ಡಾ. ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆಯಡಿಯಲ್ಲಿ ನಿರ್ಮಿಸಿಕೊಂಡಿದ್ದ ದಲಿತ ಶೋಭರಾಜ್ ಮನೆಯನ್ನು ಅರಣ್ಯ ಇಲಾಖೆಯು ಏಕಾಏಕಿ ಜೆಸಿಬಿಯಿಂದ ದ್ವಂಸಗೊಳಿಸಿ ನೆಲಸಮ ಮಾಡಿ ದೌರ್ಜನ್ಯ ಎಸಗಿ ಬಡದಲಿತ ಕುಟುಂಬವನ್ನು ಬೀದಿಗೆ ತಂದಿರುವುದು ಖಂಡನೀಯ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಹಾಗು ವಕೀಲ ಗಂಗಾಧರ್ ಬಹುಜನ್ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ ಮರಡಿಕೆರೆ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ದಲಿತ ಶೋಭರಾಜ ಮನೆ ದ್ವಂಸಗೊಳಿಸಿರುವ ಜಾಗಕ್ಕೆ ಭೇಟಿ ನೀಡಿ ಸತ್ಯಶೋಧನೆ ಮಾಡಿ ಮಾತನಾಡಿದರು.
“ಸದರಿ ಜಾಗವು ಕಂದಾಯ ಇಲಾಖೆಗೆ ಸೇರಿದ ಸರ್ವೆ ನಂಬರ್ 361/P1ರಲ್ಲಿ ಒಟ್ಟು 309 ಎಕರೆ ಜಾಗದ ಪೈಕಿ 37 ಎಕರೆ ಗೋಮಾಳದ ಜಾಗವಾಗಿದೆ. ಇದೇ ಜಾಗದಲ್ಲಿ ಕಳೆದ ಆರು ವರ್ಷಗಳಿಂದ ಮೂರ್ನಾಲ್ಕು ದಲಿತ ಕುಟುಂಬಗಳು ಸಿಮೆಂಟ್ ಶೀಟ್ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಈ ಮರಡಿಕೆರೆ ಗ್ರಾಮವು ಯಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, 2021-22ನೇ ಸಾಲಿನ ಡಾ. ಬಿ ಆರ್ ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಪ್ರಿಯಾ ಕೋಂ ಶೋಭರಾಜ್ ಹೆಸರಿಗೆ ಮಂಜೂರಾಗಿರುತ್ತದೆ. ಗ್ರಾಮ ಪಂಚಾಯಿತಿಯವರೇ ಸ್ಥಳಕ್ಕೆ ಬಂದು ನಿವೇಶನ ಜಾಗ ಪರಿಶೀಲನೆ ನಡೆಸಿ ಸದರಿ ಜಾಗವನ್ನು ಜಿಪಿಎಸ್ ಮಾಡಿ ಇವರ ಹೆಸರಿಗೆ ಮನೆ ಮಂಜೂರು ಮಾಡಿ ಕಾಮಗಾರಿ ಆದೇಶ ನೀಡಿದ್ದಾರೆ” ಎಂದರು.
“ನಾಲ್ಕು ಕಂತುಗಳಲ್ಲಿ ಒಟ್ಟು ಎರಡು ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿ ಮನೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿರುತ್ತದೆ. ಮೇ 31ರಂದು ಕೊನೆಯ ಕಂತಿನ ಐವತ್ತು ಸಾವಿರ ರೂಪಾಯಿ ಬಿಡುಗಡೆಯಾಗಿದೆ. ಹೀಗಿರುವಾಗ ಅರಣ್ಯ ಇಲಾಖೆಯ ಯಸಳೂರು ವಲಯದ ಆರ್‌ಎಫ್‌ಒ ಕೃಷ್ಣೇಗೌಡ ಎಂಬ ಅಧಿಕಾರಿ ಏಕಾಏಕಿ ಮನೆಯ ಮಾಲೀಕರಿಗೆ ಯಾವುದೇ ನೋಟಿಸ್ ನೀಡದೆ ಯಾವುದೇ ಮುನ್ಸೂಚನೆಯನ್ನು ಕೊಡದೆ ಏಕಾಏಕಿ ಜುಲೈ 3ರಂದು ಶೋಭರಾಜ್ ಮನೆ ಹತ್ತಿರ ಬಂದು, ʼನೀನು ಅರಣ್ಯ ಇಲಾಖೆಯ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡಿದ್ದೀಯಾ, ಮರಗಳನ್ನು ಕಡಿದು ನಾಶ ಮಾಡುತ್ತಿದ್ದೀಯʼ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿದ್ದೂ ಅಲ್ಲದೆ ದೈಹಿಕ ಹಲ್ಲೆ ಮಾಡಿ ಇಲಾಖೆಯ ವಾಹನದಲ್ಲಿ ಕೂರಿಸಿಕೊಂಡು ಹೋಗಿ ಅರಣ್ಯ ಇಲಾಖೆಯ ಕಚೇರಿಯ ಕೊಠಡಿಯಲ್ಲಿ ಕೂಡಿಹಾಕಿದ್ದಾರೆ. ಬಳಿಕ ತನ್ನ ಮನೆಯ ಸುತ್ತಮುತ್ತ ಇರುವ ಮರಗಳಿಗೆ ಯಾವುದೇ ರೀತಿ ಹಾನಿ ಮಾಡುವುದಿಲ್ಲವೆಂದು ಮುಚ್ಚಳಿಕೆ ಬರೆಯಿಸಿಕೊಂಡು ರಾತ್ರಿ 8ರ ಸಮಯದಲ್ಲಿ ಕಳುಹಿಸಿಕೊಟ್ಟಿದ್ದಾರೆ” ಎಂದು ಆರೋಪಿಸಿದರು.
“ಆರ್‌ಎಫ್‌ಒ ಕೃಷ್ಣೇಗೌಡನಿಂದ ಹಲ್ಲೆಗೊಳಗಾಗಿದ್ದ ದಲಿತ ಶೋಭರಾಜ್ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮರುದಿನ ಅಂದರೆ ಜುಲೈ 4ರಂದು ಹೊಸದಾಗಿ ನಿರ್ಮಿಸಿದ್ದ ಶೋಭರಾಜ್ ಮನೆಯನ್ನು ಏಕಾಏಕಿ ಜೆಸಿಬಿಯ ಮೂಲಕ ಧ್ವಂಸಗೊಳಿಸಿ ನೆಲಸಮಗೊಳಿಸಿದ್ದಾರೆ. ಅರಣ್ಯ ಇಲಾಖೆಯ ಯಸಳೂರು ವಲಯದ ಆರ್‌ಎಫ್‌ಒ ಕೃಷ್ಣೇಗೌಡರ ಇಂತಹ ಕ್ರಮ ಬಹಳ ಅಕ್ಷಮ್ಯವಾದದ್ದು” ಎಂದು ದೂರಿದರು.
“ಈ ಜಾಗವು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಗಾಗಲಿ, ಸಾಮಾಜೀಕರಣದ ವ್ಯಾಪ್ತಿಗಾಗಲಿ ಅಥವಾ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗಾಗಲಿ ಬರುವುದಿಲ್ಲ. ಎಲ್ಲ ದಾಖಲಾತಿಗಳಲ್ಲಿ ಸರ್ಕಾರಿ ಗೋಮಾಳವೆಂದು ಕಂಡುಬರುತ್ತಿದ್ದರು. ಅರಣ್ಯ ಇಲಾಖೆಯವರಿಗೆ ಈ ಜಾಗದ ಮೇಲೆ ಯಾವುದೇ ಅಧಿಕಾರ ಇಲ್ಲದಿದ್ದರೂ ಕೂಡ ಬಡದಲಿತರ ಮೇಲೆ ದೌರ್ಜನ್ಯ ಮಾಡುವ ಉದ್ದೇಶದಿಂದ ಈ ರೀತಿಯ ಕ್ರೌರ್ಯ ಎಸಗಿದ್ದಾರೆ. ಇದರಿಂದಾಗಿ ಶೋಭರಾಜ್ ಕುಟುಂಬ ಎರಡು ತಿಂಗಳ ಚಿಕ್ಕ ಮಗುವಿನೊಂದಿಗೆ ಬೀದಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸಕಲೇಶಪುರ ತಾಲೂಕಿನಲ್ಲಿ ಈಗಲೂ ಕೂಡ ಸಾವಿರಾರು ಎಕರೆ ಭೂಮಿಯನ್ನು ಕಬಳಿಸಿ ರೆಸಾರ್ಟ್, ಹೋಮ್ ಸ್ಟೇಗಳನ್ನು ನಿರ್ಮಿಸಿಕೊಂಡಿರುವವರು ಇದ್ದಾರೆ. ಇಂತಹ ಬಲಾಢ್ಯರನ್ನು ತೆರವುಗೊಳಿಸಲು ತಾಕತ್ತು ಇಲ್ಲದ ಈ ಅರಣ್ಯ ಅಧಿಕಾರಿ ಬಡಕೂಲಿಕಾರ್ಮಿಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ ಹೀರೋ ಆಗಲು ಹೊರಟಿದ್ದಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಶ್ರೀನಿವಾಸಪುರ | ಸರ್ಕಾರಿ ಉರ್ದು-ಆಂಗ್ಲ ಮಾಧ್ಯಮ ಶಾಲೆಗೆ ಪುರಸಭೆ ಅಧ್ಯಕ್ಷರ ಭೇಟಿ
“ಮುಖ್ಯಮಂತ್ರಿಯವರು, ಗೃಹಸಚಿವರು, ಕಂದಾಯ ಮಂತ್ರಿಗಳು ಮತ್ತು ಇಲಾಖೆಯ ಆಧಿಕಾರಿಗಳು, ಅರಣ್ಯ ಸಚಿವರು, ಹಾಸನ ಜಿಲ್ಲಾಡಳಿತ ಮತ್ತು ಸಕಲೇಶಪುರ ತಾಲೂಕು ಆಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿಮ್ಮದೇ ಸರ್ಕಾರದಿಂದ ಅನುದಾನ ನೀಡಿ ಮನೆ ನಿರ್ಮಿಸಿ ಕೊಟ್ಟು, ಆನಂತರ ನಿಮ್ಮದೇ ಅಧಿಕಾರಗಳಿಂದಲೇ ಮನೆ ಧ್ವಂಸಗೊಳಿಸುವುದೇ ನಿಮ್ಮ ಸರ್ಕಾರದ ಘನಾಂದಾರಿ ಕಾರ್ಯವೇ? ನಿಮ್ಮ ಸರ್ಕಾರಕ್ಕೆ ಕಿಂಚಿತ್ತಾದರೂ ದಲಿತರ ಮೇಲೆ ಕಾಳಜಿ ಇದ್ದರೆ, ಕೂಡಲೇ ತನ್ನ ಅಧಿಕಾರದ ವ್ಯಾಪ್ತಿ ಮೀರಿ ದಲಿತನ ಮನೆ ಧ್ವಂಸಗೊಳಿಸಿ ದೌರ್ಜನ್ಯ ಎಸಗಿರುವ ಸಕಲೇಶಪುರ ತಾಲೂಕು ಯಸಳೂರು ವಲಯದ ಆರ್‌ಎಫ್‌ಒ ಕೃಷ್ಣೇಗೌಡನನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ದಲಿತ ಶೋಭರಾಜನ ಮನೆ ಧ್ವಂಸಗೊಳಿಸಿರುವ ಜಾಗದಲ್ಲಿಯೇ ಸರ್ಕಾರದಿಂದ ಪುನಃ ಮನೆ ನಿರ್ಮಾಣ ಮಾಡಿಕೊಡಬೇಕು. ಇಲ್ಲದಿದ್ದರೆ ಇಡೀ ರಾಜ್ಯಾದ್ಯಂತ ದಲಿತರ ಮನೆ ಹಕ್ಕಿಗಾಗಿ ಬಹುಜನ ಸಮಾಜ ಪಾರ್ಟಿಯಿಂದ ತೀವ್ರ ಹೋರಾಟಕ್ಕೆ ಕರೆಕೊಡಬೇಕಾಗುತ್ತದೆ” ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾದ್ಯಕ್ಷ ಲಕ್ಮಣ್ ಕೀರ್ತಿ, ಜಿಲ್ಲಾ ಉಸ್ತುವಾರಿ ಮಲ್ಲಯ್ಯ, ಕಿರಣ್ ಕುಮಾರ್, ಜಯವರ್ಧನ್, ತಾಲೂಕು ಅದ್ಯಕ್ಷ ವೀರೇಶ್, ಜಿಲ್ಲಾ ಕಾರ್ಯದರ್ಶಿ ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಮಂಜಯ್ಯ, ಮುಖಂಡರಾದ ತುಂಗೇಶ್, ಅರುಣ್ ಕುಮಾರ್, ನಿಂಗರಾಜ್, ದೇವೇಂದ್ರ, ಚೈತ್ರಾನಂದ ಶೋಭರಾಜ್ ಮತ್ತು ಕುಟುಂಬದವರು ಹಾಗೂ ಗ್ರಾಮಸ್ಥರು ಇದ್ದರು.