ಕಳೆದ ಐದೂವರೆ ವರ್ಷಗಳಲ್ಲಿ ಭಾರತದ ಪ್ರಮುಖ ಹತ್ತು ವಿಮಾನ ನಿಲ್ದಾಣಗಳಲ್ಲಿ ಸುಮಾರು 2,800 ಹಕ್ಕಿ ಡಿಕ್ಕಿ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ದೆಹಲಿ, ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳು ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ದತ್ತಾಂಶ ತಿಳಿಸಿದೆ.
2020ರಿಂದ 2025ರ ಜೂನ್‌ವರೆಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 695 ಹಕ್ಕಿ ಡಿಕ್ಕಿ ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಮುಂಬೈ 407 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಬೆಂಗಳೂರು 343 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಅಹಮದಾಬಾದ್ (337) ಮತ್ತು ಹೈದರಾಬಾದ್ ನಂತರದ ಸ್ಥಾನಗಳಲ್ಲಿವೆ. ಚೆನ್ನೈ (205), ಕೋಲ್ಕತ್ತ (193), ಭುವನೇಶ್ವರ (150), ಪುಣೆ (145) ಮತ್ತು ತಿರುವನಂತಪುರ (125) ಇತರೆ ಪ್ರಮುಖ ವಿಮಾನ ನಿಲ್ದಾಣಗಳಾಗಿವೆ.
ನಾಗರಿಕ ವಿಮಾನಯಾನ ಸಚಿವಾಲಯದ ವರದಿಯ ಪ್ರಕಾರ, 2020–21ರಲ್ಲಿ ಕೋವಿಡ್-19 ಲಾಕ್‌ಡೌನ್‌ನಿಂದಾಗಿ ವಿಮಾನಯಾನ ಸೇವೆಗಳು ಕಡಿಮೆಯಾದ ಕಾರಣ ಹಕ್ಕಿ ಡಿಕ್ಕಿ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿತ್ತು. 2020ರಲ್ಲಿ 309, 2021ರಲ್ಲಿ 354, 2022ರಲ್ಲಿ 588, 2023ರಲ್ಲಿ 709, 2024ರಲ್ಲಿ 609 ಮತ್ತು 2025ರ ಜೂನ್‌ವರೆಗೆ 238 ಪ್ರಕರಣಗಳು ವರದಿಯಾಗಿವೆ.
ಇದನ್ನು ಓದಿದ್ದೀರಾ?: ಮಹದಾಯಿ: ನಾಯಕರೇ ನಾಡದ್ರೋಹಿಗಳು
ದೆಹಲಿ ವಿಮಾನ ನಿಲ್ದಾಣವು ಪ್ರತಿ ವರ್ಷವೂ ಅತಿ ಹೆಚ್ಚು ಹಕ್ಕಿ ಡಿಕ್ಕಿ ಪ್ರಕರಣಗಳನ್ನು ದಾಖಲಿಸಿದೆ. 2020ರಲ್ಲಿ 62, 2021ರಲ್ಲಿ 94, 2022ರಲ್ಲಿ 183, 2023ರಲ್ಲಿ 185, 2024ರಲ್ಲಿ 130 ಮತ್ತು 2025ರ ಜೂನ್‌ವರೆಗೆ 41 ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕ್ರಮವಾಗಿ 29, 22, 84, 85, 88 ಮತ್ತು 35 ಪ್ರಕರಣಗಳು ದಾಖಲಾಗಿವೆ.
ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ರಾಜ್ಯಸಭೆಯಲ್ಲಿ ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ, ವಿಮಾನ ಕಾರ್ಯಾಚರಣೆಗಳ ಸುರಕ್ಷತೆಗಾಗಿ ವನ್ಯಜೀವಿ ಅಪಾಯ ನಿರ್ವಹಣಾ ಯೋಜನೆ (WHMP) ಅಭಿವೃದ್ಧಿಪಡಿಸುವುದನ್ನು ಸಚಿವಾಲಯವು ಕಡ್ಡಾಯಗೊಳಿಸಿದೆ ಎಂದು ತಿಳಿಸಿದ್ದಾರೆ.
