ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು ಕೆ ನಿಡುಗುಣೆ ಗ್ರಾಮದ ವಾಸಿ ಕಿಶೋರ್ ಸ್ವಾಮಿಯವರ ಮನೆಯ ಮೇಲೆ ಗಾಳಿ, ಮಳೆಗೆ ಮರದ ಬೃಹತ್ ಕೊಂಬೆ ಮುರಿದು ಬಿದ್ದಿದೆ. ಇದನ್ನರಿಯದ ಅರಣ್ಯ ಇಲಾಖೆ ಅಧಿಕಾರಿಗಳು ಮನೆಗೆ ನುಗ್ಗಿ ಬಂಧಿಸಿ ಕರೆದೊಯ್ದಿರುವ ಘಟನೆ ನಡೆದಿದ್ದು, ಈ ವಿಷಯ ತಿಳಿದ ಶಾಸಕ ಡಾ ಮಂತರ್ ಗೌಡ ಜನ ಜೀವನಕ್ಕೆ ಅರಣ್ಯ ಇಲಾಖೆಯವರೇ ಕಂಟಕಪ್ರಾಯರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರೀ ಮಳೆ, ಗಾಳಿಯಿಂದ ಕೊಡಗು ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿರುವ ಸಂದರ್ಭದಲ್ಲಿ, ಅರಣ್ಯ ಇಲಾಖೆ ಜಿಲ್ಲೆಯ ಜನರ ನೆರವಿಗೆ ಧಾವಿಸದೆ ಜನರ ಜೀವನಕ್ಕೆ ಕಂಟಕರಾಗಿ ಮನಬಂದಂತೆ ವರ್ತಿಸುತ್ತಿರುವ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.
ಕೆ. ನಿಡುಗಣೆ ಗ್ರಾಮದ ವಾಸಿಯಾಗಿರುವ ಅರ್ಚಕ ಕಿಶೋರ್ ಸ್ವಾಮಿಯವರ ಮನೆಯ ಸಮೀಪದ ಬೃಹತ್ ಮರದ ಕೊಂಬೆ ಬೆಳಗ್ಗಿನ ಜಾವ ಅತಿಯಾದ ಗಾಳಿ ಮಳೆಗೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಮನೆಯ ಮುಂದೆ ನಿಲ್ಲಿಸಿದ ವಾಹನಗಳ ಜಕಂ ಆಗಿದ್ದು, ಕೂದಲೆಳೆ ಅಂತರದಲ್ಲಿ ಮನೆ ಬಚಾವಾಗಿದೆ. ಯಾವುದೇ ಪ್ರಾಣಪಾಯ ಸಂಭವಿಸಿಲಿಲ್ಲ. ಗ್ರಾಮಸ್ಥರು ಸೇರಿ ಮರವನ್ನು ತೆರವುಗೊಳಿಸಿ ಮಿಕ್ಕ ಮರದ ಕೊಂಬೆ ಮನೆಯ ಮೇಲೆ ಬೀಳುವ ಸಾಧ್ಯತೆ ಅರಿತು ಹಗ್ಗ ಬಳಸಿ ತೆರವುಗೊಳಿಸಿ ಮನೆಯವರಿಗೆ ತೊಂದರೆಯಾಗದಂತೆ ಮಾಡಿದ್ದಾರೆ.
ಇದನ್ನ ಅರಿಯದ ಅರಣ್ಯ ಇಲಾಖೆ ಸಿಬ್ಬಂದಿಗಳು ಜೀಪಿನಲ್ಲಿ ಬಂದು ಮನೆಗೆ ನುಗ್ಗಿ ಕಿಶೋರ್ ಸ್ವಾಮಿಯವರನ್ನು ಬಂಧಿಸಿ ಅಕ್ಷರಶಃ ಅಪರಾಧಿಯಂತೆ ಕರೆದುಕೊಂಡು ಹೋಗಿ, ಅಜ್ಞಾತ ಸ್ಥಳದಲ್ಲಿರಿಸಿದ್ದಾರೆ. ಮೊಬೈಲ್ ಪೋನ್ ಕಸಿದುಕೊಂಡ ಸಿಬ್ಬಂದಿಗಳು, ಯಾರ ಸಂಪರ್ಕಕ್ಕೂ ಸಿಗದ ಹಾಗೆ ಮಾಡಿದ್ದಾರೆ. ವಿಚಾರ ಊರಿನಲ್ಲಿ ಹರಿದಾಡಿದ ಕೂಡಲೇ ಗ್ರಾಮಸ್ಥರು ಮಡಿಕೇರಿ ನಗರದಲ್ಲಿ ವಲಯ ಅರಣ್ಯ ಕಛೇರಿ, ಅರಣ್ಯ ಭವನ ಎಲ್ಲಾ ಕಡೆ ಹುಡುಕಾಡಿದರೂ ಕಿಶೋರ್ ಸ್ವಾಮಿಯವರ ಪತ್ತೆ ಇಲ್ಲ. ನಂತರ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರನ್ನು ಸಂಪರ್ಕಿಸಿದ್ದಾರೆ.
ನಂತರ ಅರಣ್ಯ ಇಲಾಖೆ ಗೆಸ್ಟ್ ಹೌಸಿನಲ್ಲಿ ಇರಿಸಲಾಗಿದೆ ಎಂದು ಮಾಹಿತಿ ದೊರಕಿದ ಹಿನ್ನಲೆಯಲ್ಲಿ ಅಲ್ಲಿಗೆ ಗ್ರಾಮಸ್ಥರು ತೆರಳಿದ್ದಾರೆ. ತೆನ್ನಿರ ಮೈನಾ ವಿಚಾರವನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ರವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿ ತೀವ್ರ ತರಾಟೆಗೆ ತೆಗೆದುಕೊಂಡ ಮೇಲೆ ಅರಣ್ಯ ಇಲಾಖೆಯವರು ಕಿಶೋರ್ ಸ್ವಾಮಿಯವರನ್ನು ಬಿಟ್ಟು ಕಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯವರ ಹಾವಳಿ ಹೆಚ್ಚಿದ್ದು ಜನರಿಗೆ ಸಾಕಷ್ಟು ತೊಂದರೆಗಳಾಗುತ್ತಿವೆ. ವನ್ಯ ಜೀವಿ ಧಾಳಿಗಿಂತಲೂ ಅರಣ್ಯ ಇಲಾಖೆಯವರ ತೊಂದರೆ ಹೆಚ್ಚಾಗಿದ್ದು, ಸಿಬ್ಬಂದಿಯವರ ಆಟಾಟೋಪ ಹೆಚ್ಚಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ನಿರ್ಗಮಿತ ಹೆಚ್ಚುವರಿ ಜಿಲ್ಲಾಧಿಕಾರಿ, ತಹಶೀಲ್ದಾರರಿಗೆ ಜಿಲ್ಲಾಡಳಿತದಿಂದ ಆತ್ಮೀಯ ಬೀಳ್ಕೊಡುಗೆ
ಮಳೆ, ಗಾಳಿಗೆ ಅಪಾಯಕಾರಿಯಾದ ಪ್ರದೇಶಗಳಲ್ಲಿರುವ ಮರ ತೆರವುಗೊಳಿಸುವಂತೆ ಸಾವಿರಾರು ಅರ್ಜಿ ಸಲ್ಲಿಕೆಯಾಗಿದ್ದರೂ, ಅವುಗಳಲ್ಲಿ ಯಾವುದನ್ನೂ ಇತ್ಯರ್ಥ ಪಡಿಸಿರುವುದಿಲ್ಲ. ಮರ ಮನೆ ಮೇಲೆ ಬೀಳುತ್ತದೆ ಎಂದರೆ ಅರ್ಜಿ ಸಲ್ಲಿಸಿ. ಸ್ಥಳ ಪರಿಶೀಲನೆ ನಡೆಸುತ್ತೇವೆ ಎಂದು ಸಬೂಬು ಹೇಳುತ್ತಾರೆ. ಜನರೇ ಮರ ತೆರವುಗೊಳಿಸಿದರೆ ಕೇಸ್ ಹಾಕಿ ಜನರಿಗೆ ತೊಂದರೆ ಮಾಡುತ್ತಾರೆ. ಅರಣ್ಯ ಇಲಾಖೆಯಿಂದ ಮರಗಳ್ಳರಿಗೆ ಅನುಕೂಲಕರ ವಾತವರಣ ಆಗಿದೆ ಹೊರತು ಜನರಿಗಲ್ಲ ಎಂದು ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.