ್ತು ವಿಶ್ವಸಂಸ್ಥೆಯ ಸಂಘಟನೆಗಳ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ನಿಲುವುಗಳನ್ನು ಅರಿತಿಲ್ಲ ಎಂಬ ಸಂಗತಿಯನ್ನು ಕೂಡ ಬಟ್ಟಬಯಲಿಗೆ ತಂದಿದೆ” ಎಂದಿದೆ.
ಹಾಗೆಯೇ “ಇಂತಹ ದೂಷಣೀಯ ನಿಲುವನ್ನು ಖಡ ಖಂಡಿತವಾಗಿ ತಿರಸ್ಕರಿಸುವಲ್ಲಿ ನಮ್ಮ ಜತೆಗೂಡಿ” ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ದೇಶದ ಸ್ವಾತಂತ್ರ್ಯ ಪ್ರಿಯ ಮತ್ತು ಪ್ರಜಾಪ್ರಭುತ್ವಪ್ರಿಯ ಜನಗಳಿಗೆ ಮನವಿ ಮಾಡಿದೆ.
