ಈ ದಿನ ಸಂಪಾದಕೀಯ | ಹೆಣ್ಣು ಮಕ್ಕಳ ಸುರಕ್ಷತೆಗೆ ‘ಶಕ್ತಿಶ್ರೀ’ ಸಾಕೇ?

Date:

Advertisements
ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡ ಕೇರಳ ರಾಜ್ಯ 'ಜೀವನಿ' ಅಭಿಯಾನ ಆರಂಭಿಸಿದೆ. ಇದು ಭಾರತದ ಇತರ ರಾಜ್ಯಗಳಿಗೂ ಮಾದರಿಯನ್ನು ರೂಪಿಸಿದೆ. ಈ ವ್ಯವಸ್ಥೆಯನ್ನು ಕರ್ನಾಟಕ, ಒಡಿಶಾ ಸೇರಿದಂತೆ ಇತರ ರಾಜ್ಯಗಳು ಅನುಕರಿಸುವ ತುರ್ತು ಅಗತ್ಯವಿದೆ.

ಒಡಿಶಾದ ಎಫ್‌ಎಂ ಕಾಲೇಜಿನಲ್ಲಿ ಓರ್ವ ವಿದ್ಯಾರ್ಥಿನಿ ದುರಂತ ಆತ್ಮಾಹುತಿಗೆ ಶರಣಾಗಿದ್ದಾರೆ. ಉಪನ್ಯಾಸಕನೊಬ್ಬ ಎಸಗಿದ ದೌರ್ಜನ್ಯ ಮತ್ತು ಆತನ ಕಿರುಕುಳದ ಬಗ್ಗೆ ಹಲವು ದೂರುಗಳನ್ನು ನೀಡಿದಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆಕೆ ತನ್ನ ಬದುಕನ್ನೇ ಅಂತ್ಯಗೊಳಿಸಿಕೊಂಡಿದ್ದಾರೆ. ಆಕೆಯ ಸಾವು ಒಡಿಶಾದಾದ್ಯಂತ ಆಘಾತದ ಅಲೆಯನ್ನು ಸೃಷ್ಟಿಸಿದೆ. ದೇಶಾದ್ಯಂತ ಆಕ್ರೋಶವೂ ವ್ಯಕ್ತವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸಮರ್ಪಕ ಸುರಕ್ಷತೆ ಮತ್ತು ಬೆಂಬಲದ ವ್ಯವಸ್ಥೆಯ ಕೊರತೆಯನ್ನು ಎತ್ತಿತೋರಿಸಿದೆ. ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಬಗೆಗಿನ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿವೆ.

ವಿದ್ಯಾರ್ಥಿನಿಯ ಸಾವು– ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ವಿರುದ್ಧ ನಡೆದ ಬೃಹತ್ ಪ್ರತಿಭಟನೆಗಳ ಫಲವಾಗಿ ಒಡಿಶಾ ಸರ್ಕಾರವು ‘ಶಕ್ತಿಶ್ರೀ’ ಯೋಜನೆಯನ್ನು ರೂಪಿಸಿದೆ. ಯೋಜನೆಯಡಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತದೆ ಎಂದು ಹೇಳಿಕೊಂಡಿದೆ.

ಇದು, ಪರಿಹಾರದ ರೂಪವಾದ ಯೋಜನೆ ಅಥವಾ ತ್ವರಿತ ಕ್ರಮಗಳ ಭಾಗ. ಈ ಯೋಜನೆಯನ್ನು ಒಡಿಶಾದ 16 ವಿಶ್ವವಿದ್ಯಾಲಯಗಳು ಮತ್ತು 730 ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಜಾರಿಗೊಳಿಸುವುದಾಗಿ ಸರ್ಕಾರ ಹೇಳಿಕೊಂಡಿದೆ. ವಿದ್ಯಾರ್ಥಿನಿಯರಿಗೆ ಸುರಕ್ಷಿತ ಶೈಕ್ಷಣಿಕ ವಾತಾವರಣ ಒದಗಿಸುವುದು, ಸಬಲೀಕರಣಕ್ಕೆ ಒತ್ತು ನೀಡುವುದು, ಹೆಣ್ಣುಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ಕೊಡುವುದು ಯೋಜನೆಯ ಗುರಿಯಾಗಿದೆ.

Advertisements

ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದ ಓರ್ವ ಮಹಿಳಾ ಶಿಕ್ಷಕಿ ಮತ್ತು ವಿದ್ಯಾರ್ಥಿನಿಯ ನೇತೃತ್ವದಲ್ಲಿ ‘ಶಕ್ತಿಶ್ರೀ ಸಶಕ್ತೀಕರಣ ಕೇಂದ್ರ’ ಸ್ಥಾಪನೆ, ಕ್ಯಾಂಪಸ್‌ನಲ್ಲಿ ಸಿಸಿಟಿವಿ, ಸುರಕ್ಷಿತ ಗೇಟ್‌ವೇಗಳು ಹಾಗೂ ತುರ್ತು ಸಂಪರ್ಕ ವ್ಯವಸ್ಥೆಗಳ ಅಳವಡಿಕೆ, ಲಿಂಗ ಸಂವೇದನೆ, ಸ್ವರಕ್ಷಣೆ ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು ಯೋಜನೆಯ ಭಾಗವಾಗಿದೆ. ಆದರೆ, ಈ ಯೋಜನೆಯು ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಗೆ ಸಂಪೂರ್ಣ ಪರಿಹಾರವಾಗಬಹುದೇ?

ಸದ್ಯಕ್ಕೆ, ಶಕ್ತಿಶ್ರೀ ಯೋಜನೆಯ ಯಶಸ್ಸು ಅದರ ಪರಿಣಾಮಕಾರಿ ಅನುಷ್ಠಾನದ ಮೇಲೆ ಅವಲಂಬಿತವಾಗಿದೆ. 730 ಕಾಲೇಜುಗಳು ಮತ್ತು 16 ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಸೌಲಭ್ಯಗಳನ್ನು ಒದಗಿಸುವುದು ಆರ್ಥಿಕ ಮತ್ತು ಆಡಳಿತಾತ್ಮಕವಾಗಿ ಸವಾಲಿನ ವಿಚಾರ. ಅದರಲ್ಲೂ, ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಂಪನ್ಮೂಲಗಳ ಲಭ್ಯತೆಯ ಯೋಜನೆಯ ಅನುಷ್ಠಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ಸೂಚಿಸುತ್ತಿವೆ. ಅಲ್ಲದೆ, ಸಾಂಸ್ಥಿಕ ಕ್ರಮಗಳಿಂದ ಮಾತ್ರ ಮಹಿಳೆಯರ ಸುರಕ್ಷತೆಯನ್ನು ಸಂಪೂರ್ಣವಾಗಿ ಖಾತರಿಪಡಿಸಲಾಗದು. ಯೋಜನೆಯು ಲಿಂಗ ಆಧಾರಿತ ಹಿಂಸೆಯ ಮೂಲ ಕಾರಣಗಳಾದ ಸಾಮಾಜಿಕ ಕಳಂಕ, ಪಿತೃಪ್ರಧಾನ ಮನೋಭಾವ ಹಾಗೂ ಶಿಕ್ಷಣ ಸಂಸ್ಥೆಗಳ ಒಳಗಿನ ಲಿಂಗ ತಾರತಮ್ಯವನ್ನು ಗುರುತಿಸಬಹುದು. ಆದರೆ, ತೊಡೆದುಹಾಕಲು ಸಾಧ್ಯವಾಗದು.

ಈಗಾಗಲೇ ಭಾರತದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕಾನೂನುಗಳಿವೆ. ಅಂತಹ ಕಾನೂನುಗಳಲ್ಲಿ ‘ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯ್ದೆ-2013’ (PoSH) ಮತ್ತು ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012’ (ಪೋಕ್ಸೊ) ಪ್ರಮುಖವಾದವು. ಆದರೆ, ಈ ಕಾನೂನುಗಳ ಜಾರಿಯ ಕೊರತೆಯಿಂದಾಗಿ ಸಮಸ್ಯೆಗಳು ಮುಂದುವರಿಯುತ್ತಿವೆ. ಪೋಕ್ಸೋ ಕಾಯ್ದೆ ಹೇಳುವಂತೆ, ‘ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿವೆ ಎಂಬ ದೂರುಗಳು ಬಂದಾಗ, ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿಕೊಂಡು, ಯಾವುದೇ ವಾರೆಂಟ್‌ ಇಲ್ಲದೆಯೂ ಆರೋಪಿಯನ್ನು ಬಂಧಿಸಬೇಕು.’ ಆದರೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಆದಾಗ್ಯೂ, ಈವರೆಗೆ ಅವರನ್ನು ಬಂಧಿಸಲಾಗಿಲ್ಲ.

ಇದು ಕಾನೂನು ಜಾರಿಯಲ್ಲಿರುವ ತೊಡಕಿಗೆ ಒಂದು ಉದಾಹರಣೆ. ಇಂತಹ ಉದಾಹರಣೆಗಳು ದೇಶದ ಉದ್ದಗಲಕ್ಕೂ ಇವೆ. ಕಾನೂನು ಜಾರಿಯಲ್ಲಿಯೇ ತೊಡಕುಗಳು, ರಾಜಕೀಯ ಪ್ರಭಾವಗಳು ಇರುವಾಗ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸಲು ‘ಶಕ್ತಿಶ್ರೀ’ ಯೋಜನೆ ಸಾಕಾಗದು.

ವ್ಯಾಸಂಗ ಮಾಡುತ್ತಿರುವ ಹೆಣ್ಣುಮಕ್ಕಳ ಸುರಕ್ಷತೆಯು ಕೇವಲ ಕ್ಯಾಂಪಸ್‌ನೊಳಗಿನ ಸಮಸ್ಯೆಯಲ್ಲ. ಕ್ಯಾಂಪಸ್‌ನ ಆಚೆಗೂ ಇರುವ ಗಂಭೀರ ಸಮಸ್ಯೆ. ಶಕ್ತಿಶ್ರೀ ಯೋಜನೆಯು ಕ್ಯಾಂಪಸ್‌ನೊಳಗಿನ ಸುರಕ್ಷತೆಗೆ ಒತ್ತು ನೀಡುತ್ತದೆಯಾದರೂ, ಕ್ಯಾಂಪಸ್‌ನ ಹೊರಗೆ ಸಾರಿಗೆ, ಹಾಸ್ಟೆಲ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆಗೆ ಯೋಜನೆ ಒತ್ತುಕೊಡುವುದಿಲ್ಲ.

ಇದನ್ನು ಓದಿದ್ದೀರಾ?: ಮಹದಾಯಿ: ನಾಯಕರೇ ನಾಡದ್ರೋಹಿಗಳು

ಕೇವಲ ಸಿಸಿ ಕ್ಯಾಮೆರಾದಂತಹ ಕೆಲವು ಸೌಲಭ್ಯಗಳನ್ನು ಅಳವಡಿಸುವುದು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ತಕ್ಷಣದ ಪರಿಹಾರ ಮಾತ್ರವೇ ಆಗಿರುತ್ತದೆ. ಈ ಕ್ರಮಗಳಿಗೂ ಕೂಡ ಈಗಾಗಲೇ ಚಾಲ್ತಿಯಲ್ಲಿರುವ ರಾಷ್ಟ್ರೀಯ ಮಹಿಳಾ ಕೋಶ್, ಇಂದಿರಾ ಗಾಂಧಿ ಮಾತೃತ್ವ ಸಹಯೋಗ್ ಯೋಜನೆ ಹಾಗೂ ಮಕ್ಕಳ ರಾಷ್ಟ್ರೀಯ ಕ್ರಿಯಾ ಯೋಜನೆಗಳ ಜೊತೆಗೆ ಶಕ್ತಿಶ್ರೀ ಯೋಜನೆ ಸಮನ್ವಯ ಸಾಧಿಸಿ, ಕೆಲಸ ಮಾಡುವ ಅಗತ್ಯವಿದೆ. ಮುಖ್ಯವಾಗಿ, ಲಿಂಗ ಆಧಾರಿತ ಹಿಂಸೆಯ ಮೂಲ ಕಾರಣಗಳನ್ನು ತೊಡೆದುಹಾಕಲು ದೀರ್ಘಕಾಲೀನ ಶಿಕ್ಷಣ, ಸಾಮಾಜಿಕ ಬದಲಾವಣೆ ಮತ್ತು ಕಾನೂನಿನ ಕಟ್ಟುನಿಟ್ಟಾದ ಜಾರಿಯ ಅಗತ್ಯವಿದೆ.

ಮಿಗಿಲಾಗಿ, ಕಾಲೇಜು ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಯು ತೀವ್ರವಾಗಿ ಹೆಚ್ಚುತ್ತಿವೆ. 2016ರಲ್ಲಿ 21 ದೇಶಗಳಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ಸಮೀಕ್ಷೆಯ ಪ್ರಕಾರ, ಐದರಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿ ಮಾನಸಿಕ ರೋಗದ ಲಕ್ಷಣಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಇದೇ ಪರಿಸ್ಥಿತಿ ಇದೆ. ಒಡಿಶಾದಲ್ಲಿ, 2021 ಮತ್ತು 2023ರ ನಡುವೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವು 50%ಕ್ಕಿಂತ ಹೆಚ್ಚು ಏರಿಕೆಯಾಗಿದೆ. 2023ರಲ್ಲಿ 189 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ, ಒಡಿಶಾದ ಹೆಚ್ಚಿನ ಕಾಲೇಜುಗಳಲ್ಲಿ ಒಬ್ಬ ವೃತ್ತಿಪರ ಕೌನ್ಸೆಲರ್‌ರನ್ನು ನೇಮಕ ಮಾಡಲಾಗಿಲ್ಲ.

ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡ ಕೇರಳ ರಾಜ್ಯವು ಭಾರತದ ಇತರ ರಾಜ್ಯಗಳಿಗೂ ಮಾದರಿಯನ್ನು ರೂಪಿಸಿದೆ. ಕೇರಳದಲ್ಲಿ ‘ಜೀವನಿ’ ಅಭಿಯಾನದ ಅಡಿಯಲ್ಲಿ ಎಲ್ಲ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ರಚನಾತ್ಮಕ, ಸಮಗ್ರ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಜೀವನಿಯ ಪ್ರತಿ ಘಟಕವು ಪೂರ್ಣಕಾಲಿಕ ಕೌನ್ಸೆಲರ್‌ನ್ನು ಒಳಗೊಂಡಿದೆ. ಸಾಕ್ಷ್ಯ-ಆಧಾರಿತ, ವೈದ್ಯಕೀಯ ಮೇಲ್ವಿಚಾರಣೆಯ ಹಾಗೂ ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ವೃದ್ಧಿಸಲು ಕೆಲಸ ಮಾಡುತ್ತಿದೆ. ಈ ವ್ಯವಸ್ಥೆಯನ್ನು ಕರ್ನಾಟಕ, ಒಡಿಶಾ ಸೇರಿದಂತೆ ಇತರ ರಾಜ್ಯಗಳು ಅನುಕರಿಸುವ ತುರ್ತು ಅಗತ್ಯವಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X