ಅರಸೀಕೆರೆ | ಕನಕಪುರ, ವರುಣಾ ಕ್ಷೇತ್ರಕ್ಕಿಂತ ಶಿವಲಿಂಗೇಗೌಡರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿಸುತ್ತಿದ್ದಾರೆ: ಡಿಸಿಎಂ ಡಿ ಕೆ ಶಿವಕುಮಾರ್

Date:

Advertisements

ಜನರ ಋಣ ತೀರಿಸಬೇಕು ಎಂಬ ಕಾರಣಕ್ಕೆ ಶಾಸಕ ಶಿವಲಿಂಗೇಗೌಡರು ಸಿಎಂ ಹಾಗೂ ನನ್ನ ಬೆನ್ನು ಬಿದ್ದು, ಕನಕಪುರ ಹಾಗೂ ವರುಣಾ ಕ್ಷೇತ್ರಗಳಿಗಿಂತ ಅರಸೀಕೆರೆಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸವನ್ನು ಮಾಡಿಸುತ್ತಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ವಿವಿಧ ಇಲಾಖೆಗಳ ಯೋಜನೆಗಳ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಇಂದು ಅರಸೀಕೆರೆ ತಾಲೂಕಿಗೆ ಐತಿಹಾಸಿಕ ದಿನ. ನಾವು ಹಾಗೂ ಮುಖ್ಯಮಂತ್ರಿಗಳು ಈ ಕ್ಷೇತ್ರಕ್ಕೆ ಸುಮ್ಮನೆ ಬಂದಿಲ್ಲ. ರಾಜ್ಯದಲ್ಲಿ 136 ಶಾಸಕರ ಬಲದ ಸರ್ಕಾರ ರಚಿಸಲು ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಹಕಾರಿಯಾದ ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇವೆ. ನಮಗೆ ಶಿವಲಿಂಗೇಗೌಡರ ಕಾಟ ಹೆಚ್ಚಾಗಿದೆ. ಅವರು ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಸುಸತ್ತಿ ಸುತ್ತಿ ನಾಲ್ಕು ಜೊತೆ ಚಪ್ಪಲಿ ಸವೆಸಿರಬಹುದು. ಅವರು ಪ್ರತಿ ಬಾರಿ ಬಂದಾಗಲೂ ನಾನು ಕ್ಷೇತ್ರದ ಜನರ ಋಣ ತೀರಿಸಬೇಕು. ಈ ಯೋಜನೆಗಳಿಗಾಗಿ ನಾನು ದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ನೀವು ನೆರವು ನೀಡಲೇಬೇಕೆಂದು ನಮಗೆ ದುಂಬಾಲು ಬಿದ್ದಿದ್ದಾರೆ” ಎಂದು ತಿಳಿಸಿದರು.

Advertisements

“ನಮ್ಮ ತಾಲೂಕಿನಲ್ಲಿ ಡಿಪ್ಲೊಮಾ, ಎಂಜಿನಿಯರಿಂಗ್ ಕಾಲೇಜು ಇಲ್ಲ. ನಮ್ಮ ಊರಿಗೆ ನೀರಿಲ್ಲ. ಆದರೆ ಹೇಮಾವತಿ, ಎತ್ತಿನಹೊಳೆ ನೀರು ನಮಗೆ ಬೇಕೇ ಬೇಕು ಎಂದು ಹೋರಾಟ ಮಾಡಿ ಸಚಿವಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು, ಇಂದು ನಿಮ್ಮ ಮುಂದೆ ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ” ಎಂದು ಶ್ಲಾಘಿಸಿದರು.

“ನಾವು ನಮ್ಮ ಜೀವನದಲ್ಲಿ ನಾಲ್ಕು ಋಣಗಳನ್ನು ತೀರಿಸಬೇಕು. ತಂದೆತಾಯಿ ಋಣ, ದೇವರ ಋಣ, ಗುರುವಿನ ಋಣ, ಸಮಾಜದ ಋಣ ತೀರಿಸಬೇಕು. ಈ ಋಣಗಳನ್ನು ಧರ್ಮದಿಂದಲೇ ತೀರಿಸಬೇಕೆಂದು ಮಹಾಭಾರತದಲ್ಲಿ ಭೀಷ್ಮನು ಧರ್ಮರಾಯನಿಗೆ ಹೇಳುತ್ತಾನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371ಜೆ ಜಾರಿಗೆ ತಂದು ಹೇಗೆ ಮಲ್ಲಿಕಾರ್ಜುನ ಖರ್ಗೆಯವರು ಆ ಭಾಗದ ಜನರ ಋಣ ತೀರಿಸಿದರೋ ಅದೇ ರೀತಿ ಶಿವಲಿಂಗೇಗೌಡರು ನಿಮ್ಮೆಲ್ಲರ ಋಣ ತೀರಿಸಿದ್ದಾರೆ. ರಾಜ್ಯದಲ್ಲಿ ಅನ್ಯಾಯ ದೋರಣೆಗೆ ಒಳಗಾಗಿದ್ದ ಅರಸೀಕೆರೆ ಕ್ಷೇತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಇಂತಹ ಶಾಸಕರು ನಮ್ಮ ಎಲ್ಲ ಕ್ಷೇತ್ರಗಳಲ್ಲಿ ಇದ್ದರೆ ಮುಂದಿನ ಚುನಾವಣೆಯಲ್ಲಿ ನಾವು ಮತ್ತಷ್ಟು ಹೆಚ್ಚಿನ ಸೀಟುಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಯೋಗಿ ಎಂದು ಕರೆಸಿಕೊಳ್ಳುವ ಮುನ್ನ ನಾವು ಉಪಯೋಗಿ ಎಂದು ಕರೆಸಿಕೊಳ್ಳಬೇಕು. ಜನರ ಪ್ರೀತಿ ವಿಶ್ವಾಸ ಮರದಲ್ಲಿ, ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ನಾವು ಕೆಲಸ ಮಾಡುವ ಮೂಲಕ ಜನರ ಮನದಲ್ಲಿ ಪ್ರೀತಿ ವಿಶ್ವಾಸ ಗಳಿಸಬೇಕು. ಇಲ್ಲಿನ ಕೆರೆಗಳು ತುಂಬಬೇಕು, ನೀರಾವರಿ ಯೋಜನೆಗಳು ಜಾರಿಯಾಗಿ ರೈತನ ಬದುಕು ಹಸನು ಮಾಡಬೇಕು. ರೈತರಿಗೆ ಸಂಬಳ, ವೇತನ, ಪಿಂಚಣಿ, ಲಂಚ ಯಾವುದೂ ಇಲ್ಲ. ಹೀಗಾಗಿ ರೈತರಿಗೆ ಸಹಾಯ ಮಾಡಲೇಬೇಕೆಂದು ಶಿವಲಿಂಗೇಗೌಡರು ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿ ಈ ಎಲ್ಲ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿಸಿದ್ದಾರೆ” ಎಂದರು.

ನಿಮ್ಮ ನಂಬಿಕೆ ಉಳಿಸಿಕೊಂಡು ಮುಂದೆ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ:

ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಅದೇ ರೀತಿ ನಿಮಗೂ ನಿಮ್ಮ ಶಾಸಕರ ಮೇಲೆ ನಂಬಿಕೆ ಇದೆ. ಚುನಾವಣೆಯಲ್ಲಿ ನೀವು ಅದನ್ನು ಸಾಬೀತುಪಡಿಸಿ ರಾಜ್ಯಕ್ಕೆ ದೊಡ್ಡ ಸಂದೇಶ ರವಾನಿಸಿದ್ದೀರಿ. ಈ ಬಾರಿ ಜಿಲ್ಲೆಯಲ್ಲಿ ಅವರೊಬ್ಬರು ಮಾತ್ರ ಗೆದ್ದಿರಬಹುದು. ಮುಂದೆ 2028ರಲ್ಲಿ ಈ ಜಿಲ್ಲೆಯ 7ಕ್ಕೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಆತ್ಮವಿಶ್ವಾಸ ನನಗಿದೆ. ನಾವು ಮಾತು ಕೊಡುವುದು ಮುಖ್ಯವಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮುಖ್ಯ. ಅದೇ ರೀತಿ ಶಿವಲಿಂಗೇಗೌಡರು ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ” ಎಂದು ಹೇಳಿದರು.

“ದೇವರು ನಮಗೆ ಎರಡು ಆಯ್ಕೆ ಕೊಡುತ್ತಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಇಲ್ಲೇ ಬಿಟ್ಟು ಹೋಗುವುದು. ಭೂಮಿಯ ಮೇಲೆ ಯಾರೂ ಶಾಶ್ವತವಲ್ಲ. ಆದರೆ ನಾವು ಮಾಡುವ ಕೆಲಸ ಬಹಳ ಮುಖ್ಯ. ನಿಮ್ಮ ಜಮೀನಿಗೆ ನೀರು ಕೊಟ್ಟು, ರೈತರ ಬದುಕು, ಕುಟುಂಬ ಪರಿವರ್ತನೆ ತರಬೇಕೆಂದು ನಿಮ್ಮ ಶಾಸಕರು ಪಣ ತೊಟ್ಟಿದ್ದಾರೆ. ಉಳಿಪೆಟ್ಟು ಬೀಳದೇ ಕಲ್ಲು ಶಿಲೆಯಾಗುವುದಿಲ್ಲ, ಉಳುಮೆ ಮಾಡದೇ ಹೊಲ ಮಟ್ಟವಾಗುವುದಿಲ್ಲ. ಅದೇ ರೀತಿ ಶಿವಲಿಂಗೇಗೌಡರು ಕೆಲಸ ಮಾಡಿಕೊಂಡು ನಿಮ್ಮ ಸೇವೆ ಮಾಡುತ್ತಿದ್ದಾರೆ. ನಾನು ಚುನಾವಣೆಗೆ ಬಂದಾಗ ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದೇ ರೀತಿ ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿರುವ ಕಾರಣಕ್ಕೆ ದೇಶಕ್ಕೆ ಮಾದರಿಯಾಗುವ ಐದು ಗ್ಯಾರಂಟಿ ಯೋಜನೆ ನೀಡಿದ್ದೇವೆ” ಎಂದರು.

ಡಬಲ್ ಎಂಜಿನ್ ಆಡಳಿತ ಮಾಡಿದ ಬಿಜೆಪಿ ಕೊಡುಗೆ ಏನು?

“ಬೆಲೆ ಏರಿಕೆಯಿಂದ ತತ್ತರಿಸಿದ್ದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನೆರವಾಗಲು ನಾನು, ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರು ಚರ್ಚೆ ಮಾಡಿ ಈ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆವು. ಬಿಜೆಪಿ ಭಾವನೆಗಳ ಮೇಲೆ ರಾಜಕಾರಣ ಮಾಡಿದರೆ, ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಧರ್ಮ, ದೇವರು ಕೇವಲ ಬಿಜೆಪಿ ಆಸ್ತಿಯಲ್ಲ. ನಾವು ಎಲ್ಲ ಧರ್ಮ ಕಾಪಾಡಲು ಶ್ರಮಿಸುತ್ತೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಕೇವಲ ಕಾಂಗ್ರೆಸ್ ಅಥವಾ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲರಿಗೂ ಈ ಯೋಜನೆ ನೀಡಿದ್ದೇವೆ. ನಿಮ್ಮ ಮನೆಗಳಲ್ಲಿ 200 ಯುನಿಟ್‌ವರೆಗೂ ಉಚಿತ ವಿದ್ಯುತ್, 2 ಸಾವಿರ ಪ್ರೋತ್ಸಾಹ ಧನ, ಉಚಿತ ಅಕ್ಕಿ, ಉಚಿತ ಬಸ್ ಪ್ರಯಾಣ, ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ಇಂತಹ ಒಂದೇ ಒಂದು ಕೆಲಸವನ್ನು ನಿಮ್ಮ ಅವಧಿಯಲ್ಲಿ ಮಾಡಿದ್ದೀರಾ? ಎಂದು ಬಿಜೆಪಿ ನಾಯಕರನ್ನು ಕೇಳಲು ಬಯಸುತ್ತೇನೆ. ಈ ವಿಚಾರದಲ್ಲಿ ದಳದವರನ್ನು ನಾನು ಕೇಳಲು ಹೋಗುವುದಿಲ್ಲ” ಎಂದರು.

“ಅಲ್ಲಮ ಪ್ರಭುಗಳ ಮಾತಿನಂತೆ ಕೊಟ್ಟ ಕುದುರೆ ಏರಲರಿಯದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅದೇರೀತಿ ಅಧಿಕಾರ ಸಿಕ್ಕಾಗ ಇಂತಹ ಯೋಜನೆ ಜಾರಿ ಮಾಡಲಿಲ್ಲ. ನಿಮಗೆ ಡಬಲ್ ಎಂಜಿನ್ ಸರ್ಕಾರದ ಅಧಿಕಾರ ಸಿಕ್ಕಿತ್ತು. ಆಗ ಏನು ಮಾಡಿದ್ದೀರಿ? ಈಗ ಬಿಜೆಪಿ ಜತೆ ದಳದವರೂ ಸೇರಿಕೊಂಡಿದ್ದಾರೆ. ಇವರಿಬ್ಬರು ಮಾತ್ರವಲ್ಲ, ಇವರ ಜತೆಗೆ ಇನ್ನೂ ನಾಲ್ಕು ಜನ ಸೇರಿಕೊಳ್ಳಲಿ, 2028ರಲ್ಲಿ ಈ ಜನಪರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಕಳೆದ ವರ್ಷ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸುಪುತ್ರ, ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರ ಪುತ್ರ ಗೆಲ್ಲಲು ಯಾಕೆ ಆಗಲಿಲ್ಲ? ಡಬಲ್ ಎಂಜಿನ್ ಸರ್ಕಾರ ಆಡಳಿತ ಮಾಡಿದವರು ಯಾಕೆ ಗೆಲ್ಲಲಿಲ್ಲ? ಈ ಗೆಲುವಿನಿಂದ ನಮ್ಮ ಸಂಖ್ಯಾಬಲ 140 ಆಗಿದೆ” ಎಂದು ತಿಳಿಸಿದರು.

“ದೇವರು ವರ ಹಾಗೂ ಶಾಪ ಕೊಡುವುದಿಲ್ಲ. ಕೇವಲ ಅಕಾಶ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಹೇಮಾವತಿ, ಎತ್ತಿನಹೊಳೆಯಿಂದ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸಗಳನ್ನು ಮಾಡಿದ್ದೇವೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಬೇಕೆಂದು ಸಂಸತ್ ಸದಸ್ಯರು ಹಾಗೂ ಶಾಸಕರು ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

Download Eedina App Android / iOS

X