ವಾಟ್ಸ್‌ಆ್ಯಪ್ ಗುಂಪಿನಲ್ಲಿ ಮರಾಠಿಯಲ್ಲಿಯೇ ಸಂವಹನ ನಡೆಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಯ ಮೇಲೆ ಆತನ ಸಹಪಾಠಿಗಳೇ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ. ಘಟನೆ ಸಂಬಂಧ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ವಿದ್ಯಾರ್ಥಿ ಸೂರಜ್ ಪವಾರ್ (20) ಮುಂಬೈನ ವಾಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಾನು ವಾಶಿಯಲ್ಲಿರುವ ಮೋತಿಲಾಲ್ ಜುನ್‌ಜುನ್‌ವಾಲಾ ಕಾಲೇಜಿನಲ್ಲಿ ಓದುತ್ತಿದ್ದು, ತನ್ನ ಸಹಪಾಠಿಗಳ ಕಾಲೇಜಿನ ಹೊರಗೆ ತನ್ನಮೇಲೆ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
“ಪವಾರ್ ಅವರು ತನ್ನ ಕುಟುಂಬದ ಸದಸ್ಯರೊಬ್ಬರ ಮದುವೆಯ ಆಹ್ವಾನವನ್ನು ಹಿಂದಿ ಭಾಷೆಯಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡಿದ್ದರು. ಮರಾಠಿ ಭಾಷೆಯಲ್ಲಿ ಆಹ್ವಾನಿಸುವಂತೆ ಸಹಪಾಠಿ ಫೈಜಾನ್ ನಾಯಕ್ ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆಸಿದ್ಉದ, ನಾಯಕ್ ಮತ್ತು ಇತರ ಮೂವರು ಸಹಪಾಠಿಗಳು ಕಾಲೇಜಿನ ಬಳಿ ಪವಾರ್ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಪವಾರ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಯಕ್ ಅವರನ್ನು ಬಂಧಿಸಿದ್ದಾರೆ. ನಾಯಕ್ ಮತ್ತು ಇತರ ಮೂವರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 118(1) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.