ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾ ನದಿಯ ಉಪನದಿಯಾದ ಮಾಲತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇದರ ಪರಿಣಾಮವಾಗಿ, ತೀರ್ಥಹಳ್ಳಿಯ ಆಗುಂಬೆ ಸಮೀಪದ ಹೊನ್ನೆತಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಬಳ ರಸ್ತೆಯ ಮೇಲೆ ಸುಮಾರು ನಾಲ್ಕರಿಂದ ಐದು ಅಡಿ ಎತ್ತರದಲ್ಲಿ ನದಿ ನೀರು ಹರಿಯುತ್ತಿದ್ದು, ನಾಬಳ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಹೊನ್ನೆತಾಳು ಗ್ರಾ.ಪಂ ವ್ಯಾಪ್ತಿಯ ನಾಬಳಿ ಸೇತುವೆ ಬಳಿಯೂ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಇದಲ್ಲದೆ, ಶೃಂಗೇರಿಯಿಂದ ಹೊಸಗದ್ದೆ ಮಾರ್ಗವಾಗಿ ಕುಂದಾದ್ರಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಹ ಬಂದ್ ಆಗಿದೆ. ಶೃಂಗೇರಿಯಿಂದ ಕುಂದಾದ್ರಿ ಹಾಗೂ ಗುಡ್ಡೇಕೇರಿಗೆ ಸಂಪರ್ಕ ಕಲ್ಪಿಸುವ ಇತರ ಮಾರ್ಗಗಳು ಸಹ ಸ್ಥಗಿತಗೊಂಡಿವೆ.
ಈ ಹಿನ್ನೆಲೆಯಲ್ಲಿ, ಶೃಂಗೇರಿಗೆ ಪ್ರಯಾಣಿಸಲು ಉದ್ದೇಶಿಸಿರುವ ಸಾರ್ವಜನಿಕರು ಆಗುಂಬೆ ಅಥವಾ ಕಮ್ಮರಡಿ ಮಾರ್ಗವನ್ನು ಬಳಸುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.