ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ನೆಟ್ಟೆಕೆರೆ ಮಜರೆ ಕರಿಯಣ್ಣನಪಾಳ್ಯ ಗ್ರಾಮದಲ್ಲಿ ಜುಲೈ 27 ರಂದು ಶ್ರೀ ಭೂತರಾಯಸ್ವಾಮಿ ನೂತನ ದೇವಾಲಯ ಉದ್ಘಾಟನೆ ನಡೆಯಲಿದೆ ಎಂದು ದೇವಾಲಯದ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎಲ್.ಕರೇಗೌಡ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಆರಂಭಿಸಿದ ದೇವಾಲಯ ನಿರ್ಮಾಣ ಕೆಲಸ ಸುಸೂತ್ರವಾಗಿ ಸಿದ್ಧವಾಗಿದೆ. ಜುಲೈ 27 ಬೆಳಿಗ್ಗೆ ಎಲ್ಲಾ ವಿಧಿವಿಧಾನದಲ್ಲಿ ಲೋಕಾರ್ಪಣೆ ಗೊಳ್ಳಲಿದೆ ಎಂದರು.
ಬೆಳಿಗ್ಗೆ ಗಣಪತಿ ಪೂಜೆ ಮೂಲಕ ಆರಂಭವಾಗಿ ಬೆಳಿಗ್ಗೆ 9 ಗಂಟೆಗೆ ಭೂತರಾಯಸ್ವಾಮಿ ಪ್ರತಿಷ್ಠಾಪನೆ ನಂತರ ಪ್ರತಿಷ್ಟಾಂಗ ಪುಣ್ಯಾಹ, ಕಲಾವೃದ್ಧಿ ಹೋಮ, ಪೂರ್ಣಾಹುತಿ, ಕಲಾ ಕಳಸಾಭಿಷೇಕ ನಡೆದು ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
ಚಿಕ್ಕಬಳ್ಳಾಪುರ ಶಾಖ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ತುಮಕೂರು ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆ ಶಾಸಕ ಎಂ.ಟಿ.ಕೃಷ್ಣಪ್ಪ ವಹಿಸಲಿದ್ದು, ದೇವಾಲಯ ಉದ್ಘಾಟನೆ ಶಾಸಕ ಎಸ್.ಆರ್.ಶ್ರೀನಿವಾಸ್ ನಡೆಸಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆ ಮಾಜಿ ಶಾಸಕ ಮಸಾಲಾ ಜಯರಾಮ್ ಮಾಡಲಿದ್ದಾರೆ. ಈ ಜೊತೆಗೆ ಹೋಬಳಿಯ ಎಲ್ಲಾ ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.