ಅಮೆರಿಕದ ಉತ್ತರ ಮಿಚಿಗನ್‌ನ ಟ್ರಾವರ್ಸ್ ಸಿಟಿಯ ವಾಲ್‌ಮಾರ್ಟ್ ಮಳಿಗೆಯಲ್ಲಿ ಶನಿವಾರ ಸಂಜೆ ಆಗಂತುಕನೊಬ್ಬ 11 ಮಂದಿಗೆ ಚಾಕು ಇರಿದ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ಸಾರ್ವಜನಿಕರಲ್ಲಿ ಭೀತಿ ಮೂಡಿದ್ದು, ಸ್ಥಳೀಯ ಆಡಳಿತ ತುರ್ತಾಗಿ ಸ್ಪಂದಿಸಿದೆ.
ಗ್ರ್ಯಾಂಡ್ ಟ್ರಾವರ್ಸ್ ಕೌಂಟಿ ಶೆರಿಫ್ ಕಚೇರಿಯು ತನಿಖೆಯನ್ನು ನಡೆಸುತ್ತಿದ್ದು, 42 ವರ್ಷದ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಿಚಿಗನ್ ರಾಜ್ಯ ಪೊಲೀಸರು ತಿಳಿಸಿದ್ದಾರೆ.
ಮಿಚಿಗನ್ ರಾಜ್ಯ ಪೊಲೀಸರು ವಾಲ್‌ಮಾರ್ಟ್ ಮಳಿಗೆಯಲ್ಲಿ ಘಟನೆ ನಡೆದಿರುವುದನ್ನು ದೃಢಪಡಿಸಿದ್ದಾರೆ. ಶಂಕಿತನು ಮಿಚಿಗನ್ ನಿವಾಸಿಯಾಗಿದ್ದು, ಯಾವುದೇ ಉದ್ದೇಶವಿಲ್ಲದೆ ಈ ದಾಳಿಯನ್ನು ನಡೆಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ತನಿಖೆ ನಡೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ತೆರಳದಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಟ್ರಾವರ್ಸ್ ಸಿಟಿಯ ಮನ್ಸನ್ ಮೆಡಿಕಲ್ ಸೆಂಟರ್‌ನಲ್ಲಿ 11 ಮಂದಿ ಸಂತ್ರಸ್ತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮನ್ಸನ್ ಹೆಲ್ತ್ ಕೇರ್‌ನ ಮುಖ್ಯ ಸಂವಹನಾಧಿಕಾರಿ ಮೇಗನ್ ಬ್ರೌನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅವರಿಗೆ ಆದ ಗಾಯಗಳ ಗಂಭೀರತೆ ಅಂದಾಜಿಸಲಾಗುತ್ತಿದ್ದು, ನಿರ್ದಿಷ್ಟ ವಿವರಗಳನ್ನು ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆ ಕೂಡ 11 ಮಂದಿ ಘಟನೆಯಲ್ಲಿ ಗಾಯಗೊಂಡಿರುವುದನ್ನು ಸ್ಪಷ್ಟಪಡಿಸಿದ್ದು, ಸೂಕ್ತ ಸಮಯದಲ್ಲಿ ಹೆಚ್ಚಿನ ವಿವರ ನೀಡುವುದಾಗಿ ಹೇಳಿದೆ. ಕಾನೂನು ಜಾರಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಾಲ್‌ಮಾರ್ಟ್ ವಕ್ತಾರ ಜೋ ಪೆನ್ನಿಂಗ್ಟನ್ ಹೇಳಿದ್ದಾರೆ.
ತನಿಖೆಗಾಗಿ ವಾಲ್‌ಮಾರ್ಟ್ ಮಳಿಗೆಯನ್ನು ಮುಚ್ಚಲಾಗಿದೆ. ಮಿಚಿಗನ್ ರಾಜ್ಯ ಪೊಲೀಸ್ ಕ್ರೈಂ ಲ್ಯಾಬ್ ತಂಡವು ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಕ್ಕೆ ತೆರಳಿದೆ. ಎಫ್‌ಬಿಐ ಕೂಡ ಗ್ರ್ಯಾಂಡ್ ಟ್ರಾವರ್ಸ್ ಕೌಂಟಿ ಶೆರಿಫ್ ಕಚೇರಿಗೆ ಸಹಕಾರ ನೀಡುತ್ತಿದೆ ಎಂದು ಎಫ್‌ಬಿಐ ಉಪ ನಿರ್ದೇಶಕ ಡಾನ್ ಬೊಂಗಿನೊ ತಿಳಿಸಿದ್ದಾರೆ.