ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಾರ್ವಜನಿಕವಾಗಿ ‘ಅಯೋಗ್ಯ’ ಎಂದು ಕರೆದಿದ್ದ ಬಲಪಂಥೀಯ ನಾಯಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂಎಂ ಸುಂದ್ರೇಶ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠ ರದ್ದುಗೊಳಿಸಿದೆ.
2024ರ ಜನವರಿಯಲ್ಲಿ ಚಕ್ರವರ್ತಿ ಸೂಲಿಬೆಲೆ ರಾಯಚೂರಿನಲ್ಲಿ ಸಾರ್ವಜನಿಕ ಭಾಷಣ ಮಾಡಿದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಅಯೋಗ್ಯ’ ಎಂದು ಹೇಳಿದ್ದರು. ಈ ಸಂಬಂಧ ಕಾಂಗ್ರೆಸ್ ಕಲಬುರಗಿ ಘಟಕದ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ದೂರು ನೀಡಿದ್ದು, ಖರ್ಗೆ ಅವರ ಜಾತಿ ನಿಂದನೆ ಮತ್ತು ಹಿಂಸಾಚಾರ ಪ್ರಚೋದಿಸುವ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನು ಓದಿದ್ದೀರಾ? ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬದ ಮೇಲೇಕೆ ಆರೆಸ್ಸೆಸ್‌ನಿಂದ ವ್ಯವಸ್ಥಿತ ದಾಳಿ?
ತಮ್ಮ ವಿರುದ್ಧ ದಾಖಲಾಗಿರುವ ದೂರನ್ನು ಸೂಲಿಬೆಲೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, 2024ರಲ್ಲಿ ಕೋರ್ಟ್ ಎಸ್‌ಸಿ/ಎಸ್‌ಟಿ ಕಾಯ್ದೆಯ ಆರೋಪಗಳನ್ನು ರದ್ದುಗೊಳಿಸಿತ್ತು. ಆದರೆ ಇತರೆ ಅಪರಾಧಗಳಡಿ ತನಿಖೆ ಮುಂದುವರಿಸಲು ಕೋರ್ಟ್ ಅವಕಾಶ ನೀಡಿತ್ತು. ಅದಾದ ಬಳಿಕ ಸೂಲಿಬೆಲೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ‘ಅಯೋಗ್ಯ’ ಪದವನ್ನು ‘ರಾಸ್ಕಲ್’ ಎಂದು ತಪ್ಪಾಗಿ ಅರ್ಥೈಸಿದೆ ಎಂದು ವಾದಿಸಿದರು.
‘ಅಯೋಗ್ಯ’ ಎಂಬ ಪದವು ಹಲವು ಸಮಾನಾರ್ಥಕ ಪದಗಳನ್ನು ಹೊಂದಿದ್ದು, ಅದರ ಅತ್ಯಂತ ಹತ್ತಿರದ ಪದ ‘ನಿಷ್ಪ್ರಯೋಜಕ’ ಎಂದು ಸೂಲಿಬೆಲೆ ವಾದಿಸಿದರು. ಹೈಕೋರ್ಟ್ ಈ ಪದವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದೂ ಹೇಳಿದರು. ವಾದ ಆಲಿಸಿದ ಸುಪ್ರೀಂ ಕೋರ್ಟ್ ಸೂಲಿಬೆಲೆ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದೆ. ಹಿರಿಯ ವಕೀಲ ಅರುಣಾ ಶ್ಯಾಮ್ ಸೂಲಿಬೆಲೆ ಪರ ವಾದ ಮಂಡಿಸಿದರು.
