ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ ಅಧ್ಯಕ್ಷ ಸ್ಥಾನಕ್ಕೆ ಸುಮಾರು 20 ವರ್ಷಗಳಿಂದ ನಿಷ್ಠಾವಂತರಾಗಿ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಅಧ್ಯಕ್ಷ ಪಟ್ಟ ಸಿಗದಿರುವದಕ್ಕೆ ಇದೀಗ ಪಕ್ಷದಲ್ಲಿ ಬಣ ಬಡಿದಾಟ ಜೋರಾಗಿದೆ.
ರಾಜ್ಯದಾದ್ಯಂತ ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆ ಚುರುಕಾಗಿ ನಡೆಯುತ್ತಿದೆ. ಆದರೆ ರಾಯಚೂರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಅಸಮಧಾನ ಕಿಚ್ಚು ಹೊರಹೊಮ್ಮಿದ್ದು, ಸ್ವಜಾತಿ ಪ್ರೇಮ, ಪ್ರಬಲ ಜಾತಿಗಳಿಗೆ ಮಾತ್ರ ಮಣೆಹಾಕುವವರ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ಸಿಡಿದೆದಿದ್ದಾರೆ.
ನೂತನ ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆ ಸ್ಥಾನವನ್ನು ಪ್ರಬಲ ಜಾತಿಗಳಿಗೆ ಆಯ್ಕೆ ಮಾಡುತ್ತಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಗೆರೆ ಎಳೆದಿದೆ. ಅಧ್ಯಕ್ಷೆ ಸ್ಥಾನವನ್ನು ಸುಮಾರು ಮೂವತ್ತು ವರ್ಷಗಳಿಂದ ನಾಯಕ, ಮುಸ್ಲಿಂ ಹಾಗೂ ಮಡಿವಾಳ ಸಮುದಾಯದ ಕಾರ್ಯಕರ್ತರನ್ನು ನೀಡದೆ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ನಾಯಕ ಸಮಾಜಕ್ಕೆ ಒಮ್ಮೆಯೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನ ಸೇರಿದಂತೆ ಯಾವುದೇ ಸೂಕ್ತ ಸ್ಥಾನಮಾನ ನೀಡಲಿಲ್ಲ. ಇದುವರೆಗೂ ಕೆಲ ಪ್ರಬಲ ಸಮುದಾಯಗಳಿಗೆ ಮಾತ್ರ ಸೂಕ್ತ ಸ್ಥಾನಮಾನ ದಕ್ಕುತ್ತಿದೆ, ಹಾಗಾದರೆ ಉಳಿದ ಸಮುದಾಯದ ಕಾರ್ಯಕರ್ತರು ಪಕ್ಷಕ್ಕಾಗಿ ಏಕೆ ಶ್ರಮಿಸಬೇಕು ಎಂದು ಕೆಲ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಶರಣ ಪ್ರಕಾಶ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ್ ಇಟಗಿ ಹಾಗೂ ಮಹಿಳಾ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣೆ ಮೂವರು ಒಂದೇ ಸಮುದಾಯದವರು. ಪಕ್ಷದ ಎಲ್ಲ ಅಧಿಕಾರ, ಸ್ಥಾನಮಾನ ಒಂದೇ ಸಮುದಾಯವರಿಗೆ ನೀಡುತ್ತಿರುವುದು ಯಾಕೆ. ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ತಾರತಮ್ಯ ಧೋರಣೆ ಕುರಿತು ಸರಿಪಡಿಸಲು ಜಿಲ್ಲಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಹಿಂದೇಟು ಹಾಕುತ್ತಿರುವುದು ಏಕೆ? ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ನಾಯಕ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕೆಂದು ಹೋರಾಟಕ್ಕೆ ಮುಂದಾಗಲು ಸಿದ್ದರಾಗೋಣ. ನಾಯಕ ಸಮುದಾಯದ ಶಾಸಕರು, ಸಂಸದರು ಪ್ರತಿನಿಧಿಸುತ್ತಿರುವ ಮೀಸಲು ಕ್ಷೇತ್ರದಲ್ಲಿ ಇಲ್ಲಿಯವರೆಗೂ ಜಿಲ್ಲಾಧ್ಯಕ್ಷ ಸ್ಥಾನವನ್ನು ನಾಯಕ ಸಮಾಜವನ್ನು ಪರಿಗಣನೆ ಮಾಡದಿರುವುದು ಮತ್ತಷ್ಟು ಕಾಂಗ್ರೆಸ್ ಪಕ್ಷದ ನಾಯಕ ಸಮಾಜದ ಮುಖಂಡರನ್ನು ಕೆರಳಿಸಿದ್ದು, ಜಿಲ್ಲಾಧ್ಯಕ್ಷ ಮತ್ತು ಕಾಂಗ್ರೆಸ್ ನಾಯಕರ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕಕ್ಕೆ 2005ರಲ್ಲಿ ಪದ್ಮಾ ಹರಿಶ್ಚಂದ್ರರೆಡ್ಡಿ , 2009ರಲ್ಲಿ ಅಕ್ಕ ಮಹಾದೇವಿ, 2013ರಲ್ಲಿ ನಿರ್ಮಲಾ ಬೆಣ್ಣೆ ಲಿಂಗಾಯತ ಸಮುದಾಯಕ್ಕೆ ಸೇರಿದವರು. 2022ರಲ್ಲಿ ನಾಗವೇಣಿ ಪಾಟೀಲ್ ಕುರುಬ ಸಮುದಾಯದವರು. ಇನ್ನು ಜಿಲ್ಲಾ ಉಸ್ತುವಾರಿ ಶರಣ ಪ್ರಕಾಶ ಪಾಟೀಲ್ ಹಾಗೂ ರಾಯಚೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ್ ಇಟಗಿ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಒಂದೇ ಸಮುದಾಯಕ್ಕೆ ದಶಕದಿಂದ ಅಧ್ಯಕ್ಷೆ ನೀಡುತ್ತಿರುವುದು ಯಾಕೆ. ಉಳಿದ ಸಮುದಾಯದವರಿಗೆ ಸ್ಥಾನಮಾನ ಇಲ್ಲದಿದ್ದರೆ ನಾವು ಸುಮ್ಮನೆ ಕೂರುವುದಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಮಹಿಳಾ ಕಾರ್ಯಕರ್ತರ ಪರಿಶ್ರಮವೂ ಮುಖ್ಯವಾಗಿತ್ತು. ಅದರಲ್ಲೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವಲ್ಲಿ ಮಹಿಳಾ ಕಾಂಗ್ರೆಸ್ ಪಾತ್ರ ಪ್ರಮುಖವಾಗಿತ್ತು. ಅದರಲ್ಲಿ ವಿಶೇಷವಾಗಿ ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಮಹಿಳಾ ಕಾರ್ಯಕರ್ತೆಯರ ಶ್ರಮವಿತ್ತು. ಇಷ್ಟೆಲ್ಲ ಇದ್ದರೂ ಸಮುದಾಯದ ಮಹಿಳಾ ಕಾರ್ಯಕರ್ತೆಯರಿಗೆ ಸೂಕ್ತ ಸ್ಥಾನಮಾನ ನೀಡದೇ ನಿರ್ಲಕ್ಷಿಸಲಾಗುತ್ತಿರುವುದು ಅಸಮಾಧಾನ ಉಂಟು ಮಾಡಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ.
ಇದನ್ನೂ ಓದಿ : ರಾಯಚೂರು | ಗಂಡನನ್ನು ನದಿಗೆ ತಳ್ಳಿದ ಆರೋಪ : ಬಾಲಕಿಯ ಪತಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಜಿಲ್ಲೆಯ ಪಕ್ಷದ ಸಂಘಟನೆಯಲ್ಲಿ ತಾರತಮ್ಯ ಮಾಡುವ ಮೂಲಕ ಕೇವಲ ಲಿಂಗಾಯತ ಸಮುದಾಯದವರನ್ನೇ ನೆಚ್ಚಿಕೊಂಡು, ಒಬಿಸಿ, ಅಲ್ಪಸಂಖ್ಯಾತ, ಎಸ್‌ಸಿ, ಎಸ್‌ಟಿ ಸಮುದಾಯದ ಮಹಿಳೆಯರಿಗೆ ಕಡೆಗಣಿಸಲಾಗಿದೆ ಎಂಬ ಅಸಮಧಾನ ಭುಗಿಲೆದ್ದಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್