ಮಣಿಪುರ ಹಿಂಸಾಚಾರ | ಎಂದಿಗೂ ಶಾಂತಿ ಕಾಣದ ʻಈಶಾನ್ಯ ಭಾರತʼ

Date:

Advertisements
ಒಂದಿಲ್ಲೊಂದು ಸಂಘರ್ಷದ ನೆಲೆಯಾಗಿರುವ ಈಶಾನ್ಯ ಭಾರತದಲ್ಲೀಗ ಕುಕೀ ಮತ್ತು ಮೈತೇಯಿಗಳ ಸಮರ ಶುರುವಾಗಿದೆ. ಮಣಿಪುರದಲ್ಲಿ ನಾಗರಿಕ ಯುದ್ಧವೇ ನಡೆಯುತ್ತಿದೆ. ಹಿಂದೂವೀಕರಣಗೊಂಡ ಪ್ರಭಾವಿ ಮೈತೇಯಿ ಜನಾಂಗ ಮುಖ್ಯವಾಗಿ ಕುಕಿಗಳನ್ನು ಟಾರ್ಗೆಟ್ ಮಾಡಿದೆ. ಎಸ್ಟಿ ಮೀಸಲಾತಿಯನ್ನು ಬಹುಸಂಖ್ಯಾತ ಮೈತೇಯಿಗಳಿಗೆ ನೀಡಿದರೆ ಪರಿಶಿಷ್ಟ ಪಂಗಡದಲ್ಲಿನ ಕುಕಿ ಮತ್ತು ನಾಗಾಗಳಿಗೆ ಅನ್ಯಾಯವಾಗುತ್ತದೆ. ಮೈತೇಯಿಗಳು ಗುಡ್ಡಗಾಡು ಪ್ರದೇಶದಲ್ಲಿ ಭೂ ಒಡೆತನದ ಹಕ್ಕು ಪಡೆದುಕೊಳ್ಳುತ್ತಾರೆ, ಸರ್ಕಾರಿ ಉದ್ಯೋಗದಲ್ಲೂ ತಮ್ಮ ಪ್ರಭಾವವನ್ನು ಹೊಂದುತ್ತಾರೆಂಬುದು ಬಿಕ್ಕಟ್ಟಿಗೆ ಕಾರಣವಾಗಿದೆ.

ʼನಿಮ್ಮೊಡನಿದ್ದೂ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲೇ ಬೇರೊತ್ತಿದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸʼ

ಕವಿ ನಿಸಾರ್ ಅಹಮ್ಮದ್ ಅವರ ಈ ಸಾಲುಗಳು ಈಶಾನ್ಯ ಭಾರತದ ಬಗ್ಗೆ ಚಿಂತಿಸಲು ಹೊರಟಾಗ ದುತ್ತೆಂದು ಸುಳಿದು ಹೋಗುತ್ತವೆ. ಈ ಕವಿತೆಯಲ್ಲಿನ ಪರಕೀಯ ಭಾವನೆ ಅಥವಾ ಏಕ ಭಾರತ ಪರಿಕಲ್ಪನೆಯೊಳಗೆ ಬಹುತ್ವ ಭಾರತ ಎದುರಿಸುತ್ತಿರುವ ನೋವು- ಈಶಾನ್ಯ ಭಾರತಕ್ಕೂ ಅನ್ವಯವಾಗುತ್ತವೆ. ʼಈಶಾನ್ಯ ಭಾರತʼ ಎನ್ನುವಾಗಲೇ ಪ್ರಧಾನ ಭಾರತದಿಂದ ಹೊರಗಿನ ಪ್ರದೇಶ ಎಂಬ ಧೋರಣೆ ಸುಳಿದು ಹೋದಂತೆ ಭಾಸವಾಗುತ್ತದೆ. ಇದು ಯಾವುದಕ್ಕೆ ಈಶಾನ್ಯ? ನಿಂತ ನೆಲವೇ ನಮ್ಮ ಕೇಂದ್ರವಾಗಿರುವಾಗ ನಾವು ಯಾರಿಗೆ ಈಶಾನ್ಯವಾಗಲು ಸಾಧ್ಯ? ಎಂಬುದು ಇಲ್ಲಿನ ಜನರ ಪ್ರಶ್ನೆ. ಒಕ್ಕೂಟ ವ್ಯವಸ್ಥೆಯ ಪ್ರತಿ ರಾಜ್ಯವೂ ತನ್ನದೇ ಅಸ್ವಿತ್ವವನ್ನು ಹೊಂದಿದ್ದರೂ ಕೇಂದ್ರೀಕರಣದ ಕಬಂಧಬಾಹುಗಳಿಗೆ ಸಿಕ್ಕಿ ನಜ್ಜುಗುಜ್ಜಾಗುತ್ತಿರುವುದು ದುರಂತವೇ ಸರಿ.

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈಶಾನ್ಯ ಭಾರತವು ಪ್ರಧಾನ ಭಾರತದ ದೃಷ್ಟಿಗೆ ಭಿನ್ನವಾಗಿಯೇ ಉಳಿದಿತ್ತು. ಐತಿಹಾಸಿಕ ಪಲ್ಲಟಗಳಿಂದಾಗಿ ಭಾರತದ ಭಾಗವಾದರೂ ಭಿನ್ನ ಸಂಸ್ಕೃತಿ, ಬುಡಕಟ್ಟು ಅಸ್ಮಿತೆಯ ಈ ನೆಲ ಇತರ ಬಹುಮುಖಿ ಭಾರತಕ್ಕೂ ಬಹುತೇಕ ಅಪರಿಚಿತವಾಗಿತ್ತು ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಹೀಗಾಗಿಯೇ ಕಳೆದ ತೊಂಬತ್ತು ದಿನಗಳಿಂದ ಈಶಾನ್ಯ ಭಾರತದ ಮಣಿಪುರ ರಾಜ್ಯದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದರೂ, ನಿನ್ನೆ ಮೊನ್ನೆಯವರೆಗೆ ಅಂದರೆ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯ ಪ್ರಕರಣ ಹೊರಬೀಳುವವರೆಗೂ ಭಾರತದ ಇತರ ಭಾಗಗಳು ಬೆಚ್ಚಿದ್ದಿಲ್ಲ. ಭಾರತದ ಭಾಗವೇ ಆಗಿ, “ನಿಮ್ಮೊಡನಿದ್ದೂ ನಿಮ್ಮಂತಾಗದೆʼʼ ಎಂಬಂತಿರುವ ಈಶಾನ್ಯ ಭಾರತ ಮತ್ತೆ ಚರ್ಚೆಯ ಬಿಂದುವಾಗಿದೆ. ಬಹುಸಂಖ್ಯಾತ, ಪ್ರಭಾವಿ ಮೈತೇಯಿಗಳಿಗೆ ಎಸ್.ಟಿ. ಮೀಸಲಾತಿ ನೀಡಲು ಇಲ್ಲಿನ ಬಿಜೆಪಿ ಸರ್ಕಾರ ಮುಂದಾಗಿದ್ದರಿಂದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಭುಗಿಲೆದ್ದ ಹಿಂಸಾಚಾರ ತಡವಾಗಿಯಾದರೂ ಘಾಸಿಗೊಳಿಸಿದೆ. ನಿಜದ ಬಹುತ್ವ ಭಾರತ ಒಂದಿಷ್ಟಾದರೂ ಕಣ್ಣು ತೆರೆದು ಸಮಸ್ಯೆಯ ಮೂಲವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಕ್ಕೆ ಇಳಿದಿದೆ.

ಎರಡು ಜನಾಂಗಗಳ ನಡುವೆ ಉಂಟಾಗಿರುವ ಅಪಕಲ್ಪನೆಗೆ ದಶಕಗಳ ಕಾಲ ನಡೆದಿರುವ ಸಾಂಸ್ಕೃತಿಕ, ರಾಜಕೀಯ ಸಂಘರ್ಷಗಳು ಕಾರಣವಾಗಿವೆ. ಕಾಡು ಮತ್ತು ಕಣಿವೆ ಎಂಬ ತಾರತಮ್ಯ ಹಾಗೂ ಪ್ರತ್ಯೇಕ ಅಸ್ತಿತ್ವಗಳಿಂದುಂಟಾದ ಚಾರಿತ್ರಿಕ ಲೋಪದೋಷಗಳಿವೆ. ಅವುಗಳೀಗ ಸರಿಪಡಿಸಲಾಗದ ಗಾಯಗಳಾಗಿ ಮಾರ್ಪಟ್ಟಿರುವುದು ದುರಂತವೇ ಸರಿ.

Advertisements

ಸದಾ ಒಂದಲ್ಲ ಒಂದು ಸಂಘರ್ಷದ ನೆಲವಾಗಿರುವ ಈಶಾನ್ಯ ಪ್ರದೇಶದ ಸ್ಥೂಲ ಪರಿಚಯವನ್ನು, ಕೆಲವು ಐತಿಹಾಸಿಕ ಸತ್ಯಗಳನ್ನು ಅರಿತುಕೊಂಡರೆ ಮಾತ್ರ ಮಣಿಪುರದಲ್ಲಿ ಇಂದು ಉಂಟಾಗಿರುವ ಬಿಕ್ಕಟ್ಟಿನ ಮೂಲ ಸ್ಪಷ್ಟವಾಗಬಹುದು.

ಭಾರತದ ಭೂಪಟದಲ್ಲಿ ಮರದ ಕೊಂಬೆಯೊಂದಕ್ಕೆ ಹೆಜ್ಜೇನು ಕಟ್ಟಿದಂತೆ ಕಾಣುವ ʼಈಶಾನ್ಯ ಭಾರತʼವು ಎಂಟು ರಾಜ್ಯಗಳನ್ನು ಹೊಂದಿರುವ ಮತ್ತು ಚೀನಾ, ನೇಪಾಳ, ಮಯನ್ಮಾರ್ (ಬರ್ಮಾ), ಬಾಂಗ್ಲಾದೇಶ, ಭೂತನ್‌ನೊಂದಿಗೆ ಗಡಿಭಾಗಗಳನ್ನು ಹಂಚಿಕೊಂಡಿರುವ ಪ್ರದೇಶ. ಈ ಜೇನುಗೂಡನ್ನು ʼಈಶಾನ್ಯ ಭಾರತ ಪ್ರದೇಶʼ (ಎನ್ಇಆರ್- ನಾರ್ತ್ ಈಸ್ಟ್ ರೀಜನ್) ಎಂದೂ ಕರೆದುಕೊಂಡಿದ್ದೇವೆ.

noth
ಈಶಾನ್ಯ ಭಾರತ (PC: https://www.tni.org/)

ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಂ, ನಾಗಲ್ಯಾಂಡ್, ತ್ರಿಪುರ- ಈ ರಾಜ್ಯಗಳನ್ನು ʻಸೆವನ್ ಸಿಸ್ಟರ್ʼ ಎಂದು ಕರೆದರೆ ʻಸಿಕ್ಕಿಂʼ ರಾಜ್ಯವನ್ನು ʼಬ್ರದರ್ ಸ್ಟೇಟ್ʼ ಎಂದು ಚೆಂದವಾಗಿ ಬಣ್ಣಿಸಿದ್ದೇವೆ.

ಈ ಎಂಟು ರಾಜ್ಯಗಳು 5,182 ಕಿಮೀಯಷ್ಟು ವ್ಯಾಪ್ತಿಯಲ್ಲಿ ನೆರೆಯ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಈಶಾನ್ಯ ಭಾರತ ಪ್ರದೇಶದ ಉತ್ತರ ಭಾಗವು ಚೀನಾದೊಂದಿಗೆ 1,395 ಕಿ.ಮೀ., ಪೂರ್ವದಲ್ಲಿ ಮಯನ್ಮಾರ್‌ನೊಂದಿಗೆ 1,640 ಕಿ.ಮೀ., ನೈರುತ್ಯದಲ್ಲಿ ಬಾಂಗ್ಲಾದೇಶದೊಂದಿಗೆ 1,596 ಕಿ.ಮೀ., ಪಶ್ಚಿಮದಲ್ಲಿ ನೇಪಾಳದೊಂದಿಗೆ 97 ಕಿ.ಮೀ., ವಾಯುಯ್ಯದಲ್ಲಿ 455 ಕಿ.ಮೀ. ಭೂತಾನ್‌ನೊಂದಿಗೆ ಚಾಚಿಕೊಂಡಿವೆ. ವಿವಿಧ ದೇಶಗಳಿಂದ ಸುತ್ತುವರಿದ ಈ ಈಶಾನ್ಯ ಭಾರತವನ್ನು ಭಾರತದ ಇತರ ಭಾಗಗಳೊಂದಿಗೆ ʼಸಿಲಿಗುರಿ ಕಾರಿಡಾರ್ʼ ಕನೆಕ್ಟ್ ಮಾಡುತ್ತದೆ. ಪಶ್ಚಿಮ ಬಂಗಾಳದ ʼಚಿಕನ್ ನೆಕ್ʼ ಎಂದೂ ಈ ಸಿಲಿಗುರಿ ಕಾರಿಡಾರ್ ಭಾಗವನ್ನು ಗುರುತಿಸಲಾಗುತ್ತಿದೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಸಿಲಿಗುರಿ ಪ್ರದೇಶವು ಭೂತಾನ್, ನೇಪಾಳ, ಬಾಂಗ್ಲಾದೇಶ, ಸಿಕ್ಕಿಂ, ಡಾರ್ಜಿಲಿಂಗ್ ಮತ್ತು ಈಶಾನ್ಯ ಭಾರತಕ್ಕೆ ಸಂಪರ್ಕ ಕಲ್ಪಿಸುವ ಸ್ಥಳ. ಬಹುಶಃ ಸಿಲಿಗುರಿ ಪಾಯಿಂಟ್ ಇಲ್ಲವಾಗಿದ್ದರೆ ಇಡೀ ಈಶಾನ್ಯ ಭಾರತಕ್ಕೆ ಭಾರತದ ಇತರ ಪ್ರದೇಶದೊಂದಿಗೆ ನೇರವಾಗಿ ಭೂಮಾರ್ಗವೇ ಇರುತ್ತಿರಲಿಲ್ಲವೇನೋ. ಏಕೆಂದರೆ ಬಾಂಗ್ಲಾದೇಶ, ನೇಪಾಳ, ಭೂತಾನ್ ದೇಶಗಳು ಈ ಸಿಲಿಗುರಿಯ ಸುತ್ತ ವ್ಯಾಪಿಸಿವೆ. ಈಶಾನ್ಯ ಭಾರತವೆಂಬ ಜೇನುಗೂಡು ಈ ಒಂದು ಕೊಂಡಿಯಲ್ಲಿ ಕೂಡಿಕೊಂಡು ಭಾರತದ ಪ್ರಧಾನ ಭೂಭಾಗದೊಂದಿಗೆ ಅಂಟಿಕೊಂಡಿದೆ.

ಬ್ರಹ್ಮಪುತ್ರ ನದಿ ಕಣಿವೆ ಮತ್ತು ಇಂಪಾಲ ನದಿ ಕಣಿವೆಯ ಪ್ರದೇಶಗಳಿಂದಾಗಿ ಸೆಳೆಯುವ ಈ ಭೂಭಾಗವು ಐತಿಹಾಸಿಕವಾಗಿ ಮಣಿಪುರ ಮತ್ತು ಅಸ್ಸಾಂ ಪ್ರಾಂತ್ಯಗಳಾಗಿಯೇ ಪ್ರಧಾನವಾಗಿ ಗುರುತಿಸಲ್ಪಟ್ಟಿತ್ತು. ಅಂದಹಾಗೆ ಅಸ್ಸಾಂ ರಾಜ್ಯದ ಗುವಾಹಟಿ ನಗರವನ್ನು ‘ಈಶಾನ್ಯ ಭಾರತಕ್ಕೆ ಗೇಟ್ ವೇ’ ಎಂದು ಕರೆಯಲಾಗುತ್ತದೆ. ಜೊತೆಗೆ ಗುಹಾಹಟಿಯು ಈಶಾನ್ಯ ಭಾರತದ ಅತಿದೊಡ್ಡ ನಗರವೂ ಹೌದು.

ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ 1971ರಲ್ಲಿ ರಚನೆಯಾದ ʻನಾರ್ತ್ ಈಸ್ಟರ್ನ್ ಕೌನ್ಸಿಲ್ʼ (ಎನ್ಇಸಿ) ಮೊದಲಿಗೆ ಏಳು ರಾಜ್ಯಗಳನ್ನು ಒಳಗೊಂಡಿತ್ತು. 2002ರಲ್ಲಿ ಸಿಕ್ಕಿಂ ರಾಜ್ಯವನ್ನು ಸೇರಿಸಲಾಯಿತು. ಇಲ್ಲಿನ ನಾಗರಿಕರ ದಂಗೆಗಳು, ದೆಹಲಿ ದರ್ಬಾರ್ನೊಂದಿಗೆ ನಡೆಸಿದ ಸುದೀರ್ಘ ಸಂಘರ್ಷಗಳ ಫಲವಾಗಿ ಈ ಭಾಗವನ್ನು ಅಂತಿಮವಾಗಿ ಎಂಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು. ರಾಜ್ಯದ ಸ್ಥಾನಮಾನವನ್ನು ನೀಡುವ ಮೂಲಕ ಭಾರತ ಸರ್ಕಾರ ಈ ಭಾಗದಲ್ಲಿ ತನ್ನ ಅಧಿಪತ್ಯವನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿತು ಎಂಬುದು ಕಟುಸತ್ಯ.

ಈಶಾನ್ಯ ಭಾರತ ಮತ್ತು ಐತಿಹಾಸಿಕ ಪಲ್ಲಟಗಳು

ಭಾರತವನ್ನಾಳಿದ ಯಾವುದೇ ರಾಜರುಗಳ ಕಾಲದಲ್ಲೂ ಈಶಾನ್ಯ ಭಾರತದ ಈ ಭಾಗಗಳು ಆಳ್ವಿಕೆ ಒಳಪಟ್ಟಿದ್ದಿಲ್ಲ ಎನ್ನುತ್ತಾರೆ ಇತಿಹಾಸ ತಜ್ಞರು. ಪುರಾಣ ಭಾರತದ ಕಾಲದಲ್ಲಾಗಲೀ, ಬ್ರಿಟಿಷ್ ಪೂರ್ವ ಭಾರತದಲ್ಲಾಗಲೀ ಈ ಭೂಭಾಗವು ಭಾರತಕ್ಕೆ ಸೇರಿರಲಿಲ್ಲ. ಮೊಘಲರ ಕಾಲದಲ್ಲಿ ನಡೆದ ಸರೈಘಾಟ್ ಯುದ್ಧದಿಂದಾಗಿ ಬ್ರಹ್ಮಪುತ್ರ ನದಿಯನ್ನು ದಾಟಿ ಅಸ್ಸಾಂವರೆಗೂ ಸಾಮ್ರಾಜ್ಯ ವಿಸ್ತರಣೆಯಾಗಿತ್ತಷ್ಟೇ. ಆದರೆ ಅಲ್ಲಿ ಸಾಂಸ್ಕೃತಿಕ ಹಿತಾಸಕ್ತಿಗಳಾವುವು ಇಲ್ಲವಾಗಿದ್ದವು. ಕೇವಲ ರಾಜಕೀಯ ದೃಷ್ಟಿಯಷ್ಟೇ ಪ್ರಧಾನವಾಗಿತ್ತು.

ಬರ್ಮಾ (ಮಯನ್ಮಾರ್) ದೇಶದೊಂದಿಗೆ ಬಹುತೇಕ ಹಂಚಿಹೋಗಿದ್ದ ಈ ಭಾಗಗಳು ಭಾರತಕ್ಕೆ ಒಳಪಟ್ಟಿದ್ದು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ. 1824-26ರಲ್ಲಿ ನಡೆದ ʼಆಂಗ್ಲೋ-ಬರ್ಮಾʼ ಯುದ್ಧದ ಫಲವಾಗಿ ʼಯಾಂದಬೂʼ ಒಪ್ಪಂದವಾಯಿತು. ಅದರ ಫಲವಾಗಿ ಅಸ್ಸಾಂ ಮತ್ತು ಮಣಿಪುರದ ಈ ಭಾಗಗಳು ಬ್ರಿಟಿಷರ ಆಳ್ವಿಕೆಯ ಭಾರತಕ್ಕೆ ಅಧೀನವಾದವು. ಬ್ರಹ್ಮಪುತ್ರ ನದಿ ಕಣಿವೆಯ ಅಸ್ಸಾಂ, ಇಂಪಾಲ ನದಿ ಕಣಿವೆಯ ಮಣಿಪುರ ಭಾಗವೆಂದೇ ಇವುಗಳನ್ನು ಪ್ರಧಾನವಾಗಿ ನೋಡಲಾಗುತ್ತಿತ್ತು. ಈ ಎರಡು ಸಂಸ್ಥಾನಗಳು ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರತ್ಯೇಕವಾಗಿಯೇ ಉಳಿದವು. ಈ ಎರಡು ನದಿ ಕಣಿವೆಯ ಫಲವತ್ತಾದ ಭೂಭಾಗಗಳನ್ನು ಬಿಟ್ಟರೆ, ಇನ್ನುಳಿದಂತೆ ವ್ಯಾಪಿಸಿದ ಕಾಡಿನ ಭಾಗ ಬ್ರಿಟಿಷರಿಗೆ ಬೇಕಿರಲಿಲ್ಲ. ಗುಡ್ಡಗಾಡು ಪ್ರದೇಶವು ನಷ್ಟದಾಯಕವೂ, ನಿಷ್ಪ್ರಯೋಜಕ ಆಗಿ ತೋರಿದ್ದರಿಂದ ವಸಾಹತುಶಾಹಿಗಳ ಆಸಕ್ತಿ ಕಣಿವೆಗಳಿಗೆ ಸೀಮಿತವಾಯಿತು. ಹೀಗಾಗಿ ಕಣಿವೆ ಮತ್ತು ಕಾಡು- ಎಂಬ ತಾರತಮ್ಯ ಬ್ರಿಟಿಷರ ಕಾಲದಲ್ಲೇ ಶುರುವಾಯಿತು. ಆಡಳಿತಾತ್ಮಕ ಹಿಡಿತ ಹೊಂದಿದ್ದ ಕಣಿವೆ ಭಾಗದಲ್ಲಿನ ಮೈತೇಯಿಗಳು ಅಭಿವೃದ್ಧಿಯನ್ನು ಕಂಡರೆ, ಅರಣ್ಯ ಭಾಗದಲ್ಲಿನ ಜನರು (ಕುಕಿಗಳು ಮತ್ತು ನಾಗಾಗಳು) ಹಿಂದುಳಿಯುತ್ತಲೇ ಹೋದರು. ಗುಡ್ಡುಗಾಡಿನಲ್ಲಿ ನೆಲೆಸಿದ ಈ ಜನರಿಗೆ ಪೋಡು ವ್ಯವಸಾಯವಷ್ಟೇ ಜೀವನಾಧಾರವಾಗಿತ್ತು. ಕಾಡು ಮತ್ತು ಕಣಿವೆಯ ತಾರತಮ್ಯ ಸ್ವಾತಂತ್ರ್ಯೋತ್ತರ ಭಾರತದಲ್ಲೂ ಮುಂದುವರಿದದ್ದು ವಿಪರ್ಯಾಸ. ಬ್ರಿಟೀಷರಿಂದ ಬಳುವಳಿಯಾಗಿ ಭಾರತಕ್ಕೆ ಸಿಕ್ಕಿದ್ದು ಈಶಾನ್ಯ ಭಾರತ. ಇಲ್ಲವಾಗಿದ್ದರೆ ಭಾರತಕ್ಕೂ ಈ ಭಾಗಕ್ಕೂ ಯಾವುದೇ ಸಂಬಂಧವೂ ಇರುತ್ತಿರಲಿಲ್ಲ.

vally
ಇಂಪಾಲ ಕಣಿವೆ (PC: imphalreviews.in)

ಈಶಾನ್ಯ ಭಾರತದ ಜನಾಂಗಗಳು

ಮಣಿಪುರವನ್ನೇ ಉದಾಹರಣೆಯಾಗಿ ಇಟ್ಟುಕೊಂಡು ನೋಡಿದರೆ ಕ್ರಿಸ್ತಶಕೆಯ ಆರಂಭದ ಕಾಲಘಟ್ಟದಿಂದಲೂ ಇಲ್ಲಿ ನಾಗರಿಕತೆ ಇರುವುದನ್ನು ಕಾಣಬಹುದು. ಈ ಭೂಭಾಗಕ್ಕೆ ಬರ್ಮಾ, ಮಂಗೋಲಿಯಾ, ಚೀನಾ, ಥೈಲ್ಯಾಂಡ್ ದೇಶಗಳಿಂದ ಜನರು ವಲಸೆ ಬಂದು ನೆಲೆಸಿದರು. ಆ ಮೂಲಕ ನಾಗರಿಕತೆ ಬೆಳೆಯಲಾರಂಭಿಸಿತು. ಬುಡಕಟ್ಟು ಸಂಸ್ಕೃತಿ ಬೇರುಬಿಟ್ಟಿತು. ಬರ್ಮಾ ಮತ್ತು ಈ ಭಾಗದ ಜನರೊಂದಿಗೂ ಕಾಲಕ್ರಮೇಣ ಸಂಘರ್ಷ ಆರಂಭವಾಯಿತು. ಜೊತೆ ಜೊತೆಗೆ ಇಲ್ಲಿನ ಬುಡಕಟ್ಟುಗಳ ನಡುವೆಯೂ ಆಂತರಿಕ ಸಂಘರ್ಷಗಳು ನಡೆಯಲಾರಂಭಿಸಿದವು.

ಜಾತಿಗಳೊಳಗೆ ಹೇಗೆ ನೂರಾರು ಬಳಿಗಳಿವೆಯೋ ಹಾಗೆಯೇ ಇಲ್ಲಿನ ಬುಡಕಟ್ಟುಗಳಲ್ಲೂ ಪಂಗಡಗಳು ಇವೆ. ಈ ಬುಡಕಟ್ಟುಗಳು ಜಾತಿಗಳಾಗಿ ವಿಕಾಸವಾಗಿದ್ದು ಮತ್ತೊಂದು ಹಂತ. ಕರ್ನಾಟಕದಲ್ಲಿನ ಪ್ರತಿ ಜಾತಿಯಲ್ಲೂ ನೂರೆಂಟು ಬಳಿಗಳು ಇರುವುದನ್ನು ಕಾಣುತ್ತೇವೆ. ಹಾಗೆಯೇ ಈಶಾನ್ಯ ಭಾರತದಲ್ಲಿ ಪ್ರಧಾನವಾಗಿ ʼನಾಗಾ, ಮೈತೇಯಿ, ಕುಕಿʼ ಎಂಬ ಮೂರು ಬುಡಕಟ್ಟುಗಳು ನೆಲೆ ಕಂಡುಕೊಂಡವು. ಈ ಬುಡಕಟ್ಟುಗಳೊಳಗೆಯೂ ಹತ್ತಾರು ಬಳಿಗಳಿವೆ.

ʻಕುಕಿ, ಚಿನ್, ಜೋʼ- ಈ ಮೂರು ಬುಡಕಟ್ಟುಗಳು ಒಂದೇ ಬಳಿಯಿಂದ ಹೊರಬಂದಿವೆ ಎಂದು ಭಾವಿಸಲಾಗಿದೆ. ಮೈತೇಯಿಗಳ ಒಳಗೆ ಸುಮಾರು 28 ಬುಡಕಟ್ಟುಗಳಿವೆ. ನೆಲೆನಿಂತ ಕೃಷಿ ಸಮಾಜ ಮೈತೇಯಿಗಳಲ್ಲಿ ಬೆಳೆದಿದ್ದರಿಂದ ಮತ್ತು ಶತಮಾನಗಳ ಕಾಲ ಫಲವತ್ತಾದ ಕಣಿವೆ ಭಾಗದಲ್ಲಿ ಮೈತೇಯಿ ಬಳಿಗಳೆಲ್ಲವೂ ಒಟ್ಟಿಗೆ ಬದುಕಿದ್ದರಿಂದ ʼಮೈತೇಯಿʼ ಎಂಬ ಪ್ರಧಾನ ಅಸ್ಮಿತೆಯಲ್ಲಿ ಅವರೆಲ್ಲರೂ ಗುರುತಿಸಿಕೊಂಡರು.

ಸಾರಮಹಿ ಎಂಬ ಬುಡಕಟ್ಟು ಧರ್ಮವನ್ನು ಮೊದಲಿನಿಂದಲೂ ಅನುಸರಿಸುತ್ತಿದ್ದ ಮೈತೇಯಿಗಳು ವೈಷ್ಣವ ಪಂಥವನ್ನು ಸ್ವೀಕರಿಸಿದ್ದರ ಜೊತೆ ಜೊತೆಯೇ ಜಾತಿ ವ್ಯವಸ್ಥೆಯೂ ಈ ಸಮಾಜದಲ್ಲಿ ರೂಪುಗೊಂಡಿತು. ಮಾನವತೆ, ಸಮಾನತೆಯ ಪ್ರತಿರೂಪವೆನಿಸಿದ್ದ ಸಾರಮಹಿ ಧರ್ಮವನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡಲಾಯಿತು.

ಇಂಪಾಲ ಕಣಿವೆಯಲ್ಲಿನ ಮೈತೇಯಿಗಳು ಬಹುತೇಕ ಹಿಂದೂ ಧರ್ಮವನ್ನು ಮತ್ತು ಶ್ರೇಣಿಕೃತ ವ್ಯವಸ್ಥೆಯನ್ನು ಒಪ್ಪಿಕೊಂಡು ತಮ್ಮನ್ನು ಸೂಪಿರೀಯರ್ ಎಂದು ಬಿಂಬಿಸಿಕೊಂಡರು. ಕುಕಿಗಳಲ್ಲಿಯೇ ಅಸ್ಪೃಶ್ಯರೂ ರೂಪುಗೊಂಡರು. ಜೊತೆಗೆ ಮೈತೇಯಿಗಳು ಕುಕಿಗಳನ್ನು ಕೀಳಾಗಿ ಕಂಡರು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಆಡಳಿತಾಂಗ ಕಣಿವೆಗಷ್ಟೇ ಸೀಮಿತವಾದರೂ ಕ್ರೈಸ್ತ ಮಿಷನರಿಗಳು ಗುಡ್ಡಗಾಡುಗಳಿಗೆ ಪ್ರವೇಶಿಸಿದವು. ಆಸ್ಪತ್ರೆ, ಚರ್ಚು, ಶಾಲೆಗಳನ್ನು ಕಟ್ಟಿದವು. ಹೀಗಾಗಿ ಶೇ. 90ರಷ್ಟು ಕುಕಿಗಳು ಮತ್ತು ಬಹುತೇಕ ನಾಗಾಗಳು ಕ್ರೈಸ್ತಧರ್ಮೀಯರಾದರು. ಕಣಿವೆಯಲ್ಲಿನ ಮೈತೇಯಿಗಳು ಹಿಂದೂವೀಕರಣಗೊಂಡರೆ, ಗುಡ್ಡಗಾಡಿನ ನಾಗಾ, ಕುಕಿಗಳು ಬುಡಕಟ್ಟು ಅಸ್ಮಿತೆಯನ್ನು ಉಳಿಸಿಕೊಂಡೇ ಕ್ರಿಶ್ಚಿಯನ್ನರಾದರು. ಕ್ರಿಶ್ಚಿಯನ್ ಅಲ್ಲದ ಕುಕಿಗಳು, ನಾಗಾಗಳು ಇದ್ದಾರೆ. ಆದರೆ ಅವರ ಸಂಖ್ಯೆ ತೀರಾ ಕಡಿಮೆ. ಈ ಸಮುದಾಯದವರು ಚರ್ಚ್‌ಗಳಿಗೆ ಹೋಗುತ್ತಾರೆ, ಬೈಬಲ್ ಓದುತ್ತಾರೆ. ಆದರೆ ತಮ್ಮ ಮದುವೆ, ಶವಸಂಸ್ಕಾರ, ಊಟೋಪಚಾರ, ಹೆಂಗಸರ ಸ್ಥಾನಮಾನ ಎಲ್ಲವನ್ನೂ ಬುಡಕಟ್ಟು ವ್ಯವಸ್ಥೆಯಂತೆಯೇ ಉಳಿಸಿಕೊಂಡಿದ್ದಾರೆ.

ನಾಗಾ- ಕುಕಿಗಳ ಕಲಹ

ನಾಗಾ ಮತ್ತು ಕುಕಿಗಳು ಕ್ರಿಶ್ಚಿಯನ್ನಾದರೂ ಈ ಸಮುದಾಯಗಳ ನಡುವೆ ಕಲಹಗಳು ನಡೆದ ಇತಿಹಾಸವಿದೆ. ಬ್ರಿಟೀಷ್ ಕಾಲದಲ್ಲಿ ಮೈತೇಯಿ ರಾಜರ ಮೇಲೆ ನಾಗಾಗಳ ದಾಳಿ ನಿರಂತರ ನಡೆಯುತ್ತಿತ್ತು. ಆಗ ಬ್ರಿಟಿಷ್ ಪ್ರಭುತ್ವದ ಸಹಕಾರ ಹೊಂದಿದ್ದ ಮೈತೇಯಿಗಳು ರಕ್ಷಣೆಗಾಗಿ ಬಳಸಿಕೊಂಡಿದ್ದು ಕುಕಿಗಳನ್ನು. ಕಣಿವೆಯಲ್ಲಿನ ರಾಜನ ಮೇಲೆ ನಾಗಾಗಳು ದಾಳಿ ಮಾಡಬೇಕೆಂದರೆ ಮೊದಲು ಗುಡ್ಡಗಾಡಿನ ಕುಕಿಗಳನ್ನು ಸದೆಬಡಿಯಬೇಕಿತ್ತು. ಆದರೆ ವಿಶಾಲವಾದ ಅಸ್ಮಿತೆಯ ವಿಚಾರದಲ್ಲಿ ಎಲ್ಲಾ ಬುಡಕಟ್ಟುಗಳು ಒಂದಾಗಿ ಹೊರಗಿನವರ ವಿರುದ್ಧ ಹೋರಾಡಿದ ಮಹೋನ್ನತ ಚರಿತ್ರೆಯೂ ಈ ನೆಲದಲ್ಲಿದೆ.

ಒಗ್ಗಟ್ಟಿನ ಹೋರಾಟ

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರೊಂದಿಗೆ ಈ ಬುಡಕಟ್ಟು ಸಮುದಾಯಗಳು ಒಗ್ಗಟ್ಟಾಗಿ ಹೋರಾಡಿದ್ದುಂಟು. 1891ರಲ್ಲಿ ಮೈತೇಯಿಗಳು ಬ್ರಿಟಿಷರ ವಿರುದ್ಧ ಸಿಡಿದುನಿಂತಿದ್ದರು. 1916ರಲ್ಲಿ ಕುಕಿಗಳು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರು. ಮಣಿಪುರ ಕಣಿವೆಯಲ್ಲಿ ಬೆಳೆಯುತ್ತಿದ್ದ ಅಕ್ಕಿಯನ್ನು ಬ್ರಿಟಿಷರು ಮತ್ತು ಮಾರ್ವಾಡಿಗಳು ಸಾರಾಸಗಟಾಗಿ ತೆಗೆದುಕೊಂಡು ಹೋಗುತ್ತಿದ್ದರು. ಇದರ ವಿರುದ್ಧ ಇಲ್ಲಿನ ಮಹಿಳೆಯರು ನಡೆಸಿದ ಹೋರಾಟ ಗಮನಾರ್ಹ.

ಸ್ವಾತಂತ್ರ್ಯ ನಂತರದ ಭಾರತದಲ್ಲಿ ಈಶಾನ್ಯ ಭಾಗದ ಜನತೆ ಭಾರತ ಸರ್ಕಾರದ ವಿರುದ್ಧ ನಡೆಸಿದ ಸಂಘರ್ಷ ಬಹುದೊಡ್ಡದು. ಇಲ್ಲಿನ ಜನರನ್ನು ದಮನ ಮಾಡಲೆಂದೇ ’ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (AFSPA)’ಯನ್ನು 1958ರಲ್ಲಿ ಜಾರಿಗೆ ತರಲಾಯಿತು. ಮಿಲಿಟರಿಯ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳಾದವು. ಪ್ರಧಾನವಾಗಿ ನಾಗಾ ನ್ಯಾಷನಲ್ ಕೌನ್ಸಿಲ್ ಭಾರತದ ವಿರುದ್ಧ ಹೋರಾಟ ಶುರು ಮಾಡಿತು.
70, 80, 90ರ ದಶಕಗಳಲ್ಲಿ ಭಾರತ ಸರ್ಕಾರದ ವಿರುದ್ಧ ದೊಡ್ಡ ದೊಡ್ಡ ಶಸ್ತ್ರಾಸ್ತ್ರ ದಂಗೆಗಳೇ ನಡೆದಿದ್ದವು. ಹೀಗೆ ಪರಸ್ಪರ ವೈಮನಸ್ಸನ್ನು ಹೊಂದಿದ್ದ ಈಶಾನ್ಯ ಭಾರತದ ಬುಡಕಟ್ಟುಗಳು ಒಂದಾಗಿ ಭಾರತ ಸರ್ಕಾರದ ವಿರುದ್ಧ ಸಮರ ಸಾರಿದ ಚರಿತ್ರೆಯೂ ನಮ್ಮ ಮುಂದಿದೆ.

ತಮ್ಮ ಭಿನ್ನಾಭಿಪ್ರಾಯವನ್ನು ಬದಿಗಿರಿಸಿದ ಇಲ್ಲಿನ ಬುಡಕಟ್ಟುಗಳು ಶಶಾಸ್ತ್ರ ದಂಗೆಗಳನ್ನು ನಡೆಸಿವೆ. ಆದರ್ಶವಾದ ಧ್ಯೇಯವಿದ್ದಾಗ ಒಗ್ಗಟ್ಟು ಪ್ರದರ್ಶಿಸಿವೆ. 60ರ ದಶಕದಲ್ಲಿ ಮಣಿಪುರದಲ್ಲಿ ‘ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್’ ಸ್ಥಾಪನೆಯಾಯಿತು. ಸೋಷಿಯಲಿಸ್ಟ್ ಮಣಿಪುರವನ್ನು ಕಟ್ಟಬೇಕೆಂಬ ಹೋರಾಟವನ್ನು ಆರಂಭಿಸಿತು. ವಿಶೇಷವೆಂದರೆ ಈ ಫ್ರಂಟ್‌ನ ಅಧ್ಯಕ್ಷ ಮೈತೀಯ ಸಮುದಾಯಕ್ಕೆ ಸೇರಿದ್ದರೆ, ಅದರ ಇಬ್ಬರು ಕಾರ್ಯದರ್ಶಿಗಳು ನಾಗಾ ಮತ್ತು ಕುಕಿ ಜನಾಂಗದವರಾಗಿದ್ದರು. ಭಾರತದ ಪ್ರಭುತ್ವ ಸಮಾನವಾದ ಶತ್ರು ಎಂದು ಪರಿಗಣಿಸಿದ್ದ ಸ್ವಾತಂತ್ರ್ಯ ನಂತರದ ಅವಧಿಯಲ್ಲೂ ಬುಡಕಟ್ಟುಗಳ ನಡುವೆ ಇಂತಹದೊಂದು ಹೊಂದಾಣಿಕೆ ಇತ್ತು. ಪ್ರತ್ಯೇಕವಾದಿ ಆಗ್ರಹಗಳನ್ನು ತಡೆಯಬೇಕೆಂದೇ ಭಾರತ ಸರ್ಕಾರ ರಾಜ್ಯಗಳನ್ನು ಸ್ಥಾಪಿಸುತ್ತಾ ಬಂದಿತು. ಆರಂಭದಲ್ಲಿ ಅಸ್ಸಾಂ ಮತ್ತು ಮಣಿಪುರ ಮಾತ್ರ ಇದ್ದವು. ಕ್ರಮೇಣ ಈಶಾನ್ಯ ಭಾರತದಲ್ಲಿ ಒಟ್ಟು ಎಂಟು ರಾಜ್ಯಗಳನ್ನು ರೂಪಿಸಿ ಭಾರತದೊಂದಿಗೆ ಈ ಭಾಗಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳಾಗಿವೆ.

ಬುಡಕಟ್ಟುಗಳ ಸಂಘರ್ಷ

ಸ್ವಾತಂತ್ಯೋತ್ತರ ಭಾರತದಲ್ಲಿ ಗ್ರೇಟರ್ ನಾಗಾಲ್ಯಾಂಡ್ (ವಿಶಾಲ ನಾಗಾಲ್ಯಾಂಡ್) ಹೋರಾಟವನ್ನು ನಾಗಾಗಳು ಆರಂಭಿಸಿದರು. ಆಗ ಮೈತೇಯಿಗಳು ಕುಕಿಗಳೊಂದಿಗೆ ಸೇರಿಕೊಂಡು ನಾಗಾಗಳ ವಿರುದ್ಧ ಹೋರಾಟ ನಡೆಸಿದ್ದರು. ಮಣಿಪುರದ ಉತ್ತರ ಭಾಗದ ಜಿಲ್ಲೆಗಳಲ್ಲಿ ನಾಗಾಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಈ ಪ್ರದೇಶಗಳನ್ನು ʼಗ್ರೇಟರ್ ನಾಗಲ್ಯಾಂಡ್ʼಗೆ ಸೇರಿಸಬೇಕೆಂದು ನಾಗಾಗಳು ಬಯಸಿದರು. ಆದರೆ ಈ ಗುಡ್ಡಗಾಡು ಜಿಲ್ಲೆಗಳಲ್ಲಿ ಕುಕಿಗಳು ಕೂಡ ಗಣನೀಯವಾಗಿ ಇರುವುದರಿಂದ, ಒಂದು ವೇಳೆ ನಾಗಾಲ್ಯಾಂಡ್‌ಗೆ ಸೇರಿಸಿಬಿಟ್ಟರೆ ಕುಕಿಗಳ ದಮನ ಶುರುವಾಗುತ್ತದೆ ಎಂಬ ಭಾವನೆ ಬೆಳೆಯಿತು. ಹೀಗಾಗಿ ಕುಕಿ ಮತ್ತು ನಾಗಾಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ರೀತಿಯಲ್ಲಿ ಸದಾ ಕೊತಕೊತ ಕುದಿಯುವ, ಒಂದಿಲ್ಲೊಂದು ಸಂಘರ್ಷದ ನೆಲೆಯಾಗಿರುವ ಈಶಾನ್ಯ ಭಾರತದಲ್ಲೀಗ ಕುಕೀ ಮತ್ತು ಮೈತೇಯಿಗಳ ಸಮರ ಶುರುವಾಗಿದೆ. ಮಣಿಪುರದಲ್ಲಿ ನಾಗರಿಕ ಯುದ್ಧವೇ ನಡೆಯುತ್ತಿದೆ.

ಹಿಂದೂವೀಕರಣಗೊಂಡ ಪ್ರಭಾವಿ ಮೈತೇಯಿ ಜನಾಂಗ ಮುಖ್ಯವಾಗಿ ಕುಕಿಗಳನ್ನು ಟಾರ್ಗೆಟ್ ಮಾಡಿದೆ. ಎಸ್ಟಿ ಮೀಸಲಾತಿಯನ್ನು ಬಹುಸಂಖ್ಯಾತ ಮೈತೇಯಿಗಳಿಗೆ ನೀಡಿದರೆ ಪರಿಶಿಷ್ಟ ಪಂಗಡದಲ್ಲಿನ ಕುಕಿ ಮತ್ತು ನಾಗಾಗಳಿಗೆ ಅನ್ಯಾಯವಾಗುತ್ತದೆ, ಮೈತೇಯಿಗಳು ಗುಡ್ಡಗಾಡು ಪ್ರದೇಶದಲ್ಲಿ ಭೂ ಒಡೆತನದ ಹಕ್ಕು ಪಡೆದುಕೊಳ್ಳುತ್ತಾರೆ, ಸರ್ಕಾರಿ ಉದ್ಯೋಗದಲ್ಲೂ ತಮ್ಮ ಪ್ರಭಾವವನ್ನು ಹೊಂದುತ್ತಾರೆಂಬುದು ಬಿಕ್ಕಟ್ಟಿಗೆ ಕಾರಣವಾಗಿದೆ. ಮತ್ತೊಂದೆಡೆ ಎಸ್ಟಿ ಮೀಸಲು ಪಡೆಯುವ ನಾಗಾಗಳು ನೇರವಾಗಿ ಸಂಘರ್ಷದಲ್ಲಿ ಧುಮುಕದಿದ್ದರೂ ಪರೋಕ್ಷವಾಗಿ ಕುಕಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತುಗಳಿವೆ.

ಕುಕಿಗಳನ್ನಷ್ಟೇ ಟಾರ್ಗೆಟ್ ಮಾಡುತ್ತಾ ವ್ಯವಸ್ಥಿತವಾಗಿ ಗಲಭೆಗಳನ್ನು ಸೃಷ್ಟಿಸಲಾಗಿದೆ. ಆ ಮೂಲಕ ನಾಗಾಗಳಿಗೂ ಎಚ್ಚರಿಕೆಯ ಕರೆಘಂಟೆಯನ್ನು ನೀಡಲಾಗಿದೆ. ಸದ್ಯದ ನಾಗರಿಕ ಯುದ್ಧಕ್ಕೆ ಧರ್ಮದ ಸೋಂಕು ತಗುಲಿರುವುದರಿಂದ ದೇಶ ಆತಂಕಪಡುವಂತಾಗಿದೆ. ಹೀಗೆ ಇತಿಹಾಸದುದ್ದಕ್ಕೂ ಹಿಂಸೆಯನ್ನೇ ಕಾಣುತ್ತಾ ಬಂದಿರುವ ಈಶಾನ್ಯ ಭಾರತದಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿದೆ.

(ಮುಂದಿನ ಭಾಗದಲ್ಲಿ- ಮಣಿಪುರದ ಇತಿಹಾಸ, ಕಾಂಗ್ಲ್‌ಪಾಕ್‌ ಮಣಿಪುರವಾದ ಬಗೆ, ಸಮುದಾಯಗಳ ನಡುವಿನ ಆಂತರಿಕ ಬಿಕ್ಕಟ್ಟು)

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X