ಮೈಸೂರು ಕಲ್ಚರಲ್ ಅಸೋಸಿಯೇಷನ್, ವಿಸ್ಮಯ ಪ್ರಕಾಶನ ಹಾಗೂ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಸಹಯೋಗದಲ್ಲಿ ಮೈಸೂರಿನ ಸಂಗೀತ ವಿವಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರ ಮೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ ವಿಭಿನ್ನ ಸಾಹಿತ್ಯಕ್ಕೆ ಓದುಗರ ಪಡೆ ಇದ್ದೇ ಇರುತ್ತದೆ ‘ ಎಂದರು.
” ಮೂರು ಕೃತಿಗಳ ವಿಷಯ ಆಯ್ಕೆ ವಿಭಿನ್ನವಾಗಿದೆ. ಗಲ್ಲಿ, ರಸ್ತೆಗಳ ಮಹತ್ವದ ಕುರಿತು ಬರೆಯುವುದು ಉತ್ತಮ ಪ್ರಯೋಗವಾಗಿದೆ. ಸೇನಾನಿಯಾಗುವ ಆಕಾಂಕ್ಷೆ ಹೊಂದಿದ್ದ ರಮೇಶ್ ಉತ್ತಪ್ಪ ಸಾಹಿತ್ಯ ರಚನೆ ಕೆಲಸ ಮಾಡಿದ್ದಾರೆ. ಇದರಲ್ಲಿ, ಹೆಚ್ಚು ವ್ಯತ್ಯಾಸವಿಲ್ಲ. ಗನ್ ಹಿಡಿಯಬೇಕಾದವರು ಪೆನ್ನು ಹಿಡಿದಿದ್ದಾರೆ. ಸಿಂದೂರ ಪುಸ್ತಕದಲ್ಲಿರುವ ವೀರ ಯೋಧರ ಯಶೋಗಾಥೆಗಳು ಯುವ ಜನತೆಗೆ ಪ್ರೇರಣೆಯಾಗಿವೆ. ಗ್ರಾಮ, ವೃತ್ತ, ರಸ್ತೆ, ಗಲ್ಲಿಗಳಿಗೆ ಒಂದೊಂದು ಇತಿಹಾಸವಿರುತ್ತದೆ. ಈ ವಿಶೇಷತೆಯನ್ನು ಗುರುತಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪುಸ್ತಕ ರಚನೆ ಮಹತ್ವದ್ದಾಗಿದೆ ” ಎಂದರು.
” ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಸೇರಿದಂತೆ ಸಾಕಷ್ಟು ಮಹಾ ಪುರುಷರ ಜೀವನ ಚರೀತ್ರೆಯೇ ನಮ್ಮೆಲ್ಲರಿಗೂ ಆದರ್ಶವಾಗಿವೆ. ಇಂತಹ ಹಲವಾರು ಮಹಾನ್ ವ್ಯಕ್ತಿಗಳ ಹೆಸರನ್ನು ಕೆಲವೊಂದು ವೃತ್ತ, ರಸ್ತೆಗಳಿಗೆ ಹೆಸರಿಸಲಾಗಿದೆ. ಇವುಗಳ ನೆಪದಲ್ಲಾದರೂ ಆದರ್ಶ ಪುರುಷರನು ಸ್ಮರಿಸಿಕೊಳ್ಳಬೇಕಿದೆ. ಈ ರೀತಿ ಹೆಸರುಗಳನ್ನು ಕುರಿತು ಬರೆದ ಉತ್ತಪ್ಪ ಅವರ ಪುಸ್ತಕಗಳ 2ನೇ ಆವೃತ್ತಿಯೂ ಬರಲಿ. ಒಳ್ಳೆಯ ವಿಷಯದ ಸಾಹಿತ್ಯಕ್ಕೆ ಓದುವವರು ಇದ್ದೇ ಇರುತ್ತಾರೆ ” ಎಂದರು.
ಕರ್ನಾಟಕ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕ ಸಂದೇಶ್ ಕುಮಾರ್ ಮಾತನಾಡಿ, ” ಯುವಜನರು ಓದಿನಿಂದ ವಿಮುಖರಾಗುತ್ತಿರುವ ಇಂದಿನ ಹೊತ್ತಿನಲ್ಲಿ ಈ ಪುಸ್ತಕ ರಚನೆ ಔಚಿತ್ಯಪೂರ್ಣವಾಗಿದೆ. ಹಾಗಾಗಿ, ಎಲ್ಲರೂ ಈ ಪುಸ್ತಕ ಹೃದಯಕ್ಕೆ ತೆಗೆದುಕೊಳ್ಳಬೇಕು. ಅಲ್ಲದೇ, ಮುಂದಿನ ಪೀಳಿಗೆಗೆ ಇದನ್ನು ಕಾಪಿಡಬೇಕು ಎಂದರು. ಅಲೆಗ್ಸಾಂಡರ್, ಬಿಜ್ಜಳನ ಆಸ್ಥಾನದಲ್ಲಿದ್ದ ಬಸವೇಶ್ವರರು, ಬ್ರಿಟೀಷರ ಆಳ್ವಿಕೆಯಂತಹ ಇತಿಹಾಸದ ಬಗ್ಗೆ ಅರಿಯುವುದು ಮುಖ್ಯ. ಇತಿಹಾಸ ಮರೆತು ಇತಿಹಾಸ ಸೃಷ್ಟಿಸಲು ಸಾಧ್ಯವಾಗದು. ಇತಿಹಾಸವನ್ನು ಕಡೆಗಣಿಸಿರುವುದರಿಂದಲೇ ಇಂದಿನ ಯುವ ಜನತೆ ಅಧೋಗತಿಗೆ ತಲುಪಿದ್ದಾರೆ ” ಎಂದರು.
” ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ವೃತ್ತವನ್ನು ಮೆಟ್ರೋಫುಲ್ ವೃತ್ತ ಎನ್ನುತ್ತೇವೆ. ಬಿ. ಆರ್. ಅಂಬೇಡ್ಕರ್ ವೃತ್ತವನ್ನು ಜೆಎಸ್ಎಸ್ ವೃತ್ತ ಎನ್ನುತ್ತೇವೆ. ಡಾ. ರಾಜಕುಮಾರ್ ವೃತ್ತವನ್ನು ಫೌಂಟೇನ್ ವೃತ್ತವೆನ್ನುತ್ತೇವೆ. ಅಲ್ಲದೇ, ಪಿ. ಕಾಂಳಿಂಗರಾವ್ ವೃತ್ತ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತವನ್ನು ಬೇರೆ ಹೆಸರಿನಿಂದ ಕರೆಯಲಾಗುತ್ತಿದೆ. ಕೃಷ್ಣದೇವರಾಯ ವೃತ್ತವನ್ನು ಕೆ. ಡಿ. ಸರ್ಕಲ್ ಎನ್ನುವುದು ಸರಿಯಲ್ಲ ” ಎಂದರು.
ಲೆಫ್ಟಿನೆಂಟ್ ಕರ್ನಲ್ ಪಿ.ಎಸ್. ಗಣಪತಿ ಅವರು ಮಾತನಾಡಿ, ‘ ಈ ಕೃತಿ ಇಂದಿನವರಿಗೆ ಮಾತ್ರವಲ್ಲದೇ ಭವಿಷ್ಯದ ಪೀಳಿಗೆಗೂ ಮಾದರಿಯಾಗಿದೆ. ಮೊಬೈಲ್, ವಾಟ್ಸಾಪ್ ಸೇಳತವಿರುವ ಕಾಲಘಟ್ಟದಲ್ಲಿ ಯುವಕರನ್ನು ಸಾಹಿತ್ಯದತ್ತ ಸೆಳೆಯುವ ಸಾಹಿತ್ಯ ರಚನೆ ಇದಾಗಿದೆ ‘ ಎಂದರು. ಶಾಸಕ ಟಿ. ಎಸ್. ಶ್ರೀವತ್ಸ ಮಾತನಾಡಿ, ‘ ಮೈಸೂರಿನ ವೃತ್ತ, ಗಲ್ಲಿಗಳ ಬಗ್ಗೆ ಬರೆದಿರುವುದು ನಮ್ಮ ನಾಡಿನ ಸಂಸ್ಕೃತಿ, ಆಚಾರ-ವಿಚಾರ, ಇತಿಹಾಸ ಉಳಿಸುವ ಕೆಲಸವಾಗಿದೆ ‘ ಎಂದರು.
ಸಂಗೀತ ವಿವಿ ಕುಲಪತಿ ನಾಗೇಶ್ ವಿ. ಬೆಟ್ಟಕೋಟೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ” ಮುದ್ರಣ ಮಾಧ್ಯಮ ಹಾಗೂ ಪೊಲೀಸರ ಸಮಾಗಮದಿಂದ ಒಳ್ಳೆಯ ವಿಚಾರಗಳು ಹೊರಬರುತ್ತವೆ. ಇದನ್ನು ಈ ಎರಡೂ ಕ್ಷೇತ್ರದ ಎಲ್ಲರೂ ಮಾದರಿಯಾಗಿ ಸ್ವೀಕರಿಸಬೇಕು. ಇದರಿಂದ ಹಲವು ಗೊಂದಲಗಲಗಳಿಗೆ ಪರಿಹಾರ ಕಂಡುಕೊಳ್ಳಬಹುದು ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಮೂರು ಪುಸ್ತಕಗಳ ರಚನೆಕಾರರಾದ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಜಾಗೂ ಪ್ರದರ್ಶಕ ಕಲೆಗಳ ವಿವಕ ಕುಲಸಚಿವ ಡಾ. ಮಂಜುನಾಥ್, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ. ಪಿ. ನಾಗೇಶ್, ವಿಸ್ಮಯ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ಸೇರಿದಂತೆ ಇನ್ನಿತರರು ಇದ್ದರು.