ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಸರಣಿ ಕೊಲೆ, ನೂರಾರು ಮೃತದೇಹಗಳ ಹೂತು ಹಾಕುವಿಕೆ ಪ್ರಕರಣದ ತನಿಖೆಗಾಗಿ ರಾಜ್ಯ ಸರಕಾರ ರಚಿಸಿದ ವಿಶೇಷ ತನಿಖಾ ತಂಡ ಎರಡನೇ ದಿನವೂ ತನಿಖೆ ಚುರುಕುಗೊಳಿಸಿದೆ. ಎಸ್‌ಐಟಿ ತಂಡದ ಮುಖ್ಯಸ್ಥ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ಭಾನುವಾರ ಎಸ್‌ಐಟಿ ತಂಡವು ದೂರುದಾರನ ವಿಚಾರಣೆ ನಡೆಸುತ್ತಿದೆ.
ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ದೂರುದಾರ ತನ್ನ ವಕೀಲರೊಂದಿಗೆ ಮಂಗಳೂರಿನ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ ಎನ್ನಲಾಗಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ ಪ್ರಣಬ್ ಮೊಹಾಂತಿ ಎಸ್.ಐ.ಟಿ ಕಚೇರಿಗೆ ಆಗಮಿಸಿ, ದೂರುದಾರನ ವಿಚಾರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಜುಲೈ 26ರಂದು ದೂರುದಾರನನ್ನು ಪೊಲೀಸ್ ಅಧಿಕಾರಿಗಳಾದ ಅನುಚೇತ್, ಜಿತೇಂದ್ರ ಕುಮಾರ್ ದಯಾಮ ಸಹಿತ ಇತರ ಸಿಬ್ಬಂದಿ ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ ಬಳಿಕ ಸಂಜೆ ವೇಳೆ ಅವರ ವಕೀಲರ ಜೊತೆ ಕಳುಹಿಸಿ ಕೊಟ್ಟಿದ್ದರು. ರವಿವಾರ ಮತ್ತೆ ದೂರುದಾರನನ್ನು ಎಸ್.ಐ.ಟಿ ಕಚೇರಿಗೆ ಕರೆಸಿದ್ದು, ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಡಿಜಿಪಿ ಪ್ರಣವ್ ಮೊಹಾಂತಿ ಅವರು ಡಿಐಜಿ ಅನುಚೇತ್ ಅವರಿಂದ ಶನಿವಾರ ನಡೆದ ವಿಚಾರಣೆ ವೇಳೆ ದೂರುದಾರ ನೀಡಿದ ಹೇಳಿಕೆ, ಆತ ನೀಡಿದ ದೂರು, ಎಫ್‌ಐಆರ್ ಸೇರಿದಂತೆ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
