ಉಡುಪಿ ನಗರದ ಕಡಿಯಾಳಿ ಮಹಿಷಮರ್ಧಿನಿ ದೇವಾಸ್ಥನದ ಹೆಬ್ಬಾಗಿಲಿನ ಬೀಗ ಮುರಿದು ಕಳ್ಳತನಗೈಯುಲು ನಡೆಸಿದ ಯತ್ನವು ಶುಕ್ರವಾರ ತಡರಾತ್ರಿ 3 ಗಂಟೆಗೆ ನಡೆದಿದೆ. ಕಳ್ಳರ ಕೃತ್ಯಗಮನಿಸಿದ ದೇವಸ್ಥಾನದ ಕಾವಲುಗಾರ ಬೊಬ್ಬಿಟ್ಟಾಗ ಕಳ್ಳರು ಕಾವಲುಗಾರನಿಗೆ ಚಾಕು ತೋರಿಸಿ ಜೀವಬೆದರಿಕೆಯೊಡ್ಡಿ ಪಲಾಯನಗೈದಿದ್ದಾರೆ. ತಕ್ಷಣ ಕಾವಲುಗಾರ ಸ್ಥಳೀಯ ಭಕ್ತರಿಗೆ ತಿಳಿಸಿದ್ದು, ತಕ್ಷಣ ದೇವಸ್ಥಾನದ ವಠಾರದಲ್ಲಿ ಸ್ಥಳೀಯರು ಒಟ್ಟಾಗಿದ್ದಾರೆ. ಸಿಸಿ ಟಿವಿ ಪರಿಶೀಲಿಸಿದಾಗ ಇರ್ವರು ಕಳ್ಳರು ಬಂದಿರುವುದು, ಪಲಾಯನದ ಹಾದಿ ತಿಳಿದುಬಂದಿದೆ. ತಕ್ಷಣ ಸ್ಥಳೀಯರು ಹುಡುಕಾಟ ನಡೆಸಿ ಕಡಿಯಾಳಿ ಪೆಟ್ರೋಲ್ ಬಂಕ್ ಬಳಿ ಇರ್ವರನ್ನು ವಶಕ್ಕೆ ಪಡೆದಿದ್ದಾರೆ.
ಕಳ್ಳರು ಓಡುತ್ತ ಸಾಗುವಾಗ ಓರ್ವ ಕಳ್ಳನಿಗೆ ಮೂರ್ಛೆ ಬಂದು ಧರೆಗುಳಿದಿದ್ದಾನೆ. ಮೂರ್ಛೆಹೋಗಿರುವ ಕಳ್ಳನ ಉಪಚರಿಸುತ್ತಿದ್ದ ಮತ್ತೊಬ್ಬ ಕಳ್ಳನು, ಓಡಲು ಯತ್ನಿಸಿದರೂ ಸಿಗುವಂತಾಯಿತು. ಮೂರ್ಛೆ ವ್ಯಾಧಿ ಉಲ್ಭಣಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಳ್ಳನಿಗೆ, ಸ್ಥಳೀಯರು ಕಳ್ಳತನಕ್ಕೆ ತಂದಿರುವ ಕಬ್ಬಿಣದ ಸಲಕರಣೆಗಳನ್ನು ಕೈಗೆ ನೀಡಿ ಕಳ್ಳನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಕರೆಯ ಮೆರೆಗೆ ಸ್ಥಳಕ್ಕೆ ಬಂದಿರುವ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಸ್ಥಳೀಯರ ಸಹಕಾರದಿಂದ ಮೂರ್ಛೆಹೋಗಿರುವ ಕಳ್ಳನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಮತ್ತೊಬ್ಬ ಕಳ್ಳನನ್ನು ಸ್ಥಳೀಯರು ಪೋಲಿಸರಿಗೆ ಒಪ್ಪಿಸಿದ್ದಾರೆ. ಕಳ್ಳರು ಕೇರಳ ಮೂಲದವರೆಂದು ತಿಳಿದುಬಂದಿದೆ. ಹೆಚ್ಚಿನ ವಿವರಗಳು ಮತ್ತಷ್ಟೇ ತಿಳಿದುಬರಬೇಕಾಗಿದೆ.