ಶ್ರೀನಿವಾಸಪುರ ಪಟ್ಟಣದ ಜಾಕಿರ್ ಹುಸೇನ್ ಮೊಹಲ್ಲಾಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉರ್ದು ಹಾಗೂ ಆಂಗ್ಲ ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲೆಗೆ ಪುರಸಭೆ ಅಧ್ಯಕ್ಷ ಭಾಸ್ಕರ್ ಅವರು ದಿಢೀರ್ ಭೇಟಿ ನೀಡಿದ್ದು, ಶಾಲೆಯ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಪರಿಶೀಲನೆ ನಡೆಸಿದರು.
ಶಾಲೆಯ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದ ಅಧ್ಯಕ್ಷರು, ಶುದ್ಧ ಕುಡಿಯುವ ನೀರಿನ ಕೊರತೆಯ ಬಗ್ಗೆ ಗಮನಹರಿಸಿ ನೂತನ ನೀರಿನ ತೊಟ್ಟಿ(ಸಂಪ್) ನಿರ್ಮಿಸಲು ಹಾಗೂ ಶಾಲೆಗೆ ಅಗತ್ಯವಿರುವ ಇತರ ಮೂಲ ಸೌಲಭ್ಯಗಳನ್ನೂ ಕೂಡ ತ್ವರಿತವಾಗಿ ಒದಗಿಸುವ ಭರವಸೆ ನೀಡಿದರು.
“ಅಡುಗೆಮನೆಯ ಪರಿಸ್ಥಿತಿ, ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನ ಭೋಜನದ ಗುಣಮಟ್ಟ ಮತ್ತು ಪಾಕವಿಧಾನದ ಬಗ್ಗೆ ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಮಕ್ಕಳ ಅಭಿಪ್ರಾಯ ಆಧರಿಸಿ ಅಡುಗೆಮನೆ ಸುಧಾರಣೆಗಾಗಿ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.

ಗೌನಿಪಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಬಕ್ಷುಸಾಬ್ ಮಾತನಾಡಿ, “ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸೌಲಭ್ಯಗಳು ಅತ್ಯಂತ ಅಗತ್ಯವಿದೆ. ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಶಾಲೆಯ ಅಭಿವೃದ್ಧಿ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅರಣ್ಯ ಇಲಾಖೆಯಿಂದ ಭಿಕ್ಷಾ ಪರಿಹಾರ : ಬಡಗಲಪುರ ನಾಗೇಂದ್ರ
ಸ್ಥಳೀಯ ಸಮುದಾಯದ ಮುಖಂಡರು ಶಾಲೆಯ ಮುಂದಿನ ಬೆಳವಣಿಗೆಯ ಬಗ್ಗೆ ಹಿತಚಿಂತನೆ ವ್ಯಕ್ತಪಡಿಸಿ, ಉತ್ತಮ ಶೈಕ್ಷಣಿಕ ಪರಿಸರ ನಿರ್ಮಾಣಕ್ಕೆ ಸಕ್ರಿಯ ಸಹಕಾರ ನೀಡುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಪುರಸಭೆ ಸದಸ್ಯೆ ಸಂಜೆಯ ಸಿಂಗ್, ಗೌನಿಪಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯ ಖಾದರ್ ಬಾಷಾ, ಪ್ರಧಾನಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿ ಸದಸ್ಯ ಶಬ್ಬೀರ್ ಅಹ್ಮದ್, ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ಸಾಧಿಕ್, ಎಸ್‌ಡಿಎಂಸಿ ಅಧ್ಯಕ್ಷ ಹಿದಾಯತ್ ಉಲ್ಲಾ ಖಾನ್, ಡಾ ಎ ಪಿ ಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ ಉಪಾಧ್ಯಕ್ಷ ಅಲಿಯಾಸ್ ಪಾಷ, ಕಾರ್ಯದರ್ಶಿ ಎಚ್ ಅಕ್ರಂ ಪಾಷ, ಇಮ್ತಿಯಾಸ್ ಪಾಷ, ಸೈಯದ್ ಅಮ್ಜದ್ ಪಾಷಾ, ರಫೀಕ್ ಅಹ್ಮದ್, ನಾಗೇಶ್ ಹಾಗೂ ಇತರರು ಇದ್ದರು.