ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಆಧಾರ್ ನೋಂದಣಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಜಿಲ್ಲೆಯಾದ್ಯಂತ ಆಧಾರ್ ನೋಂದಣಿ ಚುರುಕುಗೊಳಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಎಲ್ಲಾ ಸಾರ್ವಜನಿಕರು ಸೇರಿದಂತೆ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿನ ಮಕ್ಕಳಿಗೆ ಆಧಾರ್ ನೋಂದಣಿ ಹಾಗೂ ನೋಂದಣಿಯಾಗಿರುವವರಿಗೆ ಪರೀಶ್ಕೃತ (ಅಪ್‍ಡೇಟ್) ಆಧಾರ್ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
” ಸಾರ್ವಜನಿಕರು ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಮಕ್ಕಳು ಶಾಲೆಗೆ ಸೇರಲು ಆಧಾರ್ ನೋಂದಣಿ ಅತೀ ಅವಶ್ಯವಾದ ದಾಖಲೆಯಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 23, ಗುಂಡ್ಲುಪೇಟೆ 11, ಹನೂರು 19, ಕೊಳ್ಳೇಗಾಲ 14 ಹಾಗೂ ಯಳಂದೂರು ತಾಲೂಕಿನ 7 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 74 ಕೇಂದ್ರಗಳನ್ನು ಆಧಾರ್ ನೊಂದಣಿಗಾಗಿ ಜಿಲ್ಲೆಯ ನಾಡಕಚೇರಿ, ತಾಲೂಕು ಕಚೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರ, ಬಾಪೂಜೀ ಸೇವಾಕೇಂದ್ರ, ಬಿ.ಎಸ್.ಎನ್.ಎಲ್, ಅಂಚೆಕಚೇರಿ ಹಾಗೂ ಬ್ಯಾಂಕ್‍ಗಳಲ್ಲಿ ತೆರೆಯಲಾಗಿದೆ. ಈ ನಿಟ್ಟಿನಲ್ಲಿ ಆಧಾರ್ ನೊಂದಣಿಯಿಂದ ಯಾರು ವಂಚಿತರಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ” ಎಂದರು.
” ಜಿಲ್ಲೆಯಲ್ಲಿ 31,000ಕ್ಕೂ ಹೆಚ್ಚು ಅಂಗನವಾಡಿ ಮಕ್ಕಳು ಆಧಾರ್ ನೊಂದಣಿಯಾಗಿಲ್ಲ. ಅಂಗನವಾಡಿ ಮಕ್ಕಳು 5 ವರ್ಷದೊಳಗಿರುವುದರಿಂದ ಮಕ್ಕಳ ಪೋಷಕರ ಬಯೋಮೆಟ್ರಿಕ್ ಪಡೆದು ಆಧಾರ್ ನೋಂದಣಿ ಮಾಡಬೇಕು. ಆಧಾರ್ ನೋಂದಣಿಯಾಗಿದ್ದರೆ ಪ್ರತಿ 10 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಅಪ್‍ಡೇಟ್ ಮಾಡಿಸಬೇಕು. ಜಿಲ್ಲೆಯಲ್ಲಿ ಹಾಡಿ, ಪೋಡುಗಳಲ್ಲಿನ ಕೆಲ ಮಕ್ಕಳಿಗೆ ಜನನ ಪ್ರಮಾಣ ಪತ್ರ ಲಭ್ಯವಿರುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮುಂದಿನ ಆಗಸ್ಟ್ ಹಾಗೂ ಸೆಪ್ಟೆಂಬರ್ ಮಾಹೆಗಳಲ್ಲಿ ‘ಆಧಾರ್ ಮಾಸ’ ಕಾರ್ಯಕ್ರಮವನ್ನು ಆಂದೋಲನ ಮಾದರಿಯಲ್ಲಿ ಹಮ್ಮಿಕೊಳ್ಳಬೇಕು ” ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
” ಪ್ರತಿಯೊಂದು ಅಂಗನವಾಡಿಗಳನ್ನು ಆಯಾ ಭಾಗದ ಅಂಚೆ ಕಚೇರಿಗಳಿಗೆ ಮ್ಯಾಪಿಂಗ್ ಮಾಡಬೇಕು. ಎಲ್ಲಾ ಪೋಸ್ಟ್ ಮಾಸ್ಟರ್‍ಗಳಿಗೂ ಆಧಾರ್ ನೊಂದಣಿಯ ಸರ್ಟಿಫೀಕೇಷನ್ ಹಾಗೂ ಬಯೋಮೆಟ್ರಿಕ್ ತರಬೇತಿ ಕಾರ್ಯ ಆಗಸ್ಟ್ 25ರೊಳಗೆ ಆಗಬೇಕು. ಪ್ರತಿವಾರ ಒಂದೊಂದು ಅಂಗನವಾಡಿಗಳಿಗೆ ಖುದ್ದು ಭೇಟಿ ನೀಡಿ ಮಕ್ಕಳಿಗೆ ಆಧಾರ್ ನೊಂದಣಿ ಮಾಡಬೇಕು. ಈ ಪ್ರಕ್ರಿಯೆ ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳ್ಳಬೇಕು. ಕಳೆದ 3 ವರ್ಷಗಳಿಂದೀಚೆಗೆ ಹುಟ್ಟಿದ ಮಕ್ಕಳ ಪೂರ್ಣ ಮಾಹಿತಿ ಕಲೆ ಹಾಕಬೇಕು. ಜಿಲ್ಲಾಮಟ್ಟದಲ್ಲಿ ಆಧಾರ್ ನೋಂದಣಿ ಮೇಲ್ವಿಚಾರಣೆ ನಡೆಸಲಾಗುತ್ತದೆ. ಜನನ ಪ್ರಮಾಣ ಪತ್ರ ಲಭ್ಯವಿಲ್ಲದ ಮಕ್ಕಳ ವಿವರವನ್ನು ಒಂದು ವಾರದೊಳಗೆ ನೀಡುವಂತೆ ” ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಧಾರ್ ನೋಂದಣಿ ಕಾರ್ಯವನ್ನು ಚುರುಕುಗೊಳಿಸಲು ನೋಡೆಲ್ ಅಧಿಕಾರಿಗಳಾಗಿ ನೇಮಿಸಲಾಗಿರುವ ಎಲ್ಲಾ ತಾಲೂಕು ಕಚೇರಿಯ ಶಿರಸ್ತೇದಾರರು ಆಯಾ ಭಾಗದಲ್ಲಿ ಆಧಾರ್ ಪ್ರಕ್ರಿಯೆ ನಿರ್ವಹಿಸುವ ಎಲ್ಲಾ ನಾಡಕಚೇರಿಗಳು, ಸಿ.ಎಸ್.ಸಿ ಕೇಂದ್ರಗಳು, ಅಂಚೆ ಕಚೇರಿಗಳು ಹಾಗೂ ಬ್ಯಾಂಕ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಆಧಾರ್ ನೋಂದಣಿ ನಿರ್ವಹಿಸುವ ನಾಗರಿಕ ಸೇವಾಕೇಂದ್ರಗಳು ಜನಸ್ನೇಹಿಯಾಗಿ ವರ್ತಿಸಬೇಕು. ಗ್ರಾಮ ಒನ್ ಕೇಂದ್ರಗಳನ್ನು ಸಕ್ರಿಯಗೊಳಿಸಬೇಕು. ಕೆಲವೆಡೆ ಆಧಾರ್ ಕಾರ್ಡ್‍ನಲ್ಲಿ ಆಸ್ಪತ್ರೆಗೆ ಬರುವ ಮಹಿಳೆಯರು ಹಾಗೂ ವೃದ್ದಾಪ್ಯ ಪಿಂಚಣಿ ಪಡೆಯುವವರ ವಯಸ್ಸು ನೊಂದಣಿಯಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
ಆಧಾರ್ ನೊಂದಣಿಯಾಗಿರುವವರು ಪ್ರತಿ ಹತ್ತು ವರ್ಷಗಳಿಗೊಮ್ಮೆ ಅಪ್‍ಡೇಟ್ ಮಾಡಿಸಬೇಕು. ತಪ್ಪಿದಲ್ಲಿ ಪಿಂಚಣಿ ಅಥವಾ ಪಡಿತರ ಚೀಟಿ ನೊಂದಣಿ ಸ್ಥಗಿತವಾಗಲಿದೆ. ಈ ಬಗ್ಗೆ ಸಂಪೂರ್ಣ ವಿವರಗಳನ್ನೊಳಗೊಂಡ ಮಾಹಿತಿ ಫಲಕಗಳನ್ನು ಎಲ್ಲಾ ಗ್ರಾಮ ಪಂಚಾಯಿತಿಮಟ್ಟದ ಕಚೇರಿಗಳ ಮುಂಭಾಗದಲ್ಲಿ ಅಳವಡಿಸಿ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಒಟ್ಟಿನಲ್ಲಿ ಆಧಾರ್ ನೊಂದಣಿ ಕಾರ್ಯದಲ್ಲಿ ಏನೇ ಸಮಸ್ಯೆಗಳಿದ್ದರೂ ಜಿಲ್ಲಾಮಟ್ಟದ ಸಮಾಲೋಚಕರ ಗಮನಕ್ಕೆ ತಂದು ಪರಿಹರಿಸುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅನಿಕೇತನ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನೆ
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್, ಬೆಂಗಳೂರಿನ ಯು.ಐ.ಡಿ ಯೋಜನಾ ವ್ಯವಸ್ಥಾಪಕ ವಿಜಯ್‍ಕುಮಾರ್, ಯು.ಐ.ಡಿ ರಾಜ್ಯಮಟ್ಟದ ಸಂಯೋಜಕ ಪ್ರಭುಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಖಾ, ಜಿಲ್ಲಾ ಸಂಯೋಜಕ ಮಧುಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.